ಬಿಸಿಸಿಐ ಪದಾಧಿಕಾರಿಗಳ ಅಧಿಕಾರ ಮೊಟಕು

7

ಬಿಸಿಸಿಐ ಪದಾಧಿಕಾರಿಗಳ ಅಧಿಕಾರ ಮೊಟಕು

Published:
Updated:
ಬಿಸಿಸಿಐ ಪದಾಧಿಕಾರಿಗಳ ಅಧಿಕಾರ ಮೊಟಕು

ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪದಾಧಿಕಾರಿಗಳ ಅಧಿಕಾರವನ್ನು ಆಡಳಿತಾಧಿಕಾರಿಗಳ ಸಮಿತಿಯು (ಸಿಒಎ) ಮೊಟಕುಗೊಳಿಸಿದೆ.

ಇದರೊಂದಿಗೆ ವಿನೋದ್ ರಾಯ್ ನೇತೃತ್ವದ ಸಿಒಎ ಮತ್ತು ಮಂಡಳಿಯ ಅಧಿಕಾರಿಗಳ ನಡುವಿನ ಜಟಾಪಟಿಗೆ ಹೊಸ ತಿರುವು ಸಿಕ್ಕಂತಾಗಿದೆ.  ಹೋದ ವಾರ ಸಿಒಎಯು  ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವಸ್ತುಸ್ಥಿತಿ ವರದಿಯಲ್ಲಿ ಪದಾಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಶಿಫಾರಸ್ಸು ಮಾಡಿತ್ತು.

ಈಗ ಮತ್ತೊಂದು ಮಹತ್ವದ ಕ್ರಮ ಕೈಗೊಂಡಿರುವ ಸಿಒಎಯು ಗುರುವಾರ ನಾಲ್ಕು ಪುಟಗಳ ಪತ್ರವನ್ನು ಬಿಸಿಸಿಐಗೆ ರವಾನಿಸಿದೆ. ಅದರಲ್ಲಿ 12 ನಿರ್ದೇಶನಗಳನ್ನು ಉಲ್ಲೇಖಿಸಿದೆ.

ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ, ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಖಜಾಂಚಿ ಅನಿರುದ್ಧ ಚೌಧರಿ ಅವರು ತಮ್ಮ ಅಧಿಕಾರ ಬಳಸದಂತೆ ಸೂಚಿಸಲಾಗಿದೆ. ಪದಾಧಿಕಾರಿಗಳು ಪ್ರಯಾಣ ಮಾಡಲು, ₹ 25 ಲಕ್ಷಕ್ಕಿಂತ ಹೆಚ್ಚಿನ ವೆಚ್ಚಗಳಿಗೆ ಬಿಸಿಸಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ಸಿಒಎಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಭಾರತ ತಂಡದ ಕ್ರಿಕೆಟ್ ಆಟಗಾರರ ಕೇಂದ್ರಿಯ ಗುತ್ತಿಗೆಯನ್ನು ಜಾರಿಗೆ ತರುವಲ್ಲಿ ಮಂಡಳಿಯ ಹಣಕಾಸು ಸಮಿತಿಯು ವಿಳಂಬ ಮಾಡಿತ್ತು. ಇದರಿಂದ ಸಿಒಎ ಅಸಮಾಧಾನಗೊಂಡಿತ್ತು. ಅಲ್ಲದೇ ವೆಸ್ಟ್‌ ಇಂಡೀಸ್ ವಿರುದ್ಧದ ಹಗಲು–ರಾತ್ರಿ ಟೆಸ್ಟ್ ಸರಣಿಯನ್ನು ಆಯೋಜಿಸುವ ಬಗ್ಗೆ ಸಿಒಎ ಗಮನಕ್ಕೆ ತರದೇ ಅಮಿತಾಭ್ ಚೌಧರಿ ಅವರು ಈಚೆಗೆ ಪ್ರಕಟಿಸಿದ್ದರು. ಇದು ಕೂಡ ಸಿಒಎಗೆ ಅಸಮಾಧಾನ ತರಿಸಿತ್ತು ಎನ್ನಲಾಗಿದೆ.

ಪಿಟಿಐ ವರದಿ: ‘ಸಿಒಎ ಈಗಾಗಲೇ ಆಡಳಿತದ ಮೌಲ್ಯಗಳನ್ನು ಮತ್ತು ತತ್ವಗಳನ್ನು ಗಾಳಿಗೆ ತೂರಿದೆ. ಮಂಡಳಿಯ ಪದಾಧಿಕಾರಿಗಳ ಕಾನೂನಾತ್ಮಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈಚೆಗೆ ರಾಷ್ಟ್ರೀಯ ಜೂನಿಯರ್ ತಂಡದ  ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ರಾಜೀನಾಮೆ ನೀಡಿದ್ದರು. ಆ ಜಾಗಕ್ಕೆ ನೇಮಕ ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಇದೀಗ ಸಿಒಎ ನೀಡಿರುವ ಸೂಚನೆಯಿಂದಾಗಿ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳು ಈ ಪ್ರಕ್ರಿಯೆಯನ್ನು ನಡೆಸುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry