ಐದು ದಶಕವಾದರೂ ಕಾಂಗ್ರೆಸ್‌ ಗೆಲ್ಲುವುದಿಲ್ಲ

7
ಕ್ಯಾಲನೂರು ಹೋಬಳಿ ವ್ಯಾಪ್ತಿಯ ‘ನಮ್ಮ ಕಾಂಗ್ರೆಸ್‌’ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಶಾಸಕ ವರ್ತೂರು ವ್ಯಂಗ್ಯ

ಐದು ದಶಕವಾದರೂ ಕಾಂಗ್ರೆಸ್‌ ಗೆಲ್ಲುವುದಿಲ್ಲ

Published:
Updated:
ಐದು ದಶಕವಾದರೂ ಕಾಂಗ್ರೆಸ್‌ ಗೆಲ್ಲುವುದಿಲ್ಲ

ಕೋಲಾರ: ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಐದು ದಶಕವಾದರೂ ಗೆಲ್ಲುವುದಿಲ್ಲ. ಆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಎಂ.ಎಲ್‌.ಅನಿಲ್‌ ಕುಮಾರ್‌ ಹೆಸರು ಕ್ಷೇತ್ರದ ಕೊಂಡರಾಜನಹಳ್ಳಿಯನ್ನೂ ದಾಟುವುದಿಲ್ಲ ಎಂದು ಶಾಸಕ ವರ್ತೂರು ಪ್ರಕಾಶ್‌ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ನಡೆದ ಕ್ಯಾಲನೂರು ಹೋಬಳಿ ವ್ಯಾಪ್ತಿಯ ನಮ್ಮ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಈ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷವು ಕ್ಷೇತ್ರದಿಂದ ಲೆಕ್ಕಕ್ಕಿಲ್ಲದಂತೆ ಹೋಗುವುದು ನಿಶ್ಚಿತ’ ಎಂದು ಟೀಕಿಸಿದರು.

ಅನಿಲ್‌ಕುಮಾರ್ ಬಾಯಿ ಮುಚ್ಚಿ ಕೊಂಡಿರುವುದು ಒಳ್ಳೆಯದು. ಬಾಯಿ ಬಿಟ್ಟರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅವರು ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ನನ್ನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿದರೆ ನಾನು ಬೇರೆ ರೀತಿಯಲ್ಲೇ ಮಾತನಾಡುತ್ತೇನೆ ಎಂದು ಎಚ್ಚರಿಸಿದರು.

ಈ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಅನಿಲ್‌ಕುಮಾರ್‌ಗೆ ಕಾಂಗ್ರೆಸ್‌ನ ಟಿಕೆಟ್ ಕೊಡಿಸಿದ್ದು ನಾನು. ಆದರೆ ಸಂಸದ ಕೆ.ಎಚ್.ಮುನಿಯಪ್ಪ, ಸಚಿವ ರಮೇಶ್ ಕುಮಾರ್ ಮತ್ತು ಮಾಜಿ ಸಚಿವ ವಿ.ಮುನಿಯಪ್ಪ ಷಡ್ಯಂತ್ರ ಮಾಡಿ ಅವರನ್ನು ಸೋಲಿಸಿದರು. ಹಳೆಯದನ್ನು ಮರೆತಿರುವ ಅನಿಲ್‌ ಕುಮಾರ್‌ ಈಗ ನನ್ನ ವಿರುದ್ಧವೇ ಮುನಿಸಿಕೊಂಡಿದ್ದಾರೆ ಎಂದು ಹೇಳಿದರು.

ಅನಿಲ್‌ ಕುಮಾರ್‌ ಚುನಾವಣೆವರೆಗೂ ಕ್ಷೇತ್ರದಲ್ಲಿ ಅಲ್ಲಿ ಇಲ್ಲಿ ಕಾಣಿಸಿಕೊಳ್ಳುತ್ತಾರೆ. ಚುನಾವಣೆ ನಂತರ ಹುಡುಕಿದರೂ ಸಿಗುವುದಿಲ್ಲ. ಯಾರಿಗೂ ಗೊತ್ತಾಗದಂತೆ ಕ್ಷೇತ್ರದಿಂದ ರಾತ್ರೋರಾತ್ರಿ ನಾಪತ್ತೆ ಆಗುತ್ತಾರೆ. ಅವರಿಗೆ ಆಗ ನಾನೇ ಗತಿ, ನನ್ನನ್ನು ಹುಡುಕಿಕೊಂಡು ಬರಲೇಬೇಕು. ಈಗಲೇ ಎಚ್ಚರಿಕೆ ಕೊಡುತ್ತಿದ್ದೇನೆ. ಬಾಯಿ ಬಿಗಿ ಹಿಡಿದು ಮಾತನಾಡಿದರೆ ಒಳ್ಳೆಯದು ಎಂದರು.

ಈ ಬಾರಿಯೂ ಗೆಲ್ಲುತ್ತೇನೆ: ನರೇಂದ್ರ ಮೋದಿ, ಬಿ.ಎಸ್‌.ಯಡಿಯೂರಪ್ಪ, ಎಚ್‌.ಡಿ.ಕುಮಾರಸ್ವಾಮಿ ಅವರಿಂದ ಮತದಾರರನ್ನು ಬದಲಾಯಿಸುವುದು ಸಾಧ್ಯವಿಲ್ಲ. ಅವರೆಲ್ಲಾ ಸೇರಿ ಒಂದು ಸಾವಿರ ಮತಗಳನ್ನಷ್ಟೇ ತಿರುಗಿಸಬಹುದು. ಆದರೆ 10 ಸಾವಿರ ಮತಗಳನ್ನು ತಿರುಗಿಸುವಷ್ಟು ಶಕ್ತಿ ಯಾರಿಗೂ ಇಲ್ಲ. ಕ್ಷೇತ್ರದಲ್ಲಿ ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೆಲ್ಲುವುದು ಹಗಲುಗನಸು: ಜೆಡಿಎಸ್‌ ಮುಖಂಡ ಕೆ.ಶ್ರೀನಿವಾಸಗೌಡರಿಗೆ ಪಕ್ಷೇತರರಾಗಿ ಸ್ಪರ್ಧಿಸುವ ಧೈರ್ಯವಿಲ್ಲ. ಎಚ್‌.ಡಿ.ದೇವೇಗೌಡರ ಕೃಪೆ ಇಲ್ಲದೆ ಶ್ರೀನಿವಾಸಗೌಡರು ಗೆಲ್ಲುವುದು ಹಗಲುಗನಸು. ಶ್ರೀಕೃಷ್ಣನನ್ನು ಮರೆತ ಅರ್ಜುನನಿಗೆ ಆದ ಗತಿಯೇ ಶ್ರೀನಿವಾಸಗೌಡರಿಗೂ ಆಗುತ್ತದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬೆಗ್ಲಿ ಸೂರ್ಯಪ್ರಕಾಶ್ ಲೇವಡಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಎಸ್.ವೆಂಕಟೇಶ್, ಅರುಣ್ ಪ್ರಸಾದ್ ಭಾಗವಹಿಸಿದ್ದರು.

ನೂಕು ನುಗ್ಗಲು

ಸಭೆಗೆ ಬಂದಿದ್ದ ಕಾರ್ಯಕರ್ತರಿಗೆ ಶಾಸಕರು ಮಧ್ಯಾಹ್ನದ ಊಟಕ್ಕೆ ಕೋಳಿ ಮಾಂಸದ ಬಿರಿಯಾನಿ ಮತ್ತು ಮೊಸರು ಬಜ್ಜಿ ವ್ಯವಸ್ಥೆ ಮಾಡಿಸಿದ್ದರು. ಸಭೆ ಮುಗಿಯುತ್ತಿದ್ದಂತೆ ಕಾರ್ಯಕರ್ತರು ಬಿರಿಯಾನಿ ತೆಗೆದುಕೊಳ್ಳಲು ಮುಗಿಬಿದ್ದರು. ಇದರಿಂದ ನೂಕು ನುಗ್ಗಲು ಉಂಟಾಗಿ ಹಲವರು ಗಾಯಗೊಂಡರು. ಭದ್ರತೆಗೆ ನಿಯೋಜನೆ ಗೊಂಡಿದ್ದ ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

*

ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌ ಒಳ್ಳೆಯ ಮನುಷ್ಯ. ಕಾಮಧೇನುವಂತಿರುವ ಅವರು ಯಾರ ತಂಟೆಗೂ ಹೋಗುವುದಿಲ್ಲ. ಕಾಂಗ್ರೆಸ್‌ನಿಂದ ಚುನಾವಣೆಗೆ ಸ್ಪರ್ಧಿಸ ಬಯಸಿರುವ ಅವರು ನನಗೆ ಲೆಕ್ಕಕ್ಕಿಲ್ಲ.

–ವರ್ತೂರು ಪ್ರಕಾಶ್‌, ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry