ಕಡಲತಡಿಯ ಕ್ಷೇತ್ರದಲ್ಲಿ ಸಂತ್ರಸ್ತರೇ ನಿರ್ಣಾಯಕ!

7
ಜನರನ್ನು ಕಾಡುತ್ತಿದೆ ಏಷ್ಯಾದ ಅತಿದೊಡ್ಡ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆ ‘ಗುಮ್ಮ’

ಕಡಲತಡಿಯ ಕ್ಷೇತ್ರದಲ್ಲಿ ಸಂತ್ರಸ್ತರೇ ನಿರ್ಣಾಯಕ!

Published:
Updated:
ಕಡಲತಡಿಯ ಕ್ಷೇತ್ರದಲ್ಲಿ ಸಂತ್ರಸ್ತರೇ ನಿರ್ಣಾಯಕ!

ಕಾರವಾರ: ಒಂದೆಡೆ ಸಮುದ್ರ, ಮತ್ತೊಂದೆಡೆ ನಿತ್ಯಹರಿದ್ವರ್ಣ ಕಾಡು ತುಂಬಿರುವ ಬೆಟ್ಟಗಳ ಸಾಲು. ಇವುಗಳ ನಡುವೆ ಇರುವುದು ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರ. ಶಿರಸಿ ಕ್ಷೇತ್ರದೊಂದಿಗೆ ಇದ್ದ ಅಂಕೋಲಾವನ್ನು, 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದ ಬಳಿಕ ಕಾರವಾರ ಕ್ಷೇತ್ರ ತನ್ನ ಜತೆಗೆ ಸೇರಿಸಿಕೊಂಡಿತು.

ಕಾರವಾರವು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವೂ ಆಗಿದೆ. ರಾಜ್ಯದ ಪ್ರವಾಸೋದ್ಯಮ ನಕಾಶೆಯಲ್ಲಿ ಗಮನಾರ್ಹ ಸ್ಥಾನ ಪಡೆದಿರುವ ಸುಂದರ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಯುದ್ಧನೌಕೆ ವಸ್ತು ಸಂಗ್ರಹಾಲಯ ಹಾಗೂ ಈಚೆಗಷ್ಟೇ ಲೋಕಾರ್ಪಣೆಯಾದ ಶಿಲ್ಪವನ ಈ ಕ್ಷೇತ್ರದ ಆಕರ್ಷಣೆ. ಇಡೀ ಜಗತ್ತಿನ ಗಮನ ಸೆಳೆದಿರುವ ಕೈಗಾ ಅಣು ವಿದ್ಯುತ್ ಸ್ಥಾವರ ಹಾಗೂ ಸೀಬರ್ಡ್ ನೌಕಾನೆಲೆ ಯೋಜನೆಯೂ (ಕದಂಬ ನೌಕಾನೆಲೆ) ಇದೇ ಕ್ಷೇತ್ರ ವ್ಯಾಪ್ತಿಯಲ್ಲಿವೆ. ಮೀನುಗಾರಿಕೆಯನ್ನೇ ಪ್ರಮುಖ ಆದಾಯ ಮೂಲವನ್ನಾಗಿ ನಂಬಿರುವ ಸ್ಥಳೀಯರಿಗೆ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ‘ಗುಮ್ಮ’ ಈಗಲೇ ಕಾಡಲಾರಂಭಿಸಿದೆ.

ಸೀಬರ್ಡ್ ನೌಕಾನೆಲೆ ಯೋಜನೆಗೆ ಜಮೀನು ಕೊಟ್ಟಿದ್ದ 4,032 ಕುಟುಂಬಗಳಿಗೆ, ಮೂರು ದಶಕಗಳ ಕಾನೂನು ಹೋರಾಟದ ಬಳಿಕ ಈ ವರ್ಷ ಫೆಬ್ರುವರಿ ತಿಂಗಳಲ್ಲಿ ಪರಿಹಾರ ವಿತರಣೆ ಮಾಡಲಾಗಿದೆ.

‘ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಲ್ಲದಷ್ಟು ಸಂತ್ರಸ್ತರು ನಮ್ಮ ಕ್ಷೇತ್ರದಲ್ಲಿದ್ದಾರೆ. ಅವರಿಗೆ ಸೂಕ್ತ ನೆಲೆ ಕಲ್ಪಿಸದಿರುವ ವಿಚಾರವೇ ಈ ಬಾರಿಯ ಚುನಾವಣೆಯಲ್ಲಿ ಈ ಭಾಗದ ಜನರಿಗೆ ಮುಖ್ಯವಾಗಲಿದೆ. ಅವರೇ ಈ ಬಾರಿಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವನ್ನು ನಿರ್ಧರಿಸಲಿದ್ದಾರೆ’ ಎನ್ನುತ್ತಾರೆ ಅಂಕೋಲಾ ತಾಲ್ಲೂಕಿನ ಹಳುವಳ್ಳಿ ನಿವಾಸಿ, ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಮ ಗಾಂವ್ಕರ್.

‘ಹಳೆ ಮೈಸೂರು ಭಾಗದಲ್ಲಿರುವಂತೆ ಒಂದೇ ಸಮುದಾಯಕ್ಕೆ ಸೇರಿದ ಮತದಾರರು ಭಾರಿ ಸಂಖ್ಯೆಯಲ್ಲಿ ಇಲ್ಲಿ ಇಲ್ಲ. ಆದರೆ, ಕ್ಷೇತ್ರದ ಎರಡೂ ತಾಲ್ಲೂಕುಗಳಲ್ಲಿ ಮೀನುಗಾರರು ಪ್ರಮುಖರಾಗಿದ್ದಾರೆ. ಉಳಿದಂತೆ ಕೊಂಕಣ ಮರಾಠ, ಕೋಮಾರಪಂಥ, ಹಾಲಕ್ಕಿ ಒಕ್ಕಲಿಗ, ನಾಡವರು ಪ್ರಭಾವ ಬೀರುತ್ತಾರೆ’ ಎನ್ನುತ್ತಾರೆ ನಿವೃತ್ತ ಪ್ರಾಂಶುಪಾಲ, ಕಾರವಾರದ ಆರ್.ಎಸ್.ಹಬ್ಬು.

ಇದೊಂದು ‘ಪ್ರವಾಸೋದ್ಯಮ ಕ್ಷೇತ್ರ’. ಪ್ರವಾಸಿ ತಾಣಗಳನ್ನೇ ಪ್ರಮುಖ ಆದಾಯ ಮೂಲಗಳನ್ನಾಗಿ ಬಳಸಿಕೊಳ್ಳುವ ಎಲ್ಲ ಅವಕಾಶಗಳೂ ಇಲ್ಲಿವೆ. ಅದರ ಬದಲು ಬೇರೆ ಯಾವುದೇ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿದರೂ ಅದರಿಂದ ಇಲ್ಲಿನ ಪ್ರಕೃತಿಗೆ ತೊಂದರೆಯಾಗುತ್ತದೆ. ನೈಸರ್ಗಿಕವಾಗಿರುವ ಸಂಪತ್ತಿನ ಸಹಜ ಸದ್ಬಳಕೆಯೇ ಈ ಬಾರಿಯ ಚುನಾವಣಾ ವಿಚಾರವಾಗಬೇಕು ಎಂಬುದು ಅವರ ಅನಿಸಿಕೆಯಾಗಿದೆ.

ನಿರ್ಣಾಯಕವೂ ಆಗಿತ್ತು!: ‘ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಉಳಿವಿನಲ್ಲಿ ಈ  ಕ್ಷೇತ್ರ ನಿರ್ಣಾಯಕವಾಗಿತ್ತು. ಆನಂದ ಅಸ್ನೋಟಿಕರ್ ಇಲ್ಲದಿದ್ದರೆ ಆ ಸರ್ಕಾರ ಉಳಿಯುತ್ತಿತ್ತೋ ಇಲ್ಲವೋ ಎಂಬ ಭಾವನೆ ಕೆಲವರಲ್ಲಿದೆ. ಆದರೆ, ಆಗಿನ ಪರಿಸ್ಥಿತಿಯಲ್ಲಿ ಬಿಜೆಪಿಯವರು ಬೇರೆಯವರನ್ನು ಕರೆದುಕೊಂಡು ಬಂದಾದರೂ ಸರ್ಕಾರವನ್ನು ಉಳಿಸಿಕೊಳ್ಳುತ್ತಿ

ದ್ದರು’ ಎಂದು ಅಭಿಪ್ರಾಯಪಡುತ್ತಾರೆ ಶಿವರಾಮ ಗಾಂವ್ಕರ್.

ಜೈಲು ಸೇರಿದ್ದು ಕಪ್ಪುಚುಕ್ಕೆ: ‘ಭ್ರಷ್ಟಾಚಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕಾಗಿದ್ದ ಶಾಸಕ ಸತೀಶ್‌ ಸೈಲ್‌, ಅಂಥದ್ದೊಂದು ಅವಕಾಶವನ್ನು ಸ್ವತಃ ಕಳೆದುಕೊಂಡರು. ಗಣಿ ಅಕ್ರಮದಲ್ಲಿ ಸಿಲುಕಿದ ಅವರನ್ನು, 2013ರ ಸೆಪ್ಟೆಂಬರ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದರು. ಇದು ಈ ಕ್ಷೇತ್ರಕ್ಕೆ ಕಪ್ಪುಚುಕ್ಕೆಯಾಯಿತು’ ಎಂಬ ಬೇಸರ ಕಾರವಾರದ ನಿವಾಸಿಯೊಬ್ಬರದು.

ಮೂಲ ಸೌಕರ್ಯಕ್ಕೆ ಆದ್ಯತೆ

ನಾನು ಪಕ್ಷೇತರ ಶಾಸಕನಾಗಿ ಆಯ್ಕೆಯಾದರೂ ಕ್ಷೇತ್ರದ ಅಭಿವೃದ್ಧಿಗೆ ₹ 1,650 ಕೋಟಿ ಅನುದಾನ ತಂದಿದ್ದೇನೆ. ಕ್ಷೇತ್ರದ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದ್ದ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿದ್ದೇನೆ. ಇದರಿಂದ ಹತ್ತಾರು ಗ್ರಾಮಗಳ ನಡುವೆ ಸಂಪರ್ಕ ಸಾಧ್ಯವಾಗಿದೆ.

ಅಂಕೋಲಾ ತಾಲ್ಲೂಕಿನ ಮಂಜಗುಣಿಯಲ್ಲಿ ಗಂಗಾವಳಿ ನದಿಗೆ ₹ 30 ಕೋಟಿ ವೆಚ್ಚದ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಳಿ ನದಿಗೆ ಸದಾಶಿವಗಡ ಹಾಗೂ ಮಲ್ಲಾಪುರದಲ್ಲಿ ಸೇತುವೆ ಕಟ್ಟಲಾಗಿದೆ. ಸುಮಾರು 40 ಕಿ.ಮೀ ವ್ಯಾಪ್ತಿಯ ಜನರಿಗೆ ಇದರ ಪ್ರಯೋಜನ ಸಿಗುತ್ತದೆ. ಕಾರವಾರ– ಮಲ್ಲಾಪುರದ ನಡುವೆ 20 ಕಿ.ಮೀ.ಗಳಷ್ಟು ಅಂತರ ಕಡಿಮೆಯಾಗಿದೆ. ಅಂಕೋಲಾ ತಾಲ್ಲೂಕಿನ ಡೊಂಗ್ರಿ– ಸುಂಕಸಾಳ ನಡುವೆ ಗಂಗಾವಳಿ ನದಿಗೆ ₹ 1.65 ಕೋಟಿ ವೆಚ್ಚದಲ್ಲಿ ತೂಗುಸೇತುವೆ ನಿರ್ಮಾಣ ಮಾಡಲಾಗಿದೆ.

ಕಾರವಾರದಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ನನ್ನ ಅವಧಿಯಲ್ಲಿ ಆಗಿದೆ. ಚಿತ್ತಾಕುಲಾ ಗ್ರಾಮದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಮೈದಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕಾರವಾರ ಮತ್ತು ಅಂಕೋಲಾಕ್ಕೆ ಗಂಗಾವಳಿ ನದಿಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಸಿದ್ಧವಾಗಿದೆ. ₹ 250 ಕೋಟಿ ವೆಚ್ಚದ ಕಾಮಗಾರಿಗೆ ಸಂಪುಟ ಅನುಮೋದನೆ ನೀಡುವ ವಿಶ್ವಾಸವಿದೆ.

ಸತೀಶ್ ಸೈಲ್, ಶಾಸಕ

***

ಪಕ್ಷ ನಿಷ್ಠೆ ಕಡಿಮೆ!

‘ಕಾರವಾರ– ಜೋಯಿಡಾ ಕ್ಷೇತ್ರ ಇದ್ದಾಗಿನಿಂದಲೂ ಇಲ್ಲಿ ಪಕ್ಷವನ್ನು ಆಧರಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಉದಾಹರಣೆ ಕಡಿಮೆ. ಆದರೆ, ವ್ಯಕ್ತಿಯೇ ಮುಖ್ಯವಾಗುತ್ತಾರೆ’ ಎನ್ನುತ್ತಾರೆ ಆರ್.ಎಸ್.ಹಬ್ಬು.

1952ರಲ್ಲಿ ಬಿ.ಪಿ.ಕದಂ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿಯಿಂದ ಆಯ್ಕೆಯಾದರು. ನಂತರದ ಅವಧಿಯಲ್ಲಿ ಕಾಂಗ್ರೆಸ್‌ ಸೇರ್ಪಡೆಯಾಗಿಯೂ ಅವರು ಜಯಶಾಲಿಯಾದರು. ಆನಂತರ, ಪ್ರಭಾಕರ ರಾಣೆ ಅವರು ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾದರು. ಅವರ ಶಿಷ್ಯ ವಸಂತ ಅಸ್ನೋಟಿಕರ್ 1994ರಲ್ಲಿ ಎಸ್.ಬಂಗಾರಪ್ಪ ಅವರು ಸ್ಥಾಪಿಸಿದ್ದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು; 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿಯೂ ಶಾಸಕರಾಗಿ ಆಯ್ಕೆಯಾದರು. 2008ರಲ್ಲಿ ಕಾಂಗ್ರೆಸ್‌ನಿಂದ ಆನಂದ ಅಸ್ನೋಟಿಕರ್ ಆಯ್ಕೆಯಾದರು.

ಈ ಹಿನ್ನೆಲೆಯನ್ನು ಗಮನಿಸಿದರೆ, ಈ ಕ್ಷೇತ್ರದ ಮತದಾರರು ಅಭ್ಯರ್ಥಿಯ ಆಯ್ಕೆಗೆ ತಮ್ಮದೇ ಆದ ಪ್ರತ್ಯೇಕ ಮಾನದಂಡವನ್ನು ಅಳವಡಿಸಿಕೊಂಡಿರುವ ಹಾಗಿದೆ ಎನ್ನುವುದು ಅವರ ಅಭಿಮತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry