‘ಜ್ಯೋತಿ’ ಪಾತ್ರಕ್ಕೆ ಜೀವ ತುಂಬಿದ ದೀಪಿಕಾ

7

‘ಜ್ಯೋತಿ’ ಪಾತ್ರಕ್ಕೆ ಜೀವ ತುಂಬಿದ ದೀಪಿಕಾ

Published:
Updated:
‘ಜ್ಯೋತಿ’ ಪಾತ್ರಕ್ಕೆ ಜೀವ ತುಂಬಿದ ದೀಪಿಕಾ

ಕಾಲ್ಪನಿಕ ಕಥೆ ಆಧರಿಸಿದ ಯಾವುದೇ ಪಾತ್ರವನ್ನು ಹೇಗಾದರೂ ನಿಭಾಯಿಸಬಹುದು ಅನ್ನಿ. ಅಲ್ಲಿ ಆ ಪಾತ್ರದ ಸ್ವಭಾವಕ್ಕೆ ತಕ್ಕ ನಡೆ– ನುಡಿಯನ್ನು ಅಳವಡಿಸಿಕೊಂಡರೆ ಸಾಕು. ಆದರೆ, ‘ಜೀವನದಿ’ ಒಂದು ಸತ್ಯಕಥೆ. ಸರಸ್ವತಿ ನಟರಾಜನ್ ಅವರ 'ಜ್ಯೋತಿ' ಎಂಬ ಕಾದಂಬರಿ ಆಧರಿಸಿದೆ. ಕಥಾವಸ್ತು, ನಿರುಪಣೆ, ಸಂಭಾಷಣೆ, ಘಟನಾವಳಿಗಳು ಎಲ್ಲದರಲ್ಲೂ ನೈಜತೆ ಇದೆ. ಅದರಲ್ಲೂ ಕಾದಂಬರಿಯ ‘ಜ್ಯೋತಿ’ ಪಾತ್ರದ ಮಹಿಳೆ ನಮ್ಮ ನಡುವೆಯೇ ಇದ್ದಾರೆ. ಜೀವಂತ ಪಾತ್ರದಲ್ಲಿ ನಟಿಸುವುದು ನಿಜಕ್ಕೂ ಸವಾಲು. ಹಾಗೆಯೇ ಇದು ದಿನದಿನವೂ ನನಗೆ ಹೊಸ ಹೊಸ ಪಾಠಗಳನ್ನು ಕಲಿಸುತ್ತ ಸಾಗಿರುವುದೂ ಸತ್ಯ.

ನನ್ನ ಜೀವನದಲ್ಲಿ ಅಪರೂಪದ ಅವಕಾಶವೊಂದನ್ನು ತಂದುಕೊಟ್ಟಿದ್ದು ‘ಜೀವನದಿ’. ಇಂಥದ್ದೊಂದು ಪಾತ್ರ ಮಾಡಬೇಕು ಅಂತ ಬಹಳ ದಿನಗಳಿಂದ ಹಂಬಲಿಸುತ್ತಿದ್ದೆ. ಒಂದೇ ಧಾರಾವಾಹಿಯಲ್ಲಿ ಮೂರು ವಿಭಿನ್ನ ಶೇಡ್‌ಗಳನ್ನು ಹೊಂದಿರುವ ಪಾತ್ರವಿದು. ಮೂರು ವಿಭಿನ್ನ ಪಾತ್ರ ನಿರ್ವಹಿಸಿದಂತೆಯೇ ಸರಿ. ವಿದ್ಯಾರ್ಥಿನಿ, ಆಟೊ ಡ್ರೈವರ್‌, ವಕೀಲೆ… ಹೀಗೆ ಹಲವು ರೂಪಗಳಿಗೆ ಒಡ್ಡಿಕೊಳ್ಳುವಂತಹ ಪಾತ್ರವಿದು.

ಹೆಣ್ಣಿಗೆ ಸಹನೆಯೇ ಭೂಷಣ ಎನ್ನುವ ಮಾತಿದೆ. ‘ಜೀವನದಿ’ಯಲ್ಲಿ ಹೆಣ್ಣು ಆ ಸಹನೆಯನ್ನೆ ಅಸ್ತ್ರವಾಗಿ ಉಪಯೋಸಿಕೊಂಡು ತನ್ನೆಲ್ಲ ಕಷ್ಟಗಳನ್ನು ಮೆಟ್ಟಿ ನಿಂತು, ಗುರಿ ತಲುಪುತ್ತಾಳೆ. ಕಾಲೇಜು ಓದುವಾಗಲೇ ಮದುವೆಯಾಗುತ್ತದೆ. ಮಗು ಆಗುತ್ತದೆ. ಗಂಡ ಬಿಟ್ಟು ಹೋಗುತ್ತಾನೆ. ಜೀವನದ ಕರಾಳರೂಪ ವ್ಯಕ್ತವಾಗುವುದೇ ಆಗ. ಅಂತಹ ಸ್ಥಿತಿಯಲ್ಲಿ ಒಂಟಿ ಹೆಣ್ಣು ದಿಟ್ಟಹೆಜ್ಜೆಯನ್ನಿಟ್ಟು ತನ್ನ ಬದುಕನ್ನು ತಹಬದಿಗೆ ತರಲು ಹೇಗೆಲ್ಲಾ ಹೆಣಗುತ್ತಾಳೆ ಎನ್ನುವುದೇ ‘ಜೀವನದಿ’ಯ ತಿರುಳು.

ಈ ಧಾರಾವಾಹಿಗೆ ಸಹಿ ಹಾಕುವ ಮುನ್ನ ನಾನು ‘ಜ್ಯೋತಿ’ ಕಾದಂಬರಿಯನ್ನು ಓದಲು ಕುಳಿತೆ. ಕಾದಂಬರಿಯ ಪ್ರತಿ ಸಾಲೂ ನನ್ನೊಳಗೆ ಹೊಸ ಸಂಚಲ ಮೂಡಿಸುತ್ತ ಹೋಯಿತು. ಹೆಣ್ಣು, ಗಂಡಿನ ನಡುವಿನ ಭೇದಭಾವ, ವ್ಯತ್ಯಾಸಗಳನ್ನು ವೈಯಕ್ತಿಕ ಜೀವನದಲ್ಲಿ ನಾನು ಸಾಕಷ್ಟು ಕಡೆ ಕಂಡಿದ್ದೇನೆ. ಅದರ ವಿರುದ್ಧ ದನಿ ಎತ್ತಿದ್ದೇನೆ. ಹೀಗಾಗಿ, ಹೆಣ್ಣು– ಗಂಡಿನ ನಡುವೆ ಲಿಂಗ ಭೇದ ತಾಳುವವರ ಬಗ್ಗೆ ನನ್ನ ಮನದಲ್ಲಿ ತಿರಸ್ಕಾರವಿದೆ. ಅದನ್ನು ಹೊರಹಾಕಲು, ಸಮಾನತೆಗಾಗಿ ಸೆಣಸಾಡಲು ಇದೊಂದು ಅತ್ಯುತ್ತಮ ಅವಕಾಶ ಎಂದು ನನಗನಿಸಿತು.

ಬಿ. ಸುರೇಶ್‌ ಅವರ ನಿರ್ಮಾಣ ಎಂದ ಮೇಲೆ ಅದು ವಾಸ್ತವಕ್ಕೆ ಎಷ್ಟು ಹತ್ತಿರ ಎನ್ನುವುದನ್ನು ಊಹಿಸಬಹುದು. ಸಯ್ಯದ್‌ ಅಶ್ರಫ್‌ ನಿರ್ದೇಶನದಲ್ಲೂ ಅಷ್ಟೇ ಸತ್ವವಿದೆ. ಸೆಟ್‌ಗೆ ಬಂದ್ರೆ ನನ್ನ ಪುಟ್ಟ ಕುಟುಂಬದಿಂದ ಇನ್ನೊಂದು ದೊಡ್ಡ ಕುಟುಂಬದಕ್ಕೆ ಬಂದ ಹಾಗೆ ಅನಿಸುತ್ತದೆ.

ಇದೊಂದು ಆಕಸ್ಮಿಕ ಹೆಜ್ಜೆ

ನಿಜ ಹೇಳಬೇಕು ಅಂದ್ರೆ ನಾನು ಈ ಕ್ಷೇತ್ರಕ್ಕೆ ಬಂದಿದ್ದೇ ಆಕಸ್ಮಿಕ. ನಟ, ನಟಿಯರನ್ನು ಟಿ.ವಿ, ಸಿನಿಮಾ ಪರದೆ ಮೇಲೆ ನೋಡಿದ್ದಷ್ಟೇ ನನಗೆ ಗೊತ್ತು. ನಾನೂ ನಟಿಯಾಗಬೇಕು ಅಂತ ನನ್ನ ಮನಸ್ಸಿನ ಮೂಲೆಯಲ್ಲಿಯೂ ಇರಲಿಲ್ಲ. ಕೋಲಾರ ಜಿಲ್ಲೆಯ ಮಾಲೂರು ನಮ್ಮೂರು. ಆರಂಭಿಕ ಶಿಕ್ಷಣ ಆಗಿದ್ದು ಅಲ್ಲಿಯೇ. ಎಂಜಿನಿಯರಿಂಗ್ ಓದಲು ಬೆಂಗಳೂರು ಸೇರಿದೆ. ಇಲ್ಲೇ ಎಂ.ಟೆಕ್ ಸಹ ಮಾಡಿದೆ. ಮುಂದೆ ಅಧ್ಯಾಪಕಿಯಾಗುವ ಕನಸಿತ್ತು.

ಎಂ.ಟೆಕ್ ಇನ್ನೂ ಓದುತ್ತಿರುವಾಗಲೇ ಗೆಳತಿಯೊಬ್ಬಳು ಯಾವುದೋ ಧಾರಾವಾಹಿಗೆ ಆಡಿಷನ್‌ ಕರೆದಿದ್ದಾರೆ. ನಿನ್ನ ಫೋಟೊ ಕಳಿಸು ಅಂತ ಹೇಳಿದಳು. ಏನೊ ನೋಡೋಣ ಅಂತ ಫೋಟೊ ಕಳಿಸಿದೆ. ಕೂಡಲೇ ಜೀ ಕನ್ನಡ ವಾಹಿನಿಯ 'ಜೊತೆ ಜೊತೆಯಲಿ' ಧಾರಾವಾಹಿಯ ತಂಡದಿಂದ ಆಡಿಶನ್‌ನಲ್ಲಿ ಭಾಗಿಯಾಗುವಂತೆ ಕರೆ ಬಂತು. ಏನೊ ಭಯ, ಆತಂಕ, ಅನುಮಾನದ ನಡುವೆಯೇ ಆಡಿಶನ್‌ಗೆ ಹೋದೆ. ನಾಯಕಿಯ ತಂಗಿಯ ಪಾತ್ರಕ್ಕೆ ಮೊದಲ ಪ್ರಯತ್ನದಲ್ಲೇ ಆಯ್ಕೆಯಾದೆ.

ಅಮ್ಮ, ಅಣ್ಣ ತುಂಬಾ ಖುಷಿಯಾದ್ರು. ಆದ್ರೆ ಅಪ್ಪನ ಮುಖದ ಮೇಲೆ ಒಂದು ರೀತಿಯ ಗೊಂದಲ ಎದ್ದು ಕಾಣುತ್ತಿತ್ತು. ಬೇಡ ಎನ್ನಲೂ ಆಗದೇ, ಹೋಗು ಎನ್ನಲೂ ಆಗದೇ ಒದ್ದಾಡ್ತಾ ಇದ್ದಾರೆ ಅಂತ ನನಗೆ ಗೊತ್ತಾಯ್ತು. ಕೆಲವೇ ದಿನ… ಆಮೇಲೆ ಅವರಿಗೂ ನನ್ನ ನಿರ್ಧಾರದ ಬಗ್ಗೆ ಮೆಚ್ಚುಗೆಯಾಯಿತು.

ನಂತರ ಕಲರ್ಸ್ ಕನ್ನಡ ಚಾನೆಲ್‌ನಲ್ಲಿ 'ಚರಣದಾಸಿ'ಯಲ್ಲಿ ಅವಕಾಶ ಬಂತು. ಅದಾದ ಮೇಲೆ ಸುವರ್ಣ ವಾಹಿನಿಯಲ್ಲಿ 'ಅಮ್ಮ' ಧಾರಾವಾಹಿಯ ಭಾಗವಾದೆ. ಈಗ ಹಿಂದಿನ ಎಲ್ಲಾ ಪಾತ್ರಗಳಿಗಿಂತ ವಿಭಿನ್ನ ಪಾತ್ರವನ್ನು ಜೀವಿಸುತ್ತಿದ್ದೇನೆ. ಕುಳಿತರೂ ನಿಂತರೂ ನನ್ನೊಳಗೆ ಜ್ಯೋತಿಯೇ ಉಸಿರಾಡುತ್ತಿದ್ದಂತೆ ಅನಿಸುತ್ತಿರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry