ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ: ಸರ್ಕಾರಕ್ಕೆ ‘ಧರ್ಮ ಸಂಕಟ’

Last Updated 14 ಮಾರ್ಚ್ 2018, 20:23 IST
ಅಕ್ಷರ ಗಾತ್ರ

ಬೆಂಗಳೂರು: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವಂತೆ ಶಿಫಾರಸು ಮಾಡಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ನೀಡಿರುವ ವರದಿ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಂಬಂಧ ಇಕ್ಕಟ್ಟಿಗೆ ಸಿಲುಕಿರುವ ಸರ್ಕಾರ, ಬುಧವಾರ ಸಂಜೆ ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನು ಮುಂದೂಡಿದೆ.

ತಜ್ಞರ ವರದಿ ಮೇಲೆ ನಿರ್ಧಾರ ಕೈಗೊಳ್ಳಲು ಮಾರ್ಚ್‌ 8ರಂದು ಸೇರಿದ್ದ ಸಂಪುಟ ಸಭೆ ಕೆಲವು ಸಚಿವರ ನಡುವಣ ಜಟಾಪಟಿ ಪರಿಣಾಮವಾಗಿ ಒಮ್ಮತದ ನಿರ್ಧಾರಕ್ಕೆ ಬರಲಾಗದೆ ಅಪೂರ್ಣಗೊಂಡಿತ್ತು. ಸಚಿವರಾದ ಈಶ್ವರ ಖಂಡ್ರೆ, ಎಸ್‌.ಎಸ್‌.ಮಲ್ಲಿಕಾರ್ಜುನ ಈ ವರದಿ ಒಪ್ಪಿಕೊಳ್ಳದೆ ವೀರಶೈವ–ಲಿಂಗಾಯತ ಪಂಗಡಗಳೆರಡನ್ನೂ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಬೇಕೆಂದು ಪ್ರತಿಪಾದಿಸಿದ್ದರು. ಸಚಿವ
ರಾದ ಎಂ.ಬಿ. ಪಾಟೀಲ, ಶರಣಪ್ರಕಾಶ ಪಾಟೀಲ ಮತ್ತು ವಿನಯ ಕುಲಕರ್ಣಿ ವರದಿ ಒಪ್ಪಿಕೊಂಡು, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಪಟ್ಟು ಹಿಡಿದಿದ್ದರು. ಇದರಿಂದಾಗಿ ಸಂಪುಟ ಸಭೆಯನ್ನು ಬುಧವಾರಕ್ಕೆ ಮುಂದೂಡಲಾಗಿತ್ತು.

ವಾರ ಕಳೆದರೂ ಸಚಿವರ ಉಭಯ ಬಣಗಳು ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಗೊಂದಲಕ್ಕೆ ಸಿಲುಕಿದ್ದಾರೆ. ಸಚಿವರ ಮನವೊಲಿಕೆ ಅಸಾಧ್ಯವಾಗಿರುವುದರಿಂದ ಸಚಿವ ಸಂಪುಟ ಸಭೆಯನ್ನು ಅನಿವಾರ್ಯವಾಗಿ ಮುಂದಕ್ಕೆ ಹಾಕಲಾಯಿತು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಜ್ಞರ ವರದಿ ಕುರಿತು ಯಾವುದೇ ತೀರ್ಮಾನ ಕೈಗೊಳ್ಳದಂತೆ ಅಖಿಲ ಭಾರತ ವೀರಶೈವ ಮಹಾಸಭಾ, ಪಂಚಾಚಾರ್ಯರು ಹಾಗೂ ಕೆಲವು ವಿರಕ್ತ ಮಠಾಧೀಶರು, ಮುಖ್ಯಮಂತ್ರಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಂಗಳವಾರ ಸಭೆ ಸೇರಿ, ವರದಿ ತಿರಸ್ಕರಿಸುವಂತೆ ಒತ್ತಾಯಿಸಿರುವ ಬೆನ್ನಲ್ಲೇ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ದೂರವಾಣಿಯಲ್ಲಿ ಮುಖ್ಯಮಂತ್ರಿ ಜೊತೆ ಸುದೀರ್ಘ ಚರ್ಚೆ ನಡೆಸಿದರು.

‘ವೀರಶೈವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ತೀರ್ಮಾನಕೈಗೊಂಡರೆ ಅದರ ಪರಿಣಾಮಗಳನ್ನು ಸದ್ಯದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಎದುರಿಸಬೇಕಾಗುತ್ತದೆ’ ಎಂದು ಶಾಮನೂರು ನೇರವಾಗಿ ಮುಖ್ಯಮಂತ್ರಿಗೆ ಎಚ್ಚರಿಸಿದ್ದಾರೆ ಎನ್ನಲಾ
ಗಿದೆ. ಇದೇ ಮಾತನ್ನು ಹಿಂದಿನ ಸಂಪುಟ ಸಭೆಯಲ್ಲಿ ಈಶ್ವರ ಖಂಡ್ರೆ ಸೂಚ್ಯವಾಗಿ ಮನವರಿಕೆ ಮಾಡಿದ್ದರು.

ಅದೇ ಸಂದರ್ಭದಲ್ಲಿ ಸಚಿವರಾದ ರೋಷನ್‌ ಬೇಗ್‌ ಹಾಗೂ ತನ್ವೀರ್‌ ಸೇಠ್‌‘ಲಿಂಗಾಯತ ಪಂಗಡಕ್ಕೆ ಅಲ್ಪಸಂಖ್ಯಾತ ಧರ್ಮದ ಮಾನ್ಯತೆ ನೀಡಿದರೆ ಮುಸ್ಲಿಮರಿಗೆ ಅನ್ಯಾಯವಾಗಲಿದೆ ಎಂದು ಆಕ್ಷೇಪಿಸಿದ್ದರು’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಇಂದು ಭೇಟಿ: ವರದಿ ತಿರಸ್ಕರಿಸುವಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹೇರಲು ವೀರಶೈವ ಪಂಗಡಕ್ಕೆ ಸೇರಿದ ಸುಮಾರು 40 ಮಠಾಧೀಶರು ಬುಧವಾರ ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಕಾಂಗ್ರೆಸ್‌ ಚುನಾವಣಾ ಸಭೆ ನಡೆಯುತ್ತಿದ್ದ ಕಾರಣದಿಂದಾಗಿ ಅವರನ್ನು  ಭೇಟಿಯಾಗಲು ಮುಖ್ಯಮಂತ್ರಿಗೆ ಸಾಧ್ಯವಾಗಲಿಲ್ಲ. ಗುರುವಾರ ಮಠಾಧೀಶರ ಭೇಟಿಗೆ ಸಮಯ ನಿಗದಿಯಾಗಿದೆ.

ಈ ಮಧ್ಯೆ, ನಿರ್ದಿಷ್ಟ ಕಾರಣಗಳನ್ನು ಕೊಡದೆ ಏಕಾಏಕಿ ಸಂಪುಟ ಸಭೆಯನ್ನು ಮುಂದೂಡಿದ ಸರ್ಕಾರದ ತೀರ್ಮಾನ ಲಿಂಗಾಯತ ಪಂಗಡದ ಸ್ವಾಮೀಜಿಗಳು ಹಾಗೂ ಮಠಾಧೀಶರಿಗೂ ಅಚ್ಚರಿ ಉಂಟುಮಾಡಿದೆ. ನಾಗಮೋಹನ್‌ದಾಸ್‌ ಸಮಿತಿ ವರದಿ ಒಪ್ಪಿಕೊಂಡು ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಅವರೂ ಮುಖ್ಯಮಂತ್ರಿ ಆವರ ಮೇಲೆ ತೆರೆಮರೆಯಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೂಡಲಸಂಗಮದ ಪಂಚಮಸಾಲಿ ಪೀಠದ ಅಧ್ಯಕ್ಷ ಜಯಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಅವರನ್ನು ಬುಧವಾರ ರಾತ್ರಿ ಭೇಟಿ ಮಾಡಿದ್ದರು. ‘ತಾವು ಜ್ವರದಿಂದ ಬಳಲುತ್ತಿದ್ದರಿಂದಾಗಿ ಸಂಪುಟ ಸಭೆ ಮುಂದೂಡಲಾಯಿತು. 19ರಂದು ಸಂಪುಟ ಸಭೆ ಕರೆದು ವರದಿ ಮೇಲೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದರು’ ಎಂದು ಸ್ವಾಮೀಜಿ ತಿಳಿಸಿದರು.

ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ: ಸಂಪುಟ ಸಭೆ ಮುಂದಕ್ಕೆ
ಬೆಂಗಳೂರು: ‘ಬಸವಣ್ಣನವರಿಗಿಂತ ಪೂರ್ವದಲ್ಲಿ ವೀರಶೈವ ಧರ್ಮ ಇರಲಿಲ್ಲ. ರೇಣುಕರು ಮತ್ತು ಪಂಚಾಚಾರ್ಯರು ಆ ಧರ್ಮ ಸ್ಥಾಪಕರೆಂದು ನಂಬಲು ಯಾವ ಐತಿಹಾಸಿಕ ದಾಖಲೆಗಳು ಇಲ್ಲ’ ಎಂದು ವೀರಶೈವ– ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಕುರಿತು ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ವರದಿ ಹೇಳಿದೆ.

ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ 210 ಪುಟಗಳ ವರದಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ವೀರಶೈವ– ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಪ್ರತಿಪಾದಿಸುತ್ತಿದೆ. ‘ಲಿಂಗಾಯತ ಧರ್ಮ ಎಂದು ಮಾನ್ಯತೆ ನೀಡಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸಿದೆ. ಉಭಯ ಬಣಗಳ ಜಗಳ ಈಗ ತಾರಕಕ್ಕೇರಿದೆ.

‘ವೀರಶೈವ ಎಂಬುದು ಯಾವತ್ತೂ ಧರ್ಮವಾಗಿರಲಿಲ್ಲ, ಅದು ಹಿಂದೂ ಧರ್ಮದ ಭಾಗ’ ಎಂದು ಹೇಳಿರುವ ತಜ್ಞರ ಸಮಿತಿ, ‘ಲಿಂಗಾಯತ ಹಿಂದೂ ಧರ್ಮದ ಭಾಗವಲ್ಲ. ಅದು ಜೈನ, ಬೌದ್ಧ, ಸಿಖ್ಖರಂತೆ ಪ್ರತ್ಯೇಕ ಧರ್ಮವಾಗುವ ಎಲ್ಲ ಅರ್ಹತೆ ಹೊಂದಿದೆ’ ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದೆ.

ಸದ್ಯಕ್ಕೆ ಶಿಫಾರಸು ಬೇಡ: ಸಿದ್ದರಾಮಯ್ಯಗೆ ಹೈಕಮಾಂಡ್‌ ಸಲಹೆ

ನವದೆಹಲಿ: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಧಾರವನ್ನು ತಡೆ ಹಿಡಿಯುವಂತೆ ಕಾಂಗ್ರೆಸ್‌ ಹೈಕಮಾಂಡ್‌ ಬುಧವಾರ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸಿದೆ.

ಕಾಂಗ್ರೆಸ್‌ನ ಅನೇಕ ಶಾಸಕರು ಸೇರಿದಂತೆ ಲಿಂಗಾಯತ ಮುಖಂಡರು ರಾಜ್ಯ ಸರ್ಕಾರದ ಈ ಪ್ರಸ್ತಾವಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೇಂದ್ರಕ್ಕೆ ಶಿಫಾರಸು ಮಾಡುವ ನಿರ್ಧಾರವನ್ನು ಸದ್ಯಕ್ಕೆ ತಡೆ ಹಿಡಿದು, ಲಿಂಗಾಯತ ನಾಯಕರು ಮತ್ತು ಶಾಸಕರೊಂದಿಗೆ ಸಮಾಲೋಚನೆ ನಡೆಸುವಂತೆ ವರಿಷ್ಠರು ಸೂಚಿಸಿದ್ದಾರೆ.

ಇನ್ನು ಮುಂದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹೈಕಮಾಂಡ್‌ ಜತೆ ಚರ್ಚಿಸುವಂತೆ ಸಲಹೆ ಮಾಡಿದೆ.

ಇದೇ 16ರಿಂದ ಆರಂಭವಾಗಲಿರುವ ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಗುರುವಾರ ಸಂಜೆ ದೆಹಲಿಗೆ ಬರುತ್ತಿರುವ ಸಿದ್ದರಾಮಯ್ಯ ಅವರು ಪಕ್ಷದ ನಾಯಕರೊಂದಿಗೆ ಈ ಕುರಿತು ಚರ್ಚಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

ಲಾಭ–ನಷ್ಟದ ಲೆಕ್ಕಾಚಾರ

ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವುದರಿಂದ ಆಗುವ ಲಾಭ,ನಷ್ಟ ಮತ್ತು ಅದರಿಂದ ಮುಂಬರುವ ವಿಧಾನಸಭೆ ಚುನಾವಣೆಯ ವೇಳೆ ಪಕ್ಷದ ಮೇಲೆ ಆಗುವ ಪರಿಣಾಮಗಳನ್ನು ತಿಳಿಯಲು ಪಕ್ಷ ಬಯಸಿದೆ.

ಈ ವಿಷಯದಲ್ಲಿ ಮುಂದುವರಿಯಬೇಕೆ ಅಥವಾ ಬೇಡವೇ ಎಂಬುವುದನ್ನು ನಿರ್ಧರಿಸಲು ಹೈಕಮಾಂಡ್‌, ಕರ್ನಾಟಕದ ಕಾಂಗ್ರೆಸ್‌ ಮುಖಂಡರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ. ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಸುಮ್ಮನಿರುವುದೇ ಲೇಸು ಎನ್ನುವ ಅಭಿಪ್ರಾಯವನ್ನು ಪಕ್ಷದ ಕೆಲವು ನಾಯಕರು ವ್ಯಕ್ತಪಡಿಸಿದ್ದಾರೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಲಿಂಗಾಯತಕ್ಕೆ ಧರ್ಮದ ಸ್ಥಾನಮಾನ ನೀಡುವ ನಿರ್ಧಾರ ಸರ್ಕಾರಕ್ಕೆ ತಿರುಗುಬಾಣವಾಗಬಹುದು ಎಂಬ ಆತಂಕ ಪಕ್ಷದ ಕೆಲವು ನಾಯಕರನ್ನು ಕಾಡುತ್ತಿದೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ಒಡೆಯುತ್ತಿದೆ ಎಂದು ಲಿಂಗಾಯತ ಧಾರ್ಮಿಕ ಮುಖಂಡರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್‌ ಹೈಕಮಾಂಡ್‌ ಈ ನಿರ್ಧಾರ ಕೈಗೊಳ್ಳಲು ಕಾರಣ ಎಂದು ಪಕ್ಷದ ನಾಯಕರು ಹೇಳಿದ್ದಾರೆ.

ಈ ಕುರಿತು ರಾಜ್ಯ ಸಚಿವ ಸಂಪುಟ ಬುಧವಾರ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ, ಸಭೆಯನ್ನು ಮಾರ್ಚ್‌ 19ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT