4

ಇತಿಹಾಸಕ್ಕೆ ಆಭರಣಗಳೂ ಬೆಳಕಿಂಡಿ

Published:
Updated:
ಇತಿಹಾಸಕ್ಕೆ ಆಭರಣಗಳೂ ಬೆಳಕಿಂಡಿ

ಆಭರಣಗಳ ಅಧ್ಯಯನದಲ್ಲಿ ಆಸಕ್ತಿ ಮೂಡಿದ್ದು ಹೇಗೆ?

ಬಾಲ್ಯದಿಂದಲೂ ನನಗೆ ಕಲೆಯ ಆಸಕ್ತಿ ಇತ್ತು. ಆಭರಣ ತಯಾರಿಕೆ ಅದ್ಭುತ ಕಲೆ ಎಂದೇ ನನಗನಿಸಿತು. ಅದೇ ಕಾರಣದಿಂದಾಗಿ ಆಭರಣ ಕುರಿತ ಅಧ್ಯಯನದಲ್ಲಿ ತೊಡಗಿಸಿಕೊಂಡೆ. ಆಭರಣ ಕ್ಷೇತ್ರದಲ್ಲಿನ ಒಳಹೊರಗುಗಳ ಮಾಹಿತಿ ನನ್ನನ್ನು ಮತ್ತಷ್ಟು ಅಧ್ಯಯನಕ್ಕೆ ಪ್ರೇರೇಪಿಸಿತು.

ಪ್ರಸ್ತುತ ಆಭರಣ ವಿನ್ಯಾಸಗಳ ಮೇಲೆ ಯಾವೆಲ್ಲಾ ಅಂಶಗಳು ಪ್ರಭಾವ ಬೀರುತ್ತಿವೆ?

ದೇಶದ ಪ್ರತಿಯೊಬ್ಬರೂ ಲಿಂಗ, ಪ್ರಾದೇಶಿಕತೆಯ ಭೇದವಿಲ್ಲದೆ ಆಭರಣಗಳನ್ನು ಕೊಳ್ಳಲು ಧರಿಸಲು ಇಷ್ಟಪಡುತ್ತಿರುವುದೇ ನವೀನ ವಿನ್ಯಾಸಗಳಿಗೆ ಸ್ಫೂರ್ತಿ. ಆಭರಣಶಾಸ್ತ್ರ ಹಾಗೂ ವಿನ್ಯಾಸದಲ್ಲಿ ಭಾರತಕ್ಕಿರುವ ಭದ್ರ ಬುನಾದಿ ಕೂಡ ಪ್ರೇರಣೆ. ಇಂದಿನ ಯುವಜನಾಂಗ ಹಗುರವಾದ ಆಭರಣಗಳನ್ನು ಇಷ್ಟಪಡುತ್ತಿದೆ. ಅಮೂಲ್ಯ ಹರಳು ಮತ್ತು ಲೋಹಗಳಿಂದ ತಯಾರಾದುದು ಮಾತ್ರ ಆಭರಣ ಎಂದು ಗ್ರಹಿಸುವ ಮನಸ್ಥಿತಿ ಇಲ್ಲ. ಹಗುರವಾದ ಹಾಗೂ ಸುಲಭವಾಗಿ ಧರಿಸಲು ಸಾಧ್ಯವಾಗುವ ಆಭರಣಗಳನ್ನು ಎಲ್ಲರೂ ಮೆಚ್ಚುತ್ತಿದ್ದಾರೆ. ಕ್ರಿಸ್ಟೆಲ್‌, ಹಗುರ ಲೋಹ, ಟರ್ಮೂಲಿನಂ, ಬಣ್ಣದ ಹರಳುಗಳ ಆಭರಣಗಳು ಜನಪ್ರಿಯವಾಗುತ್ತಿವೆ.

‘ವಿಶ್ವದ ಆಭರಣ ವಿನ್ಯಾಸಕ್ಕೆ ಭಾರತವು ನಿರಂತರ ಸ್ಫೂರ್ತಿ’ ಎನ್ನುವ ಮಾತು ಇದೆ. ನಿಮ್ಮ ಅಭಿಪ್ರಾಯ...

ಹೌದು. ಭಾರತ ಆಭರಣಗಳ ತವರು. ಪಾಶ್ಚಾತ್ಯ ರಾಷ್ಟ್ರಗಳಿಗೆ ಬಹುವರ್ಷಗಳಿಂದಲೂ ನಿರಂತರವಾಗಿ ರತ್ನ, ಹರಳುಗಳನ್ನು ಪೂರೈಸಿದೆ. ನಿಜಾಮರ ಕಾಲದ ವಿನ್ಯಾಸಗಳನ್ನು ಇತರ ರಾಷ್ಟ್ರಗಳು ಅನುಕರಿಸಿವೆ. ರವಿವರ್ಮನ ಕಲಾಕೃತಿಗಳಲ್ಲಿನ ಆಭರಣ ವಿನ್ಯಾಸಗಳು ಬ್ರಿಟಿಷ್‌ ರಾಣಿಯ ಆಭರಣಗಳಲ್ಲೂ ಪ್ರತಿಬಿಂಬಿತವಾಗಿರುವುದೇ ಇದಕ್ಕೆ ನಿದರ್ಶನ. ಆಭರಣ ವಿನ್ಯಾಸದ ಮೂಲಪಾಠವನ್ನು ವಿಶ್ವಕ್ಕೆ ಬೋಧಿಸಿರುವುದರಲ್ಲಿ ಭಾರತದ ಪಾತ್ರ ಗಮನಾರ್ಹ. ವಿಜಯನಗರದ ಅರಸರು, ಮೈಸೂರು ಒಡೆಯರು ಹಾಗೂ ನಿಜಾಮರ ಶೈಲಿಯ ಆಭರಣ ವಿನ್ಯಾಸಗಳು ವಿಶ್ವದ ಆಭರಣ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದ ಸ್ಥಾನ ಪಡೆದಿವೆ.

ಸದ್ಯದ ಆಭರಣಗಳ ಟ್ರೆಂಡ್‌ ಹೇಗಿದೆ?

ಕೇವಲ ಒಂದು ಸಾರ್ವಕಾಲಿಕ ಪ್ರವೃತ್ತಿಯನ್ನು ಗುರುತಿಸಲಾಗದು. ಎಷ್ಟೇ ಫ್ಯಾಷನಬಲ್, ಹಗುರ ಆಭರಣಗಳು ಇದ್ದರೂ ಮದುವೆಯಂಥ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನೇ ಧರಿಸುತ್ತಾರೆ. ಆಧುನಿಕ ಒಡವೆಗಳ ನಡುವೆಯೂ ಸಾಂಪ್ರದಾಯಿಕ ಆಭರಣಗಳು ಅಸ್ತಿತ್ವ ಉಳಿಸಿಕೊಂಡಿವೆ.

ಪುರಾತನ ಆಭರಣಗಳಿಗೂ ಇಂದಿನ ವಿನ್ಯಾಸಗಳಿಗೂ ಇರುವ ವ್ಯತ್ಯಾಸಗಳೇನು?

ಹಳೆಯ ವಿನ್ಯಾಸಗಳಲ್ಲಿ ರತ್ನ, ಹರಳುಗಳ ಗುಣಮಟ್ಟಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದರು. ಯಾವುದಕ್ಕೂ ಯಂತ್ರ ಬಳಸುತ್ತಿರಲಿಲ್ಲ. ಪ್ರತಿ ಆಭರಣಗಳು ಕರಕೌಶಲದಿಂದಲೇ ಸಿದ್ಧವಾಗುತ್ತಿದ್ದವು. ಅತ್ಯಂತ ಸೂಕ್ಷ್ಮ ವಿನ್ಯಾಸಗಳಿಂದ ಕೂಡಿರುತ್ತಿದ್ದವು. ಇಂದು ಯಂತ್ರಗಳಿಂದಲೇ ಹೆಚ್ಚಿನ ವಿನ್ಯಾಸಗಳು ತಯಾರಾಗುತ್ತವೆ. ಹಾಗಾಗಿ ಪುರಾತನ ಆಭರಣಗಳಲ್ಲಿನ ಸೌಂದರ್ಯ ಕಾಣಸಿಗುವುದಿಲ್ಲ.

ಇದು ವಿಶ್ವವೇ ಹಳ್ಳಿಯಂತಾಗಿರುವ ಜಾಗತೀಕರಣದ ಕಾಲ. ವಿಶ್ವದ ಯಾವುದೇ ರಾಷ್ಟ್ರ ಆಭರಣ ವಿನ್ಯಾಸದಲ್ಲಿ ಅನನ್ಯತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿದೆಯೇ?

ಭಾರತದ ಮಟ್ಟಿಗೆ ಸಾಧ್ಯವಾಗುತ್ತಿದೆ. ಇಲ್ಲಿ ಸಾವಿರಾರು ಜಾತಿ, ಹತ್ತಾರು ಧರ್ಮಗಳಿವೆ. ಪ್ರತಿ ಸಮುದಾಯವೂ ಭಿನ್ನ ವಸ್ತ್ರಾಭರಣಗಳಿಂದ ಗುರುತಿಸಿಕೊಳ್ಳುತ್ತದೆ. ನಮ್ಮ ದೇಶದಲ್ಲಿ ನೂರಾರು ಆದಿವಾಸಿ ಸಮುದಾಯಗಳಿವೆ. ಬುಡಕಟ್ಟು ಸಮುದಾಯಗಳ ಸುಂದರ ವಿನ್ಯಾಸಗಳಿಗೆ ಇನ್ನೂ ಜಾಗತೀಕರಣದ ಸೋಂಕು ತಗುಲಿಲ್ಲ. ನನ್ನ ಪ್ರಕಾರ ಇವೇ, ಭಾರತೀಯ ಆಭರಣ ಸಂಸ್ಕೃತಿಯ ನಿಜವಾದ ಪ್ರತಿಬಿಂಬಗಳು.

ಇತಿಹಾಸ ಅಧ್ಯಯನದಲ್ಲಿ ಆಭರಣಗಳ ಪಾತ್ರವೇನು?

ಆಭರಣಗಳಿಗೆ ಐತಿಹಾಸಿಕ ಮೌಲ್ಯವಿದೆ. ರವಿವರ್ಮನ ಕಲಾಕೃತಿಗಳ ಮೂಲಕ 19ನೇ ಶತಮಾನದ ಕೊನೆಯ ಭಾಗ ಹಾಗೂ 20ನೇ ಶತಮಾನದಲ್ಲಿದ್ದ ಆಭರಣ ವಿನ್ಯಾಸಗಳನ್ನು ಅರಿಯಬಹುದು. ಚಾಲುಕ್ಯ ಕಾಲದ ಶಿಲ್ಪಕಲೆಗಳ ಮೂಲಕ ಆಗಿನ ಕಾಲದಲ್ಲಿ ಪ್ರಚಲಿತದಲ್ಲಿದ್ದ ಆಭರಣಗಳನ್ನು ಅಧ್ಯಯನ ಮಾಡಬಹುದು. ಜೊತೆಗೆ ಆಗಿನ ಕಾಲದ ಲೋಹಗಳು, ರತ್ನಗಳ ಲಭ್ಯತೆ ತಿಳಿಯುತ್ತದೆ.

ರವಿವರ್ಮನ ಕಲಾಕೃತಿಗಳಲ್ಲಿನ ಆಭರಣ ವಿನ್ಯಾಸಗಳಿಗೆ ಪ್ರೇರಣೆ ಏನು?

ಅಂದಿನ ಸಮಾಜ ಮತ್ತು ಸಂಸ್ಕೃತಿಯೇ ರವಿವರ್ಮನ ಕಲಾಕೃತಿಗಳಿಗೆ ಪ್ರೇರಣೆ. ಆತನ ದಮಯಂತಿ ಕಲಾಕೃತಿಯಲ್ಲಿ ಆಗಿನ ಕಾಲದ ಜನಪ್ರಿಯ ಆಭರಣ ಮಾದರಿ ಗುರುತಿಸಬಹುದು.

ಭಾರತದಲ್ಲಿರುವ ಆಭರಣಗಳ ಒಟ್ಟು ಮೌಲ್ಯವನ್ನು ಅಂದಾಜಿಸಲು ಸಾಧ್ಯವೆ?

ಇದು ಕಷ್ಟ. ಸಂಗ್ರಹಾಲಯ ಮತ್ತು ಸಂಸ್ಥೆಗಳು ಈ ಆಭರಣಗಳ ಮೌಲ್ಯವನ್ನು ಅಂದಾಜಿಸುವ ಕಾರ್ಯವನ್ನೂ ಎಂದೂ ಮಾಡಿಲ್ಲ. ವಸ್ತುನಿಷ್ಠವಾದ ಮೌಲ್ಯಮಾಪನ ಕಷ್ಟಸಾಧ್ಯ. ಅದಾಗ್ಯೂ ಅದರ ಅಗತ್ಯವಂತೂ ಇದೆ. ದೇವಾಲಯಗಳ ಆಭರಣ ಮೌಲ್ಯವನ್ನು ಅವಶ್ಯವಾಗಿ ಅಂದಾಜಿಸಬೇಕಿದೆ.

**

ಭಾರತ ಜ್ಞಾನದ ಆಗರ

ಯುರೋಪಿನಲ್ಲಿ ಕೆಲ ಸಂಸ್ಥೆಗಳು, ಚರ್ಚ್‌ಗಳು ಇತಿಹಾಸದ ಪುರಾವೆಗಳಾಗಿ ಆಭರಣಗಳನ್ನು ಸಂಗ್ರಹಿಸಿವೆ. ಉನ್ನತ ಅಧ್ಯಯನ ಮಾಡುವವರಿಗೆ ಅವು ಸುಲಭವಾಗಿ ದೊರೆಯುತ್ತಿವೆ. ಅಲ್ಲಿ ಯಾವುದೇ ಗೌಪ್ಯತೆಗಳಿಲ್ಲ. ನಮ್ಮ ದೇಶದಲ್ಲಿಯೂ ಅಂತಹ ಪ್ರಯತ್ನಗಳಾಗಬೇಕು. ಅದರ ಆರಂಭಿಕ ಹೆಜ್ಜೆಯಾಗಿ ದೇವಾಲಯಗಳಲ್ಲಿನ ಆಭರಣಗಳನ್ನು ಗುರುತಿಸುವ, ಒಪ್ಪವಾಗಿ ಜೋಡಿಸಿಡುವ ಕೆಲಸಗಳು ಆಗಬೇಕು.

ಅವುಗಳ ಛಾಯಾಚಿತ್ರ ತೆಗೆದು ಪ್ರಚುರಪಡಿಸಬೇಕು. ಆಭರಣಗಳ ಶ್ರೀಮಂತಿಕೆಯ ಬಗ್ಗೆ ಎಲ್ಲರಲ್ಲಿಯೂ ಅರಿವು ಮೂಡುವಂತಾಗಬೇಕು. ಆಭರಣ ವಿನ್ಯಾಸಗಳ ತವರಿನಲ್ಲಿದ್ದೂ ಅಧ್ಯಯನಕ್ಕಾಗಿ ವಿದೇಶಗಳಿಗೆ ತೆರಳುವ ದುಸ್ಥಿತಿ ಇದೆ. ಆಭರಣಗಳ ವಿಷಯದಲ್ಲಿ ಇತರೆಲ್ಲ ದೇಶಗಳಿಗಿಂತ ಭಾರತವೇ ಅದ್ಭುತ ಜ್ಞಾನದ ಆಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry