110 ಹಳ್ಳಿಗಳಿಗೆ ಸಿಗಲಿದೆ ಕಾವೇರಿ ನೀರು

7

110 ಹಳ್ಳಿಗಳಿಗೆ ಸಿಗಲಿದೆ ಕಾವೇರಿ ನೀರು

Published:
Updated:
110 ಹಳ್ಳಿಗಳಿಗೆ ಸಿಗಲಿದೆ ಕಾವೇರಿ ನೀರು

ಬೆಂಗಳೂರು: ಬಿಬಿಎಂಪಿ ವ್ಯಾ‍ಪ್ತಿಗೆ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ 5ನೇ ಹಂತದ 1ನೇ ಘಟ್ಟ ಹಾಗೂ ಒಳಚರಂಡಿ ಸಂಪರ್ಕ ಕಲ್ಪಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ‌ ಕೆಂಗೇರಿಯಲ್ಲಿ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.

ಕೆಂಗೇರಿ ಬಳಿ ನಿರ್ಮಿಸಿರುವ ಕೊಳಚೆ ನೀರು ಸಂಸ್ಕರಣಾ ಘಟಕವನ್ನೂ ಇದೇ ವೇಳೆ ಉದ್ಘಾಟಿಸಲಾಯಿತು. ಈ ಯೋಜನೆಗಳಿಗೆ ಜಪಾನ್ ಅಂತರರಾಷ್ಟ್ರೀಯ ಸಹಕಾರ ಸಂಸ್ಥೆ (ಜೈಕಾ) ಆರ್ಥಿಕ ನೆರವು ಒದಗಿಸಿದೆ. ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಹಾಗೂ ಜಲಮಂಡಳಿ ಭರಿಸಲಿವೆ. ಈ ಯೋಜನೆಯ ಮೊತ್ತ ₹5,552 ಕೋಟಿ. ಯೋಜನೆ ಪೂರ್ಣಗೊಂಡ ಬಳಿಕ ನಗರಕ್ಕೆ ಹೆಚ್ಚುವರಿಯಾಗಿ 77.5 ಕೋಟಿ ಲೀಟರ್‌ ನೀರು ಪೂರೈಕೆಯಾಗಲಿದೆ.

ತೊರೆಕಾಡನಹಳ್ಳಿಯಿಂದ ನಗರಕ್ಕೆ ಕೊಳವೆ ಮಾರ್ಗ ನಿರ್ಮಾಣ, ತಾತಗುಣಿ ಹಾಗೂ ಹಾರೋಹಳ್ಳಿಯಲ್ಲಿ ಜಲರೇಚಕ ಯಂತ್ರಾಗರ ನಿರ್ಮಿಸಲಾಗುತ್ತದೆ. ಗೊಟ್ಟಿಗೆರೆ, ದೊಡ್ಡಕನ್ನಹಳ್ಳಿ, ಕಾಡುಗೋಡಿ, ಚೊಕ್ಕನಹಳ್ಳಿ, ವಾಸುದೇವಪುರ, ಸಿಂಗಾಪುರ ಹಾಗೂ ಲಿಂಗದೇವರಹಳ್ಳಿಯಲ್ಲಿ 4.60 ಕೋಟಿ ಲೀಟರ್ ಸಾಮರ್ಥ್ಯದ ನೆಲಮಟ್ಟದ ಜಲಸಂಗ್ರಹಾಗರಗಳು (ಜಿಎಲ್‌ಆರ್) ನಿರ್ಮಾಣಗೊಳ್ಳಲಿವೆ.ಈ ಎಲ್ಲ ಕಾಮಗಾರಿಗಳನ್ನು 2022ರೊಳಗೆ ಪೂರ್ಣಗೊಳಿಸಬೇಕು ಎಂಬ ಗಡುವು ವಿಧಿಸಲಾಗಿದೆ.

110 ಹಳ್ಳಿಗಳಲ್ಲಿ ಉತ್ಪ‍ತ್ತಿಯಾಗುವ ಕೊಳಚೆ ನೀರನ್ನು ಸಂಸ್ಕರಿಸಲು ಮಹದೇವಪುರ, ಬ್ಯಾಟರಾಯನಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ ವಲಯಗಳ 14 ಸ್ಥಳಗಳಲ್ಲಿ ಎಸ್‌ಟಿಪಿ ನಿರ್ಮಿಸಲಾಗುತ್ತದೆ.

ಒಳಚರಂಡಿ ವ್ಯವಸ್ಥೆ: ಮೂರು ವಲಯಗಳನ್ನಾಗಿ ವಿಂಗಡಿಸಿ ಒಳಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. 49 ಹಳ್ಳಿಗಳನ್ನು ಒಳಗೊಂಡ ಬ್ಯಾಟರಾಯನಪುರ ಹಾಗೂ ಮಹದೇವಪುರ ವಲಯದ ವಿಸ್ತೀರ್ಣವು 106.03 ಚದರ ಕಿ.ಮೀ. ಇದ್ದು, 551 ಕಿ.ಮೀ. ಉದ್ದದ ಕೊಳವೆ ಮಾರ್ಗವನ್ನು ನಿರ್ಮಿಸಲಾಗುತ್ತದೆ. ಕಿಲಾರಿ ಇನ್‌

ಫ್ರಾಸ್ಟ್ರಕ್ಚರ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿಯ ವೆಚ್ಚ ₹327.12 ಕೋಟಿ.

33 ಹಳ್ಳಿಗಳನ್ನು ಒಳಗೊಂಡ ಬೊಮ್ಮನಹಳ್ಳಿ ವಲಯದ ವಿಸ್ತೀರ್ಣವು 64.26 ಚದರ ಕಿ.ಮೀ. ಇದ್ದು, 517 ಕಿ.ಮೀ. ಉದ್ದದ ಕೊಳವೆ ಮಾರ್ಗ ಇರಲಿದೆ. ಎಲ್‌ ಆ್ಯಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿಯ ಮೊತ್ತ ₹301.56 ಕೋಟಿ.

28 ಹಳ್ಳಿಗಳನ್ನು ಒಳಗೊಂಡ ರಾಜರಾಜೇಶ್ವರಿನಗರ ಹಾಗೂ ದಾಸರಹಳ್ಳಿ ವಲಯದ ವಿಸ್ತೀರ್ಣವು 54.93 ಚದರ ಕಿ.ಮೀ. ಇದ್ದು, 517 ಕಿ.ಮೀ. ಉದ್ದದ ಕೊಳವೆ ಮಾರ್ಗ ಇರಲಿದೆ. ಎಲ್‌ ಆ್ಯಂಡ್ ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಕಾಮಗಾರಿಯ ಮೊತ್ತ ₹296.39 ಕೋಟಿ.

ಕೆಂಗೇರಿ ಎಸ್‌ಟಿಪಿ: ಕಾವೇರಿ ನೀರು ಸರಬರಾಜು ಯೋಜನೆಯ 2ನೇ ಹಂತದ ಕಾಮಗಾರಿಯಡಿಯಲ್ಲಿ ನಿರ್ಮಿಸಲಾದ 10 ಎಸ್‌ಟಿ‍ಪಿಗಳ ಪೈಕಿ ಕೆಂಗೇರಿ ಎಸ್‌ಟಿಪಿಯೂ ಒಂದು. ಇದು 6 ಕೋಟಿ ಲೀಟರ್ ಕೊಳಚೆ ನೀರನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ.

‘ಸ್ಟೇಟ್ ಆಫ್ ಆರ್ಟ್ ಟೆಕ್ನಾಲಜಿ’ಯನ್ನು ಹೊಂದಿದ ಭಾರತದ ಮೊದಲ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ. 7 ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕೆ ₹239.01 ಕೋಟಿ ವೆಚ್ಚವಾಗಿದೆ.

ಎಸ್‌ಟಿಪಿ ನೀರಿನಿಂದ ಕೆರೆ ತುಂಬಿಸಿ: ಎಸ್‌ಟಿಪಿಗಳ ನೀರಿನಿಂದ ಕೆಂಗೇರಿ ಹಾಗೂ ದುಬಾಸಿಪಾಳ್ಯ ಕೆರೆಗಳನ್ನು ತುಂಬಿಸಬೇಕು ಎಂದು ಒತ್ತಾಯಿಸಿ ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್ ಮನವಿ ಸಲ್ಲಿಸಿದರು.

ಯಶವಂತಪುರ ವ್ಯಾಪ್ತಿಯ ನಿವಾಸಿಗಳಿಗೆ ನಿವೇಶನಗಳ ಹಕ್ಕುಪತ್ರವನ್ನು ಸೋಮಶೇಖರ್ ನೇತೃತ್ವದಲ್ಲಿ ವಿತರಿಸಲಾಯಿತು.

‘ಬಿಜೆಪಿ ಲಂಚಕೋರ ಪಕ್ಷ’

‘ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಈ ಹಳ್ಳಿಗಳ ಅಭಿವೃದ್ಧಿಗೆ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರದಲ್ಲಿದ್ದಷ್ಟು ದಿನ ಭ್ರಷ್ಟಾಚಾರ ನಡೆಸಿದ ಬಿಜೆಪಿಗೆ ಮತ್ತೊಂದು ಹೆಸರೇ ಲಂಚಕೋರ ಪಕ್ಷ’ ಎಂದು ಸಿದ್ದರಾಮಯ್ಯ ಹರಿಹಾಯ್ದರು.

‘ಮೋದಿಗೆ ಮಾನ ಮರ್ಯಾದೆ ಇದೆಯೇನ್ರೀ. ನಾನು 40 ವರ್ಷಗಳಿಂದ ರಾಜಕಾರಣದಲ್ಲಿ ಇದ್ದೇನೆ. ಆದರೆ, ಮೋದಿ ರೀತಿಯಲ್ಲಿ ಸುಳ್ಳು ಹೇಳುವ ಪ್ರಧಾನ ಮಂತ್ರಿಯನ್ನು ನೋಡಿಯೇ ಇಲ್ಲ’ ಎಂದರು.

‘ಸುಳ್ಳು ಹೇಳುವುದನ್ನು ಬಿಜೆಪಿಯವರು ಕರಗತ ಮಾಡಿಕೊಂಡಿದ್ದಾರೆ. ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಸತ್ಯ ಹೇಳುವುದೇ ಗೊತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಬೆಂಗಳೂರು ರಕ್ಷಿಸಿ ಎಂಬುದು ನಾಟಕ’

‘ಬೆಂಗಳೂರು ರಕ್ಷಿಸಿ ಎಂದು ಬಿಜೆಪಿ ಹೇಳುತ್ತಿದೆ. ಅಧಿಕಾರದಲ್ಲಿದ್ದಾಗ ಬಿಜೆಪಿ ಬೆಂಗಳೂರನ್ನು ಹಾಳು ಮಾಡಿತ್ತು. ಆ ಪಕ್ಷದ ಮುಖಂಡರು ಮಾನಗೆಟ್ಟವರು. ಅವರಿಂದ ನಗರವನ್ನು ರಕ್ಷಿಸಬೇಕಿದೆ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ಏನಪ್ಪ ಅಶೋಕ, ಬಿಬಿಎಂಪಿಗೆ ಸೇರಿದ 1,400 ಕಡತಗಳನ್ನು ಸುಟ್ಟು ಹಾಕಿದ್ದು, ಮಧ್ಯರಾತ್ರಿ ಟೆಂಡರ್ ಕರೆದಿದ್ದು, ಅನೇಕ ಕಟ್ಟಡಗಳನ್ನು ಅಡವಿಟ್ಟಿದ್ದು ಹಾಗೂ ಸಾಲ ತೀರಿಸಲಾಗದಿದ್ದು ನಿಮ್ಮ ಕಾಲದಲ್ಲಿ ಅಲ್ಲವಾ’ ಎಂದು ಶಾಸಕ ಆರ್.ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.

‘ತಿಂದು ಬಿಟ್ಟವ್ರೆ. ಅದಕ್ಕೆ ಕಡತಗಳನ್ನು ಸುಟ್ಟು ಹಾಕಿದ್ದಾರೆ. ಭೂ ಅಕ್ರಮ ಸಂಬಂಧ ಆರ್.ಅಶೋಕ್‌ ಸಹ ಜೈಲಿಗೆ ಹೋಗಬೇಕಿತ್ತು. ಸ್ಪಲ್ಪದರಲ್ಲಿ ತಪ್ಪಿಸಿಕೊಂಡಿದ್ದಾರೆ’ ಎಂದು ವ್ಯಂಗ್ಯವಾಡಿದರು.

**

ಬಿಜೆಪಿಯ ಯಡಿಯೂರಪ್ಪ, ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಹರತಾಳು ಹಾಲಪ್ಪ ಜೈಲಿಗೆ ಹೋಗಿದ್ದರು. ಜೈಲಿಗೆ ಬೀಗತನ ಮಾಡಲು ಹೋಗಿದ್ದರಾ?–    – ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry