ಸ್ಪೀಕರ್‌ ‘ಪರಮಾಧಿಕಾರ’: ನಿಲ್ಲದ ನೇಮಕಾತಿ

7

ಸ್ಪೀಕರ್‌ ‘ಪರಮಾಧಿಕಾರ’: ನಿಲ್ಲದ ನೇಮಕಾತಿ

Published:
Updated:

ಬೆಂಗಳೂರು: ‘ಸ್ಪೀಕರ್‌ಗೆ ಪರಮಾಧಿಕಾರ ಇದೆ’ ಎಂಬ ರಕ್ಷಾ ಕವಚವನ್ನೇ ಮುಂದಿಟ್ಟುಕೊಂಡು ವಿಧಾನಸಭೆ ಸಚಿವಾಲಯದಲ್ಲಿ ಇರುವ ಖಾಲಿ ಹುದ್ದೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಮಾಡಲಾಗುತ್ತಿದೆ.

ಮಂಗಳವಾರ ಸಂಜೆ ಆರು ಜನರಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಇವರಲ್ಲಿ ನಾಲ್ಕು ಮಂದಿ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ನೌಕರರು ಎಂದು ಮೂಲಗಳು ತಿಳಿಸಿವೆ.

‘ವಿಧಾನಸಭೆ ಸಚಿವಾಲಯ ನೇಮಕಾತಿ ಸೇವಾ ನಿಯಮಗಳ 2003’ ಪ್ರಕಾರ, ಸಚಿವಾಲಯದ ಕಾರ್ಯದರ್ಶಿ, ಹೆಚ್ಚುವರಿ ಕಾರ್ಯದರ್ಶಿ ಮತ್ತು ಜಂಟಿ ಕಾರ್ಯದರ್ಶಿಗಳ ನೇಮಕವನ್ನು ಮುಖ್ಯಮಂತ್ರಿ, ಕಾನೂನು– ಸಂಸದೀಯ ಸಚಿವರು ಹಾಗೂ ಸ್ಪೀಕರ್‌ ಒಳಗೊಂಡ ವಿಶೇಷ ಮಂಡಳಿ ಮಾಡುತ್ತದೆ.

ಇವುಗಳನ್ನು ಬಿಟ್ಟು, ‘ಎ’ ಗುಂಪಿನಲ್ಲಿ ಬರುವ ಇತರ ಹುದ್ದೆಗಳು ‘ಬಿ’,‘ಸಿ’ ಮತ್ತು ‘ಡಿ’ ಹುದ್ದೆಗಳ ನೇಮಕ ಅಧಿಕಾರ ಸ್ಪೀಕರ್‌

ಗಿದೆ. ಈ ಕಾರಣದಿಂದ ಸ್ಪೀಕರ್‌ ಮನಬಂದಂತೆ ನೇಮಕಗಳನ್ನು ಮಾಡುತ್ತಿದ್ದಾರೆ. ಕೆ.ಬಿ.ಕೋಳಿವಾಡ ಅಲ್ಲದೆ, ಕೆ.ಜಿ. ಬೋಪಯ್ಯ, ಜಗದೀಶ ಶೆಟ್ಟರ್ ಅವಧಿಯಲ್ಲೂ ಅಧಿಕ ಪ್ರಮಾಣದಲ್ಲಿ ನೇಮಕಗಳು ಆಗಿದ್ದವು ಎಂಬ ಆರೋಪ ಬಂದಿತ್ತು ಎಂದು ಮೂಲಗಳು ಹೇಳಿವೆ.

ಕಾಗೋಡು ತಿಮ್ಮಪ್ಪ ಸ್ಪೀಕರ್‌ ಆಗಿದ್ದಾಗ ‘ಸಚಿವಾಲಯದಲ್ಲಿ ನೌಕರರು ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂಬ ಕಾರಣ ಕೊಟ್ಟು ಸಚಿವಾಲಯದ ಪ್ರಭಾರ ಕಾರ್ಯದರ್ಶಿ ಆಗಿದ್ದ ಎಸ್‌.ಮೂರ್ತಿ 36 ಹುದ್ದೆಗಳನ್ನು ರದ್ದು ಮಾಡಿದ್ದರು. ಆರ್ಥಿಕ ಹೊರೆ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು. ಆದರೆ, ಈಗ ಕಾರ್ಯದರ್ಶಿ ಆಗಿರುವ ಅದೇ ಮೂರ್ತಿ ಅಗತ್ಯಕ್ಕಿಂತ ಹೆಚ್ಚು ನೇಮಕಾತಿ ಮಾಡುತ್ತಿದ್ದಾರೆ’ ಎಂದೂ ಮೂಲಗಳು ದೂರಿವೆ.

‘ಯಾವುದೇ ರಾಜ್ಯದ ವಿಧಾನಮಂಡಲಗಳಲ್ಲಿ ಇಲ್ಲದಷ್ಟು ಸಿಬ್ಬಂದಿ ನಮ್ಮ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬಹಳಷ್ಟು ಜನ ಕೆಲಸವೇ ಇಲ್ಲದೆ ಸುಮ್ಮನೆ ಕುಳಿತಿದ್ದಾರೆ. ಅನಗತ್ಯ ಹುದ್ದೆಗಳನ್ನು ರದ್ದುಪಡಿಸಿರುವುದರಿಂದ ಬೊಕ್ಕಸಕ್ಕೆ ವಾರ್ಷಿಕ ₹ 8 ರಿಂದ 12 ಕೋಟಿವರೆಗೆ ಉಳಿತಾಯವಾಗಿದೆ ಎಂದೂ ಹೇಳಲಾಗಿತ್ತು. ಜಗದೀಶ ಶೆಟ್ಟರ್‌ ಮತ್ತು ಕೆ.ಜಿ. ಬೋಪಯ್ಯ ಅವಧಿಯಲ್ಲಿ 297 ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ ಎಂದು ಮೂರ್ತಿ ಹೇಳಿದ್ದರು.

ಈಗ 90 ಹುದ್ದೆಗಳಿಗೆ ಅರ್ಜಿ ಕರೆದು, 150 ಕ್ಕೂ ಹೆಚ್ಚು ನೇಮಕಾತಿ ಮಾಡಿರುವುದರ ಹಿಂದಿನ ರಹಸ್ಯವೇನು’ ಎಂಬ ಪ್ರಶ್ನೆ ಎದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry