ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡೂಟ, ಹಣದ ಆಮಿಷದಿಂದ ಶಾಸಕ: ಟೀಕೆ

Last Updated 15 ಮಾರ್ಚ್ 2018, 7:46 IST
ಅಕ್ಷರ ಗಾತ್ರ

ಚಿಂತಾಮಣಿ: ಸಮಾಜ ಸೇವೆ ಹೆಸರಿನಲ್ಲಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ರಿಯಲ್‌ಎಸ್ಟೇಟ್‌ ವ್ಯಕ್ತಿ, ಜನರಿಗೆ ಬಾಡೂಟ, ಹಣದ ಅಮಿಷ ತೋರಿಸಿ ಶಾಸಕರಾಗಿ ಆಯ್ಕೆಯಾದರು. ಆದರೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಮುಖಂಡ ಎಂ.ಸಿ.ಸುಧಾಕರ್‌ ಶಾಸಕ ಕೃಷ್ಣಾರೆಡ್ಡಿ ವಿರುದ್ಧ ಟೀಕಿಸಿದರು.

ನಗರದ 12 ನೇ ವಾರ್ಡ್‌ ಕೆ.ಆರ್‌.ಬಡಾವಣೆಯಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

‘ಶಾಸಕರ ಅವಧಿ ಪೂರ್ಣವಾಗುತ್ತ ಬಂದರೂ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಮಂಜೂರು ಮಾಡಿಸಲಿಲ್ಲ. ನನ್ನ ಅವಧಿಯಲ್ಲಿ ಮಂಜೂರು ಮಾಡಿಸಿದ್ದ ಕಾಮಗಾರಿಗಳಿಗೆ ನಾಮ ಫಲಕ ಹಾಕಿಸಿಕೊಂಡಿದ್ದೇ ಅವರ ಸಾಧನೆ ಯಾಗಿದೆ ಎಂದು ಲೇವಡಿ ಮಾಡಿದರು.

5 ವರ್ಷಗಳಿಂದ ಸ್ವಚ್ಛತೆ ಕುರಿತು ಮಾತನಾಡದ ಶಾಸಕರು, ಇತ್ತೀಚೆಗೆ ಚುನಾವಣೆ ಗಿಮಿಕ್‌ಗಾಗಿ ತಾವೇ ಸನಿಕೆ ಹಿಡಿದಿದ್ದಾರೆ. ಮತದಾರರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

‘ಸ್ವಚ್ಛ ಚಿಂತಾಮಣಿ, ಹಸಿರು ಚಿಂತಾಮಣಿ ಮಾಡಲು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ಗಿಡ ತಂದು ನಗರದ ಜೋಡಿ ರಸ್ತೆಯಲ್ಲಿ ನೆಟ್ಟಿದ್ದೆವು. ಶಾಸಕರು ಓಡಾಡುವ ರಸ್ತೆಯಲ್ಲಿ ಗಿಡಗಳು ಒಣಗಿದರೂ ಕಣ್ಣೆತ್ತಿ ನೋಡಲಿಲ್ಲ. ಈಗ ಸ್ವಚ್ಛತೆಯ ಕುರಿತು ಮಾತನಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡ ಟಿ.ಶ್ರೀನಿವಾಸ್‌ ಮಾತನಾಡಿ, ‘ಶಾಸಕರಿಗೆ ಕ್ಷೇತ್ರದ ಗಾಳಿ, ಗಂಧ ಗೊತ್ತಿಲ್ಲ. ಡಾ.ಎಂ.ಸಿ.ಸುಧಾಕರ್‌ ಸರ್ಕಾರದಲ್ಲಿ ಸಾಕಷ್ಟು ಹೋರಾಟ ಮಾಡಿ ರೂಪಿಸಿದ್ದ ಎಲ್ಲ ಯೋಜನೆಗಳು ನಿರುಪಯುಕ್ತವಾಗಿವೆ. ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮಸ್ತೇನಹಳ್ಳಿ ಮತ್ತು ಸಿದ್ದೇಪಲ್ಲಿ ಬಳಿ ಕೈಗಾರಿಕಾ ಶೆಡ್‌ ನಿರ್ಮಾಣಕ್ಕಾಗಿ ಮಂಜೂರು ಮಾಡಿಸಿದ್ದ ಯೋಜನೆ ನಿಷ್ಕ್ರಿಯವಾಗಿದೆ ಎಂದು ದೂರಿದರು.

ಕೋಚಿಮುಲ್‌ ನಿರ್ದೇಶಕ ಅಶ್ವತ್ಥನಾರಾಯಣಬಾಬು, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಣ್ಣ, ಸ್ಕೂಲ್‌ ಸುಬ್ಬಾರೆಡ್ಡಿ, ಪವಿತ್ರಾ ಚಂದ್ರಶೇಖರ್‌, ನಗರಸಭೆ ಸದಸ್ಯರಾದ ಅಬ್ಬುಗುಂಡು ಶ್ರೀನಿವಾಸರೆಡ್ಡಿ, ದೇವರಾಜ್‌,ನಿಸಾರ್‌ಷಾ, ರತ್ನಮ್ಮ, ಕಳಾಯಿ ಶ್ರೀನಿವಾಸ್‌, ಮುಖಂಡರಾದ ಸೈಯದ್‌ ಬುಡೇನ್‌, ಮುನಿಶಾಮಿರೆಡ್ಡಿ, ಮಂಜುನಾಥ ಐಯ್ಯರ್‌, ಇಲಿಯಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT