‘ಗೋಪಾಲಗೌಡರ ಚಿಂತನೆ, ಹೋರಾಟ ಮಾದರಿ’

7
ತೀರ್ಥಹಳ್ಳಿ: ಶಾಂತವೇರಿಯಲ್ಲಿ ಹಿರಿಯ ಸಮಾಜವಾದಿಗಳಿಗೆ ಸನ್ಮಾನ

‘ಗೋಪಾಲಗೌಡರ ಚಿಂತನೆ, ಹೋರಾಟ ಮಾದರಿ’

Published:
Updated:
‘ಗೋಪಾಲಗೌಡರ ಚಿಂತನೆ, ಹೋರಾಟ ಮಾದರಿ’

ತೀರ್ಥಹಳ್ಳಿ: ಜಾತಿ–ಧರ್ಮ, ಬಡವ–ಶ್ರೀಮಂತ ಎಂದು ಒಡೆದು ಆಳುವ ನೀತಿಯ ಈ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡ ಅವರ ಆದರ್ಶಗಳು ಹೆಚ್ಚು ಪ್ರಸ್ತುತವಾಗುತ್ತವೆ ಎಂದು ಜೆಡಿಎಸ್‌ ಮುಖಂಡ ಆರ್‌.ಎಂ. ಮಂಜುನಾಥಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಶಾಂತವೇರಿ ಗ್ರಾಮದಲ್ಲಿ ಬುಧವಾರ ಜೆಡಿಎಸ್‌ ಹಮ್ಮಿಕೊಂಡಿದ್ದ ಸಮಾಜವಾದಿ ಹೋರಾಟಗಾರ ಶಾಂತವೇರಿ ಗೋಪಾಲಗೌಡ ಅವರ 95ನೇ ಜನ್ಮ ದಿನಾಚರಣೆ, ಹಿರಿಯ ಸಮಜವಾದಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಗೇಣಿದಾರರ ಸಂಕಟ ಬಹುತೇಕ ಇಂದಿನ ಪೀಳಿಗೆಯ ಜನರಿಗೆ ಮರೆತುಹೋಗಿದೆ. ಶೂನ್ಯದಿಂದ ಗೇಣಿದಾರರ ಪರ ಹೋರಾಟ ಆರಂಭಿಸಿದ ಗೋಪಾಲಗೌಡ ಅವರ ಚಿಂತನೆ ಎಂದಿಗೂ ಅನನ್ಯ. ಜನರ ಮನಸ್ಸಿನಲ್ಲಿ ಯಾವತ್ತೂ ಸ್ಥಾನ ಪಡೆದಿರುವ ಗೋಪಾಲಗೌಡ ಅವರ ಚಿಂತನೆ, ಹೋರಾಟವನ್ನು ಸಾಯಲು ಬಿಡಬಾರದು ಎಂದು ಹೇಳಿದರು.

ಗೋಪಾಲಗೌಡ ಅವರ ಹೆಸರನ್ನು ಹೇಳಿಕೊಂಡು ಅನೇಕರು ಶಾಸಕರಾದರು, ಮಂತ್ರಿಗಳಾದರು. ಆದರೆ, ಗೋಪಾಲಗೌಡ ಅವರಿಗೆ

ಜನ್ಮ ನೀಡಿದ ಶಾಂತವೇರಿಯಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸುವ ಯಾವ ಕೆಲಸಗಳೂ ಆಗಲಿಲ್ಲ. ಅವರಿಗೆ ಜನ್ಮ ನೀಡಿದ ಈ ಮಣ್ಣಿನಲ್ಲಿ ಅವರ ಹೆಸರಿನಲ್ಲಿ ಗ್ರಂಥಾಲಯ, ಅಪೂರ್ಣಗೊಂಡ ಕಟ್ಟಡ ಕಾಮಗಾರಿಯನ್ನು ಪೂರ್ಣಗೊಳಿಸುವ ಕೆಲಸವನ್ನು ಮಾಡಲಾಗುವುದು. ಸರ್ಕಾರ ನೀಡುವ ನೆರವಿಗಾಗಿ ಕಾಯದೇ ಎಲ್ಲ ದಾನಿಗಳ ನೆರವು ಪಡೆದು ಕಾಮಗಾರಿ ಪೂರ್ಣ ಗೊಳಿಸಲಾಗುವುದು ಎಂದು ಮಂಜುನಾಥಗೌಡ ಭರವಸೆ

ನೀಡಿದರು.

‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಅಧ್ಯಯನ ಕೇಂದ್ರದಂತೆ ಗೋಪಾಲಗೌಡ ಅಧ್ಯಯನ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದನ್ನು ಕೇವಲ ರಾಜಕೀಯ ಉದ್ದೇಶದ ಕಾರಣಕ್ಕೆ ಹೇಳುತ್ತಿಲ್ಲ’ ಎಂದರು.

‘ಗೋಪಾಲ ಗೌಡ ಅವರ ಶಾಂತವೇರಿ ಇಂದಿಗೂ ಕುಗ್ರಾಮ ವಾಗಿದೆ. ಸರಿಯಾದ ರಸ್ತೆಯೂ ಇಲ್ಲ. ಇಂಥ ಸ್ಥಿತಿಗೆ ತಂದು ನಿಲ್ಲಿಸಿದವರು ಗೋಪಾಲಗೌಡ ಅವರ ಪುತ್ಥಳಿಗೆ ಹಾರಹಾಕಿ, ಕೈತೊಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಹಾರ ಹಾಕಲು ಯಾವ ನೈತಿಕತೆ ಇದೆ’ ಎಂದು ಕಿಮ್ಮನೆ ಹೆಸರನ್ನು ಹೇಳದೇ ಕುಟುಕಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಮಾಜವಾದಿ ಎ.ಪಿ.ರಾಮಪ್ಪ, ‘ಗೋಪಾಲಗೌಡ ಮುತ್ಸದ್ದಿ ರಾಜಕಾರಣಿ. ಬಡವರ ಬದುಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಗೋಪಾಲಗೌಡ ಅವರ ಹೆಸರನ್ನು ಅನೇಕರು ತಮಗೆ ಬೇಕಾದಂತೆ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದಾರೆ’ ಎಂದರು.

ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಪದ್ಮನಾಭ ಭಟ್‌ ಅವರು ನೀಡಿದ ₹ 5 ಲಕ್ಷ ಹಣ ಬಿಟ್ಟರೆ ಯಾರಿಂದಲೂ ನೆರವು ಸಿಕ್ಕಿಲ್ಲ. ಆ ಹಣವನ್ನೂ ಸರಿಯಾಗಿ ಬಳಕೆ ಮಾಡಿಕೊಳ್ಳಲು ಆಗಿಲ್ಲ ಎಂದು ಎ.ಪಿ.ರಾಮಪ್ಪ ವಿಷಾದಿಸಿದರು.

ಸಭೆಯಲ್ಲಿ ತೀರ್ಥಹಳ್ಳಿ ಜೆಡಿಎಸ್‌ ಅಧ್ಯಕ್ಷ ಆರ್‌.ಮದನ್‌, ಕಡೇಗದ್ದೆ ಕೃಷ್ಣಮೂರ್ತಿ, ನಾಬಳ ಗುಂಡಪ್ಪ ಹೆಗ್ಡೆ ಮಾತನಾಡಿದರು.

ಗೋಪಾಲಗೌಡರ ಒಡನಾಡಿಗಳಾದ ಎ.ಪಿ.ರಾಮಪ್ಪ, ಶಾಂತವೇರಿಯ ಹನುಮಣ್ಣ, ನೀಲಣ್ಣ, ಈಶ್ವರ ನಾಯ್ಕ್, ನೊಣಬೂರಿನ ಪರಮೇಶ್ವರ ಭಟ್‌, ಹೇಕಪ್ಪ ಕೆರೆಕೋಡಿ, ಪುಟ್ಟಪ್ಪಗೌಡ ವರ್ತೇಕೇರಿ, ರಂಗಪ್ಪಗೌಡ ಮಾದನಕೇವಿ, ಶಂಕಪ್ಪಗೌಡ ಕೋಲಿಗೆ, ಗೋಪಾಲ ಕೋಣಂದೂರು, ನಾಬಳ ಗುಂಡಪ್ಪ ಹೆಗ್ಡೆ, ಎಸ್‌.ಟಿ.ಶಂಕರಪ್ಪಗೌಡ, ಶೇಖ್‌ ಹಸನ್‌ ಸಾಬ್‌, ಶೇಷಪ್ಪಗೌಡ ವರ್ತೆಕೇರಿ, ಯಲ್ಲಪ್ಪ ವಿರಕ್ತಮಠ, ಭೀಮಪ್ಪ ಕೆರೆಕೋಡಿ, ಪಟೇಲ್‌ ರಾಮನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರೇಮ್‌ ಸ್ವಾಗತಿಸಿದರು, ದರಲಗೋಡು ಶ್ರೀನಾಥ್‌ ಜೋಯ್ಸ್‌ ಕಾರ್ಯಕ್ರಮ ನಿರೂಪಿಸಿದರು.

‘ಕಿಮ್ಮನೆ ಚಿಲ್ಲರೆ ರಾಜಕಾರಣಿ’

‘ಗೋಪಾಲಗೌಡರ ಆದರ್ಶಗಳನ್ನು ಹೇಳುವ ಕಿಮ್ಮನೆ ಬಡವರಿಗಾಗಿ ಕ್ಷೇತ್ರದಲ್ಲಿ ಯಾವ ಕೆಲಸವನ್ನೂ ಮಾಡಿಲ್ಲ. ಬಗರ್‌ಹುಕುಂ ಭೂಮಿ ನೀಡುವ ಇಚ್ಛಾಶಕ್ತಿ ಅವರಿಗಿಲ್ಲ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಅಪಪ್ರಚಾರ ಮಾಡುವ ಚಿಲ್ಲರೆ ರಾಜಕಾರಣಿ ಅವರು. ಅವರು ಮಂತ್ರಿಯಾಗಿದ್ದಾಗ ಏನೇನಾಯಿತು ಎಂಬ ಬಗ್ಗೆ ಗೊತ್ತಿದೆ. ಎಲ್ಲವನ್ನೂ ಸಂದರ್ಭ ಬಂದಾಗ ಹೇಳುತ್ತೇನೆ. ಅವರ ಬಣ್ಣ ಬಯಲು ಮಾಡುತ್ತೇನೆ’ ಎಂದು ಮಂಜುನಾಥಗೌಡ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry