ಸೋಮವಾರ, ಮಾರ್ಚ್ 27, 2023
21 °C

ಇರಾನಿ ಕಪ್‌ ಕ್ರಿಕೆಟ್‌: ವಿದರ್ಭ ಮೇಲುಗೈ

ಪಿಟಿಐ Updated:

ಅಕ್ಷರ ಗಾತ್ರ : | |

ಇರಾನಿ ಕಪ್‌ ಕ್ರಿಕೆಟ್‌: ವಿದರ್ಭ ಮೇಲುಗೈ

ನಾಗಪುರ (ಪಿಟಿಐ): ವಸೀಂ ಜಾಫರ್ ಶತಕದ ಬಲದಿಂದ ವಿದರ್ಭ ತಂಡವು ಇರಾನಿ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸುವತ್ತ ಹೆಜ್ಜೆ ಹಾಕಿದೆ.

ವಿದರ್ಭ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಭಾರತ ಇತರೆ ತಂಡದ ವಿರುದ್ಧ ನಡೆಯುತ್ತಿರುವ ಪಂದ್ಯದ ಮೊದಲ ದಿನ ವಿದರ್ಭ ಕೇವಲ ಎರಡು ವಿಕೆಟ್ ಕಳೆದುಕೊಂಡು 289 ರನ್‌ ಸೇರಿಸಿದೆ. ಶತಕ ಗಳಿಸಿದ ವಸೀಂ ಜಾಫರ್ (113, 166 ಎ, 1 ಸಿ, 16 ಬೌಂ) ಅವರೊಂದಿಗೆ ಗಣೇಶ್ ಸತೀಶ್‌ ಕ್ರೀಸ್‌ನಲ್ಲಿದ್ದಾರೆ.

ರಣಜಿ ಟೂರ್ನಿಯ ಪ್ರಶಸ್ತಿ ಗೆದ್ದಿದ್ದ ವಿದರ್ಭ ಇಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತು. ವೇಗಿ ನವದೀಪ್ ಸೈನಿ, ಆಫ್‌ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ಜಯಂತ್ ಯಾದವ್ ನೇತೃತ್ವದ ದಾಳಿಗೆ ದಿಟ್ಟ ಉತ್ತರ ನೀಡಿದ ಆತಿಥೇಯ ತಂಡದ ಬ್ಯಾಟ್ಸ್‌ಮನ್‌ಗಳು ಆರಂಭದಲ್ಲೇ ಆಧಿಪತ್ಯ ಸ್ಥಾಪಿಸಿದರು. ನಾಯಕ ಫಯಾಜ್‌ ಫಜಲ್‌ (89; 190ಎ, 1 ಸಿ, 6 ಬೌಂ) ಮತ್ತು ಸಂಜಯ್‌ ರಾಮಸ್ವಾಮಿ (53; 111ಎ, 1 ಸಿ, 6 ಬೌಂ) ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಆಡಿದರು.  101 ರನ್‌ ಗಳಿಸಿದ ಇವರಿಬ್ಬರ ಜೊತೆಯಾಟ ಮುರಿಯಲು ಭಾರತ ಇತರೆ ತಂಡ 35ನೇ ಓವರ್‌ ವರೆಗೆ ಕಾಯಬೇಕಾಯಿತು.

ಜಯಂತ್ ಯಾದವ್ ಎಸೆತದಲ್ಲಿ ಆರ್‌.ಸಮರ್ಥ್‌ಗೆ ಕ್ಯಾಚ್ ನೀಡಿ ಸಂಜಯ್ ಮರಳಿದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜಾಫರ್‌ ಭಾರತ ಇತರೆ ತಂಡದ ಬೌಲರ್‌ಗಳಿಗೆ ಇನ್ನಷ್ಟು ತಲೆ ನೋವಾದರು. ನಾಯಕ ಕರುಣ್‌ ಬಳಸಿದ ತಂತ್ರಗಳಿಗೆ ತಕ್ಕ ಉತ್ತರ ನೀಡಿದ ಫಯಾಜ್‌ ಮತ್ತು ಜಾಫರ್‌ ಎರಡನೇ ವಿಕೆಟ್‌ಗೆ 117 ರನ್‌ ಸೇರಿಸಿದರು.

69ನೇ ಓವರ್‌ನಲ್ಲಿ ಫಯಾಜ್‌ ಅವರ ವಿಕೆಟ್‌ ಅನ್ನು ಆರ್. ಅಶ್ವಿನ್ ಕಬಳಿಸಿದರು. ಆದರೂ ಎದುರಾಳಿಗಳ ಮೇಲೆ ಪಾರಮ್ಯ ಮೆರೆಯಲು ಭಾರತ ಇತರೆ ತಂಡಕ್ಕೆ ಸಾಧ್ಯವಾಗಲಿಲ್ಲ. ಜಾಫರ್ ಮತ್ತು ಗಣೇಶ್ ಸತೀಶ್‌ ಇನ್ನಷ್ಟು ವಿಕೆಟ್ ಉರುಳದಂತೆ ನೋಡಿಕೊಂಡರು.  

ಸಂಕ್ಷಿಪ್ತ ಸ್ಕೋರ್‌: ವಿದರ್ಭ, ಮೊದಲ ಇನಿಂಗ್ಸ್‌: 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 289 (ಫಯಾಜ್‌ 89, ಸಂಜಯ್‌ ರಾಮ ಸ್ವಾಮಿ 53, ಜಾಫರ್‌ ಬ್ಯಾಟಿಂಗ್‌ 113, ಗಣೇಶ್‌ ಸತೀಶ್‌ ಬ್ಯಾಟಿಂಗ್‌ 29,

ಆರ್‌.ಅಶ್ವಿನ್‌ 66ಕ್ಕೆ1,  ಜಯಂತ್ 73ಕ್ಕೆ1).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.