ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ: ಆತಂಕ

7
ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆ

ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ: ಆತಂಕ

Published:
Updated:

ಬೆಂಗಳೂರು: 'ರಾಜ್ಯದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವ 33ರಷ್ಟು ಸರ್ಕಾರಿ ಸೀಟುಗಳು ಕರ್ನಾಟಕದಲ್ಲಿ ಹುಟ್ಟಿ ಬೆಳೆದ, ಇಲ್ಲೇ ಓದಿದ ವಿದ್ಯಾರ್ಥಿಗಳಿಗೆ ಸಿಗಬೇಕು ಎಂಬ ಸರ್ಕಾರದ ನಿಯಮದ ವಿರುದ್ಧ ಹೊರರಾಜ್ಯದ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ತೀರ್ಪು ನಮ್ಮ ವಿರುದ್ಧ ಬಂದರೆ ಕನ್ನಡಿಗರಿಗೆ ಅನ್ಯಾಯವಾಗುತ್ತದೆ' ಎಂದು ಕರ್ನಾಟಕ ವೈದ್ಯಕೀಯ ವಿದ್ಯಾರ್ಥಿಗಳ ಹಾಗೂ ಯುವ ವೈದ್ಯರ ಸಂಘಟನೆ ಆತಂಕ ವ್ಯಕ್ತಪಡಿಸಿದೆ.

ಬುಧವಾರ ಇಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಡಾ. ಭರತ್‌ ಕುಮಾರ್‌, ‘ಇಲ್ಲೇ ಹುಟ್ಟಿ, ಇಲ್ಲೇ ವಿದ್ಯಾಭ್ಯಾಸ ಮುಗಿಸಿ ಎಂಬಿಬಿಎಸ್‌ ಪದವಿ ಪಡೆದವರನ್ನೂ, ಹೊರ ರಾಜ್ಯದಿಂದ ಬಂದು ಇಲ್ಲಿ ಎಂಬಿಬಿಎಸ್‌ ಪದವಿ ಪಡೆದವರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು’ ಎಂದರು.

'ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇಕಡ 50ರಷ್ಟು ಸೀಟುಗಳನ್ನು ಅಖಿಲ ಭಾರತ ಕೋಟಾದಡಿ, ಶೇಕಡ 50ರಷ್ಟು ಸೀಟುಗಳನ್ನು ರಾಜ್ಯ ಕೋಟಾದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. 35 ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 33ರಷ್ಟು ಸರ್ಕಾರಿ ಸೀಟುಗಳು ಹಾಗೂ 33 ರಷ್ಟು ಖಾಸಗಿ ಸೀಟುಗಳಿವೆ. ಉಳಿದ ಸೀಟುಗಳನ್ನು ಎನ್‌ಆರ್‌ಐ, ಮುಕ್ತ ಪ್ರವೇಶ, ಆಡಳಿತಮಂಡಳಿ ಕೋಟಾದಡಿ ವಿಭಾಗಿಸಲಾಗಿದೆ. ಖಾಸಗಿ ಅಲ್ಪಸಂಖ್ಯಾತ ಕಾಲೇಜುಗಳಲ್ಲಿ ಕನ್ನಡಿಗರಿಗೆ  ಶೇ 29ರಷ್ಟು ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಆದರೆ, ಕನ್ನಡಿಗರಿಗೆ ಮೀಸಲಿರುವ ಸರ್ಕಾರಿ ಸೀಟುಗಳು ತಮಗೇ ಬೇಕು ಎಂಬುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry