ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್‌ : ‘ಯುವ ಬಿಎಫ್‌ಸಿ’ಗೆ ಜಯ

Last Updated 14 ಮಾರ್ಚ್ 2018, 20:39 IST
ಅಕ್ಷರ ಗಾತ್ರ

ಬೆಂಗಳೂರು: ಸಮರ್ಥ ಆಟವಾಡಿದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ತಂಡ ಎಎಫ್‌ಸಿ ಕಪ್‌ ಗುಂಪು ಹಂತದ ಮೊದಲ ಪಂದ್ಯದಲ್ಲಿ ಗೆಲುವಿನ ಸವಿಯುಂಡಿತು.

ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಬಾಂಗ್ಲಾ ದೇಶದ ಅಬಹಾನಿ ಲಿಮಿಟೆಡ್ ಢಾಕಾ ತಂಡದ ಎದುರಿನ ಪಂದ್ಯದಲ್ಲಿ ಅತಿಥೇಯರು 1-0ಯಿಂದ ಜಯ ಸಾಧಿಸಿದರು. ಅರ್ಹತಾ ಸುತ್ತಿನ ಪಂದ್ಯಗಳು ಸೇರಿದಂತೆ ಎಎಫ್‌ಸಿ ಕಪ್‌ನಲ್ಲಿ ಈ ಬಾರಿ ಬಿಎಫ್‌ಸಿಯ ಸತತ ನಾಲ್ಕನೇ ಗೆಲುವು ಇದು.

ಇಂಡಿಯನ್ ಸೂಪರ್ ಲೀಗ್‌ನ ಫೈನಲ್ ಪ್ರವೇಶಿಸಿರುವ ಬಿಎಫ್‌ಸಿಯು ತನ್ನ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. ಲಾಲ್‌ತುಮಾಮ್ವಿಯಾ ರಾಲ್ಟೆ ನೇತೃತ್ವದಲ್ಲಿ ಆಡಲು ಇಳಿದ ತಂಡ ಬಲಿಷ್ಠ ಎದುರಾಳಿಗಳನ್ನು ಕೆಚ್ಚೆದೆಯಿಂದ ಎದುರಿಸಿತು.

4–4–2ರ ಮಾದರಿಯಲ್ಲಿ ತಂತ್ರ ಹೆಣೆದ ಕೋಚ್ ಅಲ್ಬರ್ಟ್ ರೋಕಾ ಯಶಸ್ಸು ಕಂಡರು. ಹಾಕಿಮ್ ತೊಂಗ್‌ ಶೀಮ್‌ ಮತ್ತು ಡ್ಯಾನಿಯೆಲ್‌ ಲಾಲಿಂಫುಯಾ ಪರಿಣಾಮಕಾರಿ ಆಕ್ರ ಮಣ ನಡೆಸಿದರೆ ನಿಶುಕುಮಾರ್‌, ಜಾಯನೆಲ್‌ ಲಾರೆಂಕೊ ಮತ್ತು ಅಶೀರ್ ಅಕ್ತರ್‌ ಪ್ರವಾಸಿ ತಂಡಕ್ಕೆ ತಡೆ ಹಾಕುವಲ್ಲಿ ಯಶಸ್ವಿಯಾದರು.

ಅಬಹಾನಿ ತಂಡಕ್ಕೆ ಲಯ ಕಂಡುಕೊಳ್ಳಲು ಹತ್ತು ನಿಮಿಷ ಬೇಕಾಯಿತು. 14ನೇ ನಿಮಿಷದಲ್ಲಿ ತಂಡದ ನಾಯಕ ಮಮುನ್‌ ಮಿಯಾ ದೂರದಿಂದ ಬಲವಾಗಿ ಒದ್ದ ಚೆಂಡು ಶರವೇಗದಲ್ಲಿ ಗೋಲುಪೆಟ್ಟಿಗೆಯ ಬಳಿಗೆ ಸಾಗಿತು. ಆದರೆ ಮೇಲ್ಬಾಗದ ಬಲೆಯಲ್ಲಿ ಬಿದ್ದಿತು. 15ನೇ ನಿಮಿಷದಲ್ಲಿ ನಾಯಕ ಬಲಭಾಗದಿಂದ ನೀಡಿದ ನಿಖರ ಪಾಸ್‌ನಲ್ಲಿ ಕೊಜಿಮಾ ಸಿಯಾ ಅವರು ಹೆಡ್‌ ಮಾಡಿ ಗೋಲು ಗಳಿಸಲು ನಡೆಸಿದ ಶ್ರಮವನ್ನು ಬಿಎಫ್‌ಸಿ ಗೋಲ್‌ ಕೀಪರ್ ವಿಫಲಗೊಳಿಸಿದರು.

30ನೇ ನಿಮಿಷದಲ್ಲಿ ಫ್ರೀ ಕಿಕ್‌ ಲಭಿಸಿದ ಬಿಎಫ್‌ಸಿಯ ಆಸೆ ಗರಿಗೆದರಿತು. ವಿಕ್ಟರ್‌ ಪೆರೆಜ್‌ ಉತ್ತಮವಾಗಿ ಆಡಿದರು. ಅದರೆ ಫಲ ಸಿಗಲಿಲ್ಲ. ಮರುಕ್ಷಣದಲ್ಲೇ ಲಭಿಸಿದ ಕಾರ್ನರ್ ಕಿಕ್‌ ಕೂಡ ಫಲ ನೀಡಲಿಲ್ಲ. ವಿಕ್ಟರ್‌ ಪೆರೆಜ್‌ ಅವರ ಕಿಕ್‌ ಗೋಲ್‌ ಕೀಪರ್ ಶಾಹಿದುಲ್ ಆಲಂ ವಿಫಲಗೊಳಿಸಿದರು.

42ನೇ ನಿಮಿಷದಲ್ಲಿ ಅಬಹಾನಿ ತಂಡಕ್ಕೆ ಕಾರ್ನರ್ ಕಿಕ್ ಮೂಲಕ ಗೋಲು ಗಳಿಸುವ ಉತ್ತಮ ಅವಕಾಶ ಲಭಿಸಿತ್ತು. ವಲಿ ಫೈಜಲ್‌ ಅವರ ಕಿಕ್‌ ಉತ್ತಮವಾಗಿತ್ತು. ಅದರೆ ಗೋಲುಪೆಟ್ಟಿಗೆ ಮುಂದೆ ಕಾಯುತ್ತಿದ್ದ ನಿಶು ಕುಮಾರ್‌ ಚೆಂಡನ್ನು ಹೆಡ್‌ ಮಾಡಿ ಹೊರಗಟ್ಟಿದರು.

ಆಕ್ರಮಣಕಾರಿ ಆಟ: ದ್ವಿತೀಯಾರ್ಧದ ಆರಂಭದಲ್ಲೇ ಬಿಎಫ್‌ಸಿ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಪರಿಣಾಮ ಮೊದಲ ನಿಮಿಷದಲ್ಲೇ ಫ್ರೀ ಕಿಕ್‌ ಅವಕಾಶ ಪಡೆಯಿತು. ಆದರೆ ವಿಕ್ಟರ್ ಪೆರೆಜ್‌ಗೆ ಚೆಂಡನ್ನು ಗುರಿ ಮುಟ್ಟಿಸಲು ಆಗಲಿಲ್ಲ. ಆದರೆ 72ನೇ ನಿಮಿಷದಲ್ಲಿ ಲಾಲಿಂಫುಯಾ ಡ್ಯಾನಿಯೆಲ್‌ ಸುಲಭ ಗೋಲಿನ ಮೂಲಕ ಬಿಎಫ್‌ಸಿಗೆ ಮುನ್ನಡೆ ಗಳಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT