ಸತ್ತ ಉಗ್ರರಲ್ಲಿ ತೆಲಂಗಾಣದ ಯುವಕ

ಮಂಗಳವಾರ, ಮಾರ್ಚ್ 19, 2019
20 °C
ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಕುರಾದಲ್ಲಿ ನಡೆದ ಎನ್‌ಕೌಂಟರ್‌

ಸತ್ತ ಉಗ್ರರಲ್ಲಿ ತೆಲಂಗಾಣದ ಯುವಕ

Published:
Updated:
ಸತ್ತ ಉಗ್ರರಲ್ಲಿ ತೆಲಂಗಾಣದ ಯುವಕ

ಹೈದರಾಬಾದ್: ಇದೇ 12ರಂದು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹಕುರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಮೂವರು ಉಗ್ರರಲ್ಲಿ ಒಬ್ಬಾತ ತೆಲಂಗಾಣದ ಮನುಗುರು ಊರಿನವನು ಎಂದು ಪೊಲೀಸರು ತಿಳಿಸಿದ್ದಾರೆ.

‘ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಬಲಿಯಾದವರಲ್ಲಿ ಇಬ್ಬರು ಕಾಶ್ಮೀರದ ಉಗ್ರರಾದರೆ, ಮೊಹಮ್ಮದ್‌ ತೌಫೀಖ್‌ (26) ಎಂಬಾತ ತೆಲಂಗಾಣದವನು. ಸಾಮಾಜಿಕ ಜಾಲತಾಣದ ಮೂಲಕ ಇಸ್ಲಾಮಿನ ಸಿದ್ಧಾಂತಗಳನ್ನು ತಿಳಿದುಕೊಂಡಿದ್ದ ಆತ, ಕಾಶ್ಮೀರಕ್ಕೆ ಹೋಗಿ ಕಳೆದ ವರ್ಷ ಜಿಹಾದಿ ಉಗ್ರರ ಗುಂಪನ್ನು ಸೇರಿಕೊಂಡಿದ್ದ’ ಎಂದು ಅವರು ಹೇಳಿದ್ದಾರೆ.

‘ಸಾಮಾಜಿಕ ಜಾಲತಾಣಗಳ ಮೂಲಕ ಯುವಕರ ಮನಸ್ಸನ್ನು ಪರಿವರ್ತಿಸುವ ಜಿಹಾದಿಗಳು ವಿಧ್ವಂಸಕ ಕೃತ್ಯಗಳಲ್ಲಿ ಅವರು ತೊಡಗಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ. ಅದೇ ರೀತಿ ಈತನನ್ನು ಕೂಡ ಸಿಲುಕಿಸಿರುವ ಸಾಧ್ಯತೆ ಇದೆ. ತೆಲಂಗಾಣದಲ್ಲಿ ತೌಫೀಖ್ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿರುವುದು ಇದುವರೆಗೆ ಕಂಡುಬಂದಿಲ್ಲ.

‘ ತೌಫೀಖ್‌ ತಂದೆ ಮೊಹಮ್ಮದ್‌ ರಜಾಕ್‌ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಈತನೊಬ್ಬನೇ ಗಂಡು ಸಂತಾನ. ಪರಮಾಣು ಶಕ್ತಿ ಇಲಾಖೆಯಲ್ಲಿನ ಭಾರಿ ನೀರು ಘಟಕದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಅವರ ವಿರುದ್ಧ ಒಮ್ಮೆ ಕಳವು ಪ್ರಕರಣ ದಾಖಲಾಗಿತ್ತು. ಆದ್ದರಿಂದ ಅವರನ್ನು ಕೆಲಸದಿಂದ ಕೆಲವು ದಿನ ಅಮಾನತು ಮಾಡಲಾಗಿತ್ತು’ ಎಂದು ಪೊಲೀಸರು ವಿವರಿಸಿದ್ದಾರೆ. ತೌಫೀಖ್ ವಿರುದ್ಧ ಪೊಲೀಸರು ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ.

**

‘ಎಂಜಿನಿಯರ್‌ ಬದಲು ಉಗ್ರನಾದ’

‘2016ರಲ್ಲಿ ಊರನ್ನು ಬಿಟ್ಟಿದ್ದ ಮೊಹಮ್ಮದ್‌ ತೌಫೀಖ್‌, ಹೈದರಾಬಾದ್‌ಗೆ ಎಂಜಿನಿಯರಿಂಗ್‌ ಕಲಿಯಲು ಹೋಗಿದ್ದ. ನಂತರ ಅಲ್ಲಿಯೇ ಕೆಲಸ ಹುಡುಕತೊಡಗಿದ್ದ. ಆ ನಂತರ ಆತ ಏನು ಮಾಡುತ್ತಿದ್ದಾನೆ ಎಂಬ ಬಗ್ಗೆ ಕುಟುಂಬದವರಿಗೆ ಗೊತ್ತೇಇರಲಿಲ್ಲ. ಕುಟುಂಬದ ಜೊತೆ ಸಂಪೂರ್ಣ ಸಂಬಂಧ ಕಳೆದುಕೊಂಡಿದ್ದ. ಅಲ್ಲಿಂದ ಉಗ್ರರ ಜೊತೆ ಸಂಬಂಧ ಬೆಳೆಸಿಕೊಂಡಿರುವ ಶಂಕೆ ಇದೆ’ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry