ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೌಂಟ್‌ಡೌನ್ ಶುರು: ಸಿ.ಎಂ

ಹೊಸದುರ್ಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Last Updated 15 ಮಾರ್ಚ್ 2018, 19:33 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಯಲ್ಲಿ ಅಲ್ಲಿನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕ್ಷೇತ್ರಗಳಲ್ಲೇ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಬಿಜೆಪಿ, ಮೋದಿ ಜನಪ್ರಿಯತೆ ಕಡಿಮೆಯಾಗುತ್ತಿದೆ. ಅವರ ಕೌಂಟ್‌ಡೌನ್ ಶುರುವಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.

ಹೊಸದುರ್ಗದಲ್ಲಿ ಗುರುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ತಮ್ಮ ಕ್ಷೇತ್ರಗಳಲ್ಲೇ ಪಕ್ಷವನ್ನು ಗೆಲ್ಲಿಸಿಕೊಳ್ಳಲಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಭಾಷಣ ಮಾಡಿ, ಬಿಜೆಪಿಯನ್ನು ಗೆಲ್ಲಿಸು
ತ್ತಾರಾ? ಅಲ್ಲಿ ಸಲ್ಲದವರು ಇಲ್ಲಿ ಸಲ್ಲರಯ್ಯ, ಇಲ್ಲಿ ಸಲ್ಲುವವರು ಅಲ್ಲೂ ಸಲ್ಲುವರಯ್ಯಾ...’ ಎಂದು ವಚನ ಉಲ್ಲೇಖಿಸುತ್ತಾ ವ್ಯಂಗ್ಯವಾಡಿದರು.

'ಬಿಜೆಪಿಯವರು ಡೋಂಗಿ ಮಂದಿ. ಕ್ರಿಶ್ಚಿಯನ್, ಮುಸ್ಲಿಮರನ್ನು ಬಿಟ್ಟು ಸಬ್ ಕಾ ಸಾಥ್‌ ಸಬ್ ಕಾ ವಿಕಾಸ್ ಎಂದು ಸುಳ್ಳು ಹೇಳುತ್ತಾರೆ. ಮೋದಿ ಮಹಾನ್ ಸುಳ್ಳುಗಾರ. ಸುಳ್ಳು ಹೇಳುವವರನ್ನು ಜನ ಎಂದೂ ಬೆಂಬಲಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಆ ಪ್ರಕ್ರಿಯೆ ಶುರುವಾಗಿದೆ. ಯಾವಾಗಲೂ ದುಡಿಯುವ ಎತ್ತುಗಳಿಗೆ ಮೇವು ಹಾಕುವುದು, ಕೂಲಿ ಮಾಡುವವರಿಗೆ ಸಂಬಳ ಕೊಡುವುದು. ನಮ್ಮ ಸರ್ಕಾರ ಕೆಲಸ ಮಾಡಿದೆ. ನಮ್ಮನ್ನು ಬೆಂಬಲಿಸುತ್ತೀರಲ್ಲವೇ?' ಎಂದು ಸಿದ್ದರಾಮಯ್ಯ ನೆರೆದಿದ್ದ ಜನರತ್ತ ಕೂಗಿ ಕೇಳಿದರು.

ಇದಕ್ಕೂ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಇದೇ ವಿಷಯ ಕುರಿತು ಮಾತನಾಡಿದ ಅವರು, ‘ಉತ್ತರ ಪ್ರದೇಶದಲ್ಲಿ ಬಿಜೆಪಿ ಹಳಸಿಕೊಂಡಿದೆ. ಹೀಗಿದ್ದಾಗ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಹಿಂದುತ್ವ ಕುರಿತು ಭಾಷಣ ಮಾಡುತ್ತಾರೆ. ಅಲ್ಲೇ ಹಿಂದುತ್ವದ ಮೋಡಿ ನಡೆದಿಲ್ಲ. ಇನ್ನು ಇಲ್ಲಿ ನಡೆಯುತ್ತದೆಯೇ? ಈ ವಿಧಾನಸಭೆ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಮುಂದಿನ ಲೋಕಸಭೆ
ಯಲ್ಲೂ ಕಾಂಗ್ರೆಸ್ ಪಕ್ಷವೇ ಗೆದ್ದು ಸರ್ಕಾರ ರಚನೆ ಮಾಡಲಿದೆ’ ಎಂದರು.

ಕಾರ್ಯಕ್ರಮ ಸರ್ಕಾರದ್ದೋ... ಪಕ್ಷದ್ದೋ...?

‘ಏಯ್ ಬಾವುಟ ಕೆಳಗಿಳಿಸಪ್ಪ... ಇದು ಪಕ್ಷದ ಕಾರ್ಯಕ್ರಮ ಅಲ್ಲ, ಸರ್ಕಾರದ ಕಾರ್ಯಕ್ರಮ... ಕೆಳಗಿಳಿಸು ಬಾವುಟಗಳನ್ನ’ ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾವುಟ ಹಾರಿಸುತ್ತಿದ್ದ ಸಭಿಕರಿಗೆ ಸೂಚನೆ ನೀಡಿದರು.
ಮುಖ್ಯಮಂತ್ರಿ ಮಾತಿಗೆ ಸ್ಪಂದಿಸಿದ ಸಭಿಕರು ಬಾವುಟ ಕೆಳಗಿಳಿಸಿದರು. ಆದರೆ, ಮುಖ್ಯಮಂತ್ರಿ ಮಾತು ಮುಂದುವರಿಸುತ್ತಾ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆ
ಸುತ್ತಾ, ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳಿದರು. ಭ್ರಷ್ಟ ಸರ್ಕಾರ ಬೇಕೆಂದರೆ ಬಿಜೆಪಿಗೆ ಮತ ಹಾಕಿ, ಸ್ಥಿರ ಸರ್ಕಾರ ಬೇಕೆಂದರೆ ನಮ್ಮನ್ನು ಬೆಂಬಲಿಸಿ ಎಂದರು.
ಕಾರ್ಯಕ್ರಮದ ಕೊನೆಯಲ್ಲಿ ಮಾಜಿ ಶಾಸಕ ಇಲ್ಕಲ್ ವಿಜಯ ಕುಮಾರ್ ಮತ್ತು ಇತರರು ಮುಖ್ಯಮಂತ್ರಿ ಸಮ್ಮುಖದಲ್ಲೇ ಕಾಂಗ್ರೆಸ್ ಪಕ್ಷ ಸೇರಿದರು. ಜಿಲ್ಲಾಧಿಕಾರಿ ಸ್ವಾಗತ ಮಾಡಿದ್ದನ್ನು ಹೊರತುಪಡಿಸಿ, ಇಡೀ ಕಾರ್ಯಕ್ರಮ ಪಕ್ಷದ ಕಾರ್ಯಕ್ರಮದಂತೆ ಕಾಣುತ್ತಿತ್ತು. ಇದು ಸರ್ಕಾರಿ ಕಾರ್ಯಕ್ರಮವೋ, ಪಕ್ಷದ ಕಾರ್ಯಕ್ರಮವೋ ಎಂಬ ಗೊಂದಲವಂತೂ ಹಾಗೇ ಉಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT