ರೂಪಾ ಅಯ್ಯರ್‌ ‘ನಮೋ’ ಧ್ಯಾನ!

7

ರೂಪಾ ಅಯ್ಯರ್‌ ‘ನಮೋ’ ಧ್ಯಾನ!

Published:
Updated:
ರೂಪಾ ಅಯ್ಯರ್‌ ‘ನಮೋ’ ಧ್ಯಾನ!

ವೇದಿಕೆಯ ಹಿಂದೆ ಮತ್ತು ಇಕ್ಕೆಲಗಳಲ್ಲಿ ಕೇಸರಿ, ಬಿಳಿ, ಹಸಿರಿರುವ ಬಣ್ಣಗಳ ಪ್ಲೆಕ್ಸ್‌ಗಳಲ್ಲಿ ರಾರಾಜಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಪೋಸ್ಟರ್‌. ನಿರಂತರವಾಗಿ ನಡೆಯುತ್ತಿದ್ದ ಮೋದಿಯವರ ಗುಣಗಾನ...  ಚುನಾವಣೆ ಹತ್ತಿರ ಬಂತು. ಯಾವುದೋ ರಾಜಕೀಯ ಕಾರ್ಯಕ್ರಮದ ವಿವರಣೆ ಇದು ಎಂದು ಭಾವಿಸಬೇಡಿ. ಇದು ಸಿನಿಮಾವೊಂದರ ಪತ್ರಿಕಾಗೋಷ್ಠಿ. ಅಲ್ಲಿ ಪ್ರಧಾನಿ ಮೋದಿ ಅವರ ಫ್ಲೆಕ್ಸ್‌ ಇರಲಿಕ್ಕೂ ಕಾರಣ ಇದೆ. ಇದು ಅವರ ಬದುಕಿನ ಕುರಿತಾಗಿಯೇ ಇರುವ ಚಿತ್ರ. ಹೆಸರು ‘ನಮೋ– ಟ್ರ್ಯೂ ಇಂಡಿಯನ್‌’!

ಇಂಥದ್ದೊಂದು ಸಾಹಸಕ್ಕೆ ಕೈ ಹಾಕಿರುವುದು ರೂಪಾ ಅಯ್ಯರ್‌. ಅವರಿಗೆ ನಿರ್ದೇಶಕ ಗುರುಪ್ರಸಾದ್‌ ಚಿತ್ರಕಥೆಯಲ್ಲಿ ಸಾಥ್‌ ಕೊಟ್ಟಿದ್ದಾರೆ. ಜತೆಗೆ ಸುನೀಲ್‌ ಪುರಾಣಿಕ್‌ ಅವರಂಥ ನಟನ ಬೆಂಬಲ, ಅಧ್ಯಾತ್ಮ ಮಾರ್ಗದರ್ಶಿ ಎಂದು ಗುರ್ತಿಸಿಕೊಳ್ಳುವ ಜಯಲಕ್ಷ್ಮಿ ಎಂಬುವರ ಮಾರ್ಗದರ್ಶನ ಜತೆಗೆ ಪತಿ ಗೌತಮ್‌  ಶ್ರೀವತ್ಸ ಅವರ ಸಂಗೀತ ಸಂಯೋಜನೆಯ ಸಾಥಿ ಎಲ್ಲವೂ ಸಿಕ್ಕಿದೆ.

ಮೋದಿ ಅವರ ಬದುಕನ್ನು ಆಧರಿಸಿ ಹೀಗೊಂದು ಸಿನಿಮಾ ಆರಂಭಿಸಲಿದ್ದೇನೆ ಎಂಬ ವಿಷಯವನ್ನು ಬಹಿರಂಗಗೊಳಿಸಲಿಕ್ಕಾಗಿಯೇ ರೂಪಾ ಪತ್ರಿಕಾಗೋಷ್ಠಿ ಕರೆದಿದ್ದರು. ವೇದಿಕೆಯ ಮೇಲಿದ್ದ ಎಲ್ಲರೂ ಮೋದಿ ಅವರ ಗುಣಗಾನ ಮಾಡುವ ಭರದಲ್ಲಿ ಅವರನ್ನು ದೈವತ್ವಕ್ಕೆ ಏರಿಸಿ ಕೂಡಿಸಿದರು. ‌‘ಮೋದಿ ಅವರ ಬಾಲ್ಯದಿಂದ ಹಿಡಿದು ಇದುವರೆಗಿನ ಜೀವನ ಕುರಿತು ಸಿನಿಮಾ ಮಾಡುತ್ತಿದ್ದೇವೆ. ಅವರಲ್ಲಿನ ಮುತ್ಸದ್ದಿತನ ನನ್ನನ್ನು ಅತಿಯಾಗಿ ಆಕರ್ಷಿಸಿದೆ. ಗಾಂಧೀಜಿ ನಂತರ ನಾನು ಅತಿಯಾಗಿ ಇಷ್ಟಪಡುವ ನಾಯಕ ಮೋದಿ’ ಎಂದರು ರೂಪಾ.

‘ನಾನು ಮೋದಿಯ ಭಕ್ತ’ ಎಂದು ಹೇಳಿಕೊಂಡೇ ಮಾತು ಆರಂಭಿಸಿದ ಸುನೀಲ್‌ ಪುರಾಣಿಕ್‌, ‘ಮೋದಿ ಅವರು ತಮ್ಮಲ್ಲಿನ ದೈವೀಶಕ್ತಿಯಿಂದ ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿರುವ ಧೀಮಂತ ನಾಯಕ. ಹಾಗೆಂದು ಈ ಚಿತ್ರ ಕೇವಲ ಮೋದಿ ಭಕ್ತರ ದೃಷ್ಟಿಕೋನ ಹೊಂದಿರುವುದಿಲ್ಲ. ಎಲ್ಲ ನೋಟವನ್ನೂ ಒಳಗೊಳ್ಳುವ ಹಾಗಿರುತ್ತದೆ. ವಾಸ್ತವ ಏನಿದೆಯೋ ಅದನ್ನು ತೋರಿಸುತ್ತೇವೆ’ ಎಂದರು.

ಜಯಲಕ್ಷ್ಮಿ ಮಾತನಾಡಿ, ‘ಭಕ್ತಿ, ಏಕಾಗ್ರತೆ ಇವು ಮೋದಿ ಅವರ ವ್ಯಕ್ತಿತ್ವದಲ್ಲಿನ ವಿಶೇಷ ಗುಣಗಳು. ಇವುಗಳಿಂದಲೇ ಅವರಿಗೆ ದೈವಿಕ ವ್ಯಕ್ತಿತ್ವ ದೊರೆತಿದೆ’ ಎಂದರು.

ಚಿತ್ರಕಥೆ ಬರೆಯುತ್ತಿರುವ ಗುರುಪ್ರಸಾದ್‌ ಮಾತನಾಡಿ ‘ನಾನೊಬ್ಬ ಮೋದಿಯ ಅಪ್ಪಟ ಅನುಯಾಯಿ’ ಎಂದರು. ಈ ಚಿತ್ರಕ್ಕೆ ಅಮೆರಿಕದ ಗಾಯತ್ರಿ ರವಿ ಹಣ ಹೂಡಿದ್ದಾರೆ.

**

ಹಿಂದಿ ರಾಷ್ಟ್ರಭಾಷೆ! ಕನ್ನಡ ಪತ್ತೆಯಿಲ್ಲ!

ಈ ಚಿತ್ರವನ್ನು ರೂಪಾ ಹಿಂದಿ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಯಾರಿಸಲು ರೂಪಾ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಂದಿಯಲ್ಲಿ ಯಾಕೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳುವ ಭರದಲ್ಲಿ ಅವರು ‘ಹಿಂದಿ ನಮ್ಮ ರಾಷ್ಟ್ರಭಾಷೆ’ ಎಂದರು!. ‘ಹಿಂದಿ ರಾಷ್ಟ್ರಭಾಷೆ ಎಂದು ಯಾರು ಎಲ್ಲಿ ಹೇಳಿದ್ದಾರೆ?’ ಎಂಬ ಪ್ರಶ್ನೆಗೆ ಇನ್ನಷ್ಟು ಮುಗ್ಧರಾಗಿ ‘ನನ್ನ ಪ್ರಾಥಮಿಕ ಶಾಲೆಗಳಲ್ಲಿ ಹಾಗೆಯೇ ಹೇಳಿಕೊಟ್ಟಿದ್ದಾರೆ. ನಾನು ಅದನ್ನೇ ನಂಬಿದ್ದೇನೆ’ ಎಂದರು.

ಕನ್ನಡದಲ್ಲಿಯೂ ಸಿನಿಮಾ ಮಾಡುತ್ತಿದ್ದೇನೆ ಎಂದು ಅವರು ಹೇಳಿಕೊಂಡರಾದರೂ ವೇದಿಕೆಯ ಮೇಲಿನ ಪ್ಲೆಕ್ಸ್‌ಗಳಲ್ಲಿ ಒಂದಕ್ಷರವೂ ಕನ್ನಡ ಇರಲಿಲ್ಲ. ‘ಕನ್ನಡದಲ್ಲಿ ಸಿನಿಮಾ ಮಾಡ್ತಿದ್ದೀರಿ ಅಂದಮೇಲೆ ಭಿತ್ತಿಪತ್ರ ಕನ್ನಡದಲ್ಲಿರುವಂತೆ ನೋಡಿಕೊಳ್ಳುವುದು ಮೂಲಭೂತ ಜವಾಬ್ದಾರಿ ಅಲ್ಲವೇ?’ ಎಂಬ ಪ್ರಶ್ನೆಗೆ ‘ನಾನೇ ಎದುರು ನಿಂತು ಕನ್ನಡದಲ್ಲಿ ಮಾತಾಡ್ತಿದ್ದೇನೆಲ್ಲ, ಮತ್ತೆ ಆ ನಿರ್ಜೀವ ಭಿತ್ತಿಪತ್ರ ಯಾಕೆ ನೋಡ್ತೀರಿ?’ ಎಂದು ಅಸಂಬದ್ಧವಾಗಿ ಸಮರ್ಥಿಸಿಕೊಂಡರು. ಕೊನೆಯಲ್ಲಿ ಅವರ ಸಂಗೀತ ಸಂಯೋಜಕ ಗೌತಮ್‌ ಶ್ರೀವತ್ಸ ಈ ಕುರಿತು ಸ್ಪಷ್ಟನೆ ನೀಡಿ ‘ನಮ್ಮ ಅಜಾಗರೂಕತೆಯಿಂದ ಭಿತ್ತಿಪತ್ರಗಳಲ್ಲಿ ಕನ್ನಡ ಇಲ್ಲ. ಮುಂದಿನ ಸಲದಿಂದ ತಪ್ಪು ತಿದ್ದಿಕೊಳ್ಳುತ್ತೇವೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry