ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹಾತ್ಮನಾಶ ಮತ್ತು ಅಮರತ್ವ(ಫನಾ ಅಲ್ ಬಖಾ)

Last Updated 14 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲೌಕಿಕವಾಗಿ ದೇಹವನ್ನು ತೊರೆದ ಆತ್ಮವು ಪಾರಮಾರ್ಥದಲ್ಲಿ ತನ್ನ ಸ್ಥಾನವನ್ನು ಅರಸುತ್ತದೆ. ‘ಬಖಾ’ ಎಂಬ ಶಬ್ದವು ಅಲ್ಲಾಹನ 99 ನಾಮಸರಣಿಯಲ್ಲಿ (ಅಸ್ಮಾ ಅಲ್ ಹುಸ್ನ) ಒಂದಾದ ‘ಅಲ್ ಬಾಖಿ’ ಎಂಬ ಹೆಸರಿನಿಂದ ಹುಟ್ಟಿಕೊಂಡಿದೆ. ಇದಕ್ಕೆ ಕೊನೆಯಿಲ್ಲದ, ಸಾವಿಲ್ಲದ ಎಂಬ ಅಮರತ್ವದ ಅರ್ಥವಿದೆ. ಇದು ‘ಫನಾ’ ಎಂಬ ಪದದ ವಿರೋಧಾರ್ಥವನ್ನು ಸೂಚಿಸುತ್ತದೆ.

‘ಭೂಮಿಯ ಮೇಲಿರುವುದೆಲ್ಲವೂ ನಶ್ವರವಾದುದು. ಅಮರವಾಗರುವುದೆಂದರೆ ಸರ್ವವನ್ನೂ ಸೃಷ್ಟಿಸಿದ ಸರ್ವಶಕ್ತನೂ, ದಯಾಮಯನೂ ಆದ ಅಲ್ಲಾಹನು ಮಾತ್ರ’. (ಕುರಾನ್ 55: 26, 27). ಈ ಸಂದೇಶದಲ್ಲಿ ಫನಾ ಮತ್ತು ಬಖಾ (ನಶ್ವರ ಮತ್ತು ಅಮರತ್ವ) ಈ ಎರಡೂ ಆಶಯಗಳು ಕಂಡುಬರುತ್ತವೆ. ಉಳಿಯುವುದು ಎಂದರೆ ಸ್ಥಿರವಾಗಿರುವಂತಹದ್ದು ಮತ್ತು ಅಸ್ತಿತ್ವದಲ್ಲಿರುವಂತಹದ್ದು. ‘ಫನಾ’ದ ಮೂಲತತ್ವ ‘ದೇಹಕ್ಕೆ ಸಾವು’ ಎಂಬುದು, ಹದೀಸ್‍ನಲ್ಲಿರುವ ‘ಸಾವು ಬರುವ ಮೊದಲೇ ನೀ ಸಾಯು’ ಎಂಬ ಉಲ್ಲೇಖಕ್ಕೆ ಸಂಬಂಧಿಸಿದ್ದಾಗಿದೆ. ತಮ್ಮದೆಲ್ಲವನ್ನೂ ತೊರೆದು, ಅಮರವಾಗಿರುವ ದೇವರ ಅಸ್ತಿತ್ವದ ಹುಡುಕಾಟದಲ್ಲಿ ‘ಫನಾ’ದ ಹಂತದಲ್ಲಿರುವ ಸೂಫಿಗಳಿಗೆ ಮೌಲಾನಾ ಜಲಾಲುದ್ದೀನ್ ರೂಮಿ ತಮ್ಮ ಕಾವ್ಯ ‘ಮಸ್ನವಿ’ಯಲ್ಲಿ ಹೀಗೆ ವಿವರಿಸುತ್ತಾರೆ:

ದೇವರ ತೀರ್ಮಾನವನ್ನು ಅರಸುತ್ತ ಹೋಗುವವರು ಹೇಗಿರುತ್ತಾರೆಂದರೆ, ದೇವರು ಪ್ರತ್ಯಕ್ಷವಾಗುವಾಗ ಪಥಿಕನು ಗೈರುಹಾಜರಿಯಾಗಿರುತ್ತಾನೆ. ಆದರೂ ದೈವೀಮಿಲನದಲಿ ದೊರೆಯುವುದು ಅಮರತ್ವ, ಸಾವಿಲ್ಲದ ಬದುಕು(ಬಖಾ) ಅಂದರೆ ಮೊದಲಿಗೆ ಸಾವು ನಿನ್ನ ದೇಹಕೆ(ಫನಾ). ನೆರಳುಗಳು ಅರಸುತ್ತವೆ ಬೆಳಕ, ಬೆಳಗಾದಾಗ ಕಿರಣಗಳು ಪ್ರಖರವಾದಾಗ ನೆರಳುಗಳು ಮಾಯವಾಗುತ್ತವೆ. ಅವನ ಪ್ರಭೆಯು ಬೆಳಗಿದಾಗ ಧ್ಯೇಯವು ಉಳಿದೀತೇ? ಎಲ್ಲ ನಾಶವೂ ಅಂತಿಮವಾಗಿ ಸಂಪೂರ್ಣವಾಗುವುದು, ಅವನನ್ನು ಹೊರತು. ಪ್ರಸ್ತುತವೂ ಅಪ್ರಸ್ತುತವೂ ನಾಶವಾಗುವುದು ಅವನ ಪ್ರಸ್ತುತತೆಯಲ್ಲಿ ಎಂತಹ ಪವಾಡವಿದು, ಅನಸ್ತಿತ್ವದಲಿ ಅಸ್ತಿತ್ವವಿರುವುದೆಂದರೆ!

ಮೌಲಾನಾ ರೂಮಿಯವರು ಮಸ್ನವಿಯಲ್ಲಿ ಇನ್ನೊಂದೆಡೆ ‘ಜಗತ್ತಿನಲ್ಲಿ ದರ್ವೇಶಿ (ಉನ್ಮತ್ತ) ಸೂಫಿಗಳು ಯಾರೂ ಇಲ್ಲ ಅಥವಾ ಯಾರಾದರೂ ದರ್ವೇಶಿ ಸೂಫಿಗಳು ಅಸ್ತಿತ್ವದಲ್ಲಿದ್ದಾರೆಂದರೆ ನಿಜಕ್ಕೂ ಅವರು ಇರುವುದಿಲ್ಲ ಎನ್ನಲಾಗುತ್ತದೆ. ಆದರೆ ಅವರ ಬದಲಿಗೆ ಅವರು ಸಾಧಿಸಿದ ಅಧ್ಯಾತ್ಮ ಮಾತ್ರ ಇರುತ್ತದೆ. ಅವರ ವೈಯಕ್ತಿಕ ಗುಣಲಕ್ಷಣಗಳು ದೈವೀ ವೈಶಿಷ್ಟ್ಯಗಳೊಂದಿಗೆ ಸೇರಿಹೋಗಿರುತ್ತದೆ. ಅವರು ಹೇಗಿರುತ್ತಾರೆಂದರೆ ಹಗಲಿನಲ್ಲಿ ಉರಿಯುವ ಮೇಣದ ಬತ್ತಿಯ ಬೆಳಕಿನಂತೆ ಅದರ ಅಸ್ತಿತ್ವ ಇಲ್ಲವಾದರೂ, ವಾಸ್ತವದಲ್ಲಿ ಅಸ್ತಿತ್ವ ಇರುತ್ತದೆ’ ಎಂದು ಹೇಳುತ್ತಾರೆ. ಮನುಷ್ಯ ತನ್ನ ಮೂಲದ ಒಪ್ಪಂದಗಳ ಗುಂಗಿನಿಂದ ಹೊರಬರುವ ಪ್ರಯತ್ನ ಮಾಡತಕ್ಕದ್ದು.

ತನ್ನ ಅಸ್ತಿತ್ವವನ್ನು ಸಾಧಿಸಿದಾಗ ದೇವರಿಂದ ಪಡೆಯಲಾದುದನ್ನು ಒಂದು ಪರದೆಯನ್ನು ನಿರ್ಮಿಸುವ ಮೂಲಕ ಬೇರ್ಪಡಿಸಲಾಗುತ್ತದೆ. ಈ ಪರದೆಯನ್ನು ಬದುಕಿನಲ್ಲಿ ಒಮ್ಮೆಯೂ ಸಂಪೂರ್ಣವಾಗಿ ಸರಿಸುವುದು ಸಾಧ್ಯವಾಗದು. ಹೀಗೆ ಅಧ್ಯಾತ್ಮಿಗಳು ಸಂಪೂರ್ಣವಾಗಿ ದೇವರೊಂದಿಗೆ ಸಮ್ಮಿಲನವಾಗುವುದು ಸಾಧ್ಯವಾಗದು. ಆದರೆ ಕ್ಷಣಕಾಲ ದಿಗ್ಭ್ರಾಂತಿಗೊಳಗಾಗಿ ಅವರಿಗೆ ಈ ಅಗಾಧ ಸಾಗರದೊಳಗೆ ಕಳೆದುಹೋದ ಅನುಭವವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT