ಇರಾನಿ ಕಪ್‌ ಕ್ರಿಕೆಟ್‌: ವಸೀಂ ಜಾಫರ್‌ ದ್ವಿಶತಕದ ದಾಖಲೆ

7

ಇರಾನಿ ಕಪ್‌ ಕ್ರಿಕೆಟ್‌: ವಸೀಂ ಜಾಫರ್‌ ದ್ವಿಶತಕದ ದಾಖಲೆ

Published:
Updated:
ಇರಾನಿ ಕಪ್‌ ಕ್ರಿಕೆಟ್‌: ವಸೀಂ ಜಾಫರ್‌ ದ್ವಿಶತಕದ ದಾಖಲೆ

ನಾಗಪುರ (ಪಿಟಿಐ): ಅನುಭವಿ ಬ್ಯಾಟ್ಸ್‌ಮನ್‌ ವಸೀಂ ಜಾಫರ್‌ (ಬ್ಯಾಟಿಂಗ್‌ 285; 425ಎ, 34 ಬೌಂ,1ಸಿ) ಆಟಕ್ಕೆ ಗುರುವಾರ ಜಮ್ತಾ ಅಂಗಳದಲ್ಲಿ ಭಾರತ ಇತರೆ ತಂಡದ ಬೌಲರ್‌ಗಳು ಬಸವಳಿದರು.

ಜಾಫರ್‌ ಅವರ ದಾಖಲೆಯ ದ್ವಿಶತಕದ ನೆರವಿನಿಂದ ವಿದರ್ಭ ತಂಡ ಇರಾನಿ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ.

ಫಯಾಜ್‌ ಫಜಲ್‌ ಪಡೆ ಮೊದಲ ಇನಿಂಗ್ಸ್‌ನಲ್ಲಿ ದಿನದಾಟದ ಅಂತ್ಯಕ್ಕೆ 180 ಓವರ್‌ಗಳಲ್ಲಿ 3 ವಿಕೆಟ್‌ಗೆ 598ರನ್‌ ಗಳಿಸಿದೆ. ಇರಾನಿ ಕಪ್‌ನಲ್ಲಿ ದಾಖಲಾದ ಹತ್ತನೇ ಅತಿ ಹೆಚ್ಚು ಮೊತ್ತ ಇದಾಗಿದೆ. ಇರಾನಿ ಕಪ್‌ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಗರಿಷ್ಠ ರನ್‌ ಗಳಿಸಿದ ಶ್ರೇಯ ವಸೀಂ ಪಾಲಾಯಿತು. ಅವರು ಆರು ವರ್ಷಗಳ ಹಿಂದೆ ಮುರಳಿ ವಿಜಯ್‌ (266ರನ್‌) ನಿರ್ಮಿಸಿದ್ದ ದಾಖಲೆ ಅಳಿಸಿ ಹಾಕಿದರು.

ವಿದರ್ಭ ಬುಧವಾರ 2 ವಿಕೆಟ್‌ಗಳಿಗೆ 289ರನ್‌ ಗಳಿಸಿತ್ತು. ಗುರುವಾರ ಆಟ ಮುಂದುವರಿಸಿದ ಈ ತಂಡ ಮೊದಲ ಅವಧಿಯಲ್ಲಿ ಎಚ್ಚರಿಕೆಯ ಆಟ ಆಡಿತು.

113ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಜಾಫರ್‌ ಮತ್ತು 29 ರನ್‌ ಗಳಿಸಿದ್ದ ಗಣೇಶ್‌ ಸತೀಶ್‌, ಗುರುವಾರವೂ ಕಲಾತ್ಮಕ ಆಟದ ಮೂಲಕ ಕರುಣ್‌ ನಾಯರ್‌ ಪಡೆಯ ಬೌಲರ್‌ಗಳನ್ನು ಕಾಡಿದರು.

ಆರಂಭದಲ್ಲಿ ತಾಳ್ಮೆಯ ಆಟ ಆಡಿದ ಜಾಫರ್‌, ಶಹಬಾಜ್ ನದೀಮ್‌ ಬೌಲ್‌ ಮಾಡಿದ 100ನೇ ಓವರ್‌ನ ಐದನೇ ಎಸೆತದಲ್ಲಿ ಬೌಂಡರಿ ಗಳಿಸಿದರು. ನದೀಮ್‌ ಹಾಕಿದ 104ನೇ ಓವರ್‌ನ ನಾಲ್ಕನೇ ಎಸೆತವನ್ನೂ ಬೌಂಡರಿ ಗೆರೆ ದಾಟಿಸಿದರು.

ಗಣೇಶ್‌ ಸತೀಶ್‌ ವೇಗದ ಆಟಕ್ಕೆ ಒತ್ತು ನೀಡಿದರು. ನದೀಮ್‌ ಬೌಲಿಂಗ್‌ನಲ್ಲಿ ಅವರು ಒಂದು ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿದರು. ನಂತರ ಒಂದು ರನ್‌ ಗಳಿಸಿ ಅರ್ಧಶತಕದ ಗಡಿ ಮುಟ್ಟಿದರು.

ನವದೀಪ್‌ ಸೈನಿ ಓವರ್‌ನಲ್ಲಿ ಎರಡು ಬೌಂಡರಿ ಬಾರಿಸಿದ ಜಾಫರ್‌, ಆರ್‌.ಅಶ್ವಿನ್‌ ಹಾಕಿದ 111ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಒಂದು ರನ್‌ ಗಳಿಸಿ 150ರನ್‌ ಪೂರೈಸಿದರು.

ಆ ನಂತರವೂ ಈ ಜೋಡಿ ಸುಂದರ ಇನಿಂಗ್ಸ್ ಕಟ್ಟಿತು.  ನದೀಮ್‌ ಹಾಕಿದ 137ನೇ ಓವರ್‌ನಲ್ಲಿ ಜಾಫರ್‌ ದ್ವಿಶತಕ ಸಂಭ್ರಮ ಆಚರಿಸಿದರು. ಇದಕ್ಕಾಗಿ ಅವರು ತೆಗೆದುಕೊಂಡಿದ್ದು 314 ಎಸೆತ. ಜಯಂತ್ ಯಾದವ್‌ ಬೌಲ್‌ ಮಾಡಿದ 140ನೇ ಓವರ್‌ನ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿದ ಗಣೇಶ್‌, ಇರಾನಿ ಕಪ್‌ ಟೂರ್ನಿಯಲ್ಲಿ ಚೊಚ್ಚಲ ಶತಕದ ಸಾಧನೆ ಮಾಡಿದರು.

159ನೇ ಓವರ್‌ನಲ್ಲಿ ದಾಳಿಗಿಳಿದ ಸಿದ್ದಾರ್ಥ್‌ ಕೌಲ್‌ ಎರಡನೇ ಎಸೆತದಲ್ಲಿ ಗಣೇಶ್‌ ವಿಕೆಟ್‌ ಉರುಳಿಸಿದರು. ಇದರೊಂದಿಗೆ 289ರನ್‌ಗಳ ಮೂರನೇ ವಿಕೆಟ್‌ ಜೊತೆಯಾಟ ಅಂತ್ಯವಾಯಿತು.

ಬಳಿಕ ಜಾಫರ್‌ ಮತ್ತು ಅಪೂರ್ವ ವಾಂಖೆಡೆ (ಬ್ಯಾಟಿಂಗ್‌ 44; 75ಎ, 6ಬೌಂ, 1ಸಿ) ವಿದರ್ಭ ತಂಡದ ಇನಿಂಗ್ಸ್‌ ಬೆಳೆಸಿದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ: ಮೊದಲ ಇನಿಂಗ್ಸ್‌: 180 ಓವರ್‌ಗಳಲ್ಲಿ 3 ವಿಕೆಟ್‌ಗೆ 598 (ವಸೀಂ ಜಾಫರ್‌ ಬ್ಯಾಟಿಂಗ್‌ 285, ಗಣೇಶ್‌ ಸತೀಶ್‌ 120, ಅಪೂರ್ವ ವಾಂಖೆಡೆ ಬ್ಯಾಟಿಂಗ್‌ 44; ಸಿದ್ದಾರ್ಥ್‌ ಕೌಲ್‌ 80ಕ್ಕೆ1, ಆರ್‌.ಅಶ್ವಿನ್‌ 123ಕ್ಕೆ1, ಜಯಂತ್‌ ಯಾದವ್‌ 149ಕ್ಕೆ1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry