ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಬರೀ ಮೇಳವಲ್ಲ ಆವಿಷ್ಕಾರದ ಕಣಜ

Last Updated 15 ಮಾರ್ಚ್ 2018, 20:48 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ) ನಡೆಯುತ್ತಿರುವ ತಂತ್ರಜ್ಞಾನ ಮಾದರಿಗಳ ಪ್ರದರ್ಶನ ‘ಎಂಜಿನಿಯರಿಂಗ್‌ ಮೇಳ’ದಲ್ಲಿ ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳು ಆವಿಷ್ಕರಿಸಿರುವ ನವೀನ ತಂತ್ರಜ್ಞಾನಗಳನ್ನು ಅನಾವರಣಗೊಳಿಸಲಾಗಿದೆ.

ಇದೇ 17ರವರೆಗೆ ನಡೆಯಲಿರುವ ಮೇಳದಲ್ಲಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳ ಡಿಪ್ಲೊಮಾ, ಐಟಿಐ ಕಾಲೇಜುಗಳ ಹಾಗೂ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ತಂತ್ರಜ್ಞಾನ ಮಾದರಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶವಿದೆ.

ನಗರದ ಹನುಮಂತನಗರದ ಪಿಇಎಸ್‌ ಡಿಪ್ಲೊಮಾ ಕಾಲೇಜಿನ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಶರತ್‌ ಕುಮಾರ್‌, ಕುಶಾಲ್‌ ಗೌಡ, ಆರ್‌.ರೋಷನ್‌ ನೇತೃತ್ವದ 8 ವಿದ್ಯಾರ್ಥಿಗಳ ತಂಡ ರೂಪಿಸಿರುವ ‘ಅಡ್ವಾನ್ಸ್ಡ್‌ ಏರೊಸ್ಪೇಸ್‌ ಟೆಕ್ನಾಲಜಿ’ ಮಾದರಿ ಎಲ್ಲರ ಗಮನ ಸೆಳೆಯುತ್ತಿದೆ.

ಇದರ ಬಗ್ಗೆ ಮಾಹಿತಿ ನೀಡಿದ ಶರತ್‌ ಕುಮಾರ್‌, ‘ವಿಮಾನ ಅಪಘಾತವಾದಾಗ ಪೈಲಟ್‌ಗಳಿಗೆ ಪ್ರಾಣ ಉಳಿಸಿಕೊಳ್ಳುವ ಅವಕಾಶಗಳು ಹೆಚ್ಚಿರುತ್ತವೆ. ಆದರೆ, ಪ್ರಯಾಣಿಕರಿಗೆ ಅಷ್ಟು ಸುರಕ್ಷತೆ ಇರುವುದಿಲ್ಲ. ಇದಕ್ಕೆ ಪರಿಹಾರ ನೀಡುವ ತಂತ್ರಜ್ಞಾನ ರೂಪಿಸಿದ್ದೇವೆ’ ಎಂದರು.

‘ವಿಮಾನ ಆಗಸದಲ್ಲಿ ಹಾರುವಾಗ ಪತನಗೊಂಡರೆ ಪ್ರಯಾಣಿಕರ ಕ್ಯಾಬಿನ್‌ ಕ್ಯಾಪ್ಸೂಲ್‌ನಂತೆ ವಿಮಾನದಿಂದ ಬೇರೆಯಾಗಿ, ಪ್ಯಾರಾಚ್ಯೂಟ್‌ ಸಹಾಯದಿಂದ ಗಾಳಿಯಲ್ಲಿ ತೇಲಿಸಬಹುದು. ಅಲ್ಲದೆ ನೀರಿನ ಮೇಲೆ ಬಿದ್ದರೂ ಇಡೀ ಕ್ಯಾಪ್ಸೂಲ್‌ ನೀರಿನಲ್ಲಿ ತೇಲಲಿದೆ. ಭೂಮಿ ಸ್ಪರ್ಶಿಸುವಾಗ ಅಪಘಾತ ಆದರೆ ಏರ್‌ಬ್ಯಾಗ್‌ ಸಿಸ್ಟಮ್‌ನಿಂದ ಕಾಕ್‌ಪಿಟ್‌ ಮತ್ತು ಪ್ರಯಾಣಿಕರ ಕ್ಯಾಬಿನ್‌ಗೆ ಹಾನಿಯಾಗದಂತೆ ನಾವು ಆವಿಷ್ಕರಿಸಿರುವ ತಂತ್ರಜ್ಞಾನದಲ್ಲಿ ರಕ್ಷಿಸಬಹುದು’ ಎಂದರು.

‘ಮಂಜಿನ ವಾತಾವರಣ, ಹವಾಮಾನ ವೈಪರೀತ್ಯದ ಸಂದರ್ಭದಲ್ಲೂ ಅಪಘಾತ ಆಗದಂತೆ, ಸಂವಹನ ಸಮಸ್ಯೆಯಿಂದ ಉಂಟಾಗುವ ಅಪಘಾತ ತಡೆಯಲು ‘ವೈಟ್‌ ಬಾಕ್ಸ್‌’ ತಂತ್ರಜ್ಞಾನ ರೂಪಿಸಿದ್ದೇವೆ. ಇದರಿಂದ ಪೈಲಟ್‌ಗಳ ನಡುವೆ ನೇರ ಸಂವಹನ ಸಾಧ್ಯವಾಗುತ್ತದೆ. ಎದುರಿಗೆ ಬರುವ ವಿಮಾನದ ವೇಗ, ಅದು ಬರುತ್ತಿರುವ ದಿಕ್ಕು, ಅಂತರ ಹಾಗೂ ಅದು ತನ್ನದೇ ಸಂಸ್ಥೆಯ ವಿಮಾನವೇ ಅಥವಾ ಬೇರೆಯ ವಿಮಾನವೇ ಎನ್ನುವ ಮಾಹಿತಿಯನ್ನು ‘ವೈಟ್‌ ಬಾಕ್ಸ್‌’ ತಂತ್ರಜ್ಞಾನ ನೀಡುತ್ತದೆ. ಅಪಘಾತಕ್ಕೆ ಕಾರಣ ಪತ್ತೆ ಹಚ್ಚುವುದು ‘ಬ್ಲಾಕ್‌ ಬಾಕ್ಸ್‌’ ಕೆಲಸವಾದರೆ, ನಮ್ಮ ‘ವೈಟ್‌ ಬಾಕ್ಸ್’ ತಂತ್ರಜ್ಞಾನ ಅಪಘಾತ ತಡೆಯಲು ಮುನ್ನೆಚ್ಚರಿಕೆ ನೀಡುತ್ತದೆ’ ಎನ್ನುತ್ತಾರೆ ಆರ್‌.ರೋಷನ್‌.

ಇದೇ ಕಾಲೇಜಿನ ಡಿಪ್ಲೊಮಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಅಂತಿಮ ವರ್ಷದ 8 ವಿದ್ಯಾರ್ಥಿಗಳು ಪ್ರದರ್ಶನಕ್ಕೆ ಇಟ್ಟಿರುವ ‘ಮಗು ರಕ್ಷಿಸುವ ರೊಬೊಟ್‌’ ತಂತ್ರಜ್ಞಾನ ಮಾದರಿಯನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಈ ತಂತ್ರಜ್ಞಾನದ ರೂವಾರಿಗಳಲ್ಲಿ ಪ್ರಮುಖರಾದ ರಘೋತ್ತಮ ಮತ್ತು ಆದಿತ್ಯ ಅವರು ‘ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದ ಮಗುವನ್ನು ನೆಲ ಅಗೆಯದೆ, ತ್ವರಿತವಾಗಿ ರೊಬೊಟ್‌ ನೆರವಿನಿಂದ ಮೇಲೆತ್ತಬಹುದು’ ಎಂದರು.

ಬಾಂಬ್‌ ಪತ್ತೆ ಹಚ್ಚಿ, ನಿಷ್ಕ್ರಿಯಗೊಳಿಸುವ ರೊಬೊಟ್‌, ರೇಷ್ಮೆ ಗೂಡು ಸಾಕಣೆ ಸ್ವಯಂನಿರ್ವಹಿಸುವ ರೊಬೊಟ್‌, ನೀರಿನಿಂದ ಆವೃತವಾಗಿ ಬೈಕ್‌ ಸವಾರರ ಜೀವಕ್ಕೆ ಸಂಚಕಾರ ತರುವ ರಸ್ತೆ ಗುಂಡಿ ಪತ್ತೆ ಹಚ್ಚುವ, ರಸ್ತೆ ಮೇಲೆ ಕಸ ಗುಡಿಸಿ ವಿಂಗಡಣೆ ಮಾಡುವ ದೂರಸಂವೇದಿ ತಂತ್ರಜ್ಞಾನ ಯಂತ್ರೋಪಕರಣ.... ಹೀಗೆ ಹಲವು ಬಗೆಯ ಅತ್ಯಾಧುನಿಕ ತಂತ್ರಜ್ಞಾನಗಳ ಮಾದರಿಗಳನ್ನು ಐಟಿಐ ಮತ್ತು ಡಿಪ್ಲೊಮಾ ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.
***
ಅಂಕಿ ಅಂಶ

19
ಎಂಜಿನಿಯರಿಂಗ್‌ ಮೇಳದಲ್ಲಿ ಭಾಗವಹಿಸಿರುವ ಕಾಲೇಜುಗಳು

97
ಪ್ರದರ್ಶನಕ್ಕೆ ಇಟ್ಟಿರುವ ತಂತ್ರಜ್ಞಾನ ಮಾದರಿಗಳು

3,000
ಮೊದಲ ದಿನ ಪ್ರದರ್ಶನ ವೀಕ್ಷಿಸಿದ ವಿದ್ಯಾರ್ಥಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT