ಕೊಡಗಿನಲ್ಲಿ ಮತ್ತೆ ಮೂರು ಕಾಡಾನೆಗಳ ಸಾವು

6

ಕೊಡಗಿನಲ್ಲಿ ಮತ್ತೆ ಮೂರು ಕಾಡಾನೆಗಳ ಸಾವು

Published:
Updated:
ಕೊಡಗಿನಲ್ಲಿ ಮತ್ತೆ ಮೂರು ಕಾಡಾನೆಗಳ ಸಾವು

ಗೋಣಿಕೊಪ್ಪಲು (ಕೊಡಗು): ಶ್ರೀಮಂಗಲ ಸಮೀಪದ ನಾಲ್ಕೇರಿಯಲ್ಲಿ ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದಿದ್ದ ಮೂರು ಕಾಡಾನೆಗಳು ಸಾವಿಗೀಡಾಗಿರುವುದನ್ನು ಗುರುವಾರ ಗುರುತಿಸಲಾಗಿದೆ.

35 ವರ್ಷದ ಹೆಣ್ಣಾನೆ ತೋಟದಲ್ಲಿ ಮೃತಪಟ್ಟಿದ್ದರೆ, 5 ತಿಂಗಳ ಹೆಣ್ಣು ಮರಿಯಾನೆ ತಾಯಿಯ ಮಡಿಲಲ್ಲಿ ಬಿದ್ದು ಸಾವಿಗೀಡಾಗಿದೆ. 25 ವರ್ಷದ ಗಂಡಾನೆಯು ನೀರು ಕುಡಿಯಲು ಹೋಗಿ ಇಲ್ಲಿಂದ ಅರ್ಧ ಕಿ.ಮೀ ದೂರದ ತೋಟದ ಕೆರೆಗೆ ಬಿದ್ದು ಮೃತಪಟ್ಟಿದೆ.

ತಾಯಿ ಆನೆ ಹೊಟ್ಟೆಯ ಒಳಭಾಗದಲ್ಲಿ ಆದ ಗಾಯದಿಂದ ನಿತ್ರಾಣಗೊಂಡು ಸತ್ತಿರಬಹುದು. ತಾಯಿಯಾನೆ ಮರಿಯಾನೆ ಮೇಲೆ ಬಿದ್ದು ಅದೂ ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ. ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಮಜೀದ್ ಖಾನ್ ಆನೆಗಳ ಮರಣೊತ್ತರ ಪರೀಕ್ಷೆ ನಡೆಸಿದರು.

‘ಹೊರಭಾಗದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಮರಣೋತ್ತರ ಪರೀಕ್ಷೆಯ ವರದಿಯನ್ನು ಹೈದರಾಬಾದ್ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗುವುದು. ಮಾಹಿತಿ ಬಂದ ಬಳಿಕ ಸಾವಿಗೆ ಕಾರಣ ತಿಳಿದು ಬರಲಿದೆ’ ಎಂದು ತಿತಿಮತಿ ಎಸಿಎಫ್ ಶ್ರೀಪತಿ ತಿಳಿಸಿದ್ದಾರೆ. ನಾಗರಹೊಳೆ ಎಸಿಎಫ್ ಪೋಲ್ ಆಂಟೋನಿ, ಆರ್‌ಎಫ್‌ಒ ಅರವಿಂದ್ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಸಿದ್ದಾಪುರ ಸಮೀಪದ ತೋಟದಲ್ಲಿ ವಿದ್ಯುತ್‌ ತಂತಿಯ ಸ್ಪರ್ಶದಿಂದ ಒಂದೇ ದಿವಸ ನಾಲ್ಕು ಆನೆಗಳು ಸತ್ತಿದ್ದವು.

ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ರಕ್ಷಣೆ

ಕುಶಾಲನಗರ: ಸಮೀಪದ ರಂಗಸಮುದ್ರದ ಕಾಫಿ ತೋಟವೊಂದರ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದ್ದ ಕಾಡಾನೆಯನ್ನು ಅರಣ್ಯ ಇಲಾಖಾ ಸಿಬ್ಬಂದಿ ಗುರುವಾರ ರಕ್ಷಿಸುವಲ್ಲಿ ಯಶಸ್ವಿಯಾದರು. 

ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಿಂದ ಬುಧವಾರ ಸಂಜೆ ಗ್ರಾಮದ ಪರ್ಲಕೋಟಿ ಜಯಪ್ರಕಾಶ್ ಅವರ ತೋಟಕ್ಕೆ ಕಾಡಾನೆಗಳು ದಾಳಿ ಇಟ್ಟಿದ್ದವು. ಈ ವೇಳೆ ಗುಂಪಿನ ಸುಮಾರು 35 ವರ್ಷದ ಹೆಣ್ಣಾನೆ ತೋಟದಲ್ಲಿದ್ದ ಕೆರೆಯ ಕೆಸರಿನಲ್ಲಿ ಸಿಲುಕಿಕೊಂಡಿದೆ. ಜಯಪ್ರಕಾಶ್ ಬೆಳಿಗ್ಗೆ ತೋಟಕ್ಕೆ ತೆರಳಿದಾಗ ಆನೆ ಕೆಸರಿನಲ್ಲಿ ಸಿಲುಕಿರುವುದು ಗೊತ್ತಾಗಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ದುಬಾರೆಯಿಂದ ಸಾಕಾನೆಗಳನ್ನು ಕರೆಸಿ ಅವುಗಳ ಸಹಾಯದಿಂದ ಕಾಡಾನೆಯನ್ನು ಮೇಲಕ್ಕೆ ಎತ್ತಲಾಯಿತು. ಕೆಸರಿನಿಂದ ಆನೆ ಹೊರಗೆ ಬಂದರೂ ಎದ್ದು ನಿಲ್ಲಲು ಸಾಧ್ಯವಾಗಿಲ್ಲ. ಬಳಿಕ ಪಶುವೈದ್ಯರನ್ನು ಸ್ಥಳಕ್ಕೆ ಕರೆಸಿ ಚಿಕಿತ್ಸೆ ಕೊಡಿಸಲಾಯಿತು.

ಡಿಎಫ್ಒ ಮಂಜುನಾಥ್, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಡಿಆರ್‌ಎಫ್‌ಒ ರಂಜನ್, ದೇವಿಪ್ರಸಾದ್, ದುಬಾರೆ ಸಾಕಾನೆ ಶಿಬಿರದ ಮಾವುತರು, ಸಿಬ್ಬಂದಿ ಹಾಗೂ ರಂಗಸಮುದ್ರ ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry