ರವಿಕೃಷ್ಣಾರೆಡ್ಡಿ ಬೆಂಬಲಿಗರ ಮೇಲೆ ‌ಹಲ್ಲೆ

ಭಾನುವಾರ, ಮಾರ್ಚ್ 24, 2019
33 °C

ರವಿಕೃಷ್ಣಾರೆಡ್ಡಿ ಬೆಂಬಲಿಗರ ಮೇಲೆ ‌ಹಲ್ಲೆ

Published:
Updated:
ರವಿಕೃಷ್ಣಾರೆಡ್ಡಿ ಬೆಂಬಲಿಗರ ಮೇಲೆ ‌ಹಲ್ಲೆ

ಬೆಂಗಳೂರು: ಪಡಿತರ ಚೀಟಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿ ಬೆಂಬಲಿಗರೊಬ್ಬರ ಮೇಲೆ ಮಡಿವಾಳ ವಾರ್ಡ್‌ನ ಕಾಂಗ್ರೆಸ್‌ ಸದಸ್ಯ ಬಿ.ಎನ್‌.ಮಂಜುನಾಥ ರೆಡ್ಡಿ ಬುಧವಾರ ಹಲ್ಲೆ ನಡೆಸಿದ್ದಾರೆ.

ಬಿಟಿಎಂ ಬಡಾವಣೆ ಕ್ಷೇತ್ರದ ತಾವರೆಕೆರೆಯ ಹೊಲಿಗೆ ತರಬೇತಿ ಕೇಂದ್ರದ ಎದುರು ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ನೂರಾರು ಜನರು ಧರಣಿ ನಡೆಸುತ್ತಿದ್ದರು. ಸ್ಥಳಕ್ಕೆ ಬಂದ ಮಂಜುನಾಥ ರೆಡ್ಡಿ ಸಾರ್ವಜನಿಕರ ಅಹವಾಲು ಆಲಿಸಿದರು. ಆದರೆ, ‘ಕೆಲವರಿಗೆ ಪಡಿತರ ಚೀಟಿ ನೀಡಲು ಸಾಧ್ಯವಿಲ್ಲ’ ಎಂದರು. ಇದಕ್ಕೆ ರವಿಕೃಷ್ಣಾರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಅವರ ಬೆಂಬಲಿಗ ರಘು ಎಂಬುವರು ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದರು. ಇದರಿಂದ ಕೆರಳಿದ ಮಂಜುನಾಥರೆಡ್ಡಿ ಅವರು ರಘು ಮೇಲೆ ಹಲ್ಲೆ ನಡೆಸಿದರು. ಅಲ್ಲದೆ, ರವಿಕೃಷ್ಣಾರೆಡ್ಡಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹಲ್ಲೆಯ ದೃಶ್ಯವನ್ನು ರವಿಕೃಷ್ಣಾರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

‘₹1.20 ಲಕ್ಷಕ್ಕಿಂತ ಕಡಿಮೆ ಆದಾಯದ ಪ್ರಮಾಣಪತ್ರ, ಆಧಾರ್‌ ಸಂಖ್ಯೆಯನ್ನು ನೀಡಿದರೆ ಸ್ಥಳದಲ್ಲೇ ಪಡಿತರ ಚೀಟಿ ಮಾಡಿಕೊಡಲಾಗುತ್ತದೆ ಎಂದು ಆಹಾರ ಇಲಾಖೆಯು ಜಾಹೀರಾತು ನೀಡಿತ್ತು. ಬಿಟಿಎಂ ಬಡಾವಣೆ, ಮಡಿವಾಳ ಹಾಗೂ ಸುದ್ದುಗುಂಟೆಪಾಳ್ಯದ ನಿವಾಸಿಗಳಿಗೆ ಪಡಿತರ ಚೀಟಿಯನ್ನು ಮಾರ್ಚ್‌ 1ರಂದು ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಅಂದು ನೀಡಿರಲಿಲ್ಲ. 7ರಂದು ಸ್ವಲ್ಪ ಜನರಿಗೆ ನೀಡಿದ್ದಾರೆ. 10ರಂದು ಜನರನ್ನು ವಾಪಸ್‌ ಕಳುಹಿಸಿದ್ದಾರೆ. 14ರಂದು ಬರುವಂತೆ ತಿಳಿಸಿದ್ದ ಅಧಿಕಾರಿಗಳು, ಈಗ ಕಚೇರಿಗೇ ಬಂದಿಲ್ಲ’ ಎಂದು ರವಿಕೃಷ್ಣಾರೆಡ್ಡಿ ದೂರಿದರು.

‘ಸುಮಾರು 500 ಮಂದಿ ಬೆಳಿಗ್ಗೆ 4ಕ್ಕೆ ಇಲ್ಲಿಗೆ ಬಂದು ಸರದಿ ಸಾಲಿನಲ್ಲಿ ನಿಂತಿದ್ದಾರೆ. ಈ ಕುರಿತು ಆಹಾರ ಸಚಿವ ಯು.ಟಿ.ಖಾದರ್‌ ಅವರಿಗೆ ಕರೆ ಮಾಡಿದರೆ, ಅವರು ಕರೆ ಸ್ವೀಕರಿಸಲಿಲ್ಲ. ಅವರ ಕಾರ್ಯದರ್ಶಿಗೂ ಕರೆ ಮಾಡಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು. ಹೀಗಾಗಿ ಅಧಿಕಾರಿಗಳು ಬರುವವರೆಗೂ ಧರಣಿ ನಡೆಸಲು ನಿರ್ಧರಿಸಿದೆವು’ ಎಂದರು.

‘ಬೆಳಿಗ್ಗೆ 11.45ರ ಸುಮಾರಿಗೆ ಸ್ಥಳಕ್ಕೆ ಬಂದ ಮಂಜುನಾಥರೆಡ್ಡಿ ನನ್ನ ಹಾಗೂ ಬೆಂಬಲಿಗರ ಮೇಲೆ ಹಲ್ಲೆ ಮಾಡಿದ್ದಾರೆ. ಬೆಂಬಲಿಗನ ಮೊಬೈಲ್‌ ಒಡೆದು ಹಾಕಿದ್ದಾರೆ. ಅಲ್ಲದೆ, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರು ಮಾಜಿ ಮೇಯರ್‌ ಆಗಿದ್ದವರು. ಸಾರ್ವಜನಿಕರ ಎದುರು ಹೇಗೆ ನಡೆದುಕೊಳ್ಳಬೇಕು ಎಂಬ ಸಂಸ್ಕಾರ ಅವರಿಗೆ ಇಲ್ಲ. ಗೂಂಡಾಗಳನ್ನು ಬಿಟ್ಟು ಹೆದರಿಸುತ್ತಾರೆ. ಹಲ್ಲೆ ನಡೆಸಿದ ಅವರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು’ ಎಂದು ಒತ್ತಾಯಿಸಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಸ್ಥಳಕ್ಕೆ ಬರುವವರೆಗೂ ಅನಿರ್ದಿಷ್ಟಾವಧಿ ಧರಣಿ ನಡೆಸಲು ಮುಂದಾದರು. ಸಂಜೆ ವೇಳೆಗೆ ರವಿಕೃಷ್ಣಾರೆಡ್ಡಿ ಅವರನ್ನು ಸುದ್ದುಗುಂಟೆ ಠಾಣೆ ಪೊಲೀಸರು ವಶಕ್ಕೆ ಪಡೆದರು.

‘ಗೃಹಸಚಿವರು ಮಂಜುನಾಥ ರೆಡ್ಡಿ ಗುಲಾಮ’

‘ಮಂಜುನಾಥ ರೆಡ್ಡಿ ಮನೆಯ ಗುಲಾಮ ಗೃಹ ಸಚಿವ ರಾಮಲಿಂಗಾರೆಡ್ಡಿ. ಅವರ ಮನೆಯ ಕಾವಲು ಕಾಯುವವರು ಪೊಲೀಸರು’ ಎಂದು ರವಿಕೃಷ್ಣಾರೆಡ್ಡಿ ಕಿಡಿಕಾರಿದರು. ‘ಮಂಜುನಾಥ ರೆಡ್ಡಿ ಸಂಸ್ಕೃತಿಹೀನ ಮನುಷ್ಯ, ಸುಳ್ಳುಗಾರ, ರೌಡಿ, ಪರಮನೀಚ, ಅಯೋಗ್ಯ, ಪರಮ ಭಂಡ. ಅವರಿಗೆ ಜನಪ್ರತಿನಿಧಿ ಆಗಲು ಯೋಗ್ಯತೆ ಇಲ್ಲ. ಕಾಂಗ್ರೆಸ್‌ ಪಕ್ಷ ರೌಡಿಗಳನ್ನು ಸಾಕಿಕೊಂಡಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ಅಹವಾಲು

‘ಪಡಿತರ ಚೀಟಿಗಾಗಿ ಮಾರ್ಚ್‌ 7ರಂದು ಇಲ್ಲಿಗೆ ಬಂದಿದ್ದೆ. ಮಧ್ಯಾಹ್ನದವರೆಗೂ ಚೀಟಿಗಳನ್ನು ನೀಡಿದ್ದರು. ಊಟಕ್ಕೆ ತೆರಳಿದ ಅಧಿಕಾರಿಗಳು ಬಳಿಕ ಬರಲೇ ಇಲ್ಲ. ಬುಧವಾರ ಬೆಳಿಗ್ಗೆ 3 ಗಂಟೆಯಿಂದ ಕಾಯುತ್ತಿದ್ದೇನೆ. ಆದರೆ, ಅಧಿಕಾರಿಗಳೇ ನಾಪತ್ತೆ’ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಬಿಪಿಎಲ್‌ ಕಾರ್ಡ್‌ ನೀಡುವುದಾಗಿ ಸ್ವೀಕೃತಿ ಪತ್ರ ಕೊಟ್ಟು 3 ವರ್ಷಗಳು ಕಳೆದಿವೆ. ಇಂದು, ನಾಳೆ ಕೊಡುತ್ತೇವೆ ಎಂದು ಹೇಳಿದರೇ ವಿನಾ ಈವರೆಗೂ ಕಾರ್ಡ್‌ ನೀಡಿಲ್ಲ’ ಎಂದು ವ್ಯಕ್ತಿಯೊಬ್ಬರು ದೂರಿದರು.

‘ನಮ್ಮ ಮಾವ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಕ್ಕಳು ಪರೀಕ್ಷೆಗೆ ಹೋಗಬೇಕಿತ್ತು. ಅವರಿಗೆ ತಿಂಡಿ ಮಾಡದೆಯೇ ಇಲ್ಲಿಗೆ ಬಂದಿದ್ದೇನೆ’ ಎಂದು ಮತ್ತೊಬ್ಬ ಮಹಿಳೆ ಅಳಲು ತೋಡಿಕೊಂಡರು.

‘ನಾನು ಸಿದ್ಧ ಉಡುಪುಗಳ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪಡಿತರ ಚೀಟಿಗಾಗಿ ಈವರೆಗೆ ಮೂರು ರಜೆ ಹಾಕಿದ್ದೇನೆ. ಆರೋಗ್ಯದ ನೆಪ ಹೇಳಿ ರಜೆ ತೆಗೆದುಕೊಂಡಿದ್ದೇನೆ’ ಎಂದು ಮಹಿಳೆಯೊಬ್ಬರು ತಿಳಿಸಿದರು.

‘ನಾನು ಹಲ್ಲೆ ನಡೆಸಿಲ್ಲ’

‘ರವಿಕೃಷ್ಣಾರೆಡ್ಡಿ ಬೆಂಬಲಿಗರ ಮೇಲೆ ನಾನು ಹಲ್ಲೆ ನಡೆಸಿಲ್ಲ. ಜೀವನದಲ್ಲೇ ಯಾರ ಮೇಲೂ ಕೈ ಮಾಡಿಲ್ಲ, ಕೆಟ್ಟದಾಗಿ ಮಾತನಾಡಿಲ್ಲ’ ಎಂದು ಬಿ.ಎನ್‌.ಮಂಜುನಾಥ ರೆಡ್ಡಿ ಸ್ಪಷ್ಟಪಡಿಸಿದರು.

‘ರವಿಕೃಷ್ಣಾರೆಡ್ಡಿ ರಾಜಕೀಯ ಉದ್ದೇಶಕ್ಕಾಗಿ ಧರಣಿ ನಡೆಸಿದ್ದಾರೆ. ನನ್ನ ವಾರ್ಡ್‌ನ ಜನರಿಗೆ ಈಗಾಗಲೇ ಪಡಿತರ ಚೀಟಿ ವಿತರಿಸಲಾಗಿದೆ. ತಾವರೆಕೆರೆ ಕೇಂದ್ರಕ್ಕೆ ಸಾರ್ವಜನಿಕರು ಬಂದಿರುವ ಬಗ್ಗೆ ಪೊಲೀಸರು ನನಗೆ ಮಾಹಿತಿ ನೀಡಿದರು. ಆದರೆ, ಅಲ್ಲಿದ್ದ ಶೇ 90ರಷ್ಟು ಜನ ಜಯನಗರ ವಿಧಾನಕ್ಷೇತ್ರದವರು. ಅವರಿಗೆ ಇದೇ 26, 27 ಹಾಗೂ 28ರಂದು ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲೇ ಪಡಿತರ ಚೀಟಿ ವಿತರಿಸಲು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ವಿವರಿಸುವ ವೇಳೆ ರವಿಕೃಷ್ಣಾರೆಡ್ಡಿ ಬೆಂಬಲಿಗರು ಮೊಬೈಲ್‌ಗಳಲ್ಲಿ ಚಿತ್ರಿಸಿಕೊಳ್ಳುತ್ತಿದ್ದರು. ಚಿತ್ರೀಕರಣ ನಿಲ್ಲಿಸುವಂತೆ ಹೇಳಿದರೂ ಕೇಳಲಿಲ್ಲ. ಅವರನ್ನು ತಳ್ಳಿದ್ದು ನಿಜ. ಆದರೆ, ಹೊಡೆದಿಲ್ಲ’ ಎಂದರು.

**

ಸುದ್ದುಗುಂಟೆಪಾಳ್ಯದ ಇನ್‌ಸ್ಪೆಕ್ಟರ್‌ ಗಿರೀಶ್‌ ಅವರು ನಾಗರಿಕರ ಸಮಸ್ಯೆಗೆ ಸ್ಪಂದಿಸುವ ಬದಲಿಗೆ ಗೂಂಡಾಗಳೊಂದಿಗೆ ಹರಟೆ ಹೊಡೆಯುತ್ತಿದ್ದರು.

– ರವಿಕೃಷ್ಣಾರೆಡ್ಡಿ, ಹೋರಾಟಗಾರ

**

ಮನೆಯಲ್ಲಿ ಮಕ್ಕಳನ್ನು ಬಿಟ್ಟು ಇಲ್ಲಿಗೆ ಬಂದಿದ್ದೇವೆ. ಬೆಳಿಗ್ಗೆಯಿಂದ ತಿಂಡಿ–ಊಟ ಇಲ್ಲದೆ ನಿಂತಿದ್ದೇವೆ.

 –ಫರಾನಾ, ಸುದ್ದುಗುಂಟೆಪಾಳ್ಯದ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry