ಪಕ್ಷಗಳ ನಾಯಕರು ಅದಲು ಬದಲು; ಜನರಿಗೆ ದಿಗಿಲು!

7
ಲಿಂಗಸುಗೂರು: ಮುಖಂಡರ ನಡೆಯಿಂದ ಕಾರ್ಯಕರ್ತರಲ್ಲಿ ಗೊಂದಲ

ಪಕ್ಷಗಳ ನಾಯಕರು ಅದಲು ಬದಲು; ಜನರಿಗೆ ದಿಗಿಲು!

Published:
Updated:
ಪಕ್ಷಗಳ ನಾಯಕರು ಅದಲು ಬದಲು; ಜನರಿಗೆ ದಿಗಿಲು!

ರಾಯಚೂರು: ಜಿಲ್ಲೆಯ ಲಿಂಗಸುಗೂರು ವಿಧಾನಸಭಾ ಕ್ಷೇತ್ರದ ಶಾಸಕರು ಕಳೆದ ಎರಡು ವಿಧಾನಸಭೆ ಚುನಾವಣೆ ವೇಳೆಯಲ್ಲಿ ಹಲವು ಕಾರಣಗಳಿಂದ ರಾಜ್ಯಮಟ್ಟದಲ್ಲಿ ಗಮನ ಸೆಳೆಯುತ್ತಾ ಬಂದಿದ್ದಾರೆ.

ವಿಶೇಷವಾಗಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಮಂಡನೆ ಆಗಿದ್ದ ಅವಿಶ್ವಾಸ ಗೊತ್ತುವಳಿಯಲ್ಲಿ ಬಿಜೆಪಿ ಶಾಸಕರಾಗಿದ್ದ ಮಾನಪ್ಪ ವಜ್ಜಲ್‌ ಅವರು ಪಕ್ಷದ ವಿರುದ್ಧವೆ ‘ಕೈ ಎತ್ತಿ’ ಅಚ್ಚರಿ ಮೂಡಿಸಿದ್ದರು. ಆನಂತರ 2013 ರಲ್ಲಿ ಜೆಡಿಎಸ್‌ ಪಕ್ಷದಿಂದ ಸ್ಪರ್ಧಿಸಿ ಮತ್ತೆ ಶಾಸಕರಾದರು. ಇದೀಗ ಬಿಜೆಪಿಗೆ ಮತ್ತೆ ಸೇರ್ಪಡೆಗೊಂಡು ಗಮನ ಸೆಳೆದಿದ್ದಾರೆ. ಬಿ.ಎಸ್‌. ಯಡಿಯೂರಪ್ಪ ವಿಶ್ವಾಸ ಸಂಪಾದಿಸುವಲ್ಲಿ ಸಫಲರಾದ ಮಾನಪ್ಪ ವಜ್ಜಲ್‌ ಅವರು ಲಿಂಗಸುಗೂರು ಕ್ಷೇತ್ರದಿಂದ ಹ್ಯಾಟ್ರಿಕ್‌ ಜಯ ಸಾಧಿಸಲು ಟಿಕೆಟ್‌ ಖಾತರಿ ಮಾಡಿಕೊಂಡಿದ್ದಾರೆ.

ಆದರೆ, ಬಿಜೆಪಿ ಟಿಕೆಟ್‌ಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಸಿದ್ದು ಬಂಡಿ ಅವರು ಅಸಮಾಧಾನಗೊಂಡು ಈಚೆಗೆ ಜೆಡಿಎಸ್‌ ಸೇರ್ಪಡೆಗೊಂಡರು. ಪಕ್ಷದ ಏಳಿಗೆಗೆ ಹಲವು ವರ್ಷ ತೊಡಗಿಸಿಕೊಂಡಿದ್ದ ಸಿದ್ದು ಬಂಡಿ ಅವರಿಗೆ ಟಿಕೆಟ್‌ ಸಿಗದಿರುವುದಕ್ಕೆ ತಾಲ್ಲೂಕು ಬಿಜೆಪಿ ಪದಾಧಿಕಾರಿಗಳು ಸಾಮೂಹಿಕವಾಗಿ ಜೆಡಿಎಸ್‌ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ, ವಜ್ಜಲ್‌ ಅವರ ತೀರ್ಮಾನ ಬೆಂಬಲಿಸಿ ತಾಲ್ಲೂಕು ಜೆಡಿಎಸ್‌ ಪದಾಧಿಕಾರಿಗಳು ಕೂಡಾ ಸಾಮೂಹಿಕವಾಗಿ ಬಿಜೆಪಿ ಸೇರಿದ್ದಾರೆ. ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರ ಅದಲು ಬದಲು ರಾಜಕೀಯದಿಂದ ಆಯಾ ಪಕ್ಷಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ದಿಗಿಲು ಆವರಿಸಿದೆ. ಪಕ್ಷ ಮುಖ್ಯವೋ, ವ್ಯಕ್ತಿ ಮುಖ್ಯವೋ ಎನ್ನುವ ಗೊಂದಲ ಅವರಲ್ಲಿ ಮನೆಮಾಡಿದೆ.

‘ಸಿದ್ದು ಬಂಡಿ ಅವರಿಗೆ ಈ ಸಲ ಬಿಜೆಪಿ ಟಿಕೆಟ್‌ ಕೊಡಬೇಕಿತ್ತು. ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದ ವ್ಯಕ್ತಿಗೆ ಮರಳಿ ಟಿಕೆಟ್‌ ಕೊಟ್ಟಿದ್ದಾರೆ. ನಾವು ಬಿಜೆಪಿ ತೊರೆಯುವುದಿಲ್ಲ. ಆದರೆ ಸಿದ್ದು ಬಂಡಿ ನ್ಯಾಯ ಸಿಗಬೇಕು ಎನ್ನುವುದನ್ನು ಬಯಸುತ್ತೇವೆ’ ಎನ್ನುವ ಮಾತನ್ನು ಹೆಸರು ಬಹಿರಂಗ ಮಾಡಲು ಇಚ್ಚಿಸದ ಬಿಜೆಪಿ ಕೆಲವು ಮುಖಂಡರು ಹೇಳುತ್ತಿದ್ದಾರೆ.

ಸ್ಪೃಶ್ಯರಿಗೆ ಟಿಕೆಟ್‌ ಬೇಡಿಕೆ: ಕ್ಷೇತ್ರವು ಪರಿಶಿಷ್ಟ ಜಾತಿಗೆ ಮೀಸಲಾದ ಬಳಿಕ ಎರಡು ಬಾರಿಯೂ ಸ್ಪಶ್ಯ ಜಾತಿ (ಲಂಬಾಣಿ, ಭೋವಿ, ವಡ್ಡರ)ಗಳ ನಾಯಕರಿಗೆ ರಾಜಕೀಯ ಪಕ್ಷಗಳು ಟಿಕೆಟ್‌ ನೀಡಿವೆ. ಈ ಬಾರಿ ಅಸ್ಪೃಶ್ಯ (ಹೊಲೆಯ, ಮಾದಿಗ) ನಾಯಕರಿಗೆ ಟಿಕೆಟ್‌ ನೀಡುವಂತೆ ದಲಿತಪರ ಸಂಘಟನೆಗಳು ಎಲ್ಲ ಪಕ್ಷಗಳಿಗೆ ಒತ್ತಡ ಹೇರಿವೆ. ಇದಕ್ಕಾಗಿ ಸಮಾವೇಶಗಳು, ಹೋರಾಟಗಳನ್ನು ನಡೆಸಿವೆ. ಕ್ಷೇತ್ರದಲ್ಲಿ ಶೇ 30 ರಷ್ಟು ಅಸ್ಪೃಶ್ಯ ಜಾತಿ ಜನರ ಮತಗಳಿವೆ. ಅಸ್ಪೃಶ್ಯರಿಗೆ ಟಿಕೆಟ್‌ ನೀಡದ ಪಕ್ಷಗಳ ಅಭ್ಯರ್ಥಿಗಳನ್ನು ಈ ಸಲ ಸೋಲಿಸುವುದಾಗಿ ದಲಿತಪರ ನಾಯಕರು ಎಚ್ಚರಿಸಿದ್ದಾರೆ.

ಈಗಾಗಲೇ ಟಿಕೆಟ್‌ ಖಾತ್ರಿ ಮಾಡಿಕೊಂಡ ಜೆಡಿಎಸ್‌ ಅಭ್ಯರ್ಥಿ ಸಿದ್ದು ಬಂಡಿ ಹಾಗೂ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಇಬ್ಬರು ಭೋವಿ ಸಮುದಾಯದವರು. ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಎಂಬುದು ಬಾಕಿ ಇದೆ. ಬೋವಿ ಸಮುದಾಯದ ಡಿ.ಎಸ್‌.ಹುಲಗೇರಿಗೆ ಟಿಕೆಟ್‌ ನೀಡುವ ಸುಳಿವನ್ನು ಮುಖ್ಯಮಂತ್ರಿ ನೀಡಿದ್ದರು. ಆದರೆ, ಅಸ್ಪೃಶ್ಯ ಜಾತಿಗೆ ಸೇರಿದ ಪಾಮಯ್ಯ ಮುರಾರಿ, ಮತ್ತು ಎಚ್‌.ಬಿ. ಮುರಾರಿ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಗಳಾಗಿ ಕಾಯುತ್ತಿದ್ದಾರೆ. ಅಸ್ಪೃಶ್ಯರಿಗೆ ಕಾಂಗ್ರೆಸ್‌ನಲ್ಲೂ ಟಿಕೆಟ್‌ ಕೈತಪ್ಪಿದರೆ, ಪಕ್ಷದಲ್ಲಿ ಬಂಡಾಯ ಏಳುವ ಸಾಧ್ಯತೆ ಇದೆ. ಅಸ್ಪೃಶ್ಯ ದಲಿತರ ಮತ ಸೆಳೆಯಲು ಸ್ಪೃಶ್ಯ ಅಭ್ಯರ್ಥಿಗಳು ಯಾವ ಶಕ್ತಿಯನ್ನು ಬಳಕೆ ಮಾಡುತ್ತಾರೆ ಎನ್ನುವುದು ಗಮನಾರ್ಹ ಸಂಗತಿ.

ಗೆಲುವಿಗಾಗಿ ಪಕ್ಷಾಂತರ

2004 ರಿಂದ ಸತತ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದ ಅಮರೇಗೌಡ ಪಾಟೀಲ ಅವರು ಮೂರು ಚುನಾವಣೆಗಳಲ್ಲೂ ಪಕ್ಷ ಬದಲಿಸಿದ್ದರು. ಜನತಾದಳದಲ್ಲಿ ಭಿನ್ನಮತದಿಂದ ಹುಟ್ಟಿಕೊಂಡ ಹೊಸ ಪಕ್ಷಕ್ಕೆ ಅಮರೇಗೌಡ ಅವರು ಸೇರ್ಪಡೆಯಾದರೂ ಪ್ರಭಾವ ಉಳಿಸಿಕೊಂಡು ಜಯ ಸಾಧಿಸಿದ್ದರು. ಅದೇ ಮಾದರಿಯನ್ನು ಮಾನಪ್ಪ ವಜ್ಜಲ್‌ ಈಗ ಅನುಸರಿಸಿದ್ದಾರೆ. ಮೊದಲು ಬಿಜೆಪಿಯಿಂದ ಹಾಗೂ ಎರಡನೇ ಸಲ ಜೆಡಿಎಸ್‌ನಿಂದ ಜಯ ಪಡೆದು ಶಾಸಕರಾಗಿದ್ದರು. ಇದೀಗ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಲು ಅಣಿಯಾಗಿದ್ದಾರೆ.

ಪಕ್ಷಗಳು ಮುಖ್ಯವಲ್ಲ

1983ರಿಂದ 2013 ರವರೆಗೂ ಎಂಟು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಒಂದು ಪಕ್ಷವು ಮರು ಗೆಲುವು ಸಾಧಿಸಿಲ್ಲ. ಆದರೆ ಪಕ್ಷ ಬದಲಿಸಿಕೊಂಡು ಅಭ್ಯರ್ಥಿಗಳು ಮರು ಗೆಲುವು ಸಾಧಿಸಿದ್ದಾರೆ. ಲಿಂಗಸುಗೂರು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷಗಳಿಗೆ ಮಹತ್ವವಿಲ್ಲ. ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳು ಬೀರುವ ಪ್ರಭಾವ ಹಾಗೂ ಬಳಸುವ ಶಕ್ತಿಯು ಗೆಲುವು ತಂದುಕೊಡುತ್ತಿರುವುದು ಈ ಕ್ಷೇತ್ರದ ವಿಶೇಷ. ಮೊದಲು ಸಾಮಾನ್ಯರಿಗೆ ಮೀಸಲಾಗಿದ್ದ ಕ್ಷೇತ್ರವು 2008 ರಿಂದ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ.

ಪಕ್ಷಗಳು ಸತತ ಗೆಲುವು ಸಾಧಿಸದ ವಿವರ1983 ಎ.ಬಸವರಾಜ ಪಾಟೀಲ ಅನ್ವರಿ ಐಎನ್‌ಸಿ

1985 ರಾಜಾ ಅಮರಪ್ಪ ನಾಯಕ            ಜೆಎನ್‌ಪಿ

1989 ರಾಜಾ ಅಮರೇಶ್ವರ ನಾಯಕ        ಐಎನ್‌ಸಿ

1994 ಅಮರೇಗೌಡ ಪಾಟೀಲ                ಜೆಡಿ

1999 ಅಮರೇಗೌಡ ಪಾಟೀಲ                ಜೆಡಿಯು

2004 ಅಮರೇಗೌಡ ಪಾಟೀಲ               ಜೆಡಿಎಸ್‌

2008 ಮಾನಪ್ಪ ವಜ್ಜಲ                       ಬಿಜೆಪಿ

2013 ಮಾನಪ್ಪ ವಜ್ಜಲ                        ಜೆಡಿಎಸ್‌

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry