ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲು ಉತ್ಪಾದಕರಿಗೆ ₹1 ಹೆಚ್ಚುವರಿ ದರ ನೀಡಲು ನಿರ್ಧಾರ: ಎಚ್‌.ಡಿ.ರೇವಣ್ಣ

‘ಹಾಮೂಲ್‌ ರೈತ ಕಲ್ಯಾಣ ಟ್ರಸ್ಟ್’ ಸ್ಥಾಪನೆ; ಶಾಸಕ ಎಚ್‌.ಡಿ.ರೇವಣ್ಣ ಹೇಳಿಕೆ
Last Updated 15 ಮಾರ್ಚ್ 2018, 9:53 IST
ಅಕ್ಷರ ಗಾತ್ರ

ಹಾಸನ: ಬೇಸಿಗೆಯಲ್ಲಿ ಹಾಲು ಉತ್ಪಾದನಾ ವೆಚ್ಚ ಸರಿದೂಗಿಸಲು ಮುಂದಾಗಿರುವ ಹಾಸನ ಹಾಲು ಒಕ್ಕೂಟ, ಹಾಲು ಉತ್ಪಾದಕರಿಗೆ ಮಾರ್ಚ್‌ 15ರಿಂದಲೇ ಪ್ರತಿ ಲೀಟರ್‌ಗೆ ₹ 1 ಹೆಚ್ಚುವರಿ ದರ ನೀಡಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ, ಈಗ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಗೆ ₹ 23.50 ನೀಡಲಾಗುತ್ತಿದ್ದು, ಗುರುವಾರದಿಂದ ಲೀಟರ್‌ಗೆ  ₹ 24.50 ಸಿಗಲಿದೆ. ಹೆಚ್ಚುವರಿ ದರ ನೀಡುವುದರಿಂದ ಒಕ್ಕೂಟಕ್ಕೆ ಮಾಸಿಕ ₹ 2.50 ಕೋಟಿ ಹೊರ ಬೀಳಲಿದೆ. ಕಳೆದ ವರ್ಷ ಒಕ್ಕೂಟ ₹ 1000 ಕೋಟಿ ವಹಿವಾಟು ನಡೆಸಿತ್ತು, ಪ್ರಸಕ್ತ ಸಾಲಿನಲ್ಲಿ ಅಂದಾಜು ₹ 1200 ಕೋಟಿ ವಹಿವಾಟು ನಡೆಸಿದ್ದು, ₹ 5 ಕೋಟಿ ನಿವ್ವಳ ಲಾಭಗಳಿಸುವ ನಿರೀಕ್ಷೆ ಇದೆ. ಕಳೆದ ಸಾಲಿಗಿಂತ ಶೇ 12 ರಿಂದ 15ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.

ಪ್ರಸಕ್ತ ವರ್ಷ ₹ 40 ಲಕ್ಷ ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 150 ಕಂಪ್ಯೂಟರ್‌ ಒದಗಿಸಲಾಗುವುದು. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಂಪ್ಯೂಟರ್‌ ಲಭ್ಯವಿಲ್ಲದೇ ಕಲಿಕೆಯಿಂದ ವಂಚಿತ ರಾಗುತ್ತಿದ್ದಾರೆ. ಹಲವು ಕಾಲೇಜುಗಳಿಗೆ ಬೇಡಿಕೆ ಬಂದಿದ್ದು, ಪರಿಶೀಲಿಸಿ ನೀಡಲಾಗುವುದು. ಹಣವನ್ನು ಒಕ್ಕೂಟದ ಧರ್ಮಾರ್ಥ ನಿಧಿಯಿಂದ ಭರಿಸಲಾಗುವುದು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಗೋಪಾಲಯ್ಯ ತಿಳಿಸಿದರು.

ಒಕ್ಕೂಟದಲ್ಲಿ ಹಾಮೂಲ್ ರೈತ ಕಲ್ಯಾಣ ಟ್ರಸ್ಟ್‌ ಸ್ಥಾಪಿಸಲಾಗಿದ್ದು, ಇದರ ಮೂಲಕ ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದಕರು ಅಥವಾ ಹೈನುರಾಸುಗಳ ಆರೋಗ್ಯ ವಿಮೆ, ಉತ್ಪಾದಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು, ಉತ್ಪಾದಕರು ಅಥವಾ ರಾಸು ಗಳು ಮೃತಪಟ್ಟಲ್ಲಿ ಆರ್ಥಿಕ ನೆರವು ಮುಂತಾದ ಸಾಮಾಜಿಕ ಸೇವೆ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದರು. ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸತೀಶ್ ಇದ್ದರು.

ರಾಹುಲ್‌ಗೆ ಪಕೋಡ ಸಿಗಲ್ಲ
‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಿಲ್ಲೆಗೆ ಬರಲಿ. ಆದರೆ ಅವರಿಗೆ ಇಲ್ಲಿ ಪಕೋಡ ಸಿಗುವುದಿಲ್ಲ. ಇದು ದೇವೇಗೌಡರ ಊರು, ಇಲ್ಲಿಗೆ ಯಾವ ಗಾಂಧಿ ಬಂದರೂ ಯಾವ ಪರಿಣಾಮ ಬೀರುವುದಿಲ್ಲ. ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಆಹ್ವಾನಿಸಲಾಗಿತ್ತು. ಅದಕ್ಕೆ ಬರಲಿಲ್ಲ. ಚುನಾವಣಾ ಪ್ರಚಾರ ಮಾಡಲು ಬಂದು ಹೋಗಲಿ’ ಎಂದು ಎಚ್‌.ಡಿ.ರೇವಣ್ಣ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT