ಬೀದಿಗಿಳಿದ ಲಕ್ಷಾಂತರ ವಿದ್ಯಾರ್ಥಿಗಳು

7
ಅಮೆರಿಕ: ಬಂದೂಕು ಹಿಂಸಾಚಾರದ ವಿರುದ್ಧ ಆಕ್ರೋಶ lದೇಶವ್ಯಾಪಿ ಪ್ರತಿಭಟನೆ

ಬೀದಿಗಿಳಿದ ಲಕ್ಷಾಂತರ ವಿದ್ಯಾರ್ಥಿಗಳು

Published:
Updated:
ಬೀದಿಗಿಳಿದ ಲಕ್ಷಾಂತರ ವಿದ್ಯಾರ್ಥಿಗಳು

ವಾಷಿಂಗ್ಟನ್ : ಶಾಲೆಗಳಲ್ಲಿ ನಡೆಯುವ ಬಂದೂಕಿನ ದಾಳಿಯನ್ನು ವಿರೋಧಿಸಿ ಅಮೆರಿಕದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಬುಧವಾರ ತರಗತಿ ಬಹಿಷ್ಕರಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ರಾಜಧಾನಿಯ (ವಾಷಿಂಗ್ಟನ್) ರಸ್ತೆಗಳಲ್ಲಿ ಮೆರವಣಿಗೆ ಹೊರಡುವ ಮುನ್ನ ಶ್ವೇತಭವನದ ಎದುರು ವಿದ್ಯಾರ್ಥಿಗಳು ಜಮಾಯಿಸಿದ್ದರು ವಾಷಿಂಗ್ಟನ್‌ನಿಂದ ಹಿಡಿದು ಲಾಸ್ ಏಂಜಲೀಸ್‌ವರೆಗಿನ 3,000ಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಬುಕ್ಸ್ ನಾಟ್ ಬುಲೆಟ್ಸ್’ (ಪುಸ್ತಕಗಳು ಬೇಕು, ಗುಂಡುಗಳಲ್ಲ) ಹಾಗೂ ‘ಪ್ರೊಟೆಕ್ಟ್ ಪೀ‍ಪಲ್ ನಾಟ್ ಗನ್ಸ್’ (ಮನುಷ್ಯರನ್ನು ರಕ್ಷಿಸಿ, ಬಂದೂಕುಗಳನ್ನಲ್ಲ) ಎಂಬ ಫಲಕಗಳು ವಿದ್ಯಾರ್ಥಿಗಳಕೈಯಲ್ಲಿದ್ದವು.

ಕಳೆದ ತಿಂಗಳು ಫ್ಲಾರಿಡಾದ ಪಾರ್ಕ್‌ಲ್ಯಾಂಡ್‌ನ ಹೈಸ್ಕೂಲ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಈ ದಾಳಿಯಲ್ಲಿ 14 ವಿದ್ಯಾರ್ಥಿಗಳು ಮತ್ತು ಮೂವರು ಸಿಬ್ಬಂದಿ ಸಾವನ್ನಪ್ಪಿದರು.

ಬಲಿಯಾದ 17 ಜನರ ಸ್ಮರಣಾರ್ಥ 17 ನಿಮಿಷ ತರಗತಿ ಬಹಿಷ್ಕರಿಸಲು ನಿರ್ಧಾರಿಸಲಾಗಿತ್ತು, ಆದರೆ ಬೇರೆ ಬೇರೆ ಕಡೆಗಳಲ್ಲಿ ಸೇರಿದ ವಿದ್ಯಾರ್ಥಿಗಳು ಸಂಪೂರ್ಣವಾಗಿ ತರಗತಿ ಬಹಿಷ್ಕರಿಸಲು ತೀರ್ಮಾನಿಸಿದರು. ಸಾವನ್ನಪ್ಪಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

‘ನಾವು ಎಲ್ಲವನ್ನೂ ನೋಡುತ್ತ ಕೈ ಕಟ್ಟಿ ಕೂತಿಲ್ಲ, ಇನ್ನು ಸುಮ್ಮನಿರುವುದಿಲ್ಲ ಎಂಬುದನ್ನು ಕಾಂಗ್ರೆಸ್ ಹಾಗೂ ರಾಜಕಾರಣಿಗಳಿಗೆ ತೋರಿಸಬೇಕಾಗಿದೆ. ಪಾರ್ಕ್‌ಲ್ಯಾಂಡ್‌ನಲ್ಲಿ ನಡೆದ ಗುಂಡಿನ ದಾಳಿಯೇ ಕೊನೆಯದ್ದಾಗಿರಬೇಕು’ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ 17 ವರ್ಷದ ಬ್ರೆನ್ನಾ ಲೆವಿಟನ್ ಹೇಳಿದ್ದಾನೆ.

ಇದೇ 24ರಂದು ಮತ್ತೊಮ್ಮೆ ವಿದ್ಯಾರ್ಥಿಗಳ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯಲಿದೆ. ಪ್ರತಿ ವರ್ಷ ಅಮೆರಿಕದಲ್ಲಿ 30,000ಕ್ಕೂ ಹೆಚ್ಚು ಜನ ಬಂದೂಕಿಗೆ ಬಲಿಯಾಗುತ್ತಿದ್ದಾರೆ.

ಮೊದಲ ಹೆಜ್ಜೆ: ವಿದ್ಯಾರ್ಥಿಗಳ ಪ್ರತಿಭಟನೆ ನಂತರ ಜನಪ್ರತಿನಿಧಿಗಳು ಎಚ್ಚೆತ್ತಿದ್ದಾರೆ. ಇಂಥ ಘಟನೆಗಳನ್ನು ತಡೆಯಲು ಮೊದಲ ಹೆಜ್ಜೆ ಇಟ್ಟಿದ್ದಾರೆ.

ಶಾಲೆಗಳಲ್ಲಿ ರಕ್ಷಣಾ ಕ್ರಮಗಳನ್ನು ಮೇಲ್ದರ್ಜೆಗೇರಿಸುವುದು, ಮಾನಸಿಕ ಆರೋಗ್ಯ ಕಾಪಾಡಲು ಸಮಾಲೋಚನೆ, ಬೆದರಿಕೆ ಕುರಿತು ವಿದ್ಯಾರ್ಥಿಗಳು ಮಾಹಿತಿ ನೀಡುವ ವ್ಯವಸ್ಥೆ ಅಭಿವೃದ್ಧಿಪಡಿಸುವ ಪ್ರಸ್ತಾವದ ಪರ ಜನಪ್ರತಿನಿಧಿ ಸಭೆಯಲ್ಲಿ 407–10ರ ಅಂತರದಲ್ಲಿ ಮತ ಚಲಾವಣೆ ಆಗಿದೆ.

ಆದರೆ, ಬಂದೂಕು ಬಳಕೆಯನ್ನು ನಿಯಂತ್ರಿಸುವ ಕುರಿತು ಕಾಂಗ್ರೆಸ್ ಇನ್ನೂ ನಿರ್ಧಾರ ಕೈಗೊಳ್ಳಬೇಕಿದೆ.

**

ಸಾಕು...

ಲಾಸ್ ಏಂಜಲಿಸ್‌ನ ಆಟದ ಮೈದಾನದಲ್ಲಿ ಸೇರಿದ ವಿದ್ಯಾರ್ಥಿಗಳು ನೆಲದಲ್ಲಿ ಮಲಗಿ, ‘#ಎನಫ್’ (ಸಾಕು) ಎಂದು ಘೋಷಣೆ ಕೂಗಿದರು.

‘ನಮಗೆ ಬದಲಾವಣೆ ಬೇಕು’ ಎಂದು ಆಗ್ರಹಿಸಿದ ನ್ಯೂಯಾರ್ಕ್‌ನ 50ಕ್ಕೂ ಹೆಚ್ಚು ಶಾಲೆಗಳ ವಿದ್ಯಾರ್ಥಿಗಳು, ‘ಮುಂದಿನ ಬಲಿ ನಾನೇ?’ ಎಂದು ಕೂಗಿದ್ದಾರೆ.

**

ಶಾಲೆಯಲ್ಲಿ ಬಂದೂಕು ಬೇಡ

ಶಿಕ್ಷಕರಿಗೆ ಬಂದೂಕು ಒದಗಿಸಿ, ಅದರ ಬಳಕೆಯ ತರಬೇತಿ ನೀಡುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಯೋಚನೆಯನ್ನು, ‘ತೀರಾ ಕೆಟ್ಟ ಚಿಂತನೆ’ ಎಂದು ವಿದ್ಯಾರ್ಥಿಯೊಬ್ಬ ಟೀಕಿಸಿದ್ದಾನೆ. ‘ಬಂದೂಕು ಈ ವರ್ಷ ಅನೇಕ ಜೀವಗಳನ್ನು ಆಹುತಿ ಪಡೆದಿದೆ. ಶಾಲೆಗಳಲ್ಲಿ ಬಂದೂಕಿಗೆ ಅವಕಾಶ ಇರಬಾರದು’ ಎಂಬುದು ಆತನ ಆಗ್ರಹ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry