‘ಬ್ರ್ಯಾಂಡ್‌ ಬೆಂಗಳೂರು’: ಕೊಡುಗೆ ಕೊಟ್ಟವರು ಯಾರು?

ಬುಧವಾರ, ಮಾರ್ಚ್ 20, 2019
23 °C

‘ಬ್ರ್ಯಾಂಡ್‌ ಬೆಂಗಳೂರು’: ಕೊಡುಗೆ ಕೊಟ್ಟವರು ಯಾರು?

Published:
Updated:
‘ಬ್ರ್ಯಾಂಡ್‌ ಬೆಂಗಳೂರು’: ಕೊಡುಗೆ ಕೊಟ್ಟವರು ಯಾರು?

ಬೆಂಗಳೂರು: ದೇಶ–ವಿದೇಶಗಳ ಮಾಹಿತಿ ತಂತ್ರಜ್ಞರನ್ನು, ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುತ್ತಾ ಭಾರತದ ಸಿಲಿಕಾನ್ ಸಿಟಿ, ನಿವೃತ್ತರ ಪಾಲಿನ ಸ್ವರ್ಗ ಎಂದು ಹೆಸರಾಗಿದ್ದ ರಾಜಧಾನಿಯ ಬೆಂಗಳೂರಿನ ‘ಬ್ರ್ಯಾಂಡ್‌’ ಇತ್ತೀಚಿನ ವರ್ಷಗಳಲ್ಲಿ ಕಳೆಗುಂದಿದೆ ಎಂಬ ಟೀಕೆಗಳಿವೆ.

ಕಾಂಗ್ರೆಸ್‌, ಬಿಜೆಪಿ ನಾಯಕರು ಪರಸ್ಪರ ದೂರುತ್ತಾ ತಮ್ಮದೇನೂ ತಪ್ಪಿಲ್ಲವೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಆಳ್ವಿಕೆ ಆರಂಭವಾದ ಮೇಲೆ ‘ಬೆಂಗಳೂರಿನ ಬ್ರ್ಯಾಂಡ್’ಗೆ ಧಕ್ಕೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಗೂಂಡಾಗಿರಿ ಮಿತಿ ಮೀರಿದೆ ಎಂದು ಆಪಾದಿಸುತ್ತಿರುವ ಬಿಜೆಪಿ ನಾಯಕರು, ‘ಬೆಂಗಳೂರು ರಕ್ಷಿಸಿ’ ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದಾರೆ.

ಬೆಂಗಳೂರು ಹಾಳಾಗಲು ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಪ್ರಮುಖರು ದೂರುತ್ತಿದ್ದಾರೆ. ‘ರಾಜಧಾನಿಯ ಬ್ರ್ಯಾಂಡ್‌ ಉಳಿಯ

ಬೇಕಾದರೆ ಬಿಜೆಪಿಯವರಿಂದ ಬೆಂಗಳೂರನ್ನು ರಕ್ಷಿಸಬೇಕಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ.

‘ದಕ್ಷ್‌’ ಸಂಸ್ಥೆ ‘ಪ್ರಜಾವಾಣಿ’ ಜತೆ ಕೈಜೋಡಿಸಿ ನಡೆಸಿದ ಸಮೀಕ್ಷೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ಧೋರಣೆ, ವರ್ತನೆ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಲು ಕೈಗೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿತ್ತು. ಸಮೀಕ್ಷೆಯಲ್ಲಿ ಪಡೆದ ದತ್ತಾಂಶಗಳನ್ನು ಆಧರಿಸಿ ಶಾಸಕರು ಹಾಗೂ ಮೂರು ಪಕ್ಷಗಳು ಪಡೆದ ಅಂಕವನ್ನು ಲೆಕ್ಕ ಹಾಕಲಾಗಿದೆ.

‘ಬ್ರ್ಯಾಂಡ್‌ ಬೆಂಗಳೂರು’ ಉಳಿಸಿಕೊಳ್ಳಲು ವಿವಿಧ ಪಕ್ಷಗಳ ಶಾಸಕರ ಕೊಡುಗೆ ಏನು? ಯಾವ ಪಕ್ಷದ ಶಾಸಕರು ಎಷ್ಟು ಕೊಡುಗೆ ಕೊಟ್ಟಿದ್ದಾರೆ ಎಂಬ ವಿಶ್ಲೇಷಣೆ ಇಲ್ಲಿದೆ.

ಎಂಟಕ್ಕೇರದ ಅಂಕ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಸಮೀಕ್ಷೆಯಲ್ಲಿ ಶಾಸಕರು 10 ಅಂಕಗಳಿಗೆ ಗರಿಷ್ಠ 9.08 ಅಂಕ ಪಡೆದಿದ್ದರು. ಆದರೆ, ಬೆಂಗಳೂರಿನ ಯಾವುದೇ ಶಾಸಕರು ವೈಯಕ್ತಿಕವಾಗಿ ಇಷ್ಟು ಪ್ರಮಾಣದ ಅಂಕ ಪಡೆಯಲು ಸಾಧ್ಯವಾಗಿಲ್ಲ.

ಪಕ್ಷವಾರು ಸಾಧನೆಯೇನು?: ಪಕ್ಷವಾರು ಸಾಧನೆಯಲ್ಲಿ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಬಹುತೇಕ ಸಮಾನ ಸಾಧನೆ ತೋರಿವೆ.

ಜನರಿಗೆ ನೇರವಾಗಿ ಸ್ಪಂದಿಸುವ ವಿಷಯಗಳಲ್ಲಿ  ಕಾಂಗ್ರೆಸ್‌ಗಿಂತ ಬಿಜೆಪಿಯೇ ಮುಂದಿದೆಯಾದರೂ ಪಡೆದ ಅಂಕಗಳಲ್ಲಿ ಕೇವಲ ಎಳೆಯಷ್ಟು ಅಂತರವಿದೆ. ಆದರೆ, ಗರಿಷ್ಠ ಏಳರ ಅಂಕಿಯನ್ನು ಎರಡೂ ಪಕ್ಷಗಳು ದಾಟಿಲ್ಲ. ಹಾಗೆ ನೋಡಿದರೆ, ಮೂರು ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ಶಾಸಕರೇ ಹೆಚ್ಚಿನ ಅಂಕ ಪಡೆದಿದ್ದಾರೆ.

ಪರಿಸರ ಸಂರಕ್ಷಣೆ, ಘನತ್ಯಾಜ್ಯ ನಿರ್ವಹಣೆ, ಕೆರೆಗಳ ಪುನರುಜ್ಜೀವನ, ಸಾರ್ವಜನಿಕ ಭೂಮಿ ಸಂರಕ್ಷಣೆಯಲ್ಲಿ ಕಾಂಗ್ರೆಸ್ ಸರಿಸುಮಾರು 6.5 ಅಂಕ ಪಡೆದಿದ್ದರೆ, ಬಿಜೆಪಿ 6.8 ಅಂಕ ಗಳಿಸಿದೆ.

ಬೆಂಗಳೂರಿಗೆ ಬರುವವರಿಗೆ ಹಾಗೂ ಇಲ್ಲಿನ ನಿವಾಸಿಗಳಿಗೆ ದೊಡ್ಡಸಮಸ್ಯೆಯಾಗಿ ಕಾಡುತ್ತಿರುವ ಸಂಚಾರ ದಟ್ಟಣೆ ನಿವಾರಣೆಯಲ್ಲಿ ಎರಡೂ ಪಕ್ಷಗಳು ಸಮಾನ ಅಂಕ ಪಡೆದಿವೆ.

ಏಳಕ್ಕೇ ಕೊನೆ!

ಜನರಿಗೆ ನೇರವಾಗಿ ಸಂಬಂಧಪಡುವ ವಿದ್ಯುತ್, ರಸ್ತೆ, ನೀರು, ಸಂಚಾರ ನಿರ್ವಹಣೆ, ಶಿಕ್ಷಣ, ಆರೋಗ್ಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಬೆಂಗಳೂರಿನ ಶಾಸಕರ ಒಟ್ಟಾರೆ ಸಾಧನೆ ಗರಿಷ್ಠ 7 ಅನ್ನು ತಲುಪಿದೆ. ಆದರೆ, 10ಕ್ಕೆ 10 ಅಂಕವನ್ನು ಯಾರೊಬ್ಬರೂ ಪಡೆದಿಲ್ಲ.

ಸಾರ್ವಜನಿಕ ಭೂಮಿ, ಕೆರೆ ಅಂಗಳ ಸಂರಕ್ಷಣೆ ವಿಷಯದಲ್ಲಿ ಶಾಸಕರ ಪಾತ್ರ ಹೇಗಿದೆ ಎಂಬ ಪ್ರಶ್ನೆಗೆ ಸಿಕ್ಕಿದ ಸರಾಸರಿ ಅಂಕ 6.9 ಮಾತ್ರ. ಕೆರೆಗಳ ಪುನರುಜ್ಜೀವನಕ್ಕಾಗಿ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಶಾಸಕರು ಪ್ರತಿಪಾದಿಸು

ತ್ತಾರೆ. ಆದರೆ, ಈ ವಿಷಯದಲ್ಲಿ ಪಡೆದಿರುವ ಅಂಕ ಕೇವಲ 6.7. ರಾಜಾಕಾಲುವೆ ಮರು ನಿರ್ಮಾಣ ಹಾಗೂ ಬೆಂಗಳೂರಿನ ದೊಡ್ಡ ಸಮಸ್ಯೆಯಾಗಿರುವ ಘನತ್ಯಾಜ್ಯ ನಿರ್ವಹಣೆ ಕುರಿತು ಶಾಸಕರು ಎಷ್ಟು ಕಾಳಜಿ ತೋರಿದ್ದಾರೆ ಎಂಬ ಪ್ರಶ್ನೆಗೂ ಸಮಾಧಾನಕರ ಉತ್ತರ ಸಿಕ್ಕಿಲ್ಲ. ಶಾಸಕರು ಈ ಎರಡು ವಿಷಯಗಳಲ್ಲಿ ಪಡೆದಿರುವ ಅಂಕ 6.8.

ಮಹಿಳೆಯರ ಸುರಕ್ಷೆ ಹಾಗೂ ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಶಾಸಕರು ಎಷ್ಟು ಆಸ್ಥೆ ವಹಿಸಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಕ್ರಮವಾಗಿ 6.6 ಹಾಗೂ 6.4 ಅಂಕ ಮಾತ್ರ ಚುನಾಯಿತ ಪ್ರತಿನಿಧಿಗಳಿಗೆ ಸಿಕ್ಕಿದೆ.

ಭಯೋತ್ಪಾದನೆ ನಿಗ್ರಹ: ಇಲ್ಲ ಶಹಬ್ಬಾಸ್ ಗಿರಿ

ಭಯೋತ್ಪಾದನೆ ನಿಗ್ರಹ ವಿಷಯದ ಪಕ್ಷವಾರು ಅಂಕ ಗಳಿಕೆಯಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಭಯೋತ್ಪಾದಕರಿಗೆ ಕಾಂಗ್ರೆಸ್ ರಕ್ಷಣೆ ನೀಡುತ್ತಿದೆ, ಕಾಂಗ್ರೆಸ್ ಆಳ್ವಿಕೆಯಲ್ಲಿ ಉಗ್ರಗಾಮಿಗಳ ಉಪಟಳ ಜಾಸ್ತಿಯಾಗಿದೆ ಎಂದು ಬಿಜೆಪಿ ನಾಯಕರು ಟೀಕಿಸುವುದು ಸಾಮಾನ್ಯ. ಈ ಕುರಿತು ಜನರ ಅಭಿಪ್ರಾಯ ಮಾತ್ರ ಭಿನ್ನವಾಗಿದೆ.

ಈ ಕುರಿತ ಪ್ರಶ್ನೆಗೆ ಮತದಾರರು ಬಿಜೆಪಿಗೆ 6.32 ಅಂಕ ಕೊಟ್ಟಿದ್ದರೆ, ಕಾಂಗ್ರೆಸ್‌ 6.43 ಅಂಕ ನೀಡಿದ್ದಾರೆ. ಇನ್ನು ಮಹಿಳಾ ಸುರಕ್ಷೆಯ ವಿಷಯದಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದ್ದು, ಬಿಜೆಪಿ ಮುಂದಿದೆ. ಕಾಂಗ್ರೆಸ್‌ಗೆ 6.46 ಅಂಕ, ಬಿಜೆಪಿಗೆ 6.52 ಅಂಕ ಸಿಕ್ಕಿದೆ. ಈ ಎರಡೂ ವಿಷಯಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜನರು ಶಹಬ್ಬಾಸ್‌ಗಿರಿ ನೀಡಿಲ್ಲ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಶಾಸಕರು ಎಷ್ಟರ ಮಟ್ಟಿಗೆ ಕೊಡುಗೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 6.8 ಅಂಕವನ್ನು ಪಡೆದಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry