ಮಂಜು ಪುತ್ರ ಈಗ ‘ಪಡ್ಡೆಹುಲಿ’

ಶನಿವಾರ, ಮಾರ್ಚ್ 23, 2019
28 °C

ಮಂಜು ಪುತ್ರ ಈಗ ‘ಪಡ್ಡೆಹುಲಿ’

Published:
Updated:
ಮಂಜು ಪುತ್ರ ಈಗ ‘ಪಡ್ಡೆಹುಲಿ’

ನಿರ್ಮಾಪಕ ಕೆ. ಮಂಜು ಫುಲ್‌ ಖುಷ್‌ ಆಗಿದ್ದರು. ‍ಸಭಾಂಗಣದ ಎಲ್ಲೆಡೆ ಲಗುಬಗೆಯಿಂದ ಓಡಾಡುತ್ತ, ಎಲ್ಲರನ್ನೂ ಮಾತನಾಡಿಸುತ್ತ ಇದ್ದರು. ನಡುನಡುವೆ ತಮ್ಮ ಗುರು ಡಾ. ವಿಷ್ಣುವರ್ಧನ್ ಅವರನ್ನು ನೆನಪಿಸಿಕೊಳ್ಳುತ್ತಿದ್ದರು... ಇದಕ್ಕೆ ಕಾರಣ ಇಷ್ಟು: ಅವರ ಪುತ್ರ ಶ್ರೇಯಸ್ ತಮ್ಮ ಮೊದಲ ಚಿತ್ರಕ್ಕೆ ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಬೆಂಗಳೂರಿನಲ್ಲಿ ಈಚೆಗೆ ನಡೆದಿದೆ.

ಚಿತ್ರದ ಬಗ್ಗೆ ಮಾಹಿತಿ ನೀಡಲು ಪತ್ರಿಕಾಗೋಷ್ಠಿ ಕರೆದಿದ್ದರು. ಅಂದಹಾಗೆ ಈ ಚಿತ್ರಕ್ಕೆ ಹಣ ಹೂಡಿರುವವರು ಮಂಜು ಅಲ್ಲ. ಇದನ್ನು ಎಂ. ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ.

ಹೊಸ ನಟನನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಿರುವ ಬಗ್ಗೆ ಗುರು ಹೇಳಿದ್ದು ಹೀಗೆ: ‘ಮಂಜಣ್ಣ ತಮ್ಮ ಮಗನನ್ನು ಕನ್ನಡ ಸಿನಿಮಾ ರಂಗಕ್ಕೆ ಒಬ್ಬ ನಾಯಕ ನಟನನ್ನಾಗಿ ಪರಿಚಯಿಸುವ ಅವಕಾಶವನ್ನು ನನಗೆ ಕೊಟ್ಟಿದ್ದಾರೆ. ದೊಡ್ಡ ನಟರನ್ನು ಹಾಕಿಕೊಂಡು ಸಿನಿಮಾ ಮಾಡುವುದು ಒಳ್ಳೆಯದು ಎಂಬ ಮಾತು ಸಿನಿಮಾ ಉದ್ಯಮದಲ್ಲಿ ಇದೆ. ಆದರೆ ಹೊಸ ಹುಡುಗರು ಅಂದರೆ ಬಿಳಿ ಹಾಳೆ ಇದ್ದಂತೆ, ಅದರಲ್ಲಿ ಯಾವ ಚಿತ್ರ ಬೇಕಿದ್ದರೂ ಬರೆಯಬಹುದು. ನಾವು ಈ ಹುಡುಗನಿಗೆ ಯಾವ ಇಮೇಜ್ ಬೇಕಿದ್ದರೂ ಕೊಡಬಹುದು’.

ಈ ಚಿತ್ರದ ಕೆಲಸ ಕಳೆದ ವರ್ಷದ ನವೆಂಬರ್ ಕೊನೆ ಭಾಗದಲ್ಲಿ ಆರಂಭವಾಯಿತಂತೆ. ಸಿನಿಮಾಕ್ಕಾಗಿ ಶ್ರೇಯಸ್ ಅವರು, ರಂಗಕರ್ಮಿ ಮಂಜುನಾಥ ಬಡಿಗೇರ ಅವರಲ್ಲಿ ತರಬೇತಿ ಪಡೆದಿದ್ದಾರಂತೆ. ಚಿತ್ರದ ಪ್ರೋಮೊಕ್ಕಾಗಿ ಬೆಂಕಿಯ ಜೊತೆ ಸರಸವಾಡುವ ದೃಶ್ಯವೊಂದರ ಚಿತ್ರೀಕರಣವನ್ನು ಶ್ರೇಯಸ್ ಈಗಾಗಲೇ ಪೂರ್ಣಗೊಳಿಸಿದ್ದಾರೆ.

‘ಚಿತ್ರೀಕರಣವು ಮಾರ್ಚ್ 19ರಿಂದ ಆರಂಭವಾಗಲಿದೆ. ಚಿತ್ರದ ಕಥೆ ಚಿತ್ರದುರ್ಗದಲ್ಲಿ ಆರಂಭವಾಗುತ್ತದೆ. ಕಥಾನಾಯಕ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವ ಆಗಿರುತ್ತಾನೆ. ಇವತ್ತಿನ ಹುಡುಗ ಹುಡುಗಿಯರಿಗೆ ಇಷ್ಟವಾಗುವಂತೆ ಸಿನಿಮಾ ಮಾಡುತ್ತೇವೆ. ಈ ಚಿತ್ರವು ಈ ಕಾಲದ ಪ್ರೇಮಲೋಕವನ್ನು ಕಟ್ಟಿಕೊಡುತ್ತದೆ’ ಎಂದು ರವಿಚಂದ್ರನ್ ಅಭಿನಯದ ಆ ಕಾಲದ ‘ಪ್ರೇಮಲೋಕ’ ಚಿತ್ರವನ್ನು ನೆನಪಿಸಿಕೊಂಡು ಹೇಳಿದರು ಗುರು.

ಕಾಲೇಜುಗಳಿಗೆ ಭೇಟಿ ನೀಡಿ, ಹುಡುಗ ಹುಡುಗಿಯರ ಅಭಿರುಚಿ ಬಗ್ಗೆ ಅರಿತು ಹೊಸ ಬಗೆಯ ದೃಶ್ಯಗಳನ್ನು ಚಿತ್ರತಂಡ ಸಿದ್ಧಪಡಿಸುತ್ತಿದೆಯಂತೆ. ‘ನಿಮ್ಮ ಮಗನನ್ನು ಏಕೆ ಹೀರೊ ಮಾಡಬಾರದು ಎಂದು ನಿರ್ಮಾಪಕರೊಬ್ಬರು ನನ್ನ ತಂದೆ ಬಳಿ ಕೇಳಿದ್ದರು. ಆಗ ಅವರು ಮಗನನ್ನು ಏಕೆ ಹೀರೊ ಮಾಡಬೇಕು ಎಂಬ ಪ್ರಶ್ನೆ ಇಟ್ಟಿದ್ದರು. ಆಗ ನಾನು 90 ಕೆ.ಜಿ. ತೂಕ ಇದ್ದೆ. ನಂತರದ ದಿನಗಳಲ್ಲಿ ನನ್ನ ಆಹಾರ ಕ್ರಮದಲ್ಲಿ ಬದಲಾವಣೆ ತಂದುಕೊಂಡು, ಸ್ಲಿಮ್ ಆದೆ’ ಎಂದರು ಶ್ರೇಯಸ್.

‘ಪಡ್ಡೆಹುಲಿ’ ಚಿತ್ರದ ನಾಯಕಿಯಾಗಿ ನಿಶ್ಚಿಕಾ ಆಯ್ಕೆಯಾಗಿದ್ದಾರೆ. ಅವರದ್ದು ಕಾಲೇಜು ಹುಡುಗಿಯ ಪಾತ್ರ. ‘ನಂದು ಸ್ವೀಟ್ ಗರ್ಲ್ ಪಾತ್ರ ಇದರಲ್ಲಿ. ಚಿತ್ರರಂಗದಲ್ಲಿ ಬೆಳೆಯುತ್ತಿರುವ ಹುಡುಗಿಯೊಬ್ಬಳಿಗೆ ದೊಡ್ಡ ನಿರ್ದೇಶಕರು ದೊರೆತಿದ್ದಾರೆ’ ಎಂದು ಖುಷಿ ವ್ಯಕ್ತಪಡಿಸಿದರು ನಿಶ್ಚಿಕಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry