4
ನಿತ್ಯ 10 ಸಾವಿರ ಲೀಟರ್ ಉತ್ಪಾದನೆ; ಅಮೂಲ್‌ ಜತೆ ಒಪ್ಪಂದ

ಹಾಮೂಲ್‌ ಐಸ್‌ ಕ್ರೀಂ ಘಟಕ ಆರಂಭ

Published:
Updated:
ಹಾಮೂಲ್‌ ಐಸ್‌ ಕ್ರೀಂ ಘಟಕ ಆರಂಭ

ಹಾಸನ: ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾಮೂಲ್‌)ದ ಆವರಣದಲ್ಲಿ ₹ 50 ಕೋಟಿ ವೆಚ್ಚದಲ್ಲಿ ಸ್ಥಾಪಿಸಿರುವ ದಕ್ಷಿಣ ಭಾರತದ ಮೊದಲ ಅತ್ಯಾಧುನಿಕ ಐಸ್‌ಕ್ರೀಂ ಘಟಕ ಬುಧವಾರ ಕಾರ್ಯಾರಂಭ ಮಾಡಿತು.

ಆರಂಭದಲ್ಲಿ ನಿತ್ಯ 10 ಸಾವಿರ ಲೀಟರ್‌ ಐಸ್‌ಕ್ರೀಂ ಉತ್ಪಾದನೆಯಾಗಲಿದ್ದು, ನಂತರ ಸಾಮರ್ಥ್ಯವನ್ನು 15 ಸಾವಿರ ಲೀಟರ್‌ಗೆ ಹೆಚ್ಚಿಸಲಾಗುವುದು. ಹಾಮೂಲ್‌ನ ಸ್ವಂತ ಬಂಡವಾಳದಲ್ಲಿಯೇ ಘಟಕ ನಿರ್ಮಿಸಿದ್ದು, ಇಟಲಿಯಿಂದ ಅತ್ಯಾಧುನಿಕ ಐಸ್‌ಕ್ರೀಂ ಸಿದ್ಧಪಡಿಸುವ ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಐಸ್‌ಕ್ರೀಂಗೆ ಈಗಾಗಲೇ ಹಲವು ಕಡೆಗಳಿಂದ ಬೇಡಿಕೆ ಬಂದಿದೆ. ಅಮೂಲ್‌ ಬ್ರ್ಯಾಂಡ್‌ನಲ್ಲಿ 5 ಸಾವಿರ ಲೀಟರ್‌ ಐಸ್‌ಕ್ರೀಂ ಪ್ಯಾಕಿಂಗ್‌ ಮಾಡಿಕೊಡುವ ಒಪ್ಪಂದ ಆಗಿದೆ. ಉಳಿದದ್ದನ್ನು ನಂದಿನಿ ಬ್ರ್ಯಾಂಡ್‌ ಅಡಿ ಮಾರುಕಟ್ಟೆಗೆ ಪೂರೈಸಲಾಗುವುದು. ಮಾರುಕಟ್ಟೆ ಸಮೀಕ್ಷೆ ನಡೆಸಲಾಗುತ್ತಿದ್ದು, ಬೇಡಿಕೆ ಆಧರಿಸಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದರು.

ಕಪ್‌, ಕೋನ್‌, ಫ್ಯಾಮಿಲಿ ಪ್ಯಾಕ್‌ ಐಸ್‌ಕ್ರೀಂ ಟಬ್‌, ಐಸ್‌ಕ್ಯಾಂಡಿ ಉತ್ಪಾದನೆ ಮಾಡುವ ಸ್ವಯಂಚಾಲಿತ ಫಿಲ್ಲಿಂಗ್‌ ಯಂತ್ರ ಅಳವಡಿಸಲಾಗಿದೆ. ₹ 5 ರಿಂದ ₹ 40ರ ವರೆಗೂ ದರ ನಿಗದಿಪಡಿಸಿದ್ದು, ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಬೆಲೆ ಕಡಿಮೆ. ಸದ್ಯ ನಂದಿನಿ ಬ್ರ್ಯಾಂಡ್‌ನಲ್ಲಿ 80 ಮಾದರಿಯ ಐಸ್‌ಕ್ರೀಂ ತಯಾರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 115ಕ್ಕೆ ವಿಸ್ತರಿಸಲಾಗುವುದು ಎಂದು ವಿವರಿಸಿದರು.

ಪೆಟ್‌ ಬಾಟಲ್‌: ₹ 120 ಕೋಟಿ ವೆಚ್ಚದಲ್ಲಿ ಪೆಟ್ ಬಾಟಲ್ ಸುವಾಸಿತ ಹಾಗೂ ಸಾಮಾನ್ಯ ಹಾಲು ಉತ್ಪಾದನಾ ಘಟಕದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕೆಎಂಎಫ್ ಈ ಘಟಕದ ನಿರ್ವಹಣೆ ಮಾಡಲಿದೆ. ಗಂಟೆಗೆ 30 ಸಾವಿರ (200 ಗ್ರಾಂ ಪೆಟ್ ಬಾಟಲ್) ಸುವಾಸಿತ ಹಾಲು ಉತ್ಪಾದನೆ ಮಾಡಲಾಗುವುದು. ದಿನಕ್ಕೆ 5 ಲಕ್ಷ ಬಾಟಲ್‌ ಉತ್ಪಾದಿಸಿ, ಹೊರ ರಾಜ್ಯಗಳಿಗೆ ಸರಬರಾಜು ಮಾಡಲಾಗುವುದು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry