ಪಟ್ಟದ್ದೇವರ ಹುಟ್ಟೂರಿಗೆ ತಾಲ್ಲೂಕಿನ ಪಟ್ಟ

7
ಕಮಲನಗರ ತಾಲ್ಲೂಕು ಉದ್ಘಾಟನೆ ಇಂದು, ದಶಕಗಳ ಕನಸು ನನಸು, ಹೋರಾಟಗಾರರ ಸಂಭ್ರಮ

ಪಟ್ಟದ್ದೇವರ ಹುಟ್ಟೂರಿಗೆ ತಾಲ್ಲೂಕಿನ ಪಟ್ಟ

Published:
Updated:
ಪಟ್ಟದ್ದೇವರ ಹುಟ್ಟೂರಿಗೆ ತಾಲ್ಲೂಕಿನ ಪಟ್ಟ

ಕಮಲನಗರ: ಔರಾದ್ ತಾಲೂಕಿನ ಶೈಕ್ಷಣಿಕ ಹೆಬ್ಬಾಗಿಲು ಮತ್ತು ಕನ್ನಡದ ಪಟ್ಟದ್ದೇವರೊಂದಿಗೆ ಭಾವನಾತ್ಮಕ ಹಾಗೂ ಪ್ರಾದೇಶಿಕ ಸಂಬಂಧ ಹೊಂದಿದ್ದ ಕಮಲನಗರ ಮಾ. 15ರಂದು ಸ್ವತಂತ್ರ ತಾಲ್ಲೂಕಾಗಿ ಉದ್ಘಾಟನೆಗೊಳ್ಳಲಿದೆ.

ಔರಾದ್‌ನಿಂದ ಸುಮಾರು 25 ಕಿ.ಮಿ. ದೂರದಲ್ಲಿರುವ ಕಮಲನಗರ ಈ ಹಿಂದೆ 'ದೊಡ್ಡ ಮುರುಗ' ಎಂದು ಕರೆಯಲ್ಪಡುತ್ತಿತ್ತು. ಈಗಲೂ ಹಳೆಯ ತಲೆಮಾರಿನ ಜನ ಇದನ್ನು 'ಮುರುಗ್‌' ಎಂದೇ ಕರೆಯುತ್ತಾರೆ. ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ ಕಮಲನಗರವು ಈ ಹಿಂದೆ ಕಮಾಲ್ ಪಾಶಾ ಎನ್ನುವ ನಿಜಾಮ ಜಾಗೀರದಾರನ ಅಧಿಪತ್ಯಕ್ಕೆ ಒಳಪಟ್ಟಿತ್ತು.

ಮಹಾರಾಷ್ಟ್ರ ಗಡಿರೇಖೆಗೆ ಕೂಗಳತೆಯ ದೂರದಲ್ಲಿರುವ ಕಮಲನಗರವು ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ತಾಲ್ಲೂಕಾಗಿಯೂ ಗುರುತಿಸಲ್ಪಡುತ್ತದೆ.

ಪಕ್ಕದ ಭಾಲ್ಕಿ ತಾಲ್ಲೂಕಿನ ಹಿರೇಮಠ ಸಂಸ್ಥಾನದ ಲಿಂಗೈಕ್ಯ ಡಾ.ಚನ್ನಬಸವ ಪಟ್ಟದ್ದೇವರ ಹುಟ್ಟೂರು ಎನ್ನುವ ಖ್ಯಾತಿ ಹೊಂದಿರುವ ಕಮಲನಗರ ತಾಲ್ಲೂಕು ಕೇಂದ್ರವಾಗುತ್ತಿರುವುದು ಜನರಲ್ಲಿ ಸಂತಸ ತಂದಿದೆ.

ಈ ಭಾಗದ ಡಾ.ಚನ್ನಬಸವ ಪಟ್ಟದ್ದೇವರು ಕಮಲನಗರದ ಬುಳ್ಳಾ ಮನೆತನದ ರಾಜಪ್ಪ ಹಾಗೂ ಸಂಗಮ್ಮ ದಂಪತಿಯ ಚೈತನ್ಯಪುತ್ರರಾಗಿ 22ನೇ ಡಿಸೆಂಬರ್ 1890ರಲ್ಲಿ ಜನಿಸಿ, 109 ವರ್ಷಗಳ ಸಾರ್ಥಕ ಜೀವನವನ್ನು ಸವೆಸಿದವರು.

ತಮ್ಮ ಜೀವನದುದ್ದಕ್ಕೂ ಕನ್ನಡ ನಾಡು-ನುಡಿ, ಬಸವ ತತ್ವ ಪ್ರಸಾರಗೈಯುತ್ತ ಇಂದು ಕಮಲನಗರದ ಆರಾಧ್ಯದೈವವಾಗಿಯೂ ಪೂಜಿಸ

ಲ್ಪಡುತ್ತಿದ್ದಾರೆ. 1924ರಲ್ಲಿ ಹಾನಗಲ್ ಕುಮಾರಸ್ವಾಮಿಗಳಿಂದ ಭಾಲ್ಕಿ ಹಿರೇಮಠಕ್ಕೆ ಪಟ್ಟದ್ದೇವರಾಗುತ್ತಾರೆ. ಹಿಂದೆ ನಿಜಾಮ ಸಾಮ್ರಾಜ್ಯದಲ್ಲಿದ್ದ ಉರ್ದು ದರ್ಪಾಡಳಿತವನ್ನು ಹತ್ತಿಕ್ಕಲು ಹೊರಗೆ ಉರ್ದು ಬೋರ್ಡ್‌ ಹಾಕಿ, ಒಳಗೆ ಕನ್ನಡ ಕಲಿಸಿದ ಶ್ರೇಯಸ್ಸು ಡಾ.ಚನ್ನಬಸವ ಪಟ್ಟದ್ದೇವರದ್ದು.

ಪಟ್ಟಣದಲ್ಲಿ ಪ್ರವಾಸಿ ಮಂದಿರವಿದ್ದು, ಅದು 1790ರಲ್ಲಿ ನಿರ್ಮಾಣವಾಗಿದೆ. 1937ರಲ್ಲಿ ಸ್ಥಾಪಿಸಲಾದ ರೇಲ್ವೆ ನಿಲ್ದಾಣ, 1964ರಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, 1972ರಲ್ಲಿ ಪ್ರಾರಂಭಿಸಲಾದ ಗೃಹ ರಕ್ಷಕ ದಳ ಉಪಕೇಂದ್ರವೂ ಇದೆ.

1954 ರಲ್ಲಿ ಅಮೆರಿಕಾದ ರೆವರೆಂಡ್‌ ಪೌಲ್‌ ವ್ಯಾಗನಾರ್‌ ದಂಪತಿಗಳಿಂದ ಸ್ಥಾಪನೆಯಾದ ಇಲ್ಲಿನ ಪ್ರಕಾಶಾಲಯ ಸೆಂಟ್ರಲ್‌ ಮೆಥೊಡಿಸ್ಟ್‌ ಚರ್ಚ್‌, ಇದಲ್ಲದೆ ಬಸವ ಮಂದಿರ, ವಿಠ್ಠಲ ರುಕ್ಮಿಣಿ ಮಂದಿರ, ಸೇರಿದಂತೆ ಅನೇಕ ಪುರಾತನ ದೇವಾಲಯಗಳೂ ಇಲ್ಲಿವೆ.

ಇಲ್ಲಿ ಪ್ರಾಚೀನ ಕಾಲದ ಇತಿಹಾಸದ ನೆಲೆಗಳು ದೊರೆತಿವೆ. ಇವುಗಳನ್ನು ಪುರಾತತ್ವ ಇಲಾಖೆ ಈಗಾಗಲೇ ಗುರುತಿಸಿದೆ. ಔರಾದ್ ತಾಲ್ಲೂಕಿ

ನಿಂದ ಇಬ್ಭಾಗವಾಗುವ ಮೂಲಕ ಹಲವಾರು ಐತಿಹ್ಯದ ಕುರುಹುಗಳನ್ನು ಔರಾದ್‌ನಿಂದ ಬೇರ್ಪಡಿಸಲಿದೆ.

1905ಕ್ಕೂ ಮೊದಲು ನಿಜಾಮ ಸರ್ಕಾರದ ಆಡಳಿತದಲ್ಲಿ ಬೀದರ್ ಜಿಲ್ಲೆಯ ಬೀದರ್, ಕೋಹಿರ್, ಜನವಾಡ, ಔರಾದ್‌, ಉದಗಿರ್‌, ಅಹ್ಮದ್‌ಪುರ ಮತ್ತು ನಿಲಂಗಾ ಎನ್ನುವ ಒಟ್ಟು 7 ತಾಲ್ಲೂಕುಗಳಿದ್ದವು.

1905ರಲ್ಲಿ ಗುಲಬರ್ಗಾ ವಿಭಾಗವನ್ನಾಗಿ ಮಾಡಿದಾಗ ಬೀದರ್ ಜಿಲ್ಲೆಯ ಔರಾದ್ ಮತ್ತು ಕೋಹಿರನ್ನು ತಾಲ್ಲೂಕು ಸ್ಥಾನದಿಂದ ತೆಗೆದುಹಾಕಿ ಔರಾದ್ ಪ್ರದೇಶದಲ್ಲಿದ್ದ ಕಮಲನಗರ ಒಳಗೊಂಡಂತೆ ಎಲ್ಲ ಗ್ರಾಮಗಳನ್ನು ಜನವಾಡ ತಾಲ್ಲೂಕಿಗೆ ವರ್ಗಾಯಿಸಲಾಯಿತು.

1956ರಲ್ಲಿ ರಾಜ್ಯಗಳ ಪುನರ್ ವಿಂಗಡಣೆಯಾದಾಗ ಗುಲಬರ್ಗಾ ವಿಭಾಗದ ಬೀದರ್ ಜಿಲ್ಲೆಯಲ್ಲಿ ಬೀದರ್, ಭಾಲ್ಕಿ, ಹುಮನಾಬಾದ್ ಮತ್ತು ಔರಾದ್ ತಾಲ್ಲೂಕುಗಳು ಉಳಿದುಕೊಂಡವು.

ಜಹೀರಾಬಾದ್ ಮತ್ತು ನಾರಾಯಣಖೇಡ ಆಂಧ್ರಪ್ರದೇಶಕ್ಕೆ, ಅಹ್ಮದಪುರ, ಉದಗಿರ್‌ ಮತ್ತು ನಿಲಂಗಾಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಲಾಯಿತು.

1965ರವರೆಗೆ ಔರಾದ್ ತಾಲೂಕಿನಲ್ಲಿ ಔರಾದ್, ಶೆಂಬೆಳ್ಳಿ ಮತ್ತು ತೋರಣಾಗಳು ಮಾತ್ರ ಹೋಬಳಿಗಳಾಗಿದ್ದವು.

1965ರಲ್ಲಿ ಬಸವಕಲ್ಯಾಣವನ್ನು ತಾಲ್ಲೂಕಾಗಿ ಘೋಷಿಸುವ ಸಮಯದಲ್ಲಿ ಔರಾದ್‌ ತಾಲ್ಲೂಕಿನಲ್ಲಿ ಕಮಲನಗರವನ್ನು ಹೋಬಳಿಯಾಗಿ ಮಾಡಲಾಯಿತು.

ಇದುವರೆಗೂ ಹೋಬಳಿಯಾಗಿ ಕಾರ್ಯನಿರ್ವಹಿಸಿದ ಕಮಲನಗರ ಇಂದಿನಿಂದ ನೂತನ ತಾಲ್ಲೂಕಾಗಿ ಕಾರ್ಯನಿರ್ವಹಿಸಲಿದೆ.

–ಪ್ರಶಾಂತ್‌ ಮಠಪತಿ

ತಾಲ್ಲೂಕಿನ ಗ್ರಾಮಗಳು

ಕಮಲನಗರ ಹೋಬಳಿ (25 ಗ್ರಾಮಗಳು):
ಕಮಲನಗರ, ತೋರಣಾ, ಡೋಣಗಾಂವ್‌ (ಎಂ), ಭವಾನಿ ಬಿಜಲಗಾಂವ್‌, ಸಾವಳಿ, ಬೆಳಕುಣಿ (ಭೋ), ಸೋನಾಳ್‌, ಹೊರಂಡಿ, ಬಾಲೂರ್‌ (ಕೆ), ಮದನೂರ್‌, ಮುರ್ಗ್‌ (ಕೆ), ಚಾಂಡೇಶ್ವರ, ಖೇಡ್‌, ಖತಗಾಂವ್‌, ರಂಡ್ಯಾಳ್‌, ಕಳಗಾಪುರ, ಹುಲಸೂರ್‌ (ಕೆ), ಡಿಗ್ಗಿ, ಕೊಟಗ್ಯಾಳ್‌, ರಾಂಪುರ, ತಪಶ್ಯಾಳ್‌, ಬಸನಾಳ್‌, ಕೋರ್ಯಾಳ್‌, ಹಕ್ಯಾಳ್‌, ಹೊಳಸಮುದ್ರ.

ದಾಬಕಾ ಹೋಬಳಿ (15 ಗ್ರಾಮಗಳು): ದಾಬಕಾ, ವಾಗನಗೇರಾ, ಅಕನಾಪುರ, ಮಾಳೆಗಾಂವ್‌, ಮುತಖೇಡ್‌, ಚೊಂಡಿ ಮುಖೇಡ್‌, ನಂದಿಬಿಜಲಗಾಂವ್‌, ಚಿಮ್ಮೇಗಾಂವ್‌, ಹಂದಿಕೇರಾ, ಚಿಕಲಿ (ಯು), ಗಣೇಶಪುರ (ಯು), ಸಂಗನಾಳ್‌, ಡಾವರಗಾಂವ್‌, ಮುರ್ಕಿ, ಗಂಗನಬೀಡ್‌.

ಠಾಣಾಕುಶನೂರ್‌ ಹೋಬಳಿ (14 ಗ್ರಾಮಗಳು): ಠಾಣಾಕುಶನೂರ್‌, ಬಳತ್‌ (ಬಿ), ಬಳತ್‌ (ಕೆ), ಚಾಂದೋರಿ, ಬೇಡಕುಂದಾ, ಹಿಪ್ಪಳಗಾಂವ್‌, ನಿಡೋದಾ, ಹಾಲಹಳ್ಳಿ, ಕೋರೆಕಲ್‌, ಬೇಂಬ್ರಾ, ಲಿಂಗದಳ್ಳಿ (ಯು).

ಉದ್ಘಾಟನಾ ಸಮಾರಂಭ ಇಂದು

ನೂತನ ತಾಲ್ಲೂಕು ಕೇಂದ್ರದ ಉದ್ಘಾಟನಾ ಸಮಾರಂಭವು ಪಟ್ಟಣದ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಾ. 15ರಂದು ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಪ್ರಭು ಚವಾಣ್‌ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ವಿಜಯಸಿಂಗ್‌, ಶಾಸಕರಾದ ರಾಜಶೇಖರ ಪಾಟೀಲ, ರಹೀಮ್‌ ಖಾನ್‌, ಅಶೋಕ ಖೇಣಿ, ಅಮರನಾಥ ಪಾಟೀಲ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ರಘುನಾಥ ಮಲ್ಕಾಪುರೆ, ಶರಣಪ್ಪ ಮಟ್ಟೂರ್‌, ಡಾ.ಪ್ರಕಾಶ ಪಾಟೀಲ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸವಿತಾ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಥುರಾಬಾಯಿ ಕದಮ್‌ ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

*

ಆಡಳಿತಾತ್ಮಕ, ವಿಕಾಸದ ದೃಷ್ಟಿಯಿಂದಲೂ ಕಮಲನಗರ ತಾಲ್ಲೂಕು ಆಗುತ್ತಿರುವುದು ಸಂತಸ ತಂದಿದ್ದು, ತಾಲ್ಲೂಕಿಗೆ ಮೂಲ ಸೌಕರ್ಯ ಒದಗಿಸಲು ಪ್ರಯತ್ನಿಸುವೆ.

–ಪ್ರಭು ಚವಾಣ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry