ನಡಾವಳಿ ಪುಸ್ತಕ ಹರಿದು ಪ್ರತಿಭಟನೆ

7

ನಡಾವಳಿ ಪುಸ್ತಕ ಹರಿದು ಪ್ರತಿಭಟನೆ

Published:
Updated:

ಚಿಂತಾಮಣಿ: ನಗರದ ನಿವಾಸಿಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ ಒದಗಿಸುವಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ, ಆಡಳಿತ ಪಕ್ಷದ ಸದಸ್ಯರೇ ನಡಾವಳಿ ಪುಸ್ತಕ ಹರಿದು, ನೀರಿನ ಬಿಂದಿಗೆಗಳೊಂದಿಗೆ ಪ್ರತಿಭಟನೆ ನಡೆಸಿದರು.

ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಸುಜಾತಾ ಶಿವಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿದ್ದು ಜೆಡಿಎಸ್‌ ಒಡಕಿಗೆ ಕೈಗನ್ನಡಿಯಾಯಿತು.

ಆಡಳಿತ ಪಕ್ಷದ ಸದಸ್ಯ ಶಫೀಕ್‌ ಅಹಮದ್‌ ಸಭೆ ನಡೆಯಲು ಅವಕಾಶ ನೀಡದೆ, ಅಧ್ಯಕ್ಷರು ಮತ್ತು ಪೌರಾಯುಕ್ತರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ನಗರದ ಬಹುತೇಕ ಭಾಗಗಳಲ್ಲಿ ಚರಂಡಿಗಳು ತ್ರಾಜ್ಯದಿಂದ ತುಂಬಿ ತುಳುಕುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ತಿಂಗಳಿಗೊಮ್ಮೆಯೂ ನೀರು ಬಿಡುವುದಿಲ್ಲ, ವಾಲ್ವ್‌ಮೆನ್‌ಗಳಿಗೆ ಹಣ ನೀಡಿದರೆ ನೀರು ಬಿಡುತ್ತಾರೆ ಎಂದು ಆರೋಪಿಸಿದರು.

ನಗರಸಭೆಯ ಪೌರಾಯುಕ್ತರು ಮತ್ತು ಅಧ್ಯಕ್ಷರಿಗೆ ಅಧಿಕಾರಿಗಳ ಮೇಲೆ ಹಿಡಿತವಿಲ್ಲ, ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅಧ್ಯಕ್ಷರನ್ನು ಒತ್ತಾಯಿಸಿದರು.

ಸಭೆಯ ನಡಾವಳಿ ಪ್ರಕಾರ ಸಭೆ ನಡೆಯಲಿ, ಕುಡಿಯುವ ನೀರಿನ ವಿಷಯ ಬಂದಾಗ ಅಗತ್ಯ ಮಾಹಿತಿ ನೀಡುವುದು. ಸಭೆಯಲ್ಲಿ ಅಸಭ್ಯವಾಗಿ ವರ್ತಿಸಿದರೆ ಕಾನೂನಿನಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೌರಾಯುಕ್ತರು ಉತ್ತರ ನೀಡಿದರು. ಇದರಿಂದ ಕುಪಿತಗೊಂಡ ಶಫೀಕ್‌ ಅಹಮದ್‌ ನಡಾವಳಿ ಪುಸ್ತಕ ಹರಿದು ಹಾಕಿ, ಸಭೆ ಬಹಿಷ್ಕರಿಸಿದರು.

ವಿರೋಧಪಕ್ಷದ ಸದಸ್ಯ ಶ್ರೀನಾಥರೆಡ್ಡಿ ಮಾತನಾಡಿ ಹಿಂದಿನ ಸಭೆಯಲ್ಲಿ ಅಕ್ರಮ ಆಸ್ತಿಗಳ ವಿಷಯ ಕುರಿತು ನಮ್ಮ ಅನುಮೋದನೆ ಇಲ್ಲದೆ ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ನಡಾವಳಿ ಪುಸ್ತಕದಲ್ಲಿ ಬರೆದಿರುವುದನ್ನು ಖಂಡಿಸಿ ದಾಖಲೆಗಳನ್ನು ನೀಡುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಗೊಂದಲ, ಕೂಗಾಟ ಮಾಮೂಲಿಯಾಗಿತ್ತು. ಕಂದಾಯ ವಸೂಲಿ, ಪಾದಚಾರಿ ರಸ್ತೆಗಳ ಅಕ್ರಮ ಒತ್ತುವರಿ, ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಒಳಚರಂಡಿ ವ್ಯವಸ್ಥೆ, ರಸ್ತೆ, ಘನತ್ಯಾಜ್ಯ ವಸ್ತು ನಿರ್ವಹಣೆ, ಮುಂತಾದವುಗಳ ನಿರ್ವಹಣೆಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಿತು.

ಸದಸ್ಯರಾದ ಸಾದಪ್ಪ, ಪ್ರಕಾಶ್‌, ಶ್ರೀನಿವಾಸರೆಡ್ಡಿ ಅಲ್ಲಾಬಕಾಶ್‌, ರತ್ನಮ್ಮ ಚರ್ಚೆಯಲ್ಲಿ ಪಾಲ್ಗೊಂಡಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry