ಇದು ಶೋಷಣೆಯಲ್ಲವೇ?

7

ಇದು ಶೋಷಣೆಯಲ್ಲವೇ?

Published:
Updated:

ಉಳಿತಾಯ ಖಾತೆಯಲ್ಲಿ ತಿಂಗಳ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳದ ಗ್ರಾಹಕರಿಗೆ ವಿಧಿಸುತ್ತಿದ್ದ ದಂಡ ಶುಲ್ಕವನ್ನು ಶೇ 75ರಷ್ಟು ಕಡಿಮೆ ಮಾಡಿರುವುದಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ಹೇಳಿದೆ. ದಂಡ ಶುಲ್ಕ ಇಳಿಕೆಯು ಏಪ್ರಿಲ್ 1ರಿಂದ ಜಾರಿಗೆ ಬರಲಿದೆ (ಪ್ರ.ವಾ., ಮಾ.14).

ಈ ದಂಡ ಶುಲ್ಕ ವಿಧಿಸುವ ಕ್ರಮ ಕಳೆದ ವರ್ಷದಿಂದ ಜಾರಿಗೆ ಬಂದಿದೆ. ಸುಮಾರು ಐದು ವರ್ಷಗಳ ಹಿಂದೆ ಈ ರೀತಿ ಶುಲ್ಕ ವಿಧಿಸುವ ಪರಿಪಾಟ ಇತ್ತು. ಅದು ಈಗ ಮತ್ತೆ ಜಾರಿಗೆ ಬಂದಿರುವುದು ಗ್ರಾಹಕರಿಗೆ ಬೇಸರ ತರಿಸಿದೆ. ‘ಖಾತೆಗಳ ನಿರ್ವಹಣಾ ವೆಚ್ಚದ ಹೊರೆಯನ್ನು ತಗ್ಗಿಸುವ ಸಲುವಾಗಿ ದಂಡ ಶುಲ್ಕ ವಿಧಿಸುವುದು ಅನಿವಾರ್ಯ’ ಎನ್ನುವುದು ಬ್ಯಾಂಕ್‌ನ ಸಮರ್ಥನೆ.

ಜನ್‌ ಧನ್ ಖಾತೆ, ಕೆಲಸದಿಂದ ನಿವೃತ್ತಿ ಹೊಂದಿದವರ ಖಾತೆ, ಮಕ್ಕಳ ಖಾತೆ ಮುಂತಾಗಿ ಸುಮಾರು 16 ಕೋಟಿ ಖಾತೆಗಳನ್ನು ಹೊರತುಪಡಿಸಿ, ಮಿಕ್ಕ 25 ಕೋಟಿ ಉಳಿತಾಯ ಖಾತೆಗಳಲ್ಲಿ ತಿಂಗಳ ಕನಿಷ್ಠ ಮೊತ್ತ ಕಾಯ್ದುಕೊಳ್ಳದವರಿಗೆ ಕಳೆದ ವರ್ಷ ದಂಡ ಶುಲ್ಕ ವಿಧಿಸಲಾಯಿತು. 2017ರ ಏಪ್ರಿಲ್– ನವೆಂಬರ್‌ ಅವಧಿಯಲ್ಲಿ ₹ 1,772 ಕೋಟಿಯನ್ನು ದಂಡ ಶುಲ್ಕದ ರೂಪದಲ್ಲಿ ಬ್ಯಾಂಕ್ ಗಳಿಸಿದೆ!

2017ರ ಏ.1 ರಿಂದ 2018ರ ಜ.31ರೊಳಗಿನ ಅವಧಿಯಲ್ಲಿ 41.16 ಲಕ್ಷ ಉಳಿತಾಯ ಖಾತೆಗಳು ಮುಚ್ಚಿವೆ. ಏಕೆಂದರೆ ಈ ಖಾತೆದಾರರು ಕನಿಷ್ಠ ಉಳಿತಾಯ ಹಣವನ್ನು ಹೊಂದಿರದೆ ದಂಡ ಶುಲ್ಕ ತೆರಬೇಕಾಗುವ ಸಂಭವವಿತ್ತು. ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಯನ್ನು ಗ್ರಾಹಕರು ಕೇವಲ ವಿನೋದಕ್ಕಾಗಿ ತೆರೆಯುವುದಿಲ್ಲ. ಸ್ವಲ್ಪವಾದರೂ ಹಣ ಉಳಿತಾಯದ ರೂಪದಲ್ಲಿ ಖಾತೆಯಲ್ಲಿರಲಿ ಎಂದು ಜನ ಬಯಸುತ್ತಾರೆ. ಇಲ್ಲಿ ಒಂದು ಲೆಕ್ಕಾಚಾರ ಗಮನಿಸಬಹುದು, ಒಂದು ಖಾತೆಯಲ್ಲಿ ಸರಾಸರಿ ₹ 3,000 ನಿರಂತರವಾಗಿ ಇರುತ್ತದೆಂದು ಭಾವಿಸಿದರೂ ಎಸ್‌ಬಿಐನ 25 ಕೋಟಿ ಉಳಿತಾಯ ಖಾತೆಗಳಲ್ಲಿರುವ ಮೊತ್ತ ₹ 75,000 ಕೋಟಿ ಆಗುತ್ತದೆ. ಇದು ಬ್ಯಾಂಕಿನ ವಹಿವಾಟಿಗೆ ಲಭ್ಯ! ಉಳಿತಾಯ ಖಾತೆಯ ಹಣಕ್ಕೆ ಬಡ್ಡಿ ಅತಿ ಕಡಿಮೆ. ಹೀಗಿರುವಾಗ, ಅಕಸ್ಮಾತ್ ಖಾತೆಯಲ್ಲಿ ಹಣ ನಿಗದಿತ ಮಿತಿಗಿಂತ ಕಡಿಮೆಯಾಯಿತೆಂದು ದಂಡ ಶುಲ್ಕ ರೂಪದಲ್ಲಿ ಗ್ರಾಹಕರನ್ನು ದಂಡಿಸುವುದು ಶೋಷಣೆಯಲ್ಲದೆ ಮತ್ತೇನು?

ಗ್ರಾಹಕರಿಗಾಗಿ ಬ್ಯಾಂಕ್ ಇದೆಯೋ, ಬ್ಯಾಂಕಿಗಾಗಿ ಗ್ರಾಹಕರೊ?

- ಸಾಮಗ ದತ್ತಾತ್ರಿ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry