ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಗೌರಿಬಿದನೂರಿಗೆ ಮುಖ್ಯಮಂತ್ರಿ ಭೇಟಿ

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Last Updated 15 ಮಾರ್ಚ್ 2018, 7:45 IST
ಅಕ್ಷರ ಗಾತ್ರ

ಗೌರಿಬಿದನೂರು: ಗೌರಿಬಿದನೂರಿನ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಗೆ ಗುರುವಾರ ಬರುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ನ ನಾಯಕರನ್ನು ಸ್ವಾಗತಿಸಲು ಪಟ್ಟಣ ಸಕಲ ರೀತಿಯಲ್ಲಿ ಸಜ್ಜಾಗಿದೆ.

ಪಟ್ಟಣದ ನೇತಾಜಿ ಕ್ರೀಡಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ₹135 ಕೋಟಿ ವೆಚ್ಚದ 12 ಕಾಮಗಾರಿಗಳನ್ನು ಉದ್ಘಾಟಿಸಲಿದ್ದಾರೆ. ಇದೇ ವೇಳೆ ₹ 48 ಕೋಟಿ ವೆಚ್ಚದ 8 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ನಿಲಯ, ವಾಟದಹೊಸಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕುಡುಮಲಕುಂಟೆ ಕೈಗಾರಿಕಾ ಪ್ರದೇಶದ ಜಿಟಿಟಿಸಿ ಆವರಣದ ಕ್ಯಾಂಟೀನ್, ಶಾದಿ ಮಹಲ್, ತರಕಾರಿ ಮಾರುಕಟ್ಟೆ ಹಾಗೂ ಹೂವಿನ ಮಾರುಕಟ್ಟೆ, ಪದವಿ ಪೂರ್ವ ಕಾಲೇಜು ಕಟ್ಟಡ, ಹೊಸೂರಿನ ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಲಾಗುತ್ತದೆ.

ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ 66/11 ಕೆ.ವಿ.ವಿದ್ಯುತ್ ಕೇಂದ್ರ, ಗೌರಿಬಿದನೂರು ಪಟ್ಟಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಉತ್ತರ ಪಿನಾಕಿನಿ ನದಿಗೆ ಸೇತುವೆ, ಅತಿಥಿ ಗೃಹ, ಎಚ್.ಎನ್ ಸ್ಮಾರಕ ಭವನ, ಯಾತ್ರಿ ನಿವಾಸ ಶಂಕುಸ್ಥಾಪನೆಗೆ ಸಿದ್ಧವಾಗಿರುವ ಕಾಮಗಾರಿಗಳು. ಇದೇ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಸ್ತ್ರೀಶಕ್ತಿ ಸಂಘಗಳ ಸದಸ್ಯೆಯರಿಗೆ ಶೂನ್ಯ ಬಡ್ಡಿ ದರದ ಸಾಲ ವಿತರಣೆ ಮಾಡಲಿದ್ದಾರೆ.

ಸಿದ್ದರಾಮಯ್ಯ ಅವರು ಮಧ್ಯಾಹ್ನ 2.45ಕ್ಕೆ ಗೌರಿಬಿದನೂರಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿರುವ ಹೆಲಿಪ್ಯಾಡ್‌ಗೆ ಬಂದಿಳಿ ಯಲಿದ್ದಾರೆ. ಬಳಿಕ ನಾಗಸಂದ್ರದಲ್ಲಿರುವ ಶಾಸಕ ಶಿವಶಂಕರರೆಡ್ಡಿ ಅವರ ಮನೆಗೆ ಭೇಟಿ ನೀಡಿ, ನಂತರ ನೂತನವಾಗಿ ನಿರ್ಮಿಸಿರುವ ಎಂಸಿಎಚ್ ಆಸ್ಪತ್ರೆ ಉದ್ಘಾಟಿಸುವರು. ಅಲ್ಲಿಂದ ನೇತಾಜಿ ಕ್ರೀಡಾಂಗಣ ವೇದಿಕೆಗೆ ಬರಲಿದ್ದಾರೆ. ಸಂಜೆ 5ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಉಪಸಭಾಧ್ಯಕ್ಷ ಎನ್.ಎಚ್.ಶಿವಶಂಕರರೆಡ್ಡಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಸಂಸದರಾದ ಎಂ.ವೀರಪ್ಪ ಮೊಯಿಲಿ, ಕೆ.ಎಚ್.ಮುನಿಯಪ್ಪ, ಸಚಿವರಾದ ಆರ್.ವಿ.ದೇಶಪಾಂಡೆ, ಬಿ.ರಮಾನಾಥ ರೈ, ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯಲು, ಡಿ.ಕೆ.ಶಿವಕುಮಾರ್, ಉಮಾಶ್ರೀ, ತನ್ವೀರ್ ಸೇಠ್, ಕೆ.ಆರ್.ರಮೇಶ್ ಕುಮಾರ್, ರಮೇಶ ಜಾರಕಿಹೊಳಿ, ಸಂತೋಷ್‌ ಲಾಡ್, ಬಸವರಾಜ ರಾಯರೆಡ್ಡಿ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಎ.ಮಂಜು, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

20 ಸಾವಿರ ಆಸನ ವ್ಯವಸ್ಥೆ
ನೇತಾಜಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ಸಿದ್ಧಗೊಂಡಿದ್ದು, ಕಾರ್ಯಕರ್ತರಿಗಾಗಿ ಸುಮಾರು 20 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟದ ವ್ಯವಸ್ಥೆಗಾಗಿ ಕೌಂಟರ್‌ಗಳನ್ನು ತೆರೆಯಲಾಗಿದೆ. ಬುಧವಾರ ಉತ್ತರ ಪಿನಾಕಿನಿ ನದಿ ದಂಡೆಯಿಂದ ಕ್ರೀಡಾಂಗಣದವರೆಗೂ ಗಣ್ಯರಿಗೆ ಸ್ವಾಗತ ಕೋರುವ ಫ್ಲೆಕ್ಸ್‌, ಬ್ಯಾನರ್‌ಗಳೇ ದಾರಿಯುದ್ದಕ್ಕೂ ರಾರಾಜಿಸುತ್ತಿದ್ದವು.

ಬಿಗಿ ಪೊಲೀಸ್‌ ಬಂದೋಬಸ್ತ್
ಮುಖ್ಯಮಂತ್ರಿ ಕಾರ್ಯಕ್ರಮ ಬಂದೋಬಸ್ತ್‌ಗಾಗಿ 5 - ಡಿವೈಎಸ್ಪಿ, 19 ಸಿಪಿಐ, 50 - ಎಸ್‌ಐ, 82 - ಎಎಸ್ಐ, 662 -ಕಾನ್‌ಸ್ಟೆಬಲ್‌ಗಳು, 45 - ಮಹಿಳಾ ಕಾನ್‌ಸ್ಟೆಬಲ್‌ಗಳು ಹಾಗೂ- ಗೃಹ ರಕ್ಷಕ ದಳದ 80 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT