ಮೂರು ದಿನದಲ್ಲಿ ಹಕ್ಕುಪತ್ರ ನೀಡಿ

7
ತಹಶೀಲ್ದಾರ್‌ಗೆ ಶಾಸಕ ದೊಡ್ಡನಗೌಡ ಪಾಟೀಲ ತಾಕೀತು: ಫಲಾನುಭವಿಗಳ ಧರಣಿ

ಮೂರು ದಿನದಲ್ಲಿ ಹಕ್ಕುಪತ್ರ ನೀಡಿ

Published:
Updated:
ಮೂರು ದಿನದಲ್ಲಿ ಹಕ್ಕುಪತ್ರ ನೀಡಿ

ಕುಷ್ಟಗಿ: ತಗ್ಗಿನ ಓಣಿಯ ಸರ್ಕಾರಿ ಜಮೀನಿನಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಅರ್ಹರಿಗೆ ಮೂರು ದಿನಗಳ ಒಳಗಾಗಿ ಹಕ್ಕುಪತ್ರಗಳನ್ನು ವಿತರಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ ಅವರು ತಹಶೀಲ್ದಾರ್‌ಗೆ ತಾಕೀತು ಮಾಡಿದರು.

ಬುಧವಾರ ತಹಶೀಲ್ದಾರ್‌ ಕಚೇರಿಯಲ್ಲಿ ನಡೆದ ನಾಟಕೀಯ ಬೆಳವಣಿಗೆಗಳ ನಂತರ ತಹಶೀಲ್ದಾರ್‌ ಎಂ.ಗಂಗಪ್ಪ ಅವರೊಂದಿಗೆ ಚರ್ಚೆ ನಡೆಸಿದ ಪಾಟೀಲ, ನಿಗದಿತ ಅವಧಿಯಲ್ಲಿ ಹಕ್ಕಪತ್ರ ವಿತರಿಸದೆ ಕಾಲಹರಣ ಮಾಡಿದರೆ ಪುನಃ ಕಚೇರಿಗೆ ಬಂದು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕರಿಗೆ ಮಾಹಿತಿ ನೀಡಿದ ತಹಶೀಲ್ದಾರ್‌, ಮೊದಲ ದಿನ ಸಾಂಕೇತಿಕವಾಗಿ 16 ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಶಾಸಕರ ಕಚೇರಿಯಲ್ಲಿ ಮಾರ್ಚ್‌ 13ರಂದು 66 ಹಕ್ಕುಪತ್ರ ವಿತರಿಸಲಾಗಿದೆ.

ಇನ್ನೂ 45 ಉಳಿದಿವೆ. ಅಲ್ಲದೇ 23 ಜನರು ಶುಲ್ಕ ಪಾವತಿಸಿದ ನಂತರ ಅವರಿಗೂ ಹಕ್ಕುಪತ್ರ ನೀಡಲಾಗುವುದು. ಆದರೆ, ಸುಮಾರು 85 ಜನ ಫಲಾನುಭವಿಗಳು ಈಗಾಗಲೇ ಬೇರೆ ಕಡೆ ನಿವೇಶನ ಹೊಂದಿರುವ ಬಗ್ಗೆ ಲಿಖಿತ ದೂರುಗಳು ಬಂದಿದ್ದರಿಂದ ಅವುಗಳನ್ನು ಪರಿಶೀಲಿಸಿ ನಂತರ ಅರ್ಹರಿಗೆ ಹಕ್ಕುಪತ್ರ ನೀಡುತ್ತೇವೆ ಎಂದರು.

ಅರ್ಹರು, ಶುಲ್ಕ ಪಾವತಿಸಿದವರಿಗೂ ಹಕ್ಕುಪತ್ರ ನೀಡದೇ ಸತಾಯಿಸುತ್ತಿದ್ದೀರಿ ಎಂದು ತಾಳ್ಮೆ ಕಳೆದುಕೊಂಡ ಶಾಸಕ, ‘ಬಡವರ ಇಂಥ ಕಲ್ಯಾಣ ಕೆಲಸವನ್ನು ಹದಗೆಡಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ಯಾವುದೋ ಶಕ್ತಿ ನಿಮ್ಮ ಕೈಕಟ್ಟಿಹಾಕಿರುವಂತಿದೆ. ಯಾರೋ ಕೆಲವರು ಅನಗತ್ಯವಾಗಿ ದೂರು ನೀಡಿದಾಕ್ಷಣ ಹಕ್ಕುಪತ್ರ ನೀಡದಿರುವುದು ಸರಿಯಲ್ಲ’ ಎಂದು ಅಸಮಾಧಾನ ಹೊರಹಾಕಿದರು. ಆದರೆ, ನಿಯಮ ಬಿಟ್ಟು ಏನೂ ಮಾಡಿಲ್ಲ ಎಂದು ತಹಶೀಲ್ದಾರ್‌ ಗಂಗಪ್ಪ ಸಮರ್ಥಿಸಿಕೊಂಡರು.

ದೂರು ಬಂದಿರುವ 85 ಫಲಾನುಭವಿಗಳು ನಗರ ವ್ಯಾಪ್ತಿಯಲ್ಲಿ ನಿವೇಶನ ಅಥವಾ ಮನೆ ಹೊಂದಿದ್ದಾರಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಪುರಸಭೆ ಮುಖ್ಯಾಧಿಕಾರಿಗೆ ಪತ್ರ ಬರೆಯುತ್ತೇವೆ. ಮತ್ತು 55 ಜನ ಹೊಸದಾಗಿ ಅರ್ಜಿ ಸಲ್ಲಿಸಿದ್ದು ಅವರಿಗೆ ಹಿಂಬರಹ ನೀಡುತ್ತೇವೆ ಎಂದು ತಹಶೀಲ್ದಾರ್‌ ಹೇಳಿದರು.

ನಿಯಮಗಳ ಪ್ರಕಾರ ಮೂರು ದಿನಗಳ ಒಳಗೆ ದಾಖಲೆಗಳನ್ನು ಪರಿಶೀಲಿಸಿ ಅರ್ಹರಿಗೆ ಹಕ್ಕುಪತ್ರ ನೀಡಲು ಶಾಸಕ ಸೂಚಿಸಿದರು.

ರಜೆ ಹಾಕಲೂ ಸಿದ್ಧ: ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್‌ ಅವರಿಂದ ಲಿಖಿತ ಹೇಳಿಕೆ ಬೇಕು ಎಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿದ್ದಕ್ಕೆ ತಾಳ್ಮೆ ಕಳೆದುಕೊಂಡ ಎಂ.ಗಂಗಪ್ಪ, ‘ಅಧಿಕಾರಿಗೆ ಈ ರೀತಿ ನೀವು ಮಾತನಾಡುವುದು ಸರಿಯಲ್. ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. 30 ವರ್ಷ ಬಗೆಹರಿಯದ ಸಮಸ್ಯೆ ಇತ್ಯರ್ಥಪಡಿಸುತ್ತಿದ್ದೇವೆ. ಒತ್ತಡ ಹೇರಿದರೆ ರಜೆಹಾಕಿ ಹೋಗುತ್ತೇನೆ ಅಷ್ಟೆ’ ಎಂದು ಶಾಸಕರ ಎದುರೇ ಖಾರವಾಗಿಯೇ ಹೇಳಿದರು.

ಅದೇ ರೀತಿ ‘ನೀವು ಹೇಳಿದಂತೆ ಕೇಳಿದರೆ ನಾವು ಮನೆಗೆ ಹೋಗಬೇಕಾಗುತ್ತದೆ’ ಎಂದ ಇನ್ನೊಬ್ಬ ವ್ಯಕ್ತಿಯನ್ನು ತಹಶೀಲ್ದಾರ್‌ ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ಕಾನೂನಿನ ತಿಳಿವಳಿಕೆ ಬಗ್ಗೆ ಮಾತನಾಡುವ ನೀವು ಶಾಸಕರನ್ನು ನಾಲ್ಕೈದು ತಾಸು ಕಾಯ್ದು ಕುಳ್ಳಿರಿಸಿದ್ದೇಕೆ ಎಂದಾಗಲೂ ಗಂಗಪ್ಪ ‘ವೈಯಕ್ತಿಕ ವಿಷಯವನ್ನು ನಿಮ್ಮ ಮುಂದೆ ಹೇಳುವ ಅಗತ್ಯವಿಲ್ಲ’ ಎಂದರು.

ಶಿಷ್ಟಾಚಾರ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ, ಶಿಷ್ಟಾಚಾರದಂತೆ ಮಾ 13ರಂದು ಶಾಸಕರ ಕಚೇರಿಯಲ್ಲಿ ಪುರಸಭೆ ಉಪಾಧ್ಯಕ್ಷೆ ಜ್ಯೋತಿ ಸೇಬಿನಕಟ್ಟಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯ ನಾಯಕ, ಪುರಸಭೆ ಸದಸ್ಯರಾದ ಕಲ್ಲೇಶ ತಾಳದ, ನಾಗರಾಜ ಮೇಲಿನಮನಿ, ಅಮೀನುದ್ದೀನ್‌ ಮುಲ್ಲಾ ಇದ್ದರು.

*

ನಿಯಮಗಳ ಪ್ರಕಾರ ಕೆಲಸ ಮಾಡುತ್ತಿದ್ದೇನೆ. ಯಾರಾದರೂ ಒತ್ತಡ ಹೇರಿದರೆ ರಜೆ ಹಾಕಿ ಹೋಗುತ್ತೇನೆ.

-ಎಂ.ಗಂಗಪ್ಪ, ತಹಶೀಲ್ದಾರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry