5 ವರ್ಷದಲ್ಲಿ 2 ಲಕ್ಷ ಮತದಾರರ ಹೆಚ್ಚಳ

7
ನಾಮಪತ್ರ ಸಲ್ಲಿಕೆ ಅಂತಿಮ ದಿನದವರೆಗೆ ಮತದಾರರಪಟ್ಟಿಗೆ ಸೇರ್ಪಡೆ, ತೆಗೆದು ಹಾಕಲು ಅವಕಾಶ

5 ವರ್ಷದಲ್ಲಿ 2 ಲಕ್ಷ ಮತದಾರರ ಹೆಚ್ಚಳ

Published:
Updated:
5 ವರ್ಷದಲ್ಲಿ 2 ಲಕ್ಷ ಮತದಾರರ ಹೆಚ್ಚಳ

ವಿಜಯಪುರ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಫೆ. 28ಕ್ಕೆ ಅಂತಿಮಗೊಂಡಿದೆ. 9,06,407 ಪುರುಷ ಮತದಾರರು, 8,56,896 ಮಹಿಳಾ ಮತದಾರರು ಸೇರಿದಂತೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 17,63,303 ಮತದಾರರಿದ್ದಾರೆ.

2013ರ ವಿಧಾನಸಭಾ ಚುನಾವಣೆಯಲ್ಲಿ 8,03,759 ಪುರುಷ ಮತದಾರರಿದ್ದರೆ, 7,31,724 ಮಹಿಳಾ ಮತದಾರರು, 144 ಇತರೆ ಮತದಾರರು ಸೇರಿ ಒಟ್ಟು 15,35,627 ಮತದಾರರಿದ್ದರು. ಐದು ವರ್ಷದ ಅವಧಿಯಲ್ಲಿ 1,02,648 ಪುರುಷ ಮತದಾರರು, 1,25,172 ಮಹಿಳಾ ಮತದಾರರು ಹೆಚ್ಚಾಗಿದ್ದಾರೆ.

ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 26,726 ಮತದಾರರು ಈ ಐದು ವರ್ಷದ ಅವಧಿಯಲ್ಲಿ ಹೆಚ್ಚಾಗಿದ್ದು, ಪ್ರಸ್ತುತ 2,00,882 ಮತದಾರರಿದ್ದಾರೆ. ಇದೇ ರೀತಿ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 29,243 ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಹಾಲಿ 2,07,180 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾ ಆಯೋಗ ಅಂಕಿ–ಅಂಶಗಳ ಮಾಹಿತಿ ಒದಗಿಸಿದೆ.

ಬಸವನಬಾಗೇವಾಡಿ ಮತ ಕ್ಷೇತ್ರದಲ್ಲಿ 20,687 ಮತದಾರರು ಹೆಚ್ಚಾಗಿದ್ದು, ಹಾಲಿ 19,6389 ಮತದಾರರಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ 24,904 ಮತದಾರರ ಸಂಖ್ಯೆ ಹೆಚ್ಚಿದ್ದು, ಒಟ್ಟು ಮತದಾರರ ಸಂಖ್ಯೆ 2,08,903 ಇದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ 28,890 ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಒಟ್ಟು 2,41,635 ಮತದಾರರಿದ್ದಾರೆ. ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ 31,137 ಮತದಾರರ ಸಂಖ್ಯೆ ಹೆಚ್ಚಿದ್ದು, ಪ್ರಸ್ತುತ 2,56,811 ಮತದಾರರಿದ್ದಾರೆ.

ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ 27,869 ಮತದಾರರ ಸಂಖ್ಯೆಯಲ್ಲಿ ಹೆಚ್ಚಳಗೊಂಡಿದ್ದು, ಸದ್ಯ 2,28,444 ಮತದಾರರಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ 38,220 ಮತದಾರರು ಹೆಚ್ಚಾಗಿದ್ದು, ಒಟ್ಟು 2,23,059 ಮತದಾರರಿದ್ದಾರೆ. ಇದು ಫೆ. 28ರವರೆಗಿನ ಅಧಿಕೃತ ಮಾಹಿತಿ ಎಂದು ಚುನಾವಣಾ ತಹಶೀಲ್ದಾರ್‌ ವಿಜಯ ಕಡಕಬಾವಿ ತಿಳಿಸಿದರು.

2 ಲಕ್ಷ ದಾಟಿತು: ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಏಳು ಮತಕ್ಷೇತ್ರಗಳ ಮತದಾರರ ಸಂಖ್ಯೆ 2018ರ ವಿಧಾನಸಭಾ ಚುನಾವಣೆಯಲ್ಲಿ 2 ಲಕ್ಷ ದಾಟಿರುವುದು ವಿಶೇಷ.

ನಾಮಪತ್ರ ಸಲ್ಲಿಕೆಯ ಅಂತಿಮ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದು ಹಾಕಲು ಅರ್ಜಿ ಸಲ್ಲಿಸುವ ಅವಕಾಶವಿದ್ದು, ಈ ಅವಧಿಯಲ್ಲಿ ಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 4,000 ಮತದಾರರು ಸೇರ್ಪಡೆಯಾದರೆ, ಈ ಮತಕ್ಷೇತ್ರದ ಮತದಾರರ ಸಂಖ್ಯೆಯೂ 2 ಲಕ್ಷ ದಾಟಲಿದೆ.

2013ರ ವಿಧಾನಸಭಾ ಚುನಾವಣೆಯಲ್ಲೇ ವಿಜಯಪುರ ನಗರ, ನಾಗಠಾಣ, ಇಂಡಿ ವಿಧಾನಸಭಾ ಕ್ಷೇತ್ರಗಳ ಮತದಾರರ ಸಂಖ್ಯೆ 2 ಲಕ್ಷ ದಾಟಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಪ್ರಸ್ತುತ ನಾಗಠಾಣ ಮತದಾರರ ಸಂಖ್ಯೆ 2,56,811 ಇದ್ದರೆ, ವಿಜಯಪುರ ನಗರ ಮತಕ್ಷೇತ್ರದ ಮತದಾರರ ಸಂಖ್ಯೆ 2,41,635ರಷ್ಟಿದೆ.

ಸಿಂದಗಿಯಲ್ಲಿ ಭಾರಿ ಹೆಚ್ಚಳ: ಐದು ವರ್ಷದ ಅವಧಿಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. 38,220 ಮತದಾರರ ಸಂಖ್ಯೆ ಪ್ರಸ್ತುತ ಹೆಚ್ಚಿನದಾಗಿ ಸೇರ್ಪಡೆಯಾಗಿದೆ. ತೆಗೆದುಹಾಕಿದವರ ಸಂಖ್ಯೆಯನ್ನು ಪರಿಗಣಿಸಿದರೆ ನೂತನ ಮತದಾರರ ಸಂಖ್ಯೆ ಸಾಕಷ್ಟು ಏರಿಕೆಯಾಗಲಿದೆ.

ನಾಗಠಾಣ ಮೀಸಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 31,137 ಮತದಾರರು ಸೇರ್ಪಡೆಯಾಗಿದ್ದರೆ, 20,687 ಮತದಾರರು ಸೇರ್ಪಡೆಯಾದ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ನೋಂದಣಿಯಾಗಿದೆ ಎಂಬುದನ್ನು ಆಯೋಗದ ಅಂಕಿ–ಅಂಶಗಳು ತಿಳಿಸುತ್ತವೆ.

ಸೇರ್ಪಡೆಗೆ ಸಿದ್ಧತೆ...

‘ನಾಮಪತ್ರ ಸಲ್ಲಿಕೆಯ ಕೊನೆ ದಿನದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಅವಕಾಶವನ್ನು ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ನೀಡಿದೆ. ಇದರಿಂದ ಸಾಕಷ್ಟು ಮಂದಿಗೆ ಮತದಾನದ ಹಕ್ಕು ದೊರೆಯಲಿದೆ’ ಎಂದು ವಿಜಯಪುರ ನಗರ ಮಂಡಲದ ಬಿಎಲ್ಎ 1 ಸಿದ್ದು ಬೆಲ್ಲದ ತಿಳಿಸಿದರು.

‘ಜ. 25ರಿಂದಲೇ ಆನ್‌ಲೈನ್‌ ನೋಂದಣಿ ಸ್ಥಗಿತಗೊಂಡಿದೆ. ಮಾರ್ಚ್‌ 19ರಿಂದ ಪುನರಾರಂಭಗೊಳ್ಳುವ ಸೂಚನೆ ಸಿಕ್ಕಿದೆ. ನೋಂದಣಿ ಸ್ಥಗಿತಗೊಂಡ ಅವಧಿಯಲ್ಲಿ ನಗರ ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ 272 ಬಿಎಲ್‌ಎ–2ಗಳು ಈಗಾಗಲೇ 3000 ಅರ್ಜಿ ಸಂಗ್ರಹಿಸಿದ್ದಾರೆ. ನೋಂದಣಿ ಆರಂಭಗೊಳ್ಳುತ್ತಿದ್ದಂತೆ ಸೇರ್ಪಡೆ ಕೆಲಸ ಚುರುಕಾಗಲಿದೆ’ ಎಂದರು.

‘ಫೆ. 28ಕ್ಕೆ ಪರಿಷ್ಕರಣೆ ಪೂರ್ಣಗೊಂಡಿದೆ. ಇದೀಗ ಸೇರ್ಪಡೆಗೊಳ್ಳುವುದು ಹೆಚ್ಚುವರಿ ಪಟ್ಟಿಯಲ್ಲಿ ಪ್ರಕಟಗೊಳ್ಳಲಿದೆ. ಜಿಲ್ಲೆಯಲ್ಲಿ ಕನಿಷ್ಠ 50ರಿಂದ 60 ಸಾವಿರ ಮತದಾರರ ನೋಂದಣಿಯಾಗಲಿದೆ’ ಎಂದು ಬೆಲ್ಲದ ತಿಳಿಸಿದರು.

*

ಮತದಾರರ ಪಟ್ಟಿಗೆ ಸೇರ್ಪಡೆಗೆ ಅರ್ಜಿ, ದಾಖಲಾತಿ ಸಂಗ್ರಹಿಸಲಾಗಿದೆ. ಯುಗಾದಿ ಕಳೆದ ಬಳಿಕ ಆನ್‌ಲೈನ್‌ ಮೂಲಕ ಅಪ್‌ಡೇಟ್‌ ಮಾಡಲಾಗುವುದು

-ಶಿವರುದ್ರ ಬಾಗಲಕೋಟ, ವಿಜಯಪುರ ನಗರ ಮಂಡಲ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry