ಬ್ರಿಟನ್‌: ರಷ್ಯಾ ಅಧಿಕಾರಿಗಳ ಗಡಿಪಾರು?

7

ಬ್ರಿಟನ್‌: ರಷ್ಯಾ ಅಧಿಕಾರಿಗಳ ಗಡಿಪಾರು?

Published:
Updated:
ಬ್ರಿಟನ್‌: ರಷ್ಯಾ ಅಧಿಕಾರಿಗಳ ಗಡಿಪಾರು?

ಲಂಡನ್: ರಷ್ಯಾದ ಮಾಜಿ ಡಬಲ್ ಏಜೆಂಟ್ (ಎರಡು ರಾಷ್ಟ್ರಗಳ ಪರವಾಗಿ ಬೇಹುಗಾರಿಕೆ ಮಾಡುತ್ತ, ಯಾವುದೋ ಒಂದು ದೇಶಕ್ಕೆ ಮಾತ್ರ ನಿಷ್ಠನಾಗಿರುವವ) ಮೇಲೆ ರಾಸಾಯನಿಕ ದಾಳಿ ನಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬ್ರಿಟನ್‌, ರಷ್ಯಾದ 23 ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ಬಿಡುವಂತೆ ಬ್ರಿಟನ್ ಸೂಚಿಸಿದೆ.

ಡಬಲ್ ಏಜೆಂಟ್ ಸರ್ಗಿ ಸ್ಕ್ರಿಪಲ್ (66) ಮತ್ತು ಅವರ ಮಗಳು ಯುಲಿಯಾ (33) ಇಂಗ್ಲೆಂಡ್‌ನ ಸಾಲಿಸ್ಬರಿ ನಗರದ ವ್ಯಾ‍ಪಾರಿ ಮಳಿಗೆಯ ಹೊರಗೆ ಇದೇ 4ರಂದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಒಂದು ವಾರದ ಒಳಗಾಗಿ ದೇಶ ಬಿಡಬೇಕು. ಇಲ್ಲವಾದಲ್ಲಿ ಗಡಿಪಾರು ಮಾಡಲಾಗುವುದು’ ಎಂದು ಬ್ರಿಟನ್ ಪ್ರಧಾನಿ ತೆರೆಸಾ ಮೇ ಬುಧವಾರ ಹೇಳಿದ್ದಾರೆ. ಆದರೆ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. 30 ವರ್ಷಗಳ ಅವಧಿಯಲ್ಲಿ ಒಮ್ಮೆಲೇ ಅತಿ ಹೆಚ್ಚು ಅಧಿಕಾರಿಗಳನ್ನು ದೇಶದಿಂದ ಹೊರಹಾಕುತ್ತಿರುವ ದೊಡ್ಡ ಪ್ರಕರಣ ಇದಾಗಿದೆ.

‘ರಷ್ಯಾವು ನಮ್ಮ ದೇಶದ ವಿರುದ್ಧ ಕೆಲಸ ಮಾಡುವುದು ಇದೇ ಮೊದಲಲ್ಲ ಎಂಬುದನ್ನು ನಾವು ಈಗ ಕೈಗೊಂಡ ಕ್ರಮದಿಂದ ಅರ್ಥೈಸಿಕೊಳ್ಳಬೇಕು’ ಎಂದು ಮೇ ಹೇಳಿದ್ದಾರೆ.

‘ರಷ್ಯನ್ನರಿಗೆ ಸಂಬಂಧಿಸಿದ ಬ್ರಿಟನ್‌ನಲ್ಲಿರುವ ಸ್ವತ್ತುಗಳನ್ನು, ನಮ್ಮ ದೇಶದ ಪ್ರಜೆಗಳ ಜೀವ ಬೆದರಿಕೆಗೆ ಬಳಸಿದ್ದಕ್ಕೆ ಸಾಕ್ಷ್ಯಗಳು ದೊರೆತರೆ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದು ಪ್ರಧಾನಿ ಮೇ ಎಚ್ಚರಿಸಿದ್ದಾರೆ‌. ಸರ್ಗಿ ಮೇಲೆ ಈಗ ನಡೆದ ದಾಳಿಯ ಹಿಂದೆ ರಷ್ಯಾದ ಕೈವಾಡವಿದೆ ಎಂಬುದು ಬ್ರಿಟನ್ ಆರೋಪ.

‘ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಇಂಥ ದುರ್ಮಾರ್ಗವನ್ನು ಅನುಸರಿಸಿದ್ದು ದುರಂತ ಎಂದು ತಿಳಿಸಿರುವ ಪ್ರಧಾನಿ ಮೇ ಬ್ರಿಟನ್‌ನಲ್ಲಿ ನೆಲೆಸಿರುವ ರಷ್ಯಾದ ನಾಗರಿಕರೊಂದಿಗೆ ಯಾವುದೇ ಭೇದವಿಲ್ಲ ಎಂದು ತಿಳಿಸಿದ್ದಾರೆ.

ದ್ವಿಪಕ್ಷೀಯ ಮಾತುಕತೆ ರದ್ದು: ‘ಈ ವರ್ಷ ರಷ್ಯಾದಲ್ಲಿ ನಡೆಯುವ ಸಾಕರ್ ವಿಶ್ವಕಪ್‌ನಲ್ಲಿ ಬ್ರಿಟನ್ ಸಚಿವರಾಗಲಿ, ರಾಜ ಮನೆತನದ ಸದಸ್ಯರಾಗಲಿ ಪಾಲ್ಗೊಳ್ಳುವುದಿಲ್ಲ. ರಷ್ಯಾ ಒಕ್ಕೂಟದ ಜೊತೆಗಿನ ಉನ್ನತ ಮಟ್ಟದ ದ್ವಿಪಕ್ಷೀಯ ಮಾತುಕತೆಗಳನ್ನು ರದ್ದು ಮಾಡಲಾಗುವುದು’ ಎಂದು ತೆರೆಸಾ ಮೇ ಹೇಳಿದ್ದಾರೆ.

ನಮಗೂ ಅವಕಾಶವಿದೆ: ರಷ್ಯಾ

ಮಾಸ್ಕೊ:
‘ಬ್ರಿಟನ್‌ನ 23ಕ್ಕೂ ಹೆಚ್ಚು ಅಧಿಕಾರಿಗಳನ್ನು ರಷ್ಯಾ ಗಡಿಪಾರು ಮಾಡಬಹುದು’ ಎಂದು ರಷ್ಯಾದ ವಿದೇಶಿ ವ್ಯವಹಾರಗಳ ಉಪಾಧ್ಯಕ್ಷ ವ್ಲಾಡಿಮಿರ್ ಝಬರೊವ್ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ತುರ್ತು ಸಭೆ

ವಿಶ್ವಸಂಸ್ಥೆ (ಎಎಫ್‌ಪಿ)
: ಬ್ರಿಟನ್‌ ಮನವಿಯ ಮೇರೆಗೆ ಬುಧವಾರ ತುರ್ತು ಸಭೆ ನಡೆಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, ರಷ್ಯಾದ ಡಬಲ್‌ ಏಜೆಂಟ್‌ ಮೇಲೆ ನಡೆದ ರಾಸಾಯನಿಕ ದಾಳಿಯ ಬಗ್ಗೆ ಚರ್ಚಿಸಿದೆ.

ಏಜೆಂಟ್‌ ಮೇಲೆ ನಡೆದ ದಾಳಿಯ ಕುರಿತು ಮಂಡಳಿಯ ಸದಸ್ಯರಿಗೆ ಬ್ರಿಟನ್‌ ಪ್ರತಿನಿಧಿ ವಿವರಿಸಿದ್ದಾರೆ.

ಯಾರು ಈ ಸರ್ಗಿ ಸ್ಕ್ರಿಪಲ್

ಬ್ರಿಟನ್‌ನ ಸ್ಕ್ರಿಪಲ್ ಅವರು ರಷ್ಯಾದ ಸೇನಾ ಗುಪ್ತಚರ ವಿಭಾಗದಲ್ಲಿ ಕರ್ನಲ್ ಆಗಿದ್ದರು. ಬ್ರಿಟನ್ ಮೇಲಿನ ಬೇಹುಗಾರಿಕೆಗೆ ರಷ್ಯಾದಿಂದ ನಿಯೋಜನೆಗೊಂಡ ಹತ್ತಾರು ಬೇಹುಗಾರರಿಗೆ ವಂಚನೆ ಮಾಡಿದ ಆರೋಪ ಸ್ಕ್ರಿಪಲ್ ಮೇಲಿತ್ತು. ದೇಶದ್ರೋಹದ ಪ್ರಕರಣದಲ್ಲಿ ಅವರು ರಷ್ಯಾದಲ್ಲಿ 13 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದರು. ಆದರೆ, ಶೀತಲ ಸಮರ ಸಂದರ್ಭದ ಬೇಹುಗಾರರ ವಿನಿಮಯ ಯೋಜನೆ ಅಡಿ ರಷ್ಯಾವು ಸರ್ಗಿ ಅವರನ್ನು 2010ರಲ್ಲಿ ಬ್ರಿಟನ್‌ಗೆ ಹಸ್ತಾಂತರಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry