‘ದಿ ವೈರ್’ ಸುದ್ದಿ ಜಾಲತಾಣ ವಿರುದ್ಧದ ವಿಚಾರಣೆಗೆ ತಡೆ

ಸೋಮವಾರ, ಮಾರ್ಚ್ 25, 2019
21 °C
‘ದಿ ವೈರ್’ ಸುದ್ದಿ ಜಾಲತಾಣ ವಿರುದ್ಧದ ವಿಚಾರಣೆಗೆ ತಡೆ

‘ದಿ ವೈರ್’ ಸುದ್ದಿ ಜಾಲತಾಣ ವಿರುದ್ಧದ ವಿಚಾರಣೆಗೆ ತಡೆ

Published:
Updated:
‘ದಿ ವೈರ್’ ಸುದ್ದಿ ಜಾಲತಾಣ ವಿರುದ್ಧದ ವಿಚಾರಣೆಗೆ ತಡೆ

ನವದೆಹಲಿ : ‘ದಿ ವೈರ್’ ಸುದ್ದಿ ಜಾಲತಾಣ ಮತ್ತು ಅದರ ಪತ್ರಕರ್ತರ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮಗ ಜಯ್ ಶಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಏಪ್ರಿಲ್ 12ರವರೆಗೆ ವಿಚಾರಣೆ ನಡೆಸದಂತೆ ಗುಜರಾತ್‌ನ ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.

‘ಜಯ್‌ ಶಾ ನಿರ್ದೇಶಕರಾಗಿರುವ ಟೆಂಪಲ್‌ ಎಂಟರ್‌ಪ್ರೈಸಸ್‌ನ ಆದಾಯ ಒಂದು ವರ್ಷದಲ್ಲಿ ₹ 50 ಸಾವಿರದಿಂದ ₹ 80 ಕೋಟಿಗೆ ಏರಿಕೆಯಾಗಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರವೇ ಈ ಕಂಪನಿಯ ಆದಾಯ ವೃದ್ಧಿಯಾಗಿದೆ’ ಎಂದು ‘ದಿ ವೈರ್‌’ ಸುದ್ದಿತಾಣ ವರದಿ ಮಾಡಿತ್ತು. ಆ ವರದಿ ಬರೆದಿದ್ದ ಪತ್ರಕರ್ತೆ ರೋಹಿಣಿ ಸಿಂಗ್, ದಿ ವೈರ್‌ನ ಸಂಪಾದಕ ಹಾಗೂ ನಿರ್ದೇಶಕರ ವಿರುದ್ಧ ಜಯ್ ಶಾ ₹ 100 ಕೋಟಿಯ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯವು ಜಾರಿ ಮಾಡಿದ್ದ ಸಮನ್ಸ್‌ಗಳನ್ನು ವಜಾ ಮಾಡುವಂತೆ ರೋಹಿಣಿ ಸಿಂಗ್ ಜತೆಗೆ ದಿ ವೈರ್ ಸಂಪಾದಕ ಮಂಡಳಿ ಹಾಗೂ ನಿರ್ದೇಶಕರ ಮಂಡಳಿ ಗುಜರಾತ್ ಹೈಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದವು. ಆದರೆ ಹೈಕೋರ್ಟ್ ಆ ಅರ್ಜಿಗಳನ್ನು ವಜಾ ಮಾಡಿತ್ತು. ಆ ಆದೇಶದ ವಿರುದ್ಧ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠವು ಮೇಲ್ಮನವಿಯ ವಿಚಾರಣೆ ನಡೆಸಿತು.

**

ಪತ್ರಕರ್ತರಿಗೆ ‘ಕಿವಿಮಾತು’

‘ಪತ್ರಕರ್ತರು ಮತ್ತಷ್ಟು ಜವಾಬ್ದಾರಿಯಿಂದ ಬರೆಯಬೇಕು. ಏನೇನೋ ಬರೆದು ತಪ್ಪಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ’ ಎಂದು ಪೀಠ ಪ್ರಶ್ನಿಸಿತು.

‘ಈ ಪ್ರಕರಣಕ್ಕೆ ಸಂಬಂಧಿಸಿ ಈ ಮಾತು ಹೇಳುತ್ತಿಲ್ಲ’ ಎಂದು ಪೀಠ ಸ್ಪಷ್ಟಪಡಿಸಿತು. ‘ಯಾವುದೇ ವ್ಯಕ್ತಿ ಬಗ್ಗೆ ಅನಿಸಿದ್ದನ್ನೆಲ್ಲಾ ಬರೆಯಲು ಹೇಗೆ ಸಾಧ್ಯ? ಎಲ್ಲದಕ್ಕೂ ಒಂದು ಮಿತಿ ಇದೆಯಲ್ಲವೆ. ನಾವು ಮಾಧ್ಯಮಗಳನ್ನು ಗೇಲಿ ಮಾಡುತ್ತಿಲ್ಲ. ಆದರೆ ಕೆಲವೊಮ್ಮೆ ಅವರ ವರದಿಗಳು ನಿಚ್ಚಳವಾಗಿ ನ್ಯಾಯಾಂಗ ನಿಂದನೆಯಾಗಿರುತ್ತವೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry