9 ಕೆರೆಗಳಿಗೆ ನೀರು: ಸಚಿವೆ

ಶುಕ್ರವಾರ, ಮಾರ್ಚ್ 22, 2019
21 °C

9 ಕೆರೆಗಳಿಗೆ ನೀರು: ಸಚಿವೆ

Published:
Updated:
9 ಕೆರೆಗಳಿಗೆ ನೀರು: ಸಚಿವೆ

ಗುಂಡ್ಲುಪೇಟೆ: ‘ನದಿಮೂಲದಿಂದ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪೂರ್ಣಗೊಂಡಿದ್ದು, 9 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ ಹೇಳಿದರು.

ನಂಜನಗೂಡು ತಾಲ್ಲೂಕಿನ ಕೂಗಲೂರು ಕೆರೆಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 9 ಕೆರೆಗಳಿಗೆ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸುತ್ತಿರುವ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕ್ಷೇತ್ರದ ಮತದಾರರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ’ ಎಂದರು.

‘ಚುನಾವಣಾ ಸಂದರ್ಭದಲ್ಲಿ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜನತೆಗೆ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಮೊದಲನೇ ಹಂತದಲ್ಲಿ ಕಬಿನಿ ನದಿಮೂಲದಿಂದ ₹ 67.50 ಕೋಟಿ ವೆಚ್ಚದಲ್ಲಿ (ಗಾಂಧಿಗ್ರಾಮ ಬಳಿ) 0.095 ಟಿ.ಎಂ.ಸಿ ಅಡಿ ನೀರನ್ನು ಎತ್ತಿ ನಂಜನಗೂಡು ತಾಲ್ಲೂಕಿನ ಮೂರು ಕೆರೆ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 9 ಕೆರೆಗಳಾದ ಚಿಕ್ಕಾಟಿ, ತೊಂಡವಾಡಿ, ಬೆಳಚಲವಾಡಿ, ಕಮರಹಳ್ಳಿ, ರಾಘವಾಪುರ, ಹಳ್ಳದಮಾದಹಳ್ಳಿ, ಗರಗನಹಳ್ಳಿ, ಅಗತ್‌ಗೌಡನಹಳ್ಳಿ, ಮಳವಳ್ಳಿ ಕರೆಗಳಿಗೆ ಈಗಾಗಲೇ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಹಲವು ಕೆರೆಗಳು ಈಗಾಗಲೇ ತುಂಬಿವೆ ಎಂದು ಹೇಳಿದರು.

ಎರಡನೇ ಹಂತ: ‘ಕೆರೆಗಳಿಗೆ ನೀರು ತುಂಬಿಸುವ ಎರಡನೇ ಹಂತದ ಯೋಜನೆಯಲ್ಲಿ ತಾಲ್ಲೂಕಿನ ತೆರಕಣಾಂಬಿ ಜಿ.ಪಂ ವ್ಯಾಪ್ತಿಗೆ ಸೇರಿದ ಹುತ್ತೂರು ಕೆರೆಯಿಂದ ವಡ್ಡಗೆರೆ, ಕುಂದಕೆರೆ, ಬೊಮ್ಮನಹಳ್ಳಿ, ಕರಕಲಮಾದಹಳ್ಳಿ, ದಾರಿ ಬೇಗೂರು, ಯರಿಯೂರು, ಕೊಡಸೋಗೆ ಬಸವನಕಟ್ಟೆ, ಬೊಮ್ಮಲಾಪುರ, ಶಿವಪುರ ಕಲ್ಕಟ್ಟೆ ಕರೆ, ಪಟ್ಟಣದ ಅಮಾನಿಕೆರೆ (ದೊಡ್ಡಕೆರೆ ) 10 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ಪೈಪ್‌ಲೈನ್ ಅಳವಡಿಕೆಯ ಕಾರ್ಯ ಪೂರ್ಣಗೊಳ್ಳುವ ಹಂತ ತಲುಪಿದ್ದು ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದರು.

ಬಹುಗ್ರಾಮ ಕುಡಿಯುವ ನೀರು ಕಾಮಗಾರಿ: ತಾಲ್ಲೂಕಿನ 131 ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಕಾಮಗಾರಿಗೆ ಮುಖ್ಯಮಂತ್ರಿಗಳು ಕೋಟ್ಯಂತರ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಬಹುಗ್ರಾಮ ಯೋಜನೆಯಡಿ ಚಾಮರಾಜನಗರ ತಾಲ್ಲೂಕಿನ 166 ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ 131 ಹೀಗೆ ಒಟ್ಟು 297 ಗ್ರಾಮಗಳಿಗೆ ಕಬಿನಿ ನದಿಯಿಂದ ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ₹ 497.80 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈಗಾಗಲೇ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಹಲವು ಗ್ರಾಮಗಳಿಗೆ ಪೈಪ್‌ಲೈನ್ ಮೂಲಕ ಪ್ರಾಯೋಗಿಕವಾಗಿ ಶುದ್ಧ ಕುಡಿಯುವ ನೀರನ್ನು ಪೂರೈಸಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

‘ನಮ್ಮ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೊಡಿ ಕಾಂಗ್ರೆಸ್‌ ಪಕ್ಷವನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಗದೀಶ್‌ಮೂರ್ತಿ , ಜಿ.ಪಂ ಸದಸ್ಯ ರತ್ನಮ್ಮ ಶ್ರೀಕಂಠಪ್ಪ , ಪುರಸಭೆ ಅಧ್ಯಕ್ಷ ಪಿ.ಗಿರೀಶ್, ತಾ.ಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಜಿಲ್ಲಾ ಹ್ಯಾಪ್‌ಕಾಮ್ಸ್ ಕಾವೇರಿ ನಿಗಮದ ಅಧಿಕಾರಿ ರಾಜೇಂದ್ರ ಪ್ರಸಾದ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry