ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ ಈದು ಎನ್‌ಕೌಂಟರ್ ಪ್ರಕರಣ: ಆರೋಪಿ ದೇವೇಂದ್ರ ಖುಲಾಸೆ

Last Updated 15 ಮಾರ್ಚ್ 2018, 7:20 IST
ಅಕ್ಷರ ಗಾತ್ರ

ಉಡುಪಿ: ಕಾರ್ಕಳದ ಈದು ನಕ್ಸಲ್‌ ಎನ್‌ಕೌಂಟರ್ ಪ್ರಕರಣದ ಆರೋಪಿ ಶಿವಮೊಗ್ಗದ ದೇವೇಂದ್ರ ಅವರನ್ನು ಖುಲಾಸೆಗೊಳಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶ ಹೊರಡಿಸಿತು. ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಈ ಪ್ರಕರಣದಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬುವರು ಪೊಲೀಸರ ಗುಂಡಿಗೆ ಬಲಿಯಾಗಿದ್ದರು, ಪೊಲೀಸರು ಸಹ ಗಾಯಗೊಂಡಿದ್ದರು.

2009ರಲ್ಲಿ ಬಂಧನಕ್ಕೊಳಗಾಗಿ ಸುಮಾರು ಎಂಟು ವರ್ಷಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ದೇವೇಂದ್ರ ಅವರಿಗೆ ಹೈಕೋರ್ಟ್‌ ಏಳು ತಿಂಗಳ ಹಿಂದೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದೇಶ ಪ್ರಕಟಿಸುವ ವೇಳೆ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು. ‘ನ್ಯಾಯಕ್ಕೆ ಜಯ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧವೇ ಇಲ್ಲದ ನನ್ನನ್ನು ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು. ಮಾಡದ ತಪ್ಪಿಗೆ ಜೈಲು ವಾಸ ಅನುಭವಿಸಬೇಕಾಯಿತು’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಘಟನೆ ಏನು: 2003 ನವೆಂಬರ್ 17ರಂದು ಪ್ರಕರಣ ನಡೆದಿತ್ತು. ಕಾರ್ಕಳ ತಾಲ್ಲೂಕಿನ ಬೊಲ್ಲೊಟ್ಟು ಕೈದಾರೆ ಗ್ರಾಮದ ರಾಮಪ್ಪ ಪೂಜಾರಿ ಎಂಬುವರ ಮನೆಯಲ್ಲಿ ನಕ್ಸಲರು ತಂಗಿದ್ದಾರೆ ಎಂಬ ಮಾಹಿತಿ ಪಡೆದಿದ್ದ ಪೊಲೀಸರು ಬಂಧನ ಕಾರ್ಯಾಚರಣೆ ಆರಂಭಿಸಿದ್ದರು. ಆ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಹಾಜಿಮಾ ಮತ್ತು ಪಾರ್ವತಿ ಎಂಬುವರು ಮೃತಪಟ್ಟಿದ್ದರು. ಗಾಯಾಳು ಯಶೋದ ಎಂಬುವರನ್ನು ಪೊಲೀಸರು ಬಂಧಿಸಿದ್ದರು. ಆದರೆ ಅವರು ಸಹ 2012ರಲ್ಲಿಯೇ ಖುಲಾಸೆಗೊಂಡಿದ್ದರು.

ಘಟನಾ ಸ್ಥಳದಿಂದ ಓಡಿ ಹೋದ ವ್ಯಕ್ತಿ ವಿಷ್ಣು ಅಲಿಯಾಸ್ ದೇವೇಂದ್ರ ಎಂದು ಆರೋಪಿಸಿದ್ದ ಪೊಲೀಸರು ಬೇರೊಂದು ಪ್ರಕರಣದಲ್ಲಿ ಬಂಧಿತರಾಗಿದ್ದ ದೇವೇಂದ್ರ ಅವರನ್ನು ಬಾಡಿ ವಾರಂಟ್ ಪಡೆದು ಬಂಧಿಸಿದ್ದರು. ಎನ್‌ಕೌಂಟರ್ ಪ್ರಕರಣದಲ್ಲಿ ಒಟ್ಟು 5 ಮಂದಿ ಆರೋಪಿಗಳಿದ್ದು ಅದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ದೇವೇಂದ್ರ ಅವರ ಮೇಲೆ ಒಟ್ಟು 24 ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. ಆದರೆ ಆ ಎಲ್ಲ ಪ್ರಕರಣಗಳಲ್ಲಿಯೂ ಅವರು ಖುಲಾಸೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT