ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಿರಾಕರಿಸಿದ್ದವರೇ ನಮಸ್ಕರಿಸಿ ಪ್ರವೇಶ ಕೊಟ್ಟರು!

ನೆನಪು ಹಂಚಿಕೊಂಡ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ
Last Updated 15 ಮಾರ್ಚ್ 2018, 7:12 IST
ಅಕ್ಷರ ಗಾತ್ರ

ಬೆಳಗಾವಿ: ‘ಯಾರಾದರೂ ಪರಿಚಯದವರು ಬರುತ್ತಾರೆಯೇ ಎಂದು ನೋಡುವುದು, ಅವರೊಂದಿಗೆ ಒಳಗೆ ಹೋಗಿಬಿಡಬಹುದು ಎಂದು ಲೆಕ್ಕಾಚಾರ ಹಾಕುತ್ತಾ ವಿಧಾನಸೌಧದ ಬಳಿ ಕಾಯುತ್ತಾ ನಿಂತಿರುತ್ತಿದ್ದ ದಿನಗಳೂ ಇದ್ದವು. ಶಾಸಕನಾಗಿ ಹೋದ ನಂತರ ಅಲ್ಲಿನವರು ನಮಸ್ಕಾರ ಮಾಡಿ, ಶಕ್ತಿಸೌಧದೊಳಕ್ಕೆ ಪ್ರವೇಶ ನೀಡಿದರು. ಅಲ್ಲಿ ಸಿಗುತ್ತಿದ್ದ ರಾಜಮರ್ಯಾದೆ ನೋಡಿ ಜನಪ್ರತಿನಿಧಿಗಿರುವ ಪ್ರಾಮುಖ್ಯತೆ ಅರಿವಾಗುತ್ತಾ ಹೋಯಿತು’.

– ಹೀಗೆ ನೆನೆದವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ಸಂಜಯ ಪಾಟೀಲ. ಕ್ಷೇತ್ರ ಪುನರ್‌ವಿಂಗಡಣೆ ನಂತರ ರಚನೆಯಾದ ಕ್ಷೇತ್ರದಲ್ಲಿ 2008ರಲ್ಲಿ ಮೊದಲ ಬಾರಿಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದವರು. ಮೊದಲು ಶಾಸಕರಾದ ನೆನ‍ಪನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.

‘ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದ ನಾನು, ನಾನಾ ಕೆಲಸಗಳಿಗಾಗಿ ಹಲವು ಬಾರಿ ವಿಧಾನಸೌಧಕ್ಕೆ ಹೋಗಬೇಕಾಗುತ್ತಿತ್ತು. ಸಚಿವರು, ಮುಖ್ಯಮಂತ್ರಿಯನ್ನು ಭೇಟಿ ಮಾಡಬೇಕಾಗುತ್ತಿತ್ತು. ಆದರೆ, ಒಳಗಡೆಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ. ಅಲ್ಲಿನ ಸಿಬ್ಬಂದಿ ನಿರಾಕರಿಸುತ್ತಿದ್ದರು. ಹೀಗಾಗಿಯೇ, ಬೇರೊಬ್ಬರ ನೆರವು ಪಡೆಯಲೇಬೇಕಾಗುತ್ತಿತ್ತು. ಶಾಸಕನಾಗಿ ಹೋದಾಗ ವಿಶೇಷ ಅನುಭವವಾಯಿತು. ಗೌರವ ದೊರೆಯಿತು’ ಎಂದರು.

‘ಶಿಕ್ಷಣ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಧಾರ್ಮಿಕ ಕಾರ್ಯಕ್ರಮಗಳನ್ನೂ ನಡೆಸುತ್ತಿದ್ದೆ. ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುತ್ತಿದ್ದೆ. ಇದರಿಂದ ಸಮಾಜದಲ್ಲಿ ಹೆಸರು ಮಾಡಿದ್ದೆ. ರಾಜಕೀಯಕ್ಕೆ ಬರುವುದಕ್ಕೆ ಇದು ನೆರವಾಯಿತು. ಜನರು, ಸ್ನೇಹಿತರು ಪ್ರೋತ್ಸಾಹ ನೀಡಿದರು. ಶಾಸಕನಾದರೆ ಸರ್ಕಾರದ ಮೂಲಕ ಹೆಚ್ಚಿನ ಜನಸೇವೆ ಮಾಡಬಹುದು ಎಂದು ತಿಳಿಸಿಕೊಟ್ಟರು. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದೆ’ ಎಂದು ನೆನಪಿಸಿಕೊಂಡರು.

‘ಸಂಜಯ ಪಾಟೀಲ ಎಂದರೆ ಏನು ಎಂದು ಗುರುತಿಸಿದ್ದು ಕರ್ನಾಟಕ. ಮಹಾರಾಷ್ಟ್ರ ನನಗೆ ದೇವಕಿಯಾದರೆ, ಕರ್ನಾಟಕ ಯಶೋಧೆ.  ನನಗೊಂದು ಗುರುತು ಸಿಕ್ಕಿದ್ದು ಈ ನೆಲದಲ್ಲೇ. ಬಹಳ ವರ್ಷಗಳಿಂದಲೂ ಇಲ್ಲಿ ಬದುಕು ಕಂಡುಕೊಂಡಿರುವುದರಿಂದ ಭಾಷೆಯ ಸಮಸ್ಯೆ ಆಗಲಿಲ್ಲ. ಕನ್ನಡ ಭಾಷೆಯನ್ನು ಚೆನ್ನಾಗಿಯೇ ಮಾತನಾಡುತ್ತಿದ್ದೆ. ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿ ಇದೆ ಎನ್ನುವಾಗಲೇ, ಟಿಕೆಟ್‌ ಖಚಿತವಾಗಿತ್ತು. ಬೆಳಿಗ್ಗೆಯಿಂದ ಮಧ್ಯರಾತ್ರಿವರೆಗೂ ಕ್ಷೇತ್ರದಲ್ಲಿನ ಹಳ್ಳಿ– ಹಳ್ಳಿಗಳಿಗೆ, ಮನೆ–ಮನೆಗಳಿಗೆ ಓಡಾಡಿದ್ದೆ. ಆಗ ಬಿ.ಎಸ್‌. ಯಡಿಯೂರಪ್ಪ ಅವರ ಅಲೆಯೂ ಇತ್ತು. ಇದರಿಂದಾಗಿಯೇ ನಾನು ಗೆದ್ದೆ. 2ನೇ ಬಾರಿ ಸ್ವಂತ ಶ್ರಮದಿಂದ ಜಯಿಸಿದೆ’ ಎಂದು ಹೇಳಿದರು.

‘ವಿಷ’ ಕೊಡುವುದಿಲ್ಲ ಎಂದಿದ್ದೆ!:‌ ‘‘ಚುನಾವಣೆಯಲ್ಲಿ ಗೆಲ್ಲದಿದ್ದರೂ ಪರವಾಗಿಲ್ಲ ಮದ್ಯ ಎನ್ನುವ ‘ವಿಷ’ವನ್ನು ಯಾರಿಗೂ ಹಂಚುವುದಿಲ್ಲ ಎಂದು ಹೇಳಿದ್ದೆ. ಅದರಂತೆಯೇ ನಡೆದು ಕೊಂಡಿದ್ದೇನೆ. ಮದ್ಯ ಹಂಚುವವರ ವ್ಯಕ್ತಿತ್ವ ಏನು ಎನ್ನುವುದನ್ನು ಜನರು ಅಳೆಯುವುದಿಲ್ಲವೇ?! ಬಹಳ ಪೈಪೋಟಿಯು ನಡುವೆಯೂ ಕಡಿಮೆ ಹಣ ಖರ್ಚು ಮಾಡಿ ಚುನಾವಣೆಯಲ್ಲಿ ಗೆದ್ದೆ. ಯಡಿಯೂರಪ್ಪ ಅವರೂ ಪ್ರಚಾರಕ್ಕೆ ಬಂದಿದ್ದರು’’ ಎಂದರು.

‘ಆಗ ಸಾಮಾಜಿಕ ಮಾಧ್ಯಮ ಈಗಿನಷ್ಟು ಪ್ರಬಲವಾಗಿರಲಿಲ್ಲ. ಕ್ಷೇತ್ರದಲ್ಲಿ ಮೊಬೈಲ್‌ ಹೊಂದಿರುವವರ ಪಟ್ಟಿ ಸಂಗ್ರಹಿಸಿದ್ದೆ. ಎಸ್‌ಎಂಎಸ್‌ ಕಳು
ಹಿಸುತ್ತಿದ್ದೆ. ಈ ಮೂಲಕ ಜನರ ಸಂಪರ್ಕದಲ್ಲಿ ಇರುವುದಕ್ಕೆ ಪ್ರಯತ್ನಪಡುತ್ತಿದ್ದೆ. ‘ನೀವು ನನಗೆ ಹಬ್ಬದ ಶುಭಾಶಯ ಕೋರಿ ಎಸ್‌ಎಂಎಸ್‌ ಕಳುಹಿಸಿದ್ದರಲ್ಲವೇ’ ಎಂದು ಎದುರುಗೊಂಡಾಗ ನೆನಪಿಸಿಕೊಳ್ಳುತ್ತಿದ್ದರು’ ಎಂದು ಹಂಚಿಕೊಂಡರು.‌

ಅನುಭವ ಎಲ್ಲವನ್ನೂ ಕಲಿಸಿತು: ‘ಶಾಸಕರಿಗೆ ಇರುವ ಅಧಿಕಾರ ವ್ಯಾಪ್ತಿ ಏನು ಎನ್ನುವುದು ಗೊತ್ತಿರಲಿಲ್ಲ. ಅನುಭವವೇ ಎಲ್ಲವನ್ನೂ ಕಲಿಸಿತು. ಕಲಾಪಗಳಲ್ಲಿ ಹಿರಿಯ ಶಾಸಕರು ಮಾತನಾಡುತ್ತಿದ್ದುದು, ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದುದ್ದನ್ನು ನೋಡಿ, ಕೇಳಿಕೊಂಡು ಕಲಿತುಕೊಂಡೆ’ ಎಂದು ಹೇಳಿದರು.

‘ಪ್ರತಿ ಹಳ್ಳಿಯಲ್ಲೂ ಕನಿಷ್ಠ ₹ 50 ಲಕ್ಷದ ಕೆಲಸವನ್ನು ಶಾಸಕರು ಮಾಡಿಸಿದ್ದಾರೆ ಎನ್ನುವಂತಾಗಬೇಕು ಎಂದು ಗುರಿ ಹಾಕಿಕೊಂಡಿದ್ದೆ. ಅದನ್ನು ಸಾಧಿಸಿದ ತೃಪ್ತಿ ಇದೆ. ರಾಜಹಂಸಗಡ ಅಭಿವೃದ್ಧಿಪಡಿಸಿದೆ. ರಾಷ್ಟ್ರನಾಯಕರ ಪ್ರತಿಮೆಗಳ ಸ್ಥಾಪನೆಗೆ ಒತ್ತು ನೀಡಿದ್ದೆ. ಬಸವ ವಸತಿ ಯೋಜನೆಯಡಿ 8000 ಮನೆಗಳನ್ನು ನಿರ್ಮಿಸಿಕೊಟ್ಟಿದ್ದೆ. ರಸ್ತೆಗಳ ಸುಧಾರಣೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನು

ಷ್ಠಾನಗೊಳಿಸಿದ್ದೆ. ನಮ್ಮದೇ ಸರ್ಕಾರ ಇದ್ದುದ್ದರಿಂದ ಸರಾಗವಾಗಿ ಅನುಮೋದನೆ ಸಿಗುತ್ತಿತ್ತು’ ಎಂದು ನೆನೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT