ಮಾನದಂಡ ಸಮರ್ಥಿಸಿಕೊಂಡ ರಾಜ್ಯ

7
ಕನ್ನಡೇತರರಿಗೆ ವೈದ್ಯಕೀಯ ಪಿ.ಜಿ. ಪ್ರವೇಶ

ಮಾನದಂಡ ಸಮರ್ಥಿಸಿಕೊಂಡ ರಾಜ್ಯ

Published:
Updated:
ಮಾನದಂಡ ಸಮರ್ಥಿಸಿಕೊಂಡ ರಾಜ್ಯ

ನವದೆಹಲಿ: ವೈದ್ಯಕೀಯ ಪಿ.ಜಿ. ಕೋರ್ಸ್‌ಗೆ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ರಾಜ್ಯದಲ್ಲಿ 10 ವರ್ಷ ಅಧ್ಯಯನ ಮಾಡಿರಬೇಕೆಂಬ ಮಾನದಂಡ ರೂಪಿಸಿ ಅಧಿಸೂಚನೆ ಹೊರಡಿಸಿರುವ ಕ್ರಮವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಎದುರು ಗುರುವಾರ ಸಮರ್ಥಿಸಿಕೊಂಡಿದೆ.

ಕರ್ನಾಟಕದ ಮಾನದಂಡಗಳನ್ನು ವಿರೋಧಿಸಿ ಡಾ.ಕೃತಿ ಲಖಿನಾ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಯು.ಯು. ಲಲಿತ್ ನೇತೃತ್ವದ ದ್ವಿಸದಸ್ಯ ಪೀಠದೆದುರು ಸರ್ಕಾರದ ಪರ ಹಾಜರಾಗಿದ್ದ ಹಿರಿಯ ವಕೀಲ ಬಸವಪ್ರಭು ಪಾಟೀಲ ಅವರು, ಆಂಧ್ರಪ್ರದೇಶ, ಗೋವಾ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳೂ ಇದೇ ರೀತಿಯ ಮಾನದಂಡ ಅನುಸರಿಸುತ್ತಿವೆ ಎಂದು ವಿವರಿಸಿದರು.

ಆದರೆ, ವೈದ್ಯಕೀಯ ಪಿ.ಜಿ. ಕೋರ್ಸ್‌ ಪ್ರವೇಶಕ್ಕೆ ಸರ್ಕಾರಿ ಕೋಟಾದಡಿ ನಿಯಮಿತ ಸೀಟುಗಳು ಲಭ್ಯವಿರುವುದರಿಂದ ನಿಯಮಾನುಸಾರ ಪ್ರವೇಶ ಪಡೆಯಲು ಇರುವ ಅರ್ಹತೆಗಾಗಿ ಈ ರೀತಿಯ ಮಾನದಂಡಗಳನ್ನು ಅಳವಡಿಸುವಂತಿಲ್ಲ ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಬುಧವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ರಾಜ್ಯ ಸರ್ಕಾರ ಹಾಗೂ ಎಂಸಿಐ ವಕೀಲರಿಗೆ ಸೂಚಿಸಿದ ಪೀಠವು, ವಿಚಾರಣೆಯನ್ನು ಮುಂದಿನ ಗುರುವಾರಕ್ಕೆ ಮುಂದೂಡಿತು.

ಕರ್ನಾಟಕದಲ್ಲೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಪಡೆದು, ಪಿ.ಜಿ. ಕೋರ್ಸ್‌ಗಳ ಪ್ರವೇಶಕ್ಕಾಗಿ ಆಯೋಜಿಸಲಾಗಿದ್ದ ಪರೀಕ್ಷೆಯಲ್ಲಿ (ಎನ್‌ಇಇಟಿ) ಉತ್ತೀರ್ಣರಾಗಿರುವ ಕನ್ನಡೇತರ ವಿದ್ಯಾರ್ಥಿಗಳಿಗೆ ಇದೇ 25ರಿಂದ ಏಪ್ರಿಲ್‌ 5ರವರೆಗೆ ನಡೆಯಲಿರುವ ಕೌನ್ಸೆಲಿಂಗ್‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅನುಕೂಲ ಆಗುವಂತೆ ನೋಂದಣಿಗೆ ಅವಕಾಶ ಕಲ್ಪಿಸಬೇಕು ಅರ್ಜಿದಾರರ ಪರ ವಕೀಲ ಅಮಿತ್‌ಕುಮಾರ್‌ ಕೋರಿದರು.

‘ಅರ್ಜಿಯ ವಿಚಾರಣೆಗೆ ಅವಕಾಶ ನೀಡುವ ನಾವು ಅರ್ಜಿದಾರರ ಹಿತಾಸಕ್ತಿಯ ರಕ್ಷಣೆಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ನ್ಯಾಯಪೀಠ ಭರವಸೆ ನೀಡಿತು.

ಪಿ.ಜಿ. ಕೋರ್ಸ್‌ ಪ್ರವೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿರುವ ಅರ್ಹತಾ ಮಾನದಂಡಗಳು ಅಕ್ರಮ, ಅಸಂವಿಧಾನಿಕ ಹಾಗೂ ತಾರತಮ್ಯದಿಂದ ಕೂಡಿವೆ ಎಂದು ಅರ್ಜಿದಾರರು ದೂರಿದ್ದಾರೆ.

‘10 ವರ್ಷ ಕರ್ನಾಟಕದಲ್ಲಿ ಅಧ್ಯಯನ ಮಾಡಿದವರು ಹಾಗೂ ಕರ್ನಾಟಕ ಮೂಲದ ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಅರ್ಹರು’ ಎಂದು ತಿಳಿಸಿ 2018ನೇ ಸಾಲಿನ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪಿ.ಜಿ. ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಪ್ರಕ್ರಿಯೆಗೆ ಹೊರಡಿಸಲಾದ ಅಧಿಸೂಚನೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾರ್ಚ್‌ 10ರಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಎಂಸಿಐ ನಿಯಮಗಳ ಪ್ರಕಾರ ಇಂತಹ ಮಾನದಂಡ ಅನುಸರಿಸುವಂತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry