ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ: ಆರ್‌ಎಸ್‌ಎಸ್‌ ತಟಸ್ಥ

ಯಾವ ಪಕ್ಷದ ಪರವಾಗಿಯೂ ಕೆಲಸ ಮಾಡುವುದಿಲ್ಲ– ಕ್ಷೇತ್ರೀಯ ಸಂಘಚಾಲಕ ನಾಗರಾಜ್‌
Last Updated 15 ಮಾರ್ಚ್ 2018, 20:02 IST
ಅಕ್ಷರ ಗಾತ್ರ

ಬೆಂಗಳೂರು: ‘ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನಿಲುವು ತಟಸ್ಥವಾಗಿದೆ’ ಎಂದು ಸಂಘಟನೆಯ ದಕ್ಷಿಣ–ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್
ಸ್ಪಷ್ಟಪಡಿಸಿದರು.

ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠಾಧೀಶರು ಹಾಗೂ ಸಾಮಾಜಿಕ ಮುಖಂಡರು ಒಮ್ಮತದಿಂದ ತೆಗೆದುಕೊಂಡ ನಿರ್ಣಯವನ್ನು ನಾವು ಒಪ್ಪುತ್ತೇವೆ. ಅದರ ಹೊರತಾಗಿ ಈ ವಿಚಾರದಲ್ಲಿ ಸಂಘಕ್ಕೆ ಪ್ರತ್ಯೇಕ ನಿಲುವು ಹೊಂದಿಲ್ಲ’ ಎಂದು ಹೇಳಿದರು.

‘ವೀರಶೈವ–ಲಿಂಗಾಯತ ಒಂದಾಗಿದ್ದರೂ ಅಥವಾ ಪ್ರತ್ಯೇಕಗೊಂಡರೂ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅವರು ಆಚರಿಸುವುದು ಹಿಂದೂ ಜೀವನ ಪದ್ಧತಿಯನ್ನೇ. ದೇಶದ ಬಗ್ಗೆ ನಿಷ್ಠೆ ಇರುವವರು, ಪರಂಪರೆಯನ್ನು ಗೌರವಿಸುವವರನ್ನು ಹಿಂದೂಗಳು ಎನ್ನುತ್ತೇವೆ. ಅವರು ಯಾವ ದೇವರನ್ನಾದರೂ ಪೂಜಿಸಲಿ. ಅದು ನಮಗೆ ಮುಖ್ಯವಲ್ಲ. ಸಂಘದಲ್ಲಿ ನಾಸ್ತಿಕರೂ ಇದ್ದಾರೆ’ ಎಂದರು.

‘ರಾಮಮಂದಿರ ವಿಷಯವನ್ನು ನಾವು ಧಾರ್ಮಿಕವಾಗಿ ನೋಡಿಯೇ ಇಲ್ಲ. ರಾಮ, ಬುದ್ಧ, ಬಸವಣ್ಣ, ಮಹಾವೀರ... ಇವರೆಲ್ಲರೂ ಈ ದೇಶದ ಪರಂಪರೆ. ಅವರ ಗೌರವಕ್ಕೆ ಚ್ಯುತಿ ಬಾರದಂತೆ ಆರ್‌ಎಸ್‌ಎಸ್‌ ನೋಡಿಕೊಳ್ಳುತ್ತಿದೆ. ಮಂದಿರ ಕಟ್ಟಲು ಸಕಲ ಸಿದ್ಧತೆ ನಡೆದಿದೆ. ಸುಪ್ರೀಂ ಕೋರ್ಟ್‌ ತೀರ್ಪು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ’ ಎಂದರು.

ಚುನಾವಣೆ ಪ್ರತಿಷ್ಠೆಯಲ್ಲ:‘ಚುನಾವಣೆಯನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಕು. ಅದು ಆ ಕೆಲಸ ಮಾಡಿದೆ. ಆದರೆ, ಸಂಘಕ್ಕೆ ಅದು ಅನ್ವಯ ಆಗುವುದಿಲ್ಲ. 1925 ರಿಂದ 1950ರ ತನಕ ಸಂಘ ಒಂಟಿಯಾಗಿಯೇ ಕೆಲಸ ಮಾಡಿದೆ. ಆ ಬಳಿಕ ಜನಸಂಘ ಪ್ರಾರಂಭವಾಯಿತು. ಆ ಸಂದರ್ಭದಲ್ಲಿ ಭಿತ್ತಿಪತ್ರ ಅಂಟಿಸುವುದಕ್ಕೂ ಜನಸಂಘದವರು ಶಕ್ತರಿರಲಿಲ್ಲ. ಅಭ್ಯರ್ಥಿಗಳ ಹೆಸರನ್ನು ಬಣ್ಣದ ಪೆನ್ನುಗಳಲ್ಲಿ ಬರೆಯುತ್ತಿದ್ದರು. ಆ ವೇಳೆಯೂ ಆರ್‌ಎಸ್ಎಸ್‌ ಪ್ರತ್ಯೇಕತೆ ಕಾಪಾಡಿಕೊಂಡಿತ್ತು’ ಎಂದರು.

‘ಚುನಾವಣೆಗಾಗಿ ಕೆಲಸ ಮಾಡುವ ಅಗತ್ಯ ನಮಗಿಲ್ಲ. ಸಂಘದ ಬೆಳವಣಿಗೆಗಾಗಿ ನಾವು ದುಡಿಯುತ್ತಿದ್ದೇವೆ. ಅದು ನಿರಂತರ
ವಾಗಿರುತ್ತದೆ. ಇದು ಯಾರಿಗಾದರೂ ಅನುಕೂಲವಾದರೆ, ಆಗಲಿ. ಪ್ರಜಾಪ್ರಭುತ್ವ ದೇಶ ಆಗಿರುವುದರಿಂದ ನಮಗೆ ಚುನಾವಣೆ ಮುಖ್ಯವಾಗುತ್ತದೆಯೇ ಹೊರತು ಬಿಜೆಪಿಗಾಗಿ ಅಲ್ಲ’ ಎಂದರು.

‘ಮತದಾನದ ಪ್ರಮಾಣ ಕಡಿಮೆ ಯಾಗುತ್ತಿರುವುದರಿಂದ ಮತ ಹಾಕಬೇಕೆಂದು ಸಂಘವು ಎಲ್ಲಾ ಕಾರ್ಯಕರ್ತರಿಗೂ ನಿರ್ದೇಶಿಸಿದೆ. ಮತ ಚಲಾಯಿಸುವ ಬಗ್ಗೆ ಜನರಲ್ಲೂ ಜಾಗೃತಿ ಮೂಡಿಸಬೇಕೆಂದು ತಿಳಿಸಿದೆ. ಇದರ ಹೊರತಾಗಿ ಯಾವುದೇ ನಿರ್ದೇಶನವನ್ನು ಅಥವಾ ಕಾರ್ಯಸೂಚಿಯನ್ನು ಪ್ರಕಟಿಸಿಲ್ಲ. ಇದೇ ಪಕ್ಷಕ್ಕೆ ಮತ ಹಾಕಿ ಎಂದೂ ಸಂಘ ಹೇಳುವುದಿಲ್ಲ. ಸ್ವಪ್ರೇರಣೆಯಿಂದ ಆ ಕೆಲಸ ಮಾಡುವ
ವರು ಮಾಡಬಹುದು’ ಎಂದರು.

‘ಬಿಜೆಪಿ ಹಾಗೂ ಸಂಘದ ನಡುವೆ ಬಾಂಧವ್ಯ ಉತ್ತಮವಾಗಿದೆ. ನಮಗೆ ಎಲ್ಲಾ ನಾಯಕರೂ ಒಂದೇ. ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ. ರಾಜಕೀಯವಾಗಿ ಅವರು ಸಮಸ್ಯೆ ಮಾಡಿಕೊಂಡಿದ್ದರೆ, ಅದಕ್ಕೂ ಸಂಘಕ್ಕೂ ಸಂಬಂಧವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
***
ಭಾರತೀಯ ಭಾಷೆಗಳ ಸಂರಕ್ಷಣೆಗೆ ಸಂಕಲ್ಪ
400ಕ್ಕೂ ಹೆಚ್ಚು ಭಾರತೀಯ ಭಾಷೆಗಳು ವಿನಾಶದ ಅಂಚಿನಲ್ಲಿವೆ ಎಂದು ಯುನೆಸ್ಕೊದ ಇತ್ತೀಚಿನ ವರದಿ ಹೇಳಿದೆ. ಹಾಗಾಗಿ ಭಾರತೀಯ ಭಾಷೆಗಳನ್ನು ಉಳಿಸುವ ಸಂಕಲ್ಪವನ್ನು ಸಂಘ ಮಾಡಿದೆ. ನಾಗಪುರದಲ್ಲಿ ನಡೆದ ಅಖಿಲ ಭಾರತ ಪ್ರತಿನಿಧಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂದು ನಾಗರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT