ಪ್ರತಿಭಟನೆಗೆ ಪ್ರಚೋದನೆ

7
ಬಿಜೆಪಿ ವಿರುದ್ಧ ಮುಸ್ಲಿಂ ಮುಖಂಡರ ಆರೋಪ

ಪ್ರತಿಭಟನೆಗೆ ಪ್ರಚೋದನೆ

Published:
Updated:

ಸಿಂದಗಿ: ‘ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರ ಅನುಕಂಪದ ಅಲೆ ವ್ಯಾಪಿಸಿರುವುದನ್ನು ಸಹಿಸದೇ ಬಿಜೆಪಿಯವರು ಕೆಲ ಮುಸ್ಲಿಂ ಯುವಕರ ಮೂಲಕ ಮನಗೂಳಿ ಮೇಲೆ ಸುಳ್ಳು ಆರೋಪ ಹೊರಿಸಿ ಪ್ರತಿಭಟನೆ ಮಾಡಿಸಿದ್ದಾರೆ. ಅವರ ಭಾವಚಿತ್ರವುಳ್ಳ ಬ್ಯಾನರ್, ಪ್ಲೆಕ್ಸ್ ಹರಿದು ಅವಮಾನಗೊಳಿಸುವ ಕೃತ್ಯಕ್ಕೆ ಕುಮ್ಮಕ್ಕು ನೀಡಿರುವ ಬಿಜೆಪಿ ಅಭ್ಯರ್ಥಿ ಕಾರ್ಯ ಖಂಡನೀಯ’ ಎಂದು ಮುಸ್ಲಿಂ ಸಮುದಾಯ ಹೇಳಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಒಕ್ಕೂಟದ ಪ್ರಮುಖರಾದ ಸಲೀಂ ಜುಮನಾಳ, ಡಾ.ದಸ್ತಗೀರ ಮುಲ್ಲಾ, ಇಮ್ತಿಯಾಜ ಖತೀಬ, ಶೌಕತ್ ಅಲಿ ಸುಂಬಡ, ಬಂದೇನವಾಜ ಕಣ್ಣಿ, ಮುನ್ನಾ ತಾಂಬೋಳಿ, ಖಾದರ್ ಬಂಕಲಗಿ, ಶಿರಾಜ್ ಬೆಣ್ಣೆಶಿರೂರ ಈ ಕುರಿತು ಮಾತನಾಡಿದರು.

‘ಮನಗೂಳಿ ಅವರು ಮುಸ್ಲಿಮರ ಒಡನಾಡಿಯಾಗಿದ್ದಾರೆ. ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಜೆಡಿಎಸ್ ಅಭ್ಯರ್ಥಿಗೆ ಬೆಂಬಲಿಸುವ ನಿರ್ಣಯ ಕೈಗೊಂಡಿದ್ದು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದ್ದರಿಂದ ಮನಗೂಳಿ ಅವರ ಮೇಲೆ ವಿನಾಕಾರಣ ಆರೋಪ ಮಾಡಿದ್ದಾರೆ. ಬೆರಳೆಣಿಕೆಯಷ್ಟು ಮುಸ್ಲಿಂ ಯುವಕರಿಂದ ಪ್ರತಿಭಟನೆ ಮಾಡಿಸಲು ಪ್ರಚೋದನೆ ನೀಡಿದ್ದಾರೆ’ ಎಂದು ಆರೋಪಿಸಿದರು.

‘ಸರ್ಕಾರದ ವತಿಯಿಂದ ಆಚರಿಸುವ ಟಿಪ್ಪು ಸುಲ್ತಾನ ಜಯಂತಿ ಕಾರ್ಯಕ್ರಮದಲ್ಲಿ ಉದ್ದೇಶಪೂರ್ವಕವಾಗಿ ಮತಕ್ಷೇತ್ರದ ಶಾಸಕ ಗೈರು ಉಳಿದಿದ್ದರು. ಅದೇ ಶಾಸಕ ಈಗ ಟಿಪ್ಪುವಿನ ಬಗ್ಗೆ ಅವಹೇಳನಕಾರಿಯಾಗಿ ಮನಗೂಳಿ ಮಾತನಾಡಿದ್ದಾರೆ ಎಂದು ಆರೋಪಿಸುತ್ತಿರುವುದು ವಿಪರ್ಯಾಸ. ಮುಸ್ಲಿಮರ ಮತ ಒಡೆಯಲು ನಡೆಸಿರುವ ಕುತಂತ್ರವಿದು’ ಎಂದು ದೂರಿದರು.

‘ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಮೂರ್ಖತನದ ಪರಮಾವಧಿ. ಸಮಾಜ ಒಡೆಯುವ ಕಾರ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳಬೇಡಿ’ ಎಂದು ಖಡಕ್ ಎಚ್ಚರಿಕೆ ನೀಡಿದರು.  ಜಿಲಾನಿ ನಾಟೀಕಾರ, ರಫೀಕ ಮಣೂರ, ಸಾಹೇಬ ಪಟೇಲ, ಮರ್ತೂರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry