ದಟ್ಟಣೆ ಅವಧಿಯಲ್ಲೂ 35 ನಿಮಿಷ ಸಾಕು!

7
ಬೈಯಪ್ಪನಹಳ್ಳಿ–ಎಲೆಕ್ಟ್ರಾನಿಕ್‌ ಸಿಟಿ ನಡುವೆ ಉಪನಗರ ರೈಲು ಸಂಚಾರದಿಂದ ಸಮಯ ಉಳಿತಾಯ

ದಟ್ಟಣೆ ಅವಧಿಯಲ್ಲೂ 35 ನಿಮಿಷ ಸಾಕು!

Published:
Updated:
ದಟ್ಟಣೆ ಅವಧಿಯಲ್ಲೂ 35 ನಿಮಿಷ ಸಾಕು!

ಬೆಂಗಳೂರು: ಬೈಯಪ್ಪನಹಳ್ಳಿ– ಎಲೆಕ್ಟ್ರಾನಿಕ್‌ ಸಿಟಿ ನಡುವೆ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುವ ಅವಧಿಯಲ್ಲೂ 35 ನಿಮಿಷಗಳಲ್ಲಿ ಪ್ರಯಾಣಿಸಲು ಸಾಧ್ಯವೇ?   

ಸೋಮವಾರದಿಂದ ಆರಂಭವಾಗಿರುವ ಉಪನಗರ ರೈಲು ಸೇವೆ ಇಂತಹದೊಂದು ಅವಕಾಶವನ್ನು ನಗರದ ಜನತೆಗೆ ಒದಗಿಸಿದೆ. ಹೀಲಳಿಗೆವರೆಗೆ ರೈಲಿನಲ್ಲಿ, ನಂತರ ಕ್ಯಾಬ್‌ನಲ್ಲಿ  ಪ್ರಯಾಣ ಮಾಡುವ ಮೂಲಕ ಹೊರವರ್ತುಲ ರಸ್ತೆ, ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಹಾಗೂ ಹೊಸೂರು ರಸ್ತೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕುವುದನ್ನು ತಪ್ಪಿಸಬಹುದು.

ಈ ಬಗ್ಗೆ ರಿಯಾಲಿಟಿ ಚೆಕ್‌ ನಡೆಸಿದಾಗ ಪ್ರಯಾಣದ ಸಮಯ ಉಳಿತಾಯವಾಗುವುದು ಕಂಡು ಬಂತು. ಬೈಯಪ್ಪನಹಳ್ಳಿ ರೈಲು ನಿಲ್ದಾಣದಿಂದ (ಮೆಟ್ರೊ ನಿಲ್ದಾಣದ ಪಕ್ಕದಲ್ಲೇ ಇದೆ) ಬೆಳಿಗ್ಗೆ 10.20ಕ್ಕೆ ರೈಲು ಹೊರಟಿತು. ಈ ಸೇವೆ ಆರಂಭವಾಗಿ ಹೆಚ್ಚು ದಿನಗಳು ಕಳೆದಿಲ್ಲ. ಹಾಗಾಗಿ ರೈಲಿನ ಬಹುತೇಕ ಬೋಗಿಗಳಲ್ಲಿ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇತ್ತು.

ಇಲ್ಲಿಂದ ಹೊರಟ ರೈಲಿನಲ್ಲಿದ್ದ ಐಟಿ ಕಂಪನಿಗಳ ಉದ್ಯೋಗಿಗಳು ಬೆಳ್ಳಂದೂರು ರಸ್ತೆ ನಿಲ್ದಾಣದಲ್ಲಿ ಇಳಿದರು. ಹೊರವರ್ತುಲ ರಸ್ತೆಯ ಕಾಡುಬೀಸನಹಳ್ಳಿಯಲ್ಲಿರುವ ಕಚೇರಿಯನ್ನು ಅವರು ಅಲ್ಲಿಂದ 10 ನಿಮಿಷಗಳಲ್ಲಿ ತಲುಪಲು ಸಾಧ್ಯ.

ಅಲ್ಲಿಂದ ರೈಲು ಹೊರಡುತ್ತಿದ್ದಂತೆ ಕೆಲವು ಪ್ರಯಾಣಿಕರು ಕಾರ್ಮೆಲ್‌ರಾಂ ನಿಲ್ದಾಣದಲ್ಲಿ ಇಳಿಯಲು ಸಜ್ಜಾದರು. ಹೊರ ವರ್ತುಲ ರಸ್ತೆಯ ಸಂಚಾರ ದಟ್ಟಣೆಯಿಂದ ಮುಕ್ತಿ ಪಡೆದ ಕುರಿತು ಸಾಫ್ಟ್‌ವೇರ್ ಎಂಜಿನಿಯರ್ ಶ್ರೀನಿವಾಸನ್‌ ವೆಂಕಟರಾಮನ್‌ ಖುಷಿ ವ್ಯಕ್ತಪಡಿಸಿದರು. ‘ಬೈಯಪ್ಪನಹಳ್ಳಿಯಿಂದ ರಸ್ತೆಯಲ್ಲಿ ಇಲ್ಲಿಗೆ ಬರುವುದಿದ್ದರೆ ಏನಿಲ್ಲವೆಂದರೂ ಒಂದೂವರೆ ಗಂಟೆ ಬೇಕಾಗುತ್ತಿತ್ತು’ ಎಂದರು.

ಕಾರ್ಮೆಲ್‌ರಾಂ ನಿಲ್ದಾಣದಿಂದ ಹೊರಟ ಈ ಡೆಮು ರೈಲು ಹೀಲಳಿಗೆ ನಿಲ್ದಾಣವನ್ನು 10 ನಿಮಿಷದಲ್ಲಿ ತಲುಪಿತು. ಈ ಪ್ರಯಾಣ ಕೇವಲ 22 ನಿಮಿಷಗಳಲ್ಲಿ ಪೂರ್ಣಗೊಂಡಿತು. ಈ ನಿಲ್ದಾಣವು ಚಂದಾಪುರ ವೃತ್ತದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಅಲ್ಲಿಂದ ಎಲೆಕ್ಟ್ರಾನಿಕ್‌ ಸಿಟಿಗೆ 7.5 ಕಿಮೀ ದೂರ ಇದೆ. ಮೊದಲೇ ಬುಕ್‌ ಮಾಡಿದ್ದ ಕ್ಯಾಬ್‌ ಮೂಲಕ ಹೊಸೂರು ಷಟ್ಪಥ ರಸ್ತೆಯ ಮೂಲಕ ಸಾಗಿ ಎಲೆಕ್ಟ್ರಾನಿಕ್‌ ಸಿಟಿ ತಲುಪುವಷ್ಟರಲ್ಲಿ ಬೆಳಿಗ್ಗೆ 10.55 ಆಗಿತ್ತು.

ರೈಲು ಟಿಕೆಟ್‌ಗೆ ಖರ್ಚಾಗಿದ್ದು ₹10 ಮಾತ್ರ. ಕಾರು ಪ್ರಯಾಣದ (ಶೇರಿಂಗ್‌) ವೆಚ್ಚವೂ ಸೇರಿದಂತೆ ಅಂದಾಜು 25 ಕಿ.ಮೀ ದೂರದ ಪ್ರಯಾಣಕ್ಕೆ ವೆಚ್ಚವಾಗಿದ್ದು ಒಟ್ಟು ₹35 ಮಾತ್ರ.

ಮಾಸಿಕ ಪಾಸು ಖರೀದಿಸಿದರೆ ಈ ಪ್ರಯಾಣದಲ್ಲಿ ಇನ್ನೂ ಹಣ ಉಳಿಸಲು ಸಾಧ್ಯ ಎನ್ನುತ್ತಾರೆ ಹೀಲಳಿಗೆ ಸ್ಟೇಷನ್‌ ಮಾಸ್ಟರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry