ಅವಸರದಲ್ಲಿ ಮೂಡಿತು ಪ್ರೇಮರಾಗ

7

ಅವಸರದಲ್ಲಿ ಮೂಡಿತು ಪ್ರೇಮರಾಗ

Published:
Updated:
ಅವಸರದಲ್ಲಿ ಮೂಡಿತು ಪ್ರೇಮರಾಗ

‘ಈ ಗಾಗಲೇ ಸಾಕಷ್ಟು ನೊಂದಿದ್ದೇನೆ. ಈಗಲೂ ಅಷ್ಟೇ ಆತಂಕ ಇದೆ. ಆದರೆ ಇನ್ನೂ ವಿಳಂಬವಾದರೆ ಏನಾಗುತ್ತದೋ ಗೊತ್ತಿಲ್ಲ. ಧೈರ್ಯಮಾಡಿ ಇದೇ ವಾರ ತೆರೆಗೆ ಬರಲು ನಿರ್ಧರಿಸಿದ್ದೇವೆ’ ಹೀಗೆಂದು ಕಂಪಿಸುವ ಧ್ವನಿಯಲ್ಲಿಯೇ ಹೇಳಿದರು ಮನೋಜ್‌ ಕುಮಾರ್.

ತಾವೇ ನಿರ್ಮಾಣ, ನಿರ್ದೇಶನ ಮಾಡಿ ನಟಿಸಿರುವ ‘ಓ ಪ್ರೇಮವೆ’ ಚಿತ್ರದ ಬಿಡುಗಡೆಯ ಕುರಿತು ಅವರು ಮಾತನಾಡುತ್ತಿದ್ದರು. ಕಳೆದ ವಾರವೇ ಸಿನಿಮಾ ತೆರೆಗೆ ಬರಲು ಸಕಲ ಸಿದ್ಧತೆಗಳನ್ನೂ ನಡೆಸಿಕೊಂಡಿದ್ದರಂತೆ. ಪ್ರಚಾರ ಕಾರ್ಯಗಳಿಗೂ ಸಾಕಷ್ಟು ಖರ್ಚು ಮಾಡಿದ್ದಾರೆ. ಆದರೆ ಯುಎಫ್‌ಓ ಮತ್ತು ಕ್ಯೂಬ್‌ ಸಂಸ್ಥೆಗಳ ಮೇಲೆ ವಾಣಿಜ್ಯಮಂಡಳಿ ನಿರ್ಬಂಧ ಹಾಕಿ ಯಾವ ಸಿನಿಮಾವನ್ನೂ ಬಿಡುಗಡೆ ಮಾಡಬಾರದು ಎಂದು ನಿರ್ಧರಿಸಿದ್ದರಿಂದ ಬಿಡುಗಡೆಯಿಂದ ಹಿಂದೆ ಸರಿಯಬೇಕಾಯ್ತು.

ಈಗ ಒಮ್ಮಿಂದೊಮ್ಮೆಲೇ ಚಿತ್ರ ಬಿಡುಗಡೆ ಮಾಡಿ ಎಂದು ವಾಣಿಜ್ಯ ಮಂಡಳಿ ಹೇಳಿದ್ದರಿಂದ ಮನೋಜ್‌ ಬಿಡುಗಡೆಗೆ ಮುಂದಾಗಿದ್ದಾರೆ. ಸರಿಯಾದ ಪ್ರಚಾರ, ಚಿತ್ರಮಂದಿರಗಳ ಸಿದ್ಧತೆ ಏನೂ ಮಾಡಿಕೊಂಡಿರದಿದ್ದರೂ, ಮತ್ತೆ ಮುಂದೂಡಿದರೆ ಇನ್ನಷ್ಟು ಸಿನಿಮಾಗಳು ಬಿಡುಗಡೆಗೆ ಬಂದು ಮತ್ತೆ ತೊಂದರೆ ಆಗಬಹುದು ಎಂಬ ಕಾರಣಕ್ಕೆ ಈ ವಾರದೇ ತೆರೆಗೆ ತರಲು ಗಟ್ಟಿ ಮನಸ್ಸು ಮಾಡಿ ನಿರ್ಧರಿಸಿದ್ದಾರೆ.

ಅವಸರದಲ್ಲಿಯೇ ಪತ್ರಿಕಾಗೋಷ್ಠಿ ಕರೆದಿದ್ದರಿಂದ ತಂಡದ ಕಲಾವಿದರು ಯಾರೂ ಹಾಜರಿರಲಿಲ್ಲ. ನಾಯಕಿ ನಿಕ್ಕಿ ಗರ್ಲಾನಿ ಶುಭ ಹಾರೈಸಿ ವಿಡಿಯೊ ಕ್ಲಿಪ್ಪಿಂಗ್‌ ಕಳಿಸಿದ್ದರು.

‘ಚಿತ್ರದ ಟ್ರೈಲರ್‌ ಮತ್ತು ಹಾಡುಗಳಿಗೆ ಒಳ್ಳೆಯ ಸ್ಪಂದನ ಸಿಕ್ಕಿದೆ. ಹಾಗೆಯೇ ಸಿನಿಮಾ ಕೂಡ ಚೆನ್ನಾಗಿ ಮೂಡಿಬಂದಿದೆ. ಸಾಕಷ್ಟು ಮನರಂಜನೆಯ ಜತೆಗೆ ವಾಸ್ತವ ಬದುಕಿನ ಚಿತ್ರಣವಿದೆ. ನಾನು ಈ ಚಿತ್ರದಲ್ಲಿ ವೈಭವೋಪೇತ ಬದುಕಿನ ಕನಸನ್ನು ಕಾಣುವ ಮೇಲ್ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎಂದು ವಿಡಿಯೊದಲ್ಲಿಯೇ ಹೇಳಿದರು ನಿಕ್ಕಿ.

ಸುಮಾರು ನೂರು ಚಿತ್ರಮಂದಿರಗಳಲ್ಲಿ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿಕೊಂಡಿದೆ. ಮಗನಿಗೆ ಬೆಂಬಲ ನೀಡುವ ಉದ್ದೇಶದಿಂದ ಅಮ್ಮ ಚಂಚಲ ಕುಮಾರಿ ಅವರೂ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ‘ಈ ಚಿತ್ರಕ್ಕೆ ಮೊದಲಿನಿಂದಲೂ ಒಳ್ಳೆಯ ಸ್ಪಂದನವೇ ಸಿಗುತ್ತಿದೆ. ಈಗಲೂ ಜನ ಸಿನಿಮಾವನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ’ ಎಂದರು.

‘ಈ ಚಿತ್ರಕ್ಕಾಗಿ ಮನೋಜ್‌ ಕುಮಾರ್ ಅವರು ಎಷ್ಟು ಕಷ್ಟಪಟ್ಟಿದ್ದಾರೆ  ಎನ್ನುವುದನ್ನು ನಾವೆಲ್ಲರೂ ಕಣ್ಣಾರೆ ಕಂಡಿದ್ದೇವೆ. ಕೊನೆಗೂ ಸಿನಿಮಾ ಬಿಡುಗಡೆಗೊಳ್ಳುತ್ತಿರುವುದು ಖುಷಿ ತಂದಿದೆ’ ಎಂದರು ಸಂಗೀತ ನಿರ್ದೇಶಕ ಆನಂದ್‌. ಬುಲೆಟ್‌ ಪ್ರಕಾಶ್‌, ಸಾಧುಕೋಕಿಲ, ಪ್ರಶಾಂತ್‌ ಸಿದ್ದಿ, ಸಂಗೀತಾ ಮುಂತಾದವರು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry