ಸಮಾಜಮುಖಿ ಸಾಹಿತ್ಯ ಅನಿವಾರ್ಯ

7

ಸಮಾಜಮುಖಿ ಸಾಹಿತ್ಯ ಅನಿವಾರ್ಯ

Published:
Updated:

ಚಿಂತಾಮಣಿ: ಸಮಾಜದ ಭಾವನೆಗಳನ್ನು ಬಿಂಬಿಸದ ಸಾಹಿತ್ಯವು ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಪ್ರಯೋಜನವಿಲ್ಲ ಎಂದು ಹಿರಿಯ ಕವಿ ಡಾ.ರಾಮಲಿಂಗಪ್ಪ ಟಿ.ಬೇಗೂರು ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸಾಹಿತ್ಯದ ರಚನೆ, ಗ್ರಹಿಕೆ, ಭಾಷಾಂತರ ಕುರಿತ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

ಸಾಹಿತ್ಯವು ಕವಿಯ ಭಾವನೆಗಳ ಅಭಿವ್ಯಕ್ತಿ ಆಗುವುದರ ಜತೆಗೆ ಓದುಗ ಸಮುದಾಯದ ಭಾವಲೋಕದ ಅಭಿವ್ಯಕ್ತಿ ಮೂಲಕ ಸಾಮಾಜಿಕವಾಗಿ ರೂಪುಗೊಳ್ಳಬೇಕು. ಆಗ ಸಾಹಿತ್ಯವು ಸಮಾಜಮುಖಿಯಾಗಿರುತ್ತದೆ ಎಂದು ಅವರು ತಿಳಿಸಿದರು.

ಸಾಹಿತ್ಯವು ಆನಂದ, ಅನುಸಂಧಾನ, ಅರ್ಥ, ಕಾವ್ಯ ಮೀಮಾಂಸೆ, ಛಂದಸ್ಸು ಮತ್ತು ಭಾಷಿಕದ ನೆಲೆಗಳಲ್ಲಿ ಗ್ರಹಿಸಿ ಕೊಳ್ಳಲಾಗುತ್ತದೆ. ಪರೀಕ್ಷೆಗಳ ಭಾಗವಾಗಿ ನಡೆಸುವ ತರಗತಿಗಳಲ್ಲಿ ಕಾವ್ಯದ ಓದು ಕೇವಲ ಅರ್ಥ ಗ್ರಹಿಕೆಗೆ ನಿಂತುಹೋಗುತ್ತದೆ. ಕಾವ್ಯದ ಓದಿನಲ್ಲಿ ವ್ಯಕ್ತಿಗತ ಮತ್ತು ಸಮುದಾಯಿಕ ಎಂದು ಎರಡು ವಿಧ ಎಂದರು.

ಪ್ರಾಚೀನ ಕಾಲದಲ್ಲಿ ಪಠಣ–ಪಾರಾಯಣಗಳ ಮೂಲಕ ವಿವಿಧ ಸಾಹಿತ್ಯಿಕ ಪಠ್ಯಗಳ ಸಮುದಾಯಿಕ ಓದುನಡೆಯುತ್ತಿತ್ತು. ಆಗ ಕಾವ್ಯದ ಓದು ಕೇಳುವ ಪ್ರಕ್ರಿಯೆಯಾಗಿತ್ತು. ಇಂದಿನ ಆಧುನಿಕ ಸಂದರ್ಭದಲ್ಲಿ ಕಾವ್ಯದ ಓದು ವ್ಯಕ್ತಿಗತ ಪ್ರಕ್ರಿಯೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ದ್ವಿಭಾಷಿಕ ಮತ್ತು ಬಹುಭಾಷಿಕ ವಾತಾವರಣದಲ್ಲಿ ಭಾಷಾಂತರ ಪ್ರಕ್ರಿಯೆ ಸಹಜವಾಗಿ ನಡೆಯುವ ಸೃಜನಶೀಲ ಪ್ರಕ್ರಿಯೆಯಾಗಿರುತ್ತದೆ. ಶಿಷ್ಟ ಸಾಹಿತ್ಯ ಮತ್ತು ಜನಪದ ಸಾಹಿತ್ಯದಲ್ಲಿ ವಿವಿಧ ಪಠ್ಯಗಳು ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ , ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ ಹಕ್ಕಿಗಳ ರೀತಿ ವಲಸೆ ಹೋಗಿವೆ. ಬಹುಭಾಷಿಕ, ಬಹುಸಾಂಸ್ಕೃತಿಕ ಪರಿಸರದಲ್ಲಿ ಭಾಷಾಂತರವು ಒಂದು ಅನಿವಾರ್ಯ ಚಟುವಟಿಕೆಯಾಗಿದೆ ಎಂದರು.

ಕನ್ನಡ ಸಾಹಿತ್ಯದಲ್ಲಿನ ನವೋದಯ, ನವ್ಯ, ದಲಿತ, ಬಂಡಾಯ, ಸ್ತ್ರೀವಾದಿ ಭೂಮಿಕೆಯ ಕೆಲವು ಕವನ, ತತ್ವಪದಗಳನ್ನು ಮುಂದಿಟ್ಟು ಕನ್ನಡ ಕಾವ್ಯದ ರಾಚನಿಕ ಕ್ರಮಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು.

ಪ್ರಾಂಶುಪಾಲ ಪ್ರೊ.ವಿ.ರಾಮಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಡಾ. ಎಂ.ಎನ್‌. ರಘು, ಬೊಮ್ಮೆಕಲ್‌ ವೆಂಕಟೇಶ್‌, ಪ್ರೊ.ವಿಜಯೇಂದ್ರಕುಮಾರ್‌, ಪ್ರೊ.ಕೆ.ಎನ್‌. ಕೃಷ್ಣಪ್ಪ, ನಾಗೇಶ್‌ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry