ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ– ಜೆಡಿಎಸ್‌ನ ಮೂವರಿಗೆ ಗಾಯ

7
ವಾಟ್ಸ್ಆ್ಯಪ್‌ನಲ್ಲಿ ನಿಂದನೆ ವಿಚಾರಕ್ಕೆ ಸಂಬಂಧಿಸಿ ಕಲಹ

ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ– ಜೆಡಿಎಸ್‌ನ ಮೂವರಿಗೆ ಗಾಯ

Published:
Updated:
ಕಾಂಗ್ರೆಸ್‌ ಕಾರ್ಯಕರ್ತರಿಂದ ಹಲ್ಲೆ– ಜೆಡಿಎಸ್‌ನ ಮೂವರಿಗೆ ಗಾಯ

ಮಾಗಡಿ: ವಾಟ್ಸ್ ಆ್ಯಪ್‌ನಲ್ಲಿ ನಿಂದನೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್ ಮುಖಂಡರ ಮೇಲೆ ಮಂಗಳವಾರ ರಾತ್ರಿ ಹೊಸಪೇಟೆಯಲ್ಲಿ ಹಲ್ಲೆ ನಡೆಸಿದ್ದು, ಪುರಸಭೆ ಸದಸ್ಯ ಕೆ.ವಿ.ಬಾಲರಘು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಡಿಎಸ್‌ ಮುಖಂಡರಾದ ಹೊಸಹಳ್ಳಿ ಮುನಿರಾಜು ಮತ್ತು ಜವರೇಗೌಡ ಅವರಿಗೂ ಗಾಯಗಳಾಗಿವೆ.

ಎರಡು ದಿನಗಳ ಹಿಂದೆ ಇದೇ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮುಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವಿಚಾರವಾಗಿ ಮತ್ತೆ ಗಲಾಟೆ ಸಂಭವಿಸಿ ಜೆಡಿಎಸ್‌ ಪಕ್ಷದ ಮೂವರು ಮುಖಂಡರ ಮೇಲೆ ಹಲ್ಲೆ ನಡೆದಿದೆ.

ನಾಟಕ ವೀಕ್ಷಿಸಿದ ಬಳಿಕ ಹೊಸಪೇಟೆ ಜವರಪ್ಪ ಗಲ್ಲಿಯಲ್ಲಿನ ಮನೆಗೆ ಮಂಗಳವಾರ ರಾತ್ರಿ 1.30ರ ಸಮಯದಲ್ಲಿ ಜೆಡಿಎಸ್‌ ಮುಖಂಡ

ರಾದ ಜವರೇಗೌಡ ಮತ್ತು ಪುರಸಭೆ ಸದಸ್ಯ ಕೆ.ವಿ.ಬಾಲರಘು, ಹೊಸಹಳ್ಳಿ ಮುನಿರಾಜು, ಅಕ್ಷಯ್ ಹಿಂತಿರುಗುತ್ತಿದ್ದರು. ಅವರ ಜತೆ ಕಾಂಗ್ರೆಸ್‌ ಮುಖಂಡ ಎಚ್‌.ಜೆ.ಪುರುಷೋತ್ತಮ್, ಬಿ.ಪಿ.ಮಂಜುನಾಥ, ಬೈಚಾಪುರದ ಕಿರಣ್‌, ಡೂಮ್‌ ಲೈಟ್‌ ನರಸಿಂಹಮೂರ್ತಿ ವಾಗ್ವಾದಕ್ಕೆ ಇಳಿದರು. ಬಳಿಕ ಕೆ.ವಿ.ಬಾಲುರಘು ಮೇಲೆ ಹಲ್ಲೆ ನಡೆಯಿತು. ಮುನಿರಾಜು ಹಾಗೂ ಜವರೇಗೌಡ ಹೊಡೆದಾಟದಲ್ಲಿ ಗಾಯಗೊಂಡಿದ್ದು, ಬೆಂಗಳೂರಿನ ಕೆಂಪೇ

ಗೌಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುರಸಭೆ ಸದಸ್ಯ ಕೆ.ವಿ.ಬಾಲುರಘುರವರಿಗೆ ಮುಖಕ್ಕೆ ಮತ್ತು ತಲೆಗೆ ತೀವ್ರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಲ್ಲೆವಿಷಯ ತಿಳಿದ ಕೂಡಲೇ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಸ್ಥಳಕ್ಕೆ ತೆರಳಿದರು. ಆಗಲೂ ಗಲಾಟೆ ನಡೆಯುತ್ತಿತ್ತು. ಕೂಡಲೇ ಹಲ್ಲೆಗೊಳಗಾದ ಜೆಡಿಎಸ್ ಮುಖಂಡರನ್ನು ಮಾಗಡಿ ಪೊಲೀಸ್‌ ಠಾಣೆಗೆ ಕರೆ ತಂದು ಕಾಂಗ್ರೆಸ್ ಮುಖಂಡರ ವಿರುದ್ಧ ದೂರು ನೀಡಿ ಗಾಯಾಳುಗಳನ್ನು ಮಾಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಿದರು.

ಹಲ್ಲೆ ಸಂಬಂಧ ಕಾಂಗ್ರೆಸ್‌ ಮುಖಂಡರಾದ ಎಚ್‌.ಜೆ. ಪುರುಷೋತ್ತಮ್‌, ಮಂಜುನಾಥ್, ಬೈಚಾಪುರ ಕಿರಣ್, ಡೂಮ್‌ ಲೈಟ್ ನರಸಿಂಹ

ಮೂರ್ತಿ, ಜ್ಯೋತಿನಗರದ ಆನಂದ್ ವಿರುದ್ಧ ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಭಟನೆ: ಕೆ.ವಿ.ಬಾಲರಘು ಅವರ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ಆರ್ಯ ವೈಶ್ಯ ಮಂಡಳಿಯ ಸದಸ್ಯರು ಬೆಳಿಗ್ಗೆ ಅಂಗಡಿಗಳನ್ನು ಮುಚ್ಚಿ ಮಾಗಡಿ ಪೊಲೀಸ್ ಠಾಣೆಯಿಂದ ವಾಸವಿ ದೇವಸ್ಥಾನದ ವರೆಗೂ ಮೌನ ಪ್ರತಿಭಟನೆ ನಡೆಸಿದರು.

ಮಂಡಳಿ ಅಧ್ಯಕ್ಷ ಎಸ್‌.ಜಿ, ರಮೇಶ್ ಗುಪ್ತ ಮಾತನಾಡಿ, ‘ನಾವು ಯಾವುದೇ ಪಕ್ಷದ ಪರವಾಗಿ ನಿಲ್ಲುವುದಿಲ್ಲ. ನಮ್ಮ ಸಮಾಜದ ಮುಖಂಡರ ಮೇಲೆ ಹಲ್ಲೆಯಾಗಿದ್ದು ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಪ್ರಕರಣಗಳು ಮತ್ತೆ ಮರುಕಳಿಸದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಠಾಣೆ ಮುಂದೆ ಪ್ರತಿಭಟನೆ

ಜೆಡಿಎಸ್‌ ಕಾರ್ಯಕರ್ತರು ಹಾಗೂ ಪುರಸಭೆ ಸದಸ್ಯರೊಬ್ಬರ ಮೇಲೆ ತೀವ್ರ ಹಲ್ಲೆ ನಡೆಸಿರುವ ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವಂತೆ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜುನಾಥ ಆಗ್ರಹಿಸಿದರು.

ಬುಧವಾರ ಮಾಗಡಿ ಪೊಲೀಸು ಠಾಣೆಯ ಮುಂದೆ ಧರಣಿ ನಡೆಸುತ್ತಿದ್ದ ಜೆ.ಡಿ.ಎಸ್‌.ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹಲ್ಲೆ ಸುದ್ದಿ ತಿಳಿದ ತಕ್ಷಣ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಪೂಜಾರಿ ಪಾಳ್ಯದ ಕೃಷ್ಣಮೂರ್ತಿ ಮತ್ತು ಜೆಡಿಎಸ್‌ ಕಾರ್ಯಕರ್ತರು ಮಂಗಳವಾರ ರಾತ್ರಿ 2 ಗಂಟೆಯಿಂದಲೇ ಮಾಗಡಿ ಪೊಲೀಸ್ ಠಾಣೆ ಬಳಿ ಸೇರಿದ್ದರು.

ಬೆಳಿಗ್ಗೆಯಿಂದ ಇನ್ನೂ ಹೆಚ್ಚಿನ ಕಾರ್ಯಕರ್ತರು ಪೊಲೀಸ್ ಠಾಣೆಯ ಬಳಿ ಜಮಾಯಿಸಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೂ ಠಾಣೆ ಮುಂಭಾಗದಲ್ಲಿರುವ ಭೂ ಬ್ಯಾಂಕ್ ಮುಂದೆ ಸೇರಿದರು. ಪರಸ್ಪರ ಜೈಕಾರ, ವಿರೋಧಿಗಳಿಗೆ ಧಿಕ್ಕಾರ ಕೂಗಿದರು.

ಟಿಎಪಿಎಂಎಸ್‌ ಕಡೆಯಿಂದ ಏಕಾಏಕಿ ಕಲ್ಲು ತೂರಾಟ ಪ್ರಾರಂಭವಾಯಿತು. ಭಾರಿ ಗಾತ್ರದ ಕಲ್ಲೊಂದು ಡಿವೈಎಸ್‌ಪಿ ಪುರುಷೋತ್ತಮ್‌ ಪಕ್ಕದಲ್ಲೆ ಬಿದ್ದು, ಪ್ರಾಣಾಪಾಯದಿಂದ ಪಾರಾದರು.

ಮೂವರು ಪೊಲೀಸರಿಗೆ ಕಲ್ಲು ತಗುಲಿತು. ಠಾಣೆಯ ಆವರಣದ ಒಳಗಿದ್ದವರೂ ಕಲ್ಲು ತೂರಲಾರಂಬಿಸಿದರು.

ಡಿವೈಎಸ್‌ಪಿ ಪುರುಷೋತ್ತಮ್‌, ಸರ್ಕಲ್‌ ಇನ್‌ಪೆಕ್ಟರ್‌ ಶಭರೀಶ್‌ ಸಮಯ ಪ್ರಜ್ಞೆಯಿಂದ ಎರಡು ಪಕ್ಷಗಳ ಕಾರ್ಯಕರ್ತರನ್ನು ಹಿಂದಕ್ಕೆ ತಳ್ಳಿದರು. ಕೂಡಲೇ ಪೊಲೀಸ್‌ ಸಿಬ್ಬಂದಿ ಭೂ ಬ್ಯಾಂಕ್ ಮುಂಭಾಗದಲ್ಲಿ ಸೇರಿದ್ದವರನ್ನು ಓಡಿಸಿದರು.

ಸ್ಥಳಕ್ಕೆ ಎಸ್.ಪಿ.ರಮೇಶ್ ಭೇಟಿ ನೀಡಿ 24 ಗಂಟೆಯೊಳಗೆ ಹಲ್ಲೆ ಮಾಡಿದರನ್ನು ಬಂಧಿಸುವುದಾಗಿ ಭರವಸೆ ನೀಡಿದರು. ಬಳಿಕ ಎ.ಮಂಜುನಾಥ ಮತ್ತು ಜೆಡಿಎಸ್‌ ಕಾರ್ಯಕರ್ತರು ಠಾಣೆಯಿಂದ ಹೊರ ನಡೆದರು.

ಎಸ್ಪಿ ರಮೇಶ್ ಮಾತನಾಡಿ, ಮಂಗಳವಾರ ರಾತ್ರಿ ಪಟ್ಟಣದ ಹೊಸಪೇಟೆ ರಸ್ತೆಯಲ್ಲಿ ಬಾಲರಘು ಹಾಗೂ ಇತರರ ಮೇಲೆ ಎಚ್‌.ಜಿ,ಪುರಷೋತ್ತಮ್, ಆನಂದ್, ಮಂಜುನಾಥ್, ನರಸಿಂಹಮೂರ್ತಿ ಹಾಗೂ ಕಿರಣ್ ಎಂಬುವವರು ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಹಾಕುವ ವಿಷಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ರಾತ್ರಿ ದೂರು ನೀಡಿದ್ದಾರೆ. ರಾತ್ರಿ 3.30 ರ ಸಮಯದಲ್ಲಿಯೇ ದೂರು ದಾಖಲಿಸಲಾಗಿದೆ ಎಂದರು.

ಫೇಸ್‌ಬುಕ್‌ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಕೆ.ವಿ.ಬಾಲರಘು, ಹೊಸಹಳ್ಳಿ ಮುನಿರಾಜು ಹಾಗೂ ಇತರರ ಮೇಲೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಹಲ್ಲೆ ಮಾಡಿದವರನ್ನು ಗಡಿಪಾರು ಮಾಡಲು ಎ.ಮಂಜುನಾಥ ಒತ್ತಾಯಿಸಿದ್ದಾರೆ. ಕೆಲವರ ಚಿತಾವಣೆಯಿಂದ ಮಾಗಡಿ ಕ್ಷೇತ್ರದಲ್ಲಿ ಗಲಾಟೆ ನಡೆಯಲು ಕಾರಣವಾಗಿದೆ ಎಂದರು.

ಯಾರಿಗಾದರೂ ಅನ್ಯಾಯವಾದರೆ ಠಾಣೆಗೆ ಹೋಗಬೇಕು. ಮನೆಯ ಬಳಿ ಹೋಗಿ ದೌರ್ಜನ್ಯ ನಡೆಸುವುದು ಸರಿಯಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್.ಅಶೋಕ್ ತಿಳಿಸಿದರು.

4 ಪ್ರಕರಣ ದಾಖಲು

ಪೊಲೀಸು ಠಾಣೆಯ ಮೇಲೆ ಕಲ್ಲುತೂರಿದ ಘಟನೆಯ ವಿಚಾರವಾಗಿ ಪ್ರತ್ಯೇಕವಾಗಿ ಕಾಂಗ್ರೆಸ್‌ ಪಕ್ಷದ 70ಕ್ಕಿಂತ ಹೆಚ್ಚು ಮತ್ತು ಜೆಡಿಎಸ್‌ ಪಕ್ಷದ 70ಕ್ಕಿಂತ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ.

ಫೇಸ್‌ ಬುಕ್‌ನಲ್ಲಿ ನಿಂದನೀಯ ಸಂದೇಶ ರವಾನಿಸಿದ್ದರಿಂದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿದ ಮತ್ತು ಠಾಣೆಯ ಮೇಲೆ ಕಲ್ಲು ತೂರಿದ ಘಟನೆ ಸೇರಿದಂತೆ ಪ್ರತ್ಯೇಕವಾಗಿ ಒಟ್ಟು4 ಪ್ರಕರಣಗಳು ದಾಖಲಾಗಿವೆ.

ಕಾಂಗ್ರೆಸ್‌ ಪಕ್ಷದ ಜಯಮ್ಮ ಲೇಟ್‌ ತಿರುಪತಿ ಮತ್ತು ಜ್ಯೋತಿ ನಗರದ ಆನಂದ್‌ ಕುಮಾರ್‌ ನೀಡಿದ ದೂರಿನ ಅನ್ವಯ ಜೆಡಿಎಸ್‌ ಪಕ್ಷದ 11 ಜನರ ಮೇಲೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್‌ ಮುಖಂಡರ ಹಲ್ಲೆಯಿಂದ ಗಾಯಗೊಂಡಿರುವ ಪುರಸಭೆ ಸದಸ್ಯ ಕೆ.ವಿ.ಬಾಲರಘು ನೀಡಿದ ದೂರಿನ ಅನ್ವಯ 5 ಜನ ಕಾಂಗ್ರೆಸ್‌ ಮುಖಂಡರ ಮೇಲೆ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry