ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಹಿಂದ’ ಅಭಿವೃದ್ಧಿ ಅನುದಾನದ ಪಟ್ಟಿ ನೀಡಿ: ಸಿ.ಎಂಗೆ ಕೆ.ಎಸ್‌.ಈಶ್ವರಪ್ಪ ಸವಾಲು

ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಈಶ್ವರಪ್ಪ ಸವಾಲು
Last Updated 15 ಮಾರ್ಚ್ 2018, 9:17 IST
ಅಕ್ಷರ ಗಾತ್ರ

ದಾವಣಗೆರೆ:  ‘ಅಹಿಂದ’ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ನೀವು ಆ ಸಮುದಾಯಗಳ ಅಭಿವೃದ್ಧಿಗೆ ಎಷ್ಟು ಅನುದಾನ ಬಿಡುಗಡೆ ಮಾಡಿದ್ದೀರಿ ಎನ್ನುವ ಬಗ್ಗೆ ಪಟ್ಟಿ ಬಿಡುಗಡೆ ಮಾಡಿ’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದರು.

ಹಿಂದುಳಿದ ವರ್ಗಗಳ ಮೋರ್ಚಾ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ಸುಳ್ಳು ಹೇಳಿ ರಾಜಕಾರಣ ಮಾಡುವುದಕ್ಕೂ ಮಿತಿ ಇದೆ. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರಿಗೆ ಟೋಪಿ ಹಾಕಿ, ಕಾಂಗ್ರೆಸ್‌ಗೆ ಬಂದು ಮುಖ್ಯಮಂತ್ರಿ ಆಗಿದ್ದೀರಿ. ಅಹಿಂದ ಜನರು ನಿಮ್ಮನ್ನು ನಂಬಿ ಮತ ಹಾಕಿದ್ದರು. ಆದರೆ, ಇದುವರೆಗೂ ಆ ಸಮುದಾಯದವರು ಅಭಿವೃದ್ಧಿ ಕಂಡಿಲ್ಲ’ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಸಮಾಜದ ಸಮಾನತೆಗಾಗಿ ಹೋರಾಟ ನಡೆಸಿದ ಅಂಬಿಗರ ಚೌಡಯ್ಯ, ಸಂಗೊಳ್ಳಿ ರಾಯಣ್ಣ, ಕನಕದಾಸ, ಶಿವಾಜಿ ಒಳಗೊಂಡಂತೆ ಅಹಿಂದ ಸಮುದಾಯದ ಯಾವ ಮಹಾನ್‌ ನಾಯಕರ ಸ್ಮಾರಕ ಸ್ಥಳಗಳಿಗೆ ಮುಖ್ಯಮಂತ್ರಿ ಭೇಟಿ ನೀಡಿಲ್ಲ. ಇದೀಗ ಲಿಂಗಾಯತ, ವೀರಶೈವರ ನಡುವೆ ಹೊಡೆದಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅರ್ಹ ಬಗರ್‌ ಹುಕುಂ ಸಾಗುವಳಿದಾರರಿಗೆ ಇದುವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಈ ವಿಷಯದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೂಡ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ಅವರು ಸರ್ಕಾರದ ಹಣದಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ದೂರಿದರು.

ಚುನಾವಣೆ ಗಿಮಿಕ್‌: ‘ಮನೆಗೆ ಹೋಗುವ ಸಮಯದಲ್ಲಿ ರಾಜ್ಯದಾದ್ಯಂತ ₹ 1 ಲಕ್ಷ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದರಂತೆ ದಾವಣಗೆರೆ ನಗರದಲ್ಲಿಯೂ ಮಂಗಳವಾರ ₹ 3 ಸಾವಿರ ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಇದೆಲ್ಲವೂ ಚುನಾವಣೆಯ ಗಿಮಿಕ್‌. ಈಗಾಗಲೇ ಮುಕ್ತಾಯವಾಗಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಹಣ ಪಾವತಿ

ಮಾಡಲು ಸರ್ಕಾರದಲ್ಲಿ ಹಣವಿಲ್ಲ. ಮೊದಲು ಬಾಕಿ ಹಣ ಪಾವತಿಸಲಿ’ ಎಂದು ಹೇಳಿದರು.

ಮುಖ್ಯಮಂತ್ರಿ ಅವರು ಕೇವಲ ದೌಲತ್ತಿನ ಮಾತು ಆಡುವುದನ್ನು ಬಿಟ್ಟರೆ ಯಾವ ಅಭಿವೃದ್ಧಿ ಕಾಮಗಾರಿಗಳೂ ನಡೆದಿಲ್ಲ ಎಂದು ಟೀಕಿಸಿದರು.

ನೀವೂ ಜೈಲಿಗೆ ಹೋಗುತ್ತೀರಿ: ‘ಪದೇ ಪದೇ ಯಡಿಯೂರಪ್ಪ ಅವರು ಜೈಲಿಗೆ ಹೋಗಿ ಬಂದವರು ಎಂದು ಹೇಳುತ್ತಿದ್ದೀರಿ. ನಿಮ್ಮ ಆಡಳಿತ ಅವಧಿ ಮುಗಿಯುತ್ತಿದ್ದಂತೆ ನೀವೂ ಜೈಲಿಗೆ ಹೋಗುತ್ತೀರಿ’ ಎಂದು ಮುಖ್ಯಮಂತ್ರಿ ವಿರುದ್ಧ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮುಖಂಡ ಎಸ್‌.ಎ.ರವೀಂದ್ರನಾಥ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್‌, ಬಸವರಾಜ ನಾಯ್ಕ, ಸೊಕ್ಕೆ ನಾಗರಾಜ್ ಅವರೂ ಮಾತನಾಡಿದರು.

ಮುಕುಂದ, ಬಿ.ಎಸ್‌.ಜಗದೀಶ್‌, ವೀರೇಶ್‌ ಕುಮಾರ್‌ ಪೈಲ್ವಾನ್, ಎಸ್‌.ಜಯ್ಯಣ್ಣ, ಸವಿತಾ ರವಿಕುಮಾರ್, ಚಿದಾನಂದ, ಮಂಜುನಾಥ, ಬಸವರಾಜ್‌, ಓಂಕಾರಪ್ಪ, ಕಡ್ಲೆಬಾಳು ಧನಂಜಯ ಅವರೂ ಇದ್ದರು. ಆಶಾ ಕಾರ್ಯಕ್ರಮ ನಿರೂಪಿಸಿದರು.

‘ಆಶ್ರಯ ಮನೆ ವಿತರಣೆ ಲೆಕ್ಕ ಕೊಡಿ’
‘ದಾವಣಗೆರೆಯಲ್ಲಿ ‘ಅಹಿಂದಾ’ ಸಮುದಾಯದ ಜನರಿಗೆ ಎಷ್ಟು ಆಶ್ರಯ ಮನೆಗಳನ್ನು ವಿತರಿಸಲಾಗಿದೆ ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವಿವರ ನೀಡಬೇಕು’ ಎಂದು ಈಶ್ವರಪ್ಪ ಒತ್ತಾಯಿಸಿದರು.

‘ತಾಕತ್ತಿದ್ದರೆ ಆರ್‌ಎಸ್ಎಸ್‌ ನಿಷೇಧಿಸಿ’
‘ಗೋವುಗಳನ್ನು ಸಾಗಾಣೆ ಮಾಡುವಾಗ ಕೆಲ ಅಮಾಯಕ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು, ಆರ್‌ಎಸ್‌ಎಸ್‌ ಸಂಘಟನೆಯನ್ನು ನಿಷೇದಿಸಲಾಗುವುದು ಎನ್ನುತ್ತೀರಿ. ತಾಕತ್‌ ಇದ್ದರೆ ಆರ್‌ಎಸ್‌ಎಸ್‌ ಸಂಘಟನೆ ಮುಟ್ಟಿ ನೋಡಿ’ ಎಂದು ಈಶ್ವರಪ್ಪ ಮುಖ್ಯಮಂತ್ರಿಗೆ ಸವಾಲು ಹಾಕಿದರು.

*
ಶಿವಮೊಗ್ಗದಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಮಾಧ್ಯಮಗಳ ಸೃಷ್ಟಿ. ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ಸಿಗುತ್ತದೆ.
–ಕೆ.ಎಸ್‌.ಈಶ್ವರಪ್ಪ,
ವಿರೋಧ ಪಕ್ಷದ ನಾಯಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT