7

ಬಿಜೆಪಿ ಮಣಿಸಿ ಸಂವಿಧಾನ ಉಳಿಸಿ: ಪ್ರಕಾಶ್ ಅಂಬೇಡ್ಕರ್

Published:
Updated:
ಬಿಜೆಪಿ ಮಣಿಸಿ ಸಂವಿಧಾನ ಉಳಿಸಿ: ಪ್ರಕಾಶ್ ಅಂಬೇಡ್ಕರ್

ಬೆಂಗಳೂರು: ‘ಡಾ.ಬಿ.ಆರ್.ಅಂಬೇಡ್ಕರ್ ರಚಿಸಿರುವ ಸಂವಿಧಾನ ಸಾಮಾಜಿಕ ನ್ಯಾಯ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳ ಆಧಾರಸ್ತಂಭವಾಗಿದೆ. ಇದನ್ನು ಉಳಿಸಬೇಕಾದರೆ ರಾಜ್ಯದ ಜನತೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು’ ಎಂದು ಚಿಂತಕ ಹಾಗೂ ಹೋರಾಟಗಾರ ಪ್ರೊ.ಪ್ರಕಾಶ್ ಅಂಬೇಡ್ಕರ್ ಕರೆ ನೀಡಿದರು.

ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಮತ್ತು ಕರ್ನಾಟಕ ಜಾತ್ಯತೀತ ಸಂಘಟನೆಗಳ ಒಕ್ಕೂಟ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ಪ್ರಬುದ್ಧ ಭಾರತದ ನಿರ್ಮಾಣಕ್ಕಾಗಿ ರಾಜ್ಯಮಟ್ಟದ ಜನಜಾಗೃತಿ ಜನಾಂದೋಲನದ ಬಹಿರಂಗ ಸಭೆ’ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮದು ಬಹುಸಂಸ್ಕೃತಿಯ ದೇಶ. ಪ್ರತಿ ರಾಜ್ಯ ತನ್ನದೇ ಆದ ಭಾಷೆ, ಆಚಾರ ಹಾಗೂ ವಿಚಾರ ಹೊಂದಿದೆ. ಇದನ್ನು ಉಳಿಸಿ ಬೆಳೆಸುವುದು ಸಂವಿಧಾನದ ಆಶಯ. ಆದರೆ, ಬಿಜೆಪಿ ನಾಯಕರು ಏಕಭಾಷೆ, ಏಕಧರ್ಮ ಪ್ರತಿಪಾದಿಸಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆಯುತ್ತಿದ್ದಾರೆ. ಪ್ರಧಾನಿ ಮೋದಿ ಸೇರಿ ಆ ಪಕ್ಷದ ಹಲವು ನಾಯಕರ ಬಾಯಲ್ಲಿ ಸಂವಿಧಾನ ಬದಲಿಸುವ ಮಾತು ಬರುತ್ತಿವೆ. ದೇಶ ಮುನ್ನಡೆಸಲು ಇವರು ಯೋಗ್ಯರಲ್ಲ. ಸಂವಿಧಾನ ಗೌರವಿಸುವ ಪ್ರತಿ ಪ್ರಜೆಯೂ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಬೇಕು’ ಎಂದರು.

ಸಿಪಿಎಂ ಮುಖಂಡ ಪ್ರಕಾಶ್ ಮಾತನಾಡಿ, ‘ಬಿಜೆಪಿ ಮನುವಾದಿ ಸಿದ್ಧಾಂತ ಪ್ರತಿಪಾದಿಸುವ ಧಾರ್ಮಿಕ ಪಕ್ಷ. ಇದು ಉಳಿದ ರಾಜಕೀಯ ಪಕ್ಷಗಳಿಗಿಂತ ದೇಶದ ಅಭಿವೃದ್ಧಿಗೆ ಹೆಚ್ಚು ಮಾರಕ. ಈ ಪಕ್ಷವನ್ನು ರಾಜಕೀಯ ಅಧಿಕಾರದಿಂದ ದೂರವಿಡಬೇಕಿದೆ’ ಎಂದರು.

ಜನಾಂದೋಲದ ಪ್ರಯುಕ್ತ ನಗರ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ‘ಬೆಂಗಳೂರು ಚಲೋ’ ಮೆರವಣಿಗೆ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರು ಇದ್ದರು.

**

ಕೇಂದ್ರದಲ್ಲಿ ಬಿಜೆಪಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಆ ಪಕ್ಷದ ವಿರುದ್ಧವಾಗಿ ಜನಾಂದೋಲನ ರೂಪಿಸಲಾಗುತ್ತಿದೆ

– ಆರ್.ಮೋಹನ್‍ರಾಜ್, ದಲಿತ ಸ್ವಾಭಿಮಾನಿ ಸಂಘರ್ಷ ಸಮಿತಿ ಅಧ್ಯಕ್ಷ

**

ಕೇಂದ್ರದಲ್ಲಿ ಬಿಜೆಪಿಯ ಅಧಿಕಾರ ನೆಪ ಮಾತ್ರಕ್ಕಿದೆ. ನಿಜವಾದ ಆಡಳಿತ ಆರ್‌ಎಸ್‌ಎಸ್‌ ಕೈಯಲ್ಲಿದೆ

– ಪ್ರಕಾಶ್, ಸಿಪಿಎಂ ಮುಖಂಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry