ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಗೌಡರ ಭದ್ರಕೋಟೆ ಮೇಲೆ ಹಲವು ಕಣ್ಣು

‘ಹಿತ ಶತ್ರು’ಗಳನ್ನು ಮಣಿಸುವ ರಣತಂತ್ರ ರೂಪಿಸಬೇಕಾದ ಅನಿವಾರ್ಯ ಸಿದ್ದರಾಮಯ್ಯಗೆ
Last Updated 14 ಮಾರ್ಚ್ 2018, 19:25 IST
ಅಕ್ಷರ ಗಾತ್ರ

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ– ವಿಜಯಪುರ ಜಿಲ್ಲೆ
ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಮುಖಂಡರಿಬ್ಬರು, ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿರುವ ಕ್ಷೇತ್ರ ಇದು.

ಉತ್ತರ ಕರ್ನಾಟಕಕ್ಕೆ ಅನ್ಯಾಯ ಎಸಗಲಾಗುತ್ತಿದೆ ಎಂಬ ಕೂಗಿನೊಂದಿಗೆ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಸಮರ ಸಾರಿದ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ, ಇದೀಗ ಮುದ್ದೇಬಿಹಾಳದಲ್ಲಿ ಜೆಡಿಎಸ್‌ ಅಭ್ಯರ್ಥಿ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಷ್ಯ; ಅವರ ಸೂಚನೆಯಂತೆಯೇ ಅಹಿಂದ ಸಂಘಟನೆಯಲ್ಲಿ ತಲ್ಲೀನನಾಗಿದ್ದೇನೆ’ ಎಂದು ವಿಜಯಪುರ ಜಿಲ್ಲೆ ಪ್ರವೇಶಿಸಿ, ಮುದ್ದೇಬಿಹಾಳದಲ್ಲಿ ಠಿಕಾಣಿ ಹೂಡಿದ್ದ ಕೋಲಾರ ಶಾಸಕ ವರ್ತೂರು ಪ್ರಕಾಶ್‌, ಇದೀಗ ಮುಖ್ಯಮಂತ್ರಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ‘ನಮ್ಮ ಕಾಂಗ್ರೆಸ್‌’ ಸ್ಥಾಪಿಸಿ, ತಮ್ಮ ಸಹೋದರನ ಪುತ್ರ ವಿ.ಪಿ.ರಕ್ಷಿತ್‌ ಅವರನ್ನು ಕಣಕ್ಕಿಳಿಸುವುದಾಗಿ ಘೋಷಿಸಿದ್ದಾರೆ.

ಹೀಗಾಗಿ, ತಮ್ಮ ವಿರುದ್ಧವೇ ಸಡ್ಡು ಹೊಡೆದ ‘ಹಿತ ಶತ್ರು’ಗಳನ್ನು ಮಣಿಸುವ ರಣತಂತ್ರ ರೂಪಿಸಬೇಕಾದ ಅನಿವಾರ್ಯ ಸಿದ್ದರಾಮಯ್ಯ ಅವರಿಗೆ ಎದುರಾಗಿದೆ.

‘ಕೈ’ ಕೋಟೆ...

ಸತತ ನಾಲ್ಕು ಬಾರಿಯ ಗೆಲುವಿನೊಂದಿಗೆ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಮುದ್ದೇಬಿಹಾಳದಲ್ಲಿ, ಈ ಬಾರಿ ಪ್ರಬಲ ಪೈಪೋಟಿ ನಡೆಯಲಿದೆ. ‘ಪಾಳೆಗಾರಿಕೆ ತಂತ್ರಗಾರಿಕೆಯ ಚಾಣಾಕ್ಷ’ ಎಂದೇ ಬಣ್ಣಿಸಲಾಗುವ ಸಿ.ಎಸ್‌.ನಾಡಗೌಡ ಐದು ಬಾರಿ ಇಲ್ಲಿನ ಶಾಸಕರಾಗಿದ್ದಾರೆ.

ಮೊದಲ ಎರಡು ಚುನಾವಣೆ ಹೊರತುಪಡಿಸಿದರೆ, ಉಳಿದ ಮೂರು ಚುನಾವಣೆಗಳಲ್ಲಿ ವಿರೋಧಿ ಪಾಳಯದ ತಳಹದಿಯನ್ನೇ ನುಚ್ಚುನೂರುಗೊಳಿಸಿ ನಾಡಗೌಡ ವಿಜಯಿಯಾಗಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ.

’ಒಟ್ಟಾರೆ ಒಲವು ತಮ್ಮ ಪರ ವ್ಯಕ್ತವಾಗದಿದ್ದರೆ, ನಾಡಗೌಡ ಅಂತಿಮವಾಗಿ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ನಿಗೂಢವಾಗಿದೆ. ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿಗೊಂಡ ಸಂದರ್ಭ ತಮ್ಮ ಒಡೆತನದ ಭೂಮಿಯನ್ನು ಉಳುವವರಿಗೆ ಬಿಟ್ಟುಕೊಟ್ಟ ದಿನದಿಂದಲೂ ನಿಷ್ಠಾವಂತ ಬೆಂಬಲಿಗ ಪಡೆ ಹೊಂದಿರುವ, ಮಾಜಿ ಸಚಿವೆ ವಿಮಲಾಬಾಯಿ ದೇಶಮುಖರ ನಿರ್ಣಯ ಸಹ ಕ್ಷೇತ್ರದ ಚಿತ್ರಣ ಬದಲಿಸುವ ಸಾಮರ್ಥ್ಯ ಹೊಂದಿದೆ’ ಎನ್ನುತ್ತಾರೆ ಎಪಿಎಂಸಿ ವರ್ತಕ ಅಮರಪ್ಪ ಜಿ.ಗಂಗನಗೌಡ.

ಕ್ಷೇತ್ರ ಚಿತ್ರಣ

‘ನಾಡಗೌಡ ಸಂಭಾವಿತ. ಅಭಿವೃದ್ಧಿ ಮಾಡದಿದ್ದರೂ ಚಿಂತೆಯಿಲ್ಲ. ಯಾರಿಗೂ ತೊಂದರೆ ನೀಡಿಲ್ಲ. ಎಲ್ಲ ಸಮಾಜದ ಧುರೀಣರ ಜತೆ ಸುಮಧುರ ಬಾಂಧವ್ಯವಿದೆ’ ಎಂಬ ಮೆಚ್ಚುಗೆಯ ಮಾತುಗಳು ಒಂದೆಡೆ ಕೇಳಿ ಬಂದರೆ, ‘25 ವರ್ಷ ಅಧಿಕಾರದಲ್ಲಿದ್ದರೂ ಸಾಧನೆ ಶೂನ್ಯ. ಸ್ಥಳೀಯವಾಗಿ ಲಭ್ಯವಿಲ್ಲ. ಬೆಂಗಳೂರು ನಿವಾಸಿ. ಆಗಾಗ್ಗೆ ಮುದ್ದೇಬಿಹಾಳದ ಸರ್ಕಾರಿ ಬಂಗಲೆಯಲ್ಲಿ ಏಕಾಂಗಿ ವಾಸಿ. ಕಾಲೊನಿಗಳಿಗೆ ಭೇಟಿ ನೀಡಲ್ಲ. ತಳ ವರ್ಗದವರ ಸಂಪರ್ಕ ಅಷ್ಟಕ್ಕಷ್ಟೆ’ ಎಂಬ ಆಕ್ಷೇಪಗಳೂ ಇವೆ.

ಬಳ್ಳಾರಿ ಗಣಿ ದೂಳನ್ನು ಮೈಗಂಟಿಸಿಕೊಂಡೇ ಮುದ್ದೇಬಿಹಾಳ ಪ್ರವೇಶಿಸಿದ ಎ.ಎಸ್.ಪಾಟೀಲ ನಡಹಳ್ಳಿ, ‘ಉಡುಗೊರೆ’ ಮೂಲಕವೇ ಮನೆಮಾತಾದವರು. ತಮ್ಮ ವಿರೋಧಿಯ ಈ ಸೂಕ್ಷ್ಮ ಅರಿತ ನಾಡಗೌಡ ನಾಜೂಕಿನಿಂದಲೇ ಅವರನ್ನು ದೇವರಹಿಪ್ಪರಗಿಗೆ ಸಾಗಹಾಕಿದರು. ಆದರೂ ನಡಹಳ್ಳಿ ಅವರಿಗೆ, ಮುದ್ದೇಬಿಹಾಳದ ಮೇಲಿನ ಪ್ರೇಮ ಕೊಂಚವೂ ಕಡಿಮೆಯಾಗಲಿಲ್ಲ. 2013ರಲ್ಲಿ ತಮ್ಮ ಸಹೋದರನನ್ನು ಕಣಕ್ಕಿಳಿಸಿ ನಾಡಗೌಡರಿಗೆ ಸಡ್ಡು ಹೊಡೆದರು. ಇದೀಗ ತಾವೇ ಸ್ಪರ್ಧೆಗೆ ಅಣಿಯಾಗಿದ್ದಾರೆ. ‘ಗಣಿ ಲಕ್ಷ್ಮಿ’ಯ ಶ್ರೀರಕ್ಷೆ ಬೆನ್ನಿಗಿಟ್ಟುಕೊಂಡು, ಓಣಿ, ಕೇರಿ, ಕಾಲೊನಿ ಸುತ್ತುತ್ತಿದ್ದಾರೆ. ಆದರೆ, ‘ಎರಡು ಅವಧಿಗೆ ಶಾಸಕರಾಗಿ ಆಯ್ಕೆಯಾದರೂ ನೆರೆಯ ದೇವರಹಿಪ್ಪರಗಿ ಕ್ಷೇತ್ರಕ್ಕೆ ನ್ಯಾಯ ಒದಗಿಸುವಲ್ಲಿ ನಡಹಳ್ಳಿ ವಿಫಲರಾಗಿದ್ದಾರೆ’ ಎಂಬ ಮಾತನ್ನು ವಿರೋಧಿ ಪಾಳಯ ಜನರ ಬಾಯಿಂದ ಬಾಯಿಗೆ ತಲುಪಿಸುವ ಯತ್ನದಲ್ಲಿ ಯಶಸ್ವಿಯಾಗಿರುವುದು ಅವರಿಗೆ ನುಂಗಲಾರದ ತುತ್ತಾಗಿದೆ ಎನ್ನುತ್ತಾರೆ ಸ್ಥಳೀಯರಾದ ಮಹಾಂತೇಶ.

‘ಅಹಿಂದ’ ಮತ ಬ್ಯಾಂಕ್‌ ಮೇಲೆ ಕಣ್ಣಿಟ್ಟೇ ಕ್ಷೇತ್ರದಲ್ಲಿ ರಾಜಕಾರಣ ಆರಂಭಿಸಿದ ವರ್ತೂರು ಪ್ರಕಾಶ್‌ಗೆ, ಮೊದಲಿದ್ದ ಬೆಂಬಲ ಇಳಿಮುಖವಾಗುತ್ತಿದೆ. ಕುರುಬ ಸಮಾಜದ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದರೆ ಚಿತ್ರಣವೇ ಬದಲಾಗುತ್ತಿತ್ತು. ಆದರೂ ಕೆಲ ಯುವಕರು ಅವರ ಬೆನ್ನಿಗಿದ್ದಾರೆ’ ಎನ್ನುತ್ತಾರೆ ಪ್ರದೀಪ ಜಗ್ಗಲ.

‘ಬಿಜೆಪಿ ಸಂಘಟನೆಗೆ ಒತ್ತು ನೀಡಿದೆ. ಬಂಡಾಯ ತಪ್ಪಿಸಲು ಕೊನೇ ಕ್ಷಣದಲ್ಲಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಿದೆ. ಮಂಗಳಾದೇವಿ ಬಿರಾದಾರ, ಆರ್‌.ಎಸ್‌.ಪಾಟೀಲ ಕೂಚಬಾಳ, ನಾಲತವಾಡದ ಮಹಾಂತಪ್ಪಗೌಡ ಪಾಟೀಲ ಹೆಸರುಗಳು ಪ್ರಬಲವಾಗಿ ಕೇಳಿ ಬರುತ್ತಿವೆ. ಆಪರೇಷನ್‌ ಕಮಲ ನಡೆದರೂ ಅಚ್ಚರಿ ಪಡಬೇಕಿಲ್ಲ’ ಎಂಬುದು ಎಸ್.ಎಸ್‌.ಸಜ್ಜನ ಅವರ ಅನಿಸಿಕೆ.

ಜನಸಾಮಾನ್ಯರ ಪಕ್ಷದ ಸಂಸ್ಥಾಪಕ ಡಾ. ಡಿ.ಅಯ್ಯಪ್ಪ (ದೊರೆ) ಸ್ಪರ್ಧೆಗೆ ಒಲವು ತೋರಿದ್ದು, ಬಿಜೆಪಿಯ ಜಾತಿ ಸಮೀಕರಣದ ಸೂತ್ರ ಇಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಜನರ ಆಶೋತ್ತರಕ್ಕೆ ಸ್ಪಂದಿಸಿರುವೆ...

ನಾಗರಬೆಟ್ಟ, ಪೀರಾಪುರ– ಬೂದಿಹಾಳ ಏತ ನೀರಾವರಿ ಯೋಜನೆ ಮಂಜೂರು, ಕೃಷಿ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅನುಮೋದನೆ, ಮುದ್ದೇಬಿಹಾಳ, ತಾಳಿಕೋಟೆ ಪಟ್ಟಣದಲ್ಲಿ ಯುಜಿಡಿ, ತಾಳಿಕೋಟೆ– ಹಡಗಿನಾಳ ಸೇತುವೆ ನಿರ್ಮಾಣ, ಪ್ರಮುಖ ರಸ್ತೆಗಳ ನಿರ್ಮಾಣ, ವಸತಿ ನಿಲಯ, ಸರ್ಕಾರಿ ಪ್ರೌಢಶಾಲೆ, ಆದರ್ಶ ವಿದ್ಯಾಲಯ, ಎರಡು ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಜೂನಿಯರ್ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನಾಲತವಾಡ, ಮುದ್ದೇಬಿಹಾಳ ಪಟ್ಟಣಗಳಲ್ಲಿ ಸರ್ಕಾರಿ ಐಟಿಐ ಕಾಲೇಜು ಸ್ಥಾಪನೆ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಪ್ರಾಮಾಣಿಕವಾಗಿ ಶ್ರಮಿಸಿರುವೆ.

ಮೂರು ದಶಕಗಳಿಂದ ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದ್ದೇನೆ.

ಸಿ.ಎಸ್.ನಾಡಗೌಡ, ಶಾಸಕ

***

ಎರಡು ಮನೆತನಗಳ ನಡುವಿನ ಸ್ಪರ್ಧೆ

1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಎಸ್‌.ಎಂ.ಮುರಿಗೆಪ್ಪ (ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ, ರಡ್ಡಿ ಸಮುದಾಯದವರು.

ಸತತ ಮೂರು ಬಾರಿ ಜೆ.ಎಸ್‌.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್‌.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT