ಮಂಗಳೂರು ಪಬ್‌ ದಾಳಿ: ವಿಡಿಯೊ, ಫೋಟೊ ಸಾಕ್ಷ್ಯಗಳೇ ಆಗಿರಲಿಲ್ಲ!

7

ಮಂಗಳೂರು ಪಬ್‌ ದಾಳಿ: ವಿಡಿಯೊ, ಫೋಟೊ ಸಾಕ್ಷ್ಯಗಳೇ ಆಗಿರಲಿಲ್ಲ!

Published:
Updated:
ಮಂಗಳೂರು ಪಬ್‌ ದಾಳಿ: ವಿಡಿಯೊ, ಫೋಟೊ ಸಾಕ್ಷ್ಯಗಳೇ ಆಗಿರಲಿಲ್ಲ!

ಮಂಗಳೂರು: 2009ರ ಜನವರಿ 24ರಂದು ನಗರದ ಬಲ್ಮಠ ರಸ್ತೆಯ ಆಮ್ನೇಸಿಯಾ ಪಬ್‌ ಮೇಲೆ ನಡೆದ ದಾಳಿಗೆ ಸಂಬಂಧಿಸಿದ ವಿಡಿಯೊ ತುಣು

ಕುಗಳು, ಛಾಯಾಚಿತ್ರಗಳನ್ನು ಮತ್ತು ಸಂತ್ರಸ್ತ ಮಹಿಳೆಯರನ್ನು ಸಾಕ್ಷಿಯನ್ನಾಗಿ ಹಾಜರುಪಡಿಸದೇ ಇರುವುದು ಪ್ರಾಸಿಕ್ಯೂಷನ್‌ ಪಾಲಿಗೆ ಮಾರ

ಕವಾಯಿತು ಎಂದು ನಗರದ ಎರಡನೇ ಜೆಎಂಎಫ್‌ ನ್ಯಾಯಾಲಯ ಹೇಳಿದೆ.

ಪುರುಷ ಮತ್ತು ಮಹಿಳಾ ಗ್ರಾಹಕರನ್ನು ಥಳಿಸಿದ್ದ ಹಾಗೂ ಸ್ವತ್ತುಗಳಿಗೆ ಹಾನಿ ಮಾಡಿದ್ದ ಆರೋಪದಿಂದ ಪ್ರಮೋದ್‌ ಮುತಾಲಿಕ್‌ ಸೇರಿದಂತೆ 27 ಮಂದಿಯನ್ನು ಖುಲಾಸೆಗೊಳಿಸಿ ನ್ಯಾಯಾಲಯ ಸೋಮವಾರ ಆದೇಶ ಹೊರಡಿಸಿತ್ತು.

ಆದೇಶದ ಪೂರ್ಣಪ್ರತಿ ಲಭ್ಯವಾಗಿದ್ದು, ‘ತನಿಖೆ ಮತ್ತು ವಿಚಾರಣೆಯ ಎಲ್ಲ ಹಂತಗಳಲ್ಲಿ ಪ್ರಾಸಿಕ್ಯೂಷನ್‌ ಆರೋಪ ಸಾಬೀತು ಮಾಡಲು ಸಂಪೂರ್ಣ ವಿಫಲವಾಗಿವೆ’ ಎಂದು ನ್ಯಾಯಾಧೀಶ ಆರ್‌.ಮಂಜುನಾಥ್‌ ಅಭಿಪ್ರಾಯಪಟ್ಟಿದ್ದಾರೆ.

ಪಬ್‌ ಮೇಲೆ ದಾಳಿ ನಡೆದಾಗ ಮಾಧ್ಯಮದವರು ಹೊರಗೆ ಕಾಯುತ್ತಿದ್ದರು. ಘಟನೆಯ ವಿಡಿಯೊ ಮತ್ತು ಫೋಟೊಗಳನ್ನು ಸೆರೆಹಿಡಿದಿದ್ದು, ಪ್ರಸಾರ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್‌ ವಿಚಾರಣೆ ವೇಳೆ ತಿಳಿಸಿದೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ವಿಡಿಯೊ ಮತ್ತು ಫೋಟೊಗಳು ಪ್ರಬಲ ಸಾಕ್ಷ್ಯವಾಗುತ್ತವೆ. ಆದರೆ, ತನಿಖಾಧಿಕಾರಿಯು ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ವಿಡಿಯೊ ಮತ್ತು ಫೋಟೊಗಳನ್ನು ಹಾಜರುಪಡಿಸಿಲ್ಲ. ಇದು ಪ್ರಾಸಿಕ್ಯೂಷನ್‌ ಪಾಲಿಗೆ ಮಾರಕವಾಯಿತು’ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತ ಮಹಿಳೆಯರೂ ಹಾಜರಾಗಿಲ್ಲ:ಪ್ರಕರಣದಲ್ಲಿ ಮಹಿಳೆಯರ ಮೇಲೂ ಹಲ್ಲೆ ನಡೆದಿತ್ತು ಎಂಬ ಉಲ್ಲೇಖವಿದೆ. ಆದರೆ, ತನಿಖಾಧಿಕಾರಿಯು ಸಂತ್ರಸ್ತ ಮಹಿಳೆಯರನ್ನು ಗುರುತಿಸಿ ಅವರನ್ನು ಸಾಕ್ಷಿಯನ್ನಾಗಿ ಹೆಸರಿಸಿಲ್ಲ. ನ್ಯಾಯಾಲಯಕ್ಕೂ ಹಾಜರುಪಡಿಸುವ ಕೆಲಸ ಮಾಡಿಲ್ಲ. ಇಂತಹ ಪ್ರಕರಣದಲ್ಲಿ ಮಹಿಳಾ ಗ್ರಾಹಕರು ಪ್ರಮುಖ ಸಾಕ್ಷಿಗಳಾಗುತ್ತಾರೆ. ತನಿಖಾಧಿಕಾರಿಯು ಅವರನ್ನು ವಿಚಾರಣೆ ನಡೆಸಿದ್ದರೆ ಸತ್ಯ ಹೊರಬರುತ್ತಿತ್ತು. ಆರೋಪಿಗಳನ್ನು ಸ್ಪಷ್ಟವಾಗಿ ಗುರುತಿಸಲು ಅವರು ಅತ್ಯುತ್ತಮ ಸಾಕ್ಷಿಗಳಾಗುತ್ತಿದ್ದರು ಎಂದು ನ್ಯಾಯಾಲಯ ಹೇಳಿದೆ.

‘ಸಂತ್ರಸ್ತ ಮಹಿಳೆಯರನ್ನು ಗುರುತಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೇ ಇರುವುದು ಪ್ರಾಸಿಕ್ಯೂಷನ್‌ ಪಾಲಿಗೆ ತಿರುಗುಬಾಣವಾಯಿತು. ಅಲ್ಲದೇ ಪ್ರಾಸಿಕ್ಯೂಷನ್‌ ಆರೋಪಿಗಳ ವಿರುದ್ಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಂಶಯ ಹುಟ್ಟಿಕೊಳ್ಳಲು ಇದು ಕಾರಣವಾಗಿದೆ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ದೂರು ನೀಡಿದ್ದ ಪಬ್‌ ಗುತ್ತಿಗೆ ಪಡೆದಿದ್ದ ಡಾ.ರಾಜಶೇಖರ್‌, ಬಾರ್‌ ಮಾಲೀಕ ಸಂತೋಷ್‌, ಪಬ್‌ ವ್ಯವಸ್ಥಾಪಕ, ಸಿಬ್ಬಂದಿ ಸೇರಿದಂತೆ ಹಲವು ಸಾಕ್ಷಿಗಳು ವಿಚಾರಣೆ ವೇಳೆ ಪ್ರತಿಕೂಲ ಸಾಕ್ಷ್ಯ ಹೇಳಿದ್ದಾರೆ.

ಆರೋಪಪಟ್ಟಿಯಲ್ಲಿ ಲಗತ್ತಿಸಿದ್ದ ಹೇಳಿಕೆಗಳನ್ನು ನಿರಾಕರಿಸಿದ್ದಾರೆ. ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಪವನ್‌ರಾಜ್‌ ಶೆಟ್ಟೆ ಎಂಬ ವ್ಯಕ್ತಿ ಕೂಡ ಪ್ರತಿಕೂಲ ಸಾಕ್ಷ್ಯವನ್ನೇ ಹೇಳಿದ್ದಾರೆ. ‘ಹಲ್ಲೆ ನಡೆದಿದ್ದು ನಿಜ. ಹಲ್ಲೆ ಮಾಡಿದವರು ಯಾರು ಎಂಬುದು ತಿಳಿದಿಲ್ಲ’ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಪೊಲೀಸರನ್ನು ಹೊರತುಪಡಿಸಿದಂತೆ ದೂರುದಾರರು, ಸಂತ್ರಸ್ತರು, ಪಬ್‌ ಸಿಬ್ಬಂದಿ ಸೇರಿ ಯಾವುದೇ ಸಾಕ್ಷಿಯೂ ಘಟನೆಯಲ್ಲಿ ಭಾಗಿಯಾದ ಆರೋಪಿಗಳು ಮತ್ತು ಅವರು ಪ್ರತಿನಿಧಿಸುತ್ತಿದ್ದ ಸಂಘಟನೆಯನ್ನು ವಿಚಾರಣೆ ವೇಳೆ ಗುರುತಿಸಿಲ್ಲ ಎಂಬುದನ್ನು ನ್ಯಾಯಾಧೀಶರು ಆದೇಶದಲ್ಲಿ ದಾಖಲಿಸಿದ್ದಾರೆ. ‘ಆ ದಿನ ಪಬ್‌ ಸಿಬ್ಬಂದಿ ಮತ್ತು ಗುಂಪೊಂದರ ನಡುವೆ ಗಲಾಟೆ ನಡೆದಿತ್ತು’ ಎಂದು ಪಬ್‌ ಸಿಬ್ಬಂದಿ ವಿಚಾರಣೆ ವೇಳೆ ಹೇಳಿರುವ ಅಂಶವೂ ಅದರಲ್ಲಿದೆ.

ಮಂಗಳೂರು ಉತ್ತರ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿದ್ದ ಹೆಡ್‌ ಕಾನ್‌ಸ್ಟೆಬಲ್‌ ಭಾಸ್ಕರ್‌ ಕಾಮತ್‌ ಮತ್ತು ತನಿಖಾಧಿಕಾರಿಗಳಾಗಿದ್ದ ಇನ್‌ಸ್ಪೆಕ್ಟರ್‌ಗಳಾಗಿದ್ದ ವಿನಯ್ ಎ. ಗಾಂವ್ಕರ್ ಮತ್ತು ಉಮೇಶ್‌ ಗಣಪತಿ ಶೇಟ್‌ ವಿಚಾರಣೆಗೆ ಹಾಜರಾಗಿ ಸಾಕ್ಷ್ಯ ಹೇಳಿದ್ದಾರೆ. ಕೆಲಕಾಲ ತನಿಖಾಧಿಕಾರಿಯಾಗಿದ್ದ ಇನ್‌ಸ್ಪೆಕ್ಟರ್‌ ವಿನಯ್‌ ನಾಯಕ್‌ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸದೇ ಇರುವ ಕುರಿತು ನ್ಯಾಯಾಲಯ ಪ್ರಶ್ನೆ ಎತ್ತಿದೆ.

ಎಫ್‌ಐಆರ್‌ ದಾಖಲು ಮಾಡಿದ 16 ಗಂಟೆಗಳ ಬಳಿಕ ಅದರ ಪ್ರತಿಯನ್ನು ನ್ಯಾಯಾಲಯಕ್ಕೆ ತಲು‍ಪಿಸಿರುವುದು ಕೂಡ ಪ್ರಾಸಿಕ್ಯೂಷನ್‌ಗೆ ಮುಳುವಾಗಿದೆ ಎಂದು ನ್ಯಾಯಾಲಯ ಹೇಳಿದೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿ

ಸುವಂತಹ ಪ್ರಬಲವಾದ ಯಾವುದೇ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಮೌಖಿಕ ಸಾಕ್ಷ್ಯಗಳನ್ನು ಮಾತ್ರ ಒದಗಿಸಲಾಗಿತ್ತು. ಪ್ರಾಸಿಕ್ಯೂಷನ್‌ ಪರವಾಗಿ ಕಾನೂನಾತ್ಮಕ ಸಾಕ್ಷ್ಯಗಳ ಕೊರತೆ ತೀವ್ರವಾಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲವೂ ಋಣಾತ್ಮಕ ಫಲಿತಾಂಶ: ಪಬ್‌ ಮೇಲಿನ ದಾಳಿಗೆ ಸಂಚು ರೂಪಿಸಿರುವುದು, ಅಕ್ರಮ ಕೂಟ ಸೇರಿರುವುದು, ಮಹಿಳೆಯರ ಮೇಲೆ ಹಲ್ಲೆ ನಡೆಸಿರುವುದು, ಪಬ್‌ ಸ್ವತ್ತುಗಳಿಗೆ ಹಾನಿ ಮಾಡಿರುವುದು, ಬೆದರಿಕೆ ಹಾಕಿರುವುದು ಸೇರಿದಂತೆ ಹತ್ತು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಸಿದ್ಧಪಡಿಸಿದ್ದ ನ್ಯಾಯಾಲಯ, ಅವುಗಳ ಆಧಾರದಲ್ಲಿ ವಿಚಾರಣೆ ನಡೆಸಿತ್ತು. ವಿಚಾರಣೆ ಬಳಿಕ ಹತ್ತು ಪ್ರಶ್ನೆಗಳಲ್ಲೂ ಪ್ರಾಸಿಕ್ಯೂಷನ್‌ ಪರವಾಗಿ ಋಣಾತ್ಮಕ ಫಲಿತಾಂಶವೇ ಲಭ್ಯವಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry