ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆಗೆ ಮೋಟಮ್ಮ, ಮಹದೇವಪುರಕ್ಕೆ ಶ್ರೀನಿವಾಸ್?

ಕಾಂಗ್ರೆಸ್ ಟಿಕೆಟ್: ಕೆಲ ಕ್ಷೇತ್ರಗಳಲ್ಲಿ ಒಬ್ಬರ ಹೆಸರು ಅಂತಿಮ
Last Updated 14 ಮಾರ್ಚ್ 2018, 20:11 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲು ಬುಧವಾರ ಸಭೆ ಸೇರಿದ ಚುನಾವಣಾ ಸಮಿತಿ ಕೆಲವು ಕ್ಷೇತ್ರಗಳಿಗೆ ಒಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಿದೆ ಎಂದು ಕೆಪಿಸಿಸಿ ಉನ್ನತ ಮೂಲಗಳು ತಿಳಿಸಿವೆ.

ಮೂಡಿಗೆರೆ ಕ್ಷೇತ್ರಕ್ಕೆ ಮೋಟಮ್ಮ, ಪಾವಗಡಕ್ಕೆ ವೆಂಕಟರಮಣಪ್ಪ, ಮಹದೇವಪುರ ಕ್ಷೇತ್ರಕ್ಕೆ ಎ.ಸಿ. ಶ್ರೀನಿವಾಸ ಹೆಸರು ಅಂತಿಮಗೊಂಡಿದೆ. ಪದ್ಮನಾಭನಗರ, ಬೊಮ್ಮನಹಳ್ಳಿ ಮತ್ತು ಮೇಲುಕೋಟೆ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಬಗ್ಗೆ ಚರ್ಚೆಯೇ ಆಗಿಲ್ಲ. ಈ ಕ್ಷೇತ್ರಗಳಲ್ಲಿ ಬೇರೆ ಪಕ್ಷಗಳಿಂದ ಬಂದವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಇದೇ 28ರಿಂದ ಮೂರು ದಿನ ದೆಹಲಿಯಲ್ಲಿ ನಡೆಯಲಿರುವ ಪಕ್ಷದ ವರಿಷ್ಠರ ಸಭೆಯಲ್ಲಿ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಇದೇ ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಎಐಸಿಸಿ ಮಾನದಂಡಗಳನ್ನು ನಿಗದಿ‍ಪಡಿಸಲಿದೆ. ಏಪ್ರಿಲ್‌ ಮೊದಲ ವಾರದಲ್ಲಿ 100ರಿಂದ 150 ಕ್ಷೇತ್ರಗಳಿಗೆ, ಅಲ್ಲಿಂದ 10 ದಿನಗಳ ಒಳಗೆ ಉಳಿದ ಕ್ಷೇತಗಳ ಅಭ್ಯರ್ಥಿ ಪಟ್ಟಿ ಬಿಡುಗಡೆ ಮಾಡಲು ಸಭೆ ನಿರ್ಧರಿಸಿತು ಎಂದು ಗೊತ್ತಾಗಿದೆ.

ಇದೇ 21 ಮತ್ತು 22ರಂದು ಕರಾವಳಿ ಭಾಗದಲ್ಲಿ, 24, 25ರಂದು ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರವಾಸ ಕೈಗೊಳ್ಳಲಿದ್ದಾರೆ. ಹೈದರಾಬಾದ್‌–ಕರ್ನಾಟಕ  ಹಾಗೂ ಮುಂಬೈ–ಕರ್ನಾಟಕ ಭಾಗದಲ್ಲಿ ರಾಹುಲ್‌ ಪ್ರವಾಸ ಯಶಸ್ವಿಯಾಗಿದೆ. ಆದರೆ, ಕರಾವಳಿ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದು, ಕೋಮುಸೂಕ್ಷ್ಮ ಪ್ರದೇಶವೂ ಆಗಿದೆ. ಈ ಭಾಗದಲ್ಲಿ ಪ್ರವಾಸ ಯಶಸ್ವಿಗೊಳಿಸಲು ಈ ಭಾಗದ ನಾಯಕರು ಸಿದ್ಧತೆ ಮಾಡಿಕೊಳ್ಳಬೇಕು. ಹೀಗಾಗಿ, ದೆಹಲಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನಕ್ಕೆ ಇಲ್ಲಿನ ನಾಯಕರು ಹಾಜರಾಗುವ ಅಗತ್ಯ ಇಲ್ಲ ಎಂದೂ ಸೂಚನೆ ನೀಡಲಾಗಿದೆ.

ಕರ್ನಾಟಕ ಭವನ–2ರಲ್ಲಿ ಕ್ಯಾಂಪ್‌ ಕಚೇರಿ

ಇದೇ 16ರಿಂದ ನಡೆಯಲಿರುವ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಇದೇ 15ರಂದು ರಾತ್ರಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ರಾಜ್ಯದಿಂದ ಸಚಿವರು, ಪಕ್ಷದ ಪ್ರಮುಖ ನಾಯಕರು ಸೇರಿ ಸುಮಾರು 100 ಮಂದಿ ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.

ಅವರ ಅನುಕೂಲಕ್ಕಾಗಿ ದೆಹಲಿಯ ಕರ್ನಾಟಕ ಭವನ–2ರಲ್ಲಿ ಪಕ್ಷದ ವತಿಯಿಂದ ಕ್ಯಾಂಪ್‌ ಕಚೇರಿ ತೆರೆಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ದಿನೇಶ್‌ ಗೂಳಿಗೌಡ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT